varthabharthi


ವೈವಿಧ್ಯ

ಎಸ್ 400 : ಅಮೆರಿಕ ಆಧಿಪತ್ಯಕ್ಕೆ ಸವಾಲು

ವಾರ್ತಾ ಭಾರತಿ : 3 Aug, 2019
ಪಿ. ಪ್ರಸಾದ್ (ಐಎಫ್‌ಟಿಯು ರಾಷ್ಟ್ರೀಯ ಕಾರ್ಯದರ್ಶಿ) ಕನ್ನಡಕ್ಕೆ: ಕಸ್ತೂರಿ

ರಶ್ಯದಿಂದ ಎಸ್ 400 ಕ್ಷಿಪಣಿ ವ್ಯವಸ್ಥೆಯನ್ನು ಚೀನಾ ಈಗಾಗಲೇ ಖರೀದಿ ಮಾಡಿದೆ. ಅದೇ ಹಾದಿಯಲ್ಲಿ ಒಂದೊಂದೇ ದೇಶ ರಶ್ಯನ್ ಕ್ಷಿಪಣಿಗಳ ಖರೀದಿಗೆ ಸಾಲುಗಟ್ಟಿವೆ. ಇದು ನಿನ್ನೆ ಟರ್ಕಿ, ಇಂದು ಭಾರತದೊಂದಿಗೆ ನಿಲ್ಲುವಂತಿಲ್ಲ. ನಾಳೆ ಇರಾನ್, ಸೌದಿ ಅರೇಬಿಯಾ ಖತರ್‌ನಂತಹ ದೇಶಗಳು ಸಹ ಅತ್ಯಾಧುನಿಕ ರಶ್ಯನ್ ಕ್ಷಿಪಣಿಗಳನ್ನು ಖರೀದಿಸುವುದು ಖಚಿತ. ನ್ಯಾಟೋ ಸದಸ್ಯ ದೇಶವಾದ ಟರ್ಕಿಯನ್ನು ಸಹ ಬೆದರಿಕೆಗಳಿಂದ ನಿಯಂತ್ರಿಲಾರದೆ ಹೋದರೆ ನಾಳೆ ತನ್ನ ಗತಿ ಏನೆಂಬ ಪ್ರಶ್ನೆ ಈಗ ಅಮೆರಿಕವನ್ನು ಕಾಡುತ್ತಿದೆ. ಈ ಸ್ಥಿತಿ ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಬಹುಕಾಲದ ಆಧಿಪತ್ಯಕ್ಕೆ ಒಂದು ಸವಾಲಾಗಿ ಬದಲಾಗಿದೆ.

ಚರಿತ್ರೆಯಲ್ಲಿ ಗುರಾಣಿ ಇಲ್ಲದ ಯುದ್ಧಗಳು ನಡೆದಿವೆ. ಆದರೆ ಕತ್ತಿ ಇಲ್ಲದೇ ಕೇವಲ ಗುರಾಣಿಗಳಿಂದ ಯುದ್ಧಗಳು ಜರುಗವು. ಚಾರಿತ್ರಿಕ ವಿಧಾನದಲ್ಲಿ, ಮುಖ್ಯವಾಗಿ ಮುಖಾಮುಖಿ ಯುದ್ಧಗಳಲ್ಲಿ ಕತ್ತಿಯೊಂದಿಗೆ ಗುರಾಣಿಯೂ ಬಳಕೆಗೆ ಬಂದಿತು. ಇದೇ ಸೂತ್ರ ಆಧುನಿಕ ಯುದ್ಧಗಳಿಗೂ ಅನ್ವಯಸುತ್ತಿದೆ. ಸ್ಥೂಲವಾಗಿ ಶತ್ರು ಮೇಲೆ ದಾಳಿಗೆ ಕತ್ತಿ ಸಾಧನ. ಪ್ರತ್ಯಕ್ಷ ಹೋರಾಟದಲ್ಲಿ ಶತ್ರುವಿನಿಂದ ಆತ್ಮರಕ್ಷಣೆಗೆ ಗುರಾಣಿ ಒಂದು ಸಾಧನ. ಚಾರಿತ್ರಿಕ ಆಧಾರಗಳನ್ನು ಬದಿಗಿಟ್ಟರೆ ಕುರುಕ್ಷೇತ್ರದಲ್ಲಿ ಕೌರವ, ಪಾಂಡವ ಸೈನಿಕರು ತಮ್ಮ ಬಲಗೈಲಿ ಕತ್ತಿಯನ್ನು ಎಡಗೈಯಲ್ಲಿ ಗುರಾಣಿಯನ್ನು ಹಿಡಿದು ಯುದ್ಧ ಮಾಡಿದರು ಎಂದು ‘ಮಹಾಭಾರತ’ ತಿಳಿಸುತ್ತದೆ. ಆದರೆ ಕತ್ತಿ ಗುರಾಣಿ ಪಾತ್ರ ಸಮಾನವಲ್ಲ. ಯದ್ಧದ ಜಯಾಪಜಯಗಳನ್ನು ನಿರ್ಣಯಿಸುವುದಲ್ಲಿ ಇವರ ಅಂಶಗಳನ್ನು ಹಾಗೆ ಇಟ್ಟರೆ ಗುರಾಣಿಗಿಂತ ಕತ್ತಿ ಪ್ರಧಾನ ಪಾತ್ರ ಪೋಷಿಸುತ್ತದೆ. ವರ್ತಮಾನ ಜಾಗತಿಕ ಚರಿತ್ರೆ ಮತ್ತೊಂದು ಯುದ್ಧ ನೀತಿಯನ್ನು ಬೋಧಿಸುತ್ತದೆ. ಅಮೆರಿಕದ ಆಧುನಿಕ ಕತ್ತಿ ವ್ಯವಸ್ಥೆಗಿಂತ ರಶ್ಯದ ಅತ್ಯಾಧುನಿಕ ಗುರಾಣಿ ವ್ಯವಸ್ಥೆ ಇಂದಿನ ಜಾಗತಿಕ ರಾಜಕೀಯ ಚರಿತ್ರೆಯ ಗತಿಯನ್ನು ಪ್ರಭಾವಿತಗೊಳಿಸುತ್ತದೆ. ಅಮೆರಿಕ ಎಫ್-35 ಫೈಟರ್ ಜೆಟ್‌ಗಳಿಗಿಂತ, ಅವುಗಳಿಂದ ರಕ್ಷಣೆ ಕಲ್ಪಿಸುವ ರಶ್ಯ ಎಸ್ 400 ಕ್ಷಿಪಣಿ ವ್ಯವಸ್ಥೆಯೇ ಇಂದು ಮುಖ್ಯ ಪಾತ್ರವನ್ನು ಪೋಷಿಸುತ್ತಿದೆ. ನಿನ್ನೆ ಟರ್ಕಿ (ನ್ಯಾಟೋ ಸದಸ್ಯ ದೇಶ), ಇಂದು ಭಾರತ ಅಮೆರಿಕ ಬೆದರಿಕೆಗಳನ್ನು ಲೆಕ್ಕಿಸದೆ ಎಸ್ 400 ಕ್ಷಿಪಣಿ ವ್ಯವಸ್ಥೆಯ ಖರೀದಿಯಾಗಿ ರಶ್ಯಾದತ್ತ ಹೊರಳುತ್ತಿವೆ. ಹಾಗಾದರೇ ಈ ರಶ್ಯನ್ ಎಸ್ 400 ಕ್ಷಿಪಣಿಗಳಲ್ಲೇನಿದೆ?
ಮೊದಲು ಗಲ್ಫ್ ಯುದ್ಧದಲ್ಲೂ ಆನಂತರ ಕೂಡ ಇರಾಕ್‌ಮೇಲೆ ಅಮೆರಿಕ ಮಾಡಿದ ವೈಮಾನಿಕ ದಾಳಿಗಳು ಅನೇಕ ದೇಶಗಳಿಗೆ ಪಾಠ ಕಲಿಸಿದವು. ಸದ್ದಾಮ್ ಹುಸೈನ್ ಅಧ್ವರ್ಯದಲ್ಲಿ ಇರಾಕಿ ಪ್ರಜೆಗಳು ಅಮೆರಿಕಕ್ಕೆ ವಿರುದ್ಧವಾಗಿ ಒಗ್ಗಟ್ಟಾಗಿ ನಿಂತರು. ಆದರೆ ಅಮೆರಿಕದ ಬಾಂಬ್ ದಾಳಿಗಳಿಂದ ಅವರು ಆತ್ಮ ರಕ್ಷಣೆ ಮಾಡಿಕೊಳ್ಳಲಾಗದೆ ಹೋದರು. ಬಾಂಬ್‌ಗಳು ನೆಲದ ಮೇಲೆ ಬಿಳುವ ಮುನ್ನ ಆಕಾಶದಲ್ಲಿ ಅವನ್ನು ಎದುರಿಸುವ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಇರಾಕ್‌ಗೆ ಇಲ್ಲದೆ ಹೋದುದೇ ಅದಕ್ಕೆ ಕಾರಣ. ಈ ಗುಣ ಪಾಠದೊಂದಿಗೆ ಅಮೆರಿಕಕ್ಕೆೆ ಬಗ್ಗದ ಕೆಲವು ವಿರೋಧಿ ದೇಶಗಳು ತಮ್ಮ ಆತ್ಮ ರಕ್ಷಣೆಗೆ ಅಗತ್ಯವಾದ ಅತ್ಯಾಧುನಿಕ ಆಯುಧ ಸಂಪತ್ತಿನ ಸಾಧನೆ ಮೇಲೆ ಅದೇ ದೃಷ್ಟಿಯನ್ನು ಕೇಂದ್ರೀಕರಿಸಿದವು. ಆದರೆ ಏಕ ಧ್ರುವ ಪ್ರಪಂಚದಲ್ಲಿ ಅಂತಹ ಅತ್ಯಾಧುನಿಕ ರಕ್ಷಣಾ ಯುದ್ಧಗಳು ಅಮೆರಿಕ ವಿರೋಧಿ ಅಭಿವೃದ್ಧಿ ಶೀಲ ದೇಶಗಳಿಗೆ ಪೂರೈಸುವ ಅವಕಾಶಗಳಿಲ್ಲ. ಅದಕ್ಕೆ ಕಾರಣ ಅಷ್ಟು ಆಯುಧ ಸಂಪತ್ತುಳ್ಳ ಕೆಲವು ದೊಡ್ಡ ರಾಷ್ಟ್ರಗಳು ಕೂಡಾ ಅಮೆರಿಕ ವಿರೋಧಿ ದೇಶಗಳಿಗೆ ಅವನ್ನು ಮಾರುವ ಸ್ಥಿತಿ ಅಂದು ಇರಲಿಲ್ಲ. ಇರಾಕ್ ಮೇಲೆ ನಿರ್ಬಂಧಗಳು, ಆಕಾಶ ದಾಳಿಗಳು, ಕೊನೆಗೆ ದುರಾಕ್ರಮಣಕ್ಕಾಗಿ ಆ ದಿನ ವಿಶ್ವಸಂಸ್ಥೆಯಲ್ಲಿ ಅಮೆರಿಕ ತೀರ್ಮಾನಗಳಿಗೆ ರಶ್ಯ, ಚೀನಾಗಳು ಸಹ ವಿಟೋ ಮಾಡದೇ ಹೋಗಿದ್ದು ಗಮನಾರ್ಹ.
  ಆದರೆ ಬಹುಧ್ರುವ ಜಾಗತಿಕ ಸ್ಥಿತಿ ಏರ್ಪಟ್ಟ ಬಳಿಕ ಭೌತಿಕ ಪರಿಸ್ಥಿಯಲ್ಲಿ ಕ್ರಮೇಣ ಬದಲಾವಣೆ ಬರತೊಡಗಿತು. ಮುಖ್ಯವಾಗಿ ಸಿರಿಯ ಯುದ್ಧಾನಂತರ ವೌಲಿಕ ಬದಲಾವಣೆ ಬಂದಿತು. ಅದು ಅಮೆರಿಕ ರಶ್ಯ ಆಯುಧ ಅಧಿಪತ್ಯವನ್ನು ಜಗತ್ತಿಗೆ ಸಾರಿ ಹೇಳಿತು. ಪರಿಣಾಮವಾಗಿ ನ್ಯಾಟೋ ಸದಸ್ಯ ದೇಶ ಟರ್ಕಿ ಸಹ ಇಂದು ಅಮೆರಿಕ ಆಜ್ಞೆಗಳನ್ನು ಧಿಕ್ಕರಿಸಿ ರಶ್ಯದಿಂದ ಎಸ್ 400 ಕ್ಷಿಪಣಿಗಳ ಖರೀದಿಗೆ ತಯಾರಾಗಿದೆ. ಕ್ಯೂಬಾ, ವೆನೆಝುವೆಲಾ, ಇರಾನ್‌ನಂಥ ಅನೇಕ ದೇಶಗಳ ವಿರೋಧ ಒಂದು ಹಂತ: ಸಣ್ಣ ಪುಟ್ಟ ಸಮೀಪದ ದೇಶಗಳು ಕೂಡಾ ಕ್ರಮೇಣ ಅಮೆರಿಕವನ್ನು ಲಕ್ಷಿಸದ ವರ್ತಮಾನ ಧೋರಣೆಗೆ ಟರ್ಕಿಯ ಧಿಕ್ಕಾರ ಒಂದು ಸಂಕೇತ!
ಇದುವರೆಗೆ ಎದುರಿಲ್ಲದ ಅತ್ಯಾಧುನಿಕ ಅಮೆರಿಕ ಯುದ್ಧ ವಿಮಾನಗಳಾಗಿ ಪ್ರಚಾರ ಪಡೆದಿರುವ ಎಫ್ 35 ಫೈಟರ್ ಜೆಟ್‌ಗಳು ಸಹ ಸಿರಿಯಾ ಅಂತರ್ ಯುದ್ಧದಲ್ಲಿ ರಶ್ಯದ ಎಸ್ 300 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎದುರು ವಿಫಲವಾದವು. ಸಿರಿಯಾದಲ್ಲಿ ಅಸದ್ ಸರಕಾರ ವಿರೋಧಿ ಗೆರಿಲ್ಲಾ ಪ್ರತಿಭಟನಾಕಾರರಿಗೆ ಬೆಂಬಲವಾಗಿ ಇಸ್ರೇಲ್ ಆ ಯುದ್ಧ ವಿಮಾನಗಳನ್ನು ಉಪಯೋಗಿಸಿತು. ಅಸದ್ ಸರಕಾರ ಪರವಾಗಿ ರಶ್ಯ ವಾಯು ಪಡೆ ಸೇನೆ ರಂಗಕ್ಕಿಳಿದಿದ್ದು ಗೊತ್ತಿರುವುದೇ! ಎಸ್ 300 ಕ್ಷಿಪಣಿ ವ್ಯವಸ್ಥೆ ಎಫ್ 35 ಫೈಟರ್ ಜೆಟ್‌ಗಳ ದಾಳಿಯನ್ನು ವ್ಯರ್ಥಗೊಳಿಸಿದರೆ, ಅದಕ್ಕಿಂತ ಅತ್ಯಾಧುನಿಕವಾದ ಎಸ್ 400 ಕ್ಷಿಪಣಿ ವ್ಯವಸ್ಥೆ ಪ್ರಭಾವ ಹೇಗಿರಬಹುದು? ಅದೇ ಪ್ರಶ್ನೆ ಸಹಜವಾಗಿ ವಿಶ್ವ ಸೇನಾವರ್ಗಗಳಲ್ಲಿ ತಲೆ ಎತ್ತಿ ಆಸಕ್ತಿಯಾಗಿ ಬದಲಾಗಿದೆ. ರಶ್ಯದಿಂದ ಆ ಕ್ಷಿಪಣಿ ವ್ಯವಸ್ಥೆಯನ್ನು ಚೀನಾ ಈಗಾಗಲೇ ಖರೀದಿ ಮಾಡಿದೆ. ಅದೇ ಹಾದಿಯಲ್ಲಿ ಒಂದೊಂದೇ ದೇಶ ರಶ್ಯನ್ ಕ್ಷಿಪಣಿಗಳ ಖರೀದಿಗೆ ಸಾಲುಗಟ್ಟಿವೆ. ಇದು ನಿನ್ನೆ ಟರ್ಕಿ, ಇಂದು ಭಾರತದೊಂದಿಗೆ ನಿಲ್ಲುವಂತಿಲ್ಲ. ನಾಳೆ ಇರಾನ್, ಸೌದಿ ಅರೇಬಿಯಾ ಖತರ್‌ನಂತಹ ದೇಶಗಳು ಸಹ ಅತ್ಯಾಧುನಿಕ ರಶ್ಯನ್ ಕ್ಷಿಪಣಿಗಳನ್ನು ಖರೀದಿಸುವುದು ಖಚಿತ. ನ್ಯಾಟೋ ಸದಸ್ಯ ದೇಶವಾದ ಟರ್ಕಿಯನ್ನು ಸಹ ಬೆದರಿಕೆಗಳಿಂದ ನಿಯಂತ್ರಿಸಲಾರದೆ ಹೋದರೆ ನಾಳೆ ತನ್ನ ಗತಿ ಏನೆಂಬ ಪ್ರಶ್ನೆ ಈಗ ಅಮೆರಿಕವನ್ನು ಕಾಡುತ್ತಿದೆ. ಈ ಸ್ಥಿತಿ ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಬಹುಕಾಲದ ಆಧಿಪತ್ಯಕ್ಕೆ ಒಂದು ಸವಾಲಾಗಿ ಬದಲಾಗಿದೆ.
25 ವರ್ಷಗಳ ಹಿಂದೆ ಸದ್ದಾಂ ಸರಕಾರ ಪ್ರಯೋಗಿಸಿದ ಸ್ಕಡ್‌ಗಳಿಂದ ಇಸ್ರೇಲ್‌ನ್ನು ಅಮೆರಿಕ ಪೇಟ್ರಿಯಟ್ ಕ್ಷಿಪಣಿಗಳು ರಕ್ಷಿಸಿದವು. ಆಗ ಅವಕ್ಕೆ ಭಾರೀ ಪ್ರಚಾರ ಸಿಕ್ಕಿತು. ಪರಿಣಾಮವಾಗಿ ಅನೇಕ ದೇಶಗಳು ಅವುಗಳ ಖರೀದಿಗೆ ಮುಗಿಬಿದ್ದವು. ಆ ಬಳಿಕ ಅದಕ್ಕಿಂತ ಪರಿಣಾಮಕಾರಿ ಅತ್ಯಾಧುನಿಕ ‘ತಾಡ್’ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಮೆರಿಕ ರೂಪಿಸಿ ಭಾರೀ ಪ್ರಚಾರ ಕಲ್ಪಿಸಿತು. ಮುಖ್ಯವಾಗಿ ಉತ್ತರ ಕೊರಿಯಾ ‘ಅಪಾಯ’ದಿಂದ ರಕ್ಷಣೆ ಹೆಸರಿನೊಂದಿಗೆ ದ.ಕೊರಿಯಾಕ್ಕೆ ‘ತಾಡ್’ ರಕ್ಷಣಾ ವಲಯಕ್ಕೆ ಏರ್ಪಾಟು ಮಾಡಿತು. ಇದರಿಂದ ಅಮೆರಿಕ ಶಸ್ತ್ರ ವ್ಯಾಪಾರ ಚೆನ್ನಾಗಿ ವರ್ಧಿಸಿತು.


ಪ್ರಚ್ಛನ್ನ ಯುದ್ಧ ಯುಗಾನಂತರ ಮೊತ್ತ ಮೊದಲ ಸಲ 2015ರಲ್ಲಿ ಸಿರಿಯದಲ್ಲಿ ರಶ್ಯ ಸೇನಾದಳಗಳು ರಂಗಪ್ರವೇಶ ಮಾಡುವುದು ವರ್ತಮಾನ ವಿಶ್ವಪಯಣದಲ್ಲಿ ಒಂದು ತಿರುವೂ, ಒಂದು ಕದಲಿಕೆಯೂ! ಅದು ಅಮೆರಿಕ ಪೀಡಿತ ದೇಶಗಳಿಗೆ ಕರೆ ಸಹ! (2008ರಲ್ಲಿ ದಕ್ಷಿಣ ಒಸೇತಿಯಾದಲ್ಲಿ, 2014ರಲ್ಲಿ ಕ್ರಿಮಿಯಾದಲ್ಲಿ ರಶ್ಯ ಕೈಗೊಂಡ ಸೀಮಿತ ಸೈನಿಕ ಕ್ರಮಗಳು ತನ್ನ ಹಿತ್ತಿಲ ದೊಡ್ಡಿಯೊಳಗಿನವಾದ್ದರಿಂದ ಅವು ಸಿರಿಯದಲ್ಲಿ ಸೇನಾ ಹಸ್ತಕ್ಷೇಪ ಎನಿಸಿಕೊಳ್ಳವು).
ಒಂದು ಮಾತಿನಲ್ಲಿ ಹೇಳಬೇಕು ಎಂದರೆ ಬಹುಧ್ರುವ ಜಗತ್ತಿನಲ್ಲಿ ರಶ್ಯ ಸೇನಾಯುದ್ಧಕ್ಕೆ ಸಿರಿಯ ಮೊದಲ ಪ್ರಯೋಗ ಶಾಲೆಯಾಗಿ ಬದಲಾಗಿದೆ ಎಂದು ಹೇಳಬಹುದು. ಅದು ಎರಡು ಅಂಶಗಳನ್ನು ಜಗತ್ತಿಗೆ ಬಹಿರಂಗಪಡಿಸಿದೆ. ಒಂದು-ರಶ್ಯ ಎಸ್ 300 ಕ್ಷಿಪಣಿಗಳು ಜಗತ್ತಿನಲ್ಲಿ ಇದುವರೆಗೂ ಅಸ್ತಿತ್ವದಲ್ಲಿರುವ ಕ್ಷಿಪಣಿ ವ್ಯವಸ್ಥೆಯಲ್ಲಿ ಎದುರಿಲ್ಲದಷ್ಟು ಮೇಲ್ಮಟ್ಟದ್ದವು. ಎರಡು- ಇದುವರೆಗೂ ಜಗತ್ತಿನಲ್ಲಿ ‘ಎದುರಿಲ್ಲದ ಕ್ಷಿಪಣಿ ವ್ಯವಸ್ಥೆ’ ಎಂದು ಹೆಸರಾದ ಅಮೆರಿಕ ಪೇಟ್ರಿಯಟ್, ತಾಡ್ ಕ್ಷಿಪಣಿ ವ್ಯವಸ್ಥೆಗಳು ರಶ್ಯ ಕ್ಷಿಪಣಿ ವ್ಯವಸ್ಥೆಯೊಂದಿಗೆ ಹೋಲಿಸಿದರೆ ತುಂಬಾ ಕಳಪೆ ಎಂದು ಸಾಬೀತಾದುದು.
ವರ್ತಮಾನ ಜಗತ್ತಿನ ಇದೊಂದು ಮುಖ್ಯ ಪರಿವರ್ತನೆ. ನಿಜಕ್ಕೂ ಸಿರಿಯಾ ಅಂತರ್ಯುದ್ಧದಲ್ಲಿ ರಶ್ಯ, ಟರ್ಕಿಗಳ ಮಧ್ಯೆ ತೀವ್ರ ವೈರುಧ್ಯಗಳಿವೆ. ಅಸದ್ ಸರಕಾರದ ಪರವಾಗಿ ರಶ್ಯ ನಿಂತರೆ, ಅಸದ್ ಸರಕಾರ ವಿರೋಧೀ ಪ್ರತಿಭಟನಾಕಾರರ ಪರವಾಗಿ ಟರ್ಕಿ ನಿಂತಿತು. ನಿಜ ಹೇಳ ಬೇಕೆಂದರೆ ಸಿರಿಯಾದಲ್ಲಿ ಅಮೆರಿಕ ಟರ್ಕಿಗಳ ಮಧ್ಯೆ ಸೂಕ್ಷ್ಮ ಬಿನ್ನಾಭಿಪ್ರಾಯಗಳಿದ್ದರೂ ಸ್ಥೂಲ ಏಕತೆ ಇದೆ. ಆದರೂ ರಶ್ಯದ ಎಸ್ 400 ಕ್ಷಿಪಣಿ ವ್ಯವಸ್ಥೆ ಇಂದು ಮಿತ್ರರನ್ನು ಶತ್ರುಗಳನ್ನಾಗಿ, ಶತ್ರುಗಳನ್ನು ಮಿತ್ರರನ್ನಾಗಿ ಬದಲಿಸಿ ಬಿಟ್ಟಿದೆ. ಇರಾಕ್ ದುರಾಕ್ರಮಣಕ್ಕೆ ಮುನ್ನ ತನ್ನದೇ ಆದ ಮಾತಿನಲ್ಲಿ ‘ನೂತನ ಮಧ್ಯ ಪ್ರಾಚ್ಯ’(New middle east)ನಿರ್ಮಾಣವೇ ತನ್ನ ಗುರಿ ಎಂದು ಅಂದಿನ ಜಾರ್ಜ್ ಬುಶ್ ಸರಕಾರ ಘೋಷಿಸಿತ್ತು. ಇಂದಿನ ಟ್ರಂಪ್ ಸರಕಾರ ಕನಿಷ್ಠ ‘ಹಳೆಯ ಮಧ್ಯ ಪ್ರಾಚ್ಯ’ವನ್ನು ಸಹ ಉಳಿಸಿಕೊಳ್ಳಲಾರದೆ ಹೋಗುತ್ತಿದೆ. ಇಂದು ರಶ್ಯ, ಇರಾನ್, ಟರ್ಕಿ, ದೇಶಗಳು ಒಂದು ಕೂಟವಾಗಿ ಮಾರ್ಪಡುತ್ತಿವೆ. ಇದರೊಂದಿಗೆ ಮಧ್ಯ ಏಶ್ಯದೊಂದಿಗೆ ಮಧ್ಯ ಪ್ರಾಚ್ಯದಲ್ಲಿ ಸಹ ಅಮೆರಿಕ ತನ್ನ ಹಳೇ ಅಧಿಕಾರ ಸ್ಥಾನವನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ.
ಈ ಬೆಳವಣಿಗೆ ಹೀಗಿದ್ದರೆ ಹೊಸದಾಗಿ ಎಸ್ 500 ಕ್ಷಿಪಣಿಗಳನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವುದಾಗಿ ಇತ್ತೀಚೆಗೆ ರಶ್ಯ ಪ್ರಕಟಿಸಿದೆ. ಎಸ್ 400 ಕ್ಷಿಪಣಿ ವೇಗ ಶಬ್ದವೇಗಕ್ಕಿಂತ 15 ಪಟ್ಟು ಹೆಚ್ಚಾದರೆ, ಎಸ್ 500 ಸುಮಾರು 25 ಪಟ್ಟು ಜಾಸ್ತಿ! ಅದೇ ರೀತಿಯಾಗಿ ಅವು 400 ಕಿ.ಮೀ.ಗಳ ಗುರಿಯನ್ನು ಛೇದಿಸಿದರೆ, ಇವು 600 ಕಿ.ಮೀ.ವರೆಗೂ ಛೇದಿಸುತ್ತವೆ ಎಂದು ರಶ್ಯ ಹೇಳಿದೆ. ಇದು ಶತ್ರು ದೇಶಗಳು ಪ್ರಯೋಗಿಸುವ ಖಂಡಾಂತರ ಕ್ಷಿಪಣಿಗಳನ್ನು ದೂರದಲ್ಲಿ ಇರುವಾಗಲೇ ಆಗಸದಲ್ಲೇ ಛೇದಿಸಿ, ದೇಶದ ಭೂಭಾಗದಲ್ಲಿ ಬೀಳದಂತೆ ಮಾಡುವ ದೇಶದ ಆತ್ಮ ರಕ್ಷಣಾ ಕ್ಷಿಪಣಿ ವ್ಯವಸ್ಥೆ! ಎಸ್ 500 ಕ್ಷಿಪಣಿಗಳ ನಿರ್ಮಾಣ ಹಂತ ಮುಕ್ತಾಯಕ್ಕೆ ಬಂದಿದೆ ಎಂದೂ, ಕ್ಷಿಪ್ರದಲ್ಲಿ ಪ್ರಯೋಗದ ಹಂತವನ್ನು ಸಹ ಪೂರ್ತಿ ಮಾಡಿಕೊಂಡು ಈ ವರ್ಷಾಂತ್ಯಕ್ಕೆಲ್ಲಾ ಮಾರುಕಟ್ಟೆಗೆ ಬರಬಹುದೆಂದು ರಶ್ಯ ಹೇಳಿದೆ. ನಿಜಕ್ಕೂ ಜಾಗತಿಕ ಚರಿತ್ರೆಯ ಚಲನೆಯನ್ನು ಆಯುಧ ವ್ಯವಸ್ಥೆ ಬದಲಿಸಲಾರದು. ಆದರೆ ಚರಿತ್ರೆಯ ಚಲನೆಯನ್ನು ಬದಲಿಸುವ ಪ್ರಕ್ರಿಯೆಯಲ್ಲಿ ಅದು ಉತ್ತೇಜಕ ಪಾತ್ರವನ್ನು ಪೋಷಿಸುತ್ತದೆ. ಹೌದು, ಅತ್ಯಾಧುನಿಕ ರಶ್ಯನ್ ಕ್ಷಿಪಣಿ ವ್ಯವಸ್ಥೆ ಇಂದು ಅಮೆರಿಕವನ್ನು ಘಾಸಿಗೊಳಿಸುವ ಪ್ರಕ್ರಿಯೆಗೆ ಕಾರಕವಾಗಿ ಕೆಲಸ ಮಾಡುತ್ತಿದೆ. ಈ ವಾಸ್ತವ ವಾಶಿಂಗ್‌ಟನ್ ಪ್ರಭುಗಳನ್ನು ನಡುಗಿಸುತ್ತಿರುವ ಪರಿವರ್ತನೆಯೆ!
ವಿಶ್ವ ಜನಸಂಖ್ಯೆಯಲ್ಲಿ ಅಮೆರಿಕ ಪಾಲು ಶೇ. 4 ಇದ್ದರೆ ವಿಶ್ವ ಜಿಡಿಪಿಯಲ್ಲಿ ಪಾತ್ರ ಈ ಅಗ್ರ ರಾಷ್ಟ್ರಕ್ಕೆ ಶೇ. 25 ಇದೆ. ವಿಶ್ವ ವಾರ್ಷಿಕ ಸೇನಾ ವೆಚ್ಚದಲ್ಲಿ ಅಮೆರಿಕ ಪಾಲು ಸುಮಾರು ಶೇ. 35 ಇದೆ. ಈ ಎಲ್ಲದರಲ್ಲೂ ರಶ್ಯ ತುಂಬಾ ಹಿಂದಿದೆ. ಅದು ಜಿಡಿಪಿಯಲ್ಲಿ ಮೊದಲ 10 ಸ್ಥಾನಗಳ ಬಳಿಕವೇ ಇದೆ. ಅಮೆರಿಕದ ವಾರ್ಷಿಕ ಮಿಲಿಟರಿ ಬಜೆಟ್ ಸುಮಾರು 650 ಬಿಲಿಯನ್ ಡಾಲರ್‌ಗಳು ಇದ್ದರೆ, ರಶ್ಯ ಅದರಲ್ಲಿ 10ನೇ ಭಾಗ (65 ಬಿಲಿಯನ್ ಡಾಲರ್ಸ್‌)ಕ್ಕಿಂತ ಕಡಿಮೆ! ( ಈ ಎಲ್ಲದರಲ್ಲೂ ಚೀನಾ, ಭಾರತಗಳಿಗಿಂತ ರಶ್ಯಾ ಸ್ಥಾನ ಬಹಳ ಹಿಂದೆಯೇ ಇದೆ). ಆದರೂ 10ನೇ ಒಂದು ಭಾಗ ಸೇನಾ ಬಜೆಟ್ ಉಳ್ಳ ರಶ್ಯ ಆಯುಧ ತಯಾರಿಯಲ್ಲಿ ಅಮೆರಿಕಗಿಂತ ತುಂಬಾ ಮುಂದೆಯೇ ಇದೆ. ಈಗಾಗಲೇ ತೈಲ, ನ್ಯಾಚುರಲ್ ಗ್ಯಾಸ್ ರಂಗಗಳಲ್ಲಿ ರಶ್ಯಾ ವೇಗವಾಗಿ ಮೇಲೆ ಮೇಲೆ ಹಾರುತ್ತಾ ಯುರೋಪ್ ದೇಶಗಳನ್ನು ಒಂದೊಂದಾಗಿ ತನ್ನ ವಾಣಿಜ್ಯ ಪರಧಿಯೊಳಗೆ ತೆಗೆದುಕೊಳ್ಳುತ್ತಿದೆ. ಸಿರಿಯದಲ್ಲಿ ಸೇನಾ ಹಸ್ತಕ್ಷೇಪದ ಬಳಿಕ ಈಗ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲೂ ನುಗ್ಗಿಕೊಂಡು ಹೋಗುತ್ತಿದೆ. ಈ ಕ್ರಮ ನಿಕಟ ಭವಿಷ್ಯದಲ್ಲಿ ವಿಶ್ವದ ಸ್ಥಿತಿಗತಿಗಳನ್ನು ಮತ್ತಷ್ಟು ಮುಖ್ಯ ತಿರುವುಗಳಿಗೆ ಗುರಿ ಮಾಡುವ ಸಾಧ್ಯತೆ ಇದೆ ಎಂದು ಅಂತರ್‌ರಾಷ್ಟ್ರೀಯ ರಾಜಕೀಯ ಪರಿಶೀಲಕ ವರ್ಗಗಳು ಅಂದಾಜು ಹಾಕುತ್ತಿದೆ. ಇದು ಅಷ್ಟು ಸುಲಭವಾಗಿ ತಳ್ಳಿ ಹಾಕತಕ್ಕ ಅಭಿಪ್ರಾಯವಲ್ಲ.
1979ರಲ್ಲಿ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಯೂನಿಯನ್ ಸೇನಾ ಅತಿಕ್ರಮಣಕ್ಕೆ ಇಳಿಯಿತು. ಆ ಯುದ್ಧದ ಛಾಯೆಯಿಂದ ಹೊರ ಬೀಳುವುದಕ್ಕೆ ಸೋವಿಯತ್ ಯೂನಿಯನ್ ಅನೇಕ ತಾಪತ್ರಯ ಪಡಬೇಕಾಗಿ ಬಂದಿತು. ಇಂದು ಇರಾನ್ ಎದುರು ಅಮೆರಿಕ ರಣಗರ್ಜನೆ ಮಾಡುತ್ತಿದೆ. ಇರಾನ್‌ನೊಂದಿಗೆ ಯುದ್ಧ ಅಮೆರಿಕಕ್ಕೆ ಅನಿವಾರ್ಯವಾದಲ್ಲಿ ನಡೆಯುವುದೇನು? ಅಫ್ಘಾನಿಸ್ತಾನ ವಿಷಯದಲ್ಲಿ ಸೋವಿಯತ್ ಯೂನಿಯನ್‌ನಂತೆಯೇ, ಇರಾನ್ ವಿಷಯದಲ್ಲಿ ಅಮೆರಿಕ ತನ್ನ ಅಗ್ರರಾಷ್ಟ್ರ ಪಟ್ಟವನ್ನು ಕಳೆದುಕೊಳ್ಳುವ ಸ್ಥಿತಿ ಬಾರದೆಂದು ಹೇಳಬಲ್ಲವೇ?
ಪುರಾತನ ಚರಿತ್ರೆಯಲ್ಲಿ ರೋಮನ್ ಸಾಮ್ರಾಜ್ಯ ಏನಾಯಿತು? ಆಧುನಿಕ ಯುಗಾರಂಭದಲ್ಲಿ ಸ್ಪಾನಿಶ್, ಪೋರ್ಚುಗಲ್ ಅಗ್ರ ರಾಜ್ಯಗಳೇನಾದವು? ಆ ನಂತರ ಸೂರ್ಯ ಮುಳುಗದು ಎನ್ನಲಾದ ಬ್ರಿಟಿಷ್, ಫ್ರೆಂಚ್ ಸಾಮ್ರಾಜ್ಯಗಳೇನಾದವು? ಸೋವಿಯತ್ ಯೂನಿಯನ್ ಏನಾಯ್ತು? ಮೇಲಾಗಿ ಇಂದು ವಿಶ್ವದ ಅಧಿಕಾರ ಕೇಂದ್ರ ಪಶ್ಚಿಮದಿಂದ ಪೂರ್ವಕ್ಕೆ (ಯೂರೋಪ್‌ನಿಂದ ಏಶ್ಯಾಗೆ) ಕ್ರಮೇಣ ಹೊರಳುತ್ತಿದೆ ಎಂದೂ ನಿಕಟ ಭವಿಷ್ಯದಲ್ಲಿ ಅದೊಂದು ಗುಣಾತ್ಮಕ ತಿರುವು ತೆಗೆದುಕೊಳ್ಳಬಹುದೆಂದೂ ಹ ರಾಜಕೀಯ ವಿಶ್ಲೇಷಕರು ಚಾರಿತ್ರಿಕ ಜ್ಯೋತಿಷ್ಯ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ಭವಿಷ್ಯ ಏನು ಎಂಬುದು ಪ್ರಶ್ನಾರ್ಹವೇ!
ಕೃಪೆ: ಆಂಧ್ರಜ್ಯೋತಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)