varthabharthi

ನಿಮ್ಮ ಅಂಕಣ

ದಮನಿತರ ವೇದನೆ ಪ್ರತಿಧ್ವನಿಸುವ ಮಿಯಾಹ್ ಕಾವ್ಯ

ವಾರ್ತಾ ಭಾರತಿ : 3 Aug, 2019
ರಾಮ್ ಪುನಿಯಾನಿ

 2019 ಜುಲೈ 10ರಂದು ಹತ್ತು ಮಂದಿ ಅಸ್ಸಾಮಿ ಕವಿಗಳ ವಿರುದ್ಧ ಒಂದು ಎಫ್‌ಐಆರ್ ದಾಖಲಿಸಲಾಯಿತು. ಇವರಲ್ಲಿ ಹೆಚ್ಚಿನವರು ಮುಸ್ಲಿಮರು. ಇವರು ಮಿಯಾಹ್ ಕಾವ್ಯವೆಂದು ಈಗ ಕರೆಯಲಾಗುತ್ತಿರುವ ಕಾವ್ಯವನ್ನು ಆರಂಭ ಮಾಡಿದವರು ಹಾಗೂ ಕಾವ್ಯದ ಈ ಮಾದರಿಯಲ್ಲಿ ಬಹಳ ಪ್ರಸಿದ್ಧರು ಕೂಡ. ಇವರಲ್ಲೊಬ್ಬ ರಾಗಿರುವ ಹಫೀಝ್ ಅಹ್ಮದ್ ಅವರ ಕಾವ್ಯದ ಒಂದು ತುಣುಕು ಹೀಗಿದೆ:

ಬರೆಯಿರಿ ಬರೆದುಕೊಳ್ಳಿ,

ನಾನೊಬ್ಬ ಮಿಯಾಹ್, ಎನ್‌ಆರ್‌ಸಿಯಲ್ಲಿ ನನ್ನ

ಕ್ರಮ ಸಂಖ್ಯೆ 200543, ನನಗೆ ಇಬ್ಬರು ಮಕ್ಕಳಿದ್ದಾರೆ

ಇನ್ನೊಂದು ಮಗು ಮುಂದಿನ ಬೇಸಿಗೆಯಲ್ಲಿ ಬರಲಿದೆ

ನೀವು ಅವನನ್ನೂ ದ್ವೇಷಿಸುತ್ತೀರಾ, ನನ್ನನ್ನು ದ್ವೇಷಿಸುವ ಹಾಗೆ

ಈ ಕವನಗಳಲ್ಲಿ ಹಲವು ಕವನಗಳು ಬಾಂಗ್ಲಾದೇಶಿಗಳೆಂದು ಹಣೆಪಟ್ಟಿ ಅಂಟಿಸಲಾಗಿರುವ ಹಾಗೂ ವಿದೇಶಿಯರೆಂದು ಕರೆಯಲ್ಪಡಲಿರುವ ಮುಸ್ಲಿಮರ ವೇದನೆಯನ್ನು, ಯಾತನೆಯನ್ನು ಪ್ರತಿಫಲಿಸುತ್ತವೆ.

ಇವರ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ಹೀಗೆ ಹೇಳುತ್ತದೆ: ‘‘ವಿಶ್ವದ ದೃಷ್ಟಿಯಲ್ಲಿ ನಮ್ಮ ರಾಜ್ಯವೊಂದು ಬರ್ಬರ ರಾಜ್ಯವೆಂಬ ಅಭಿಪ್ರಾಯವನ್ನು ಈ ಸಾಲುಗಳ ಮೂಲಕ ಆಪಾದಿತರು ಉಂಟು ಮಾಡುತ್ತಿದ್ದಾರೆ. ಇದು ರಾಷ್ಟ್ರದ ಹಾಗೂ ವಿಶೇಷವಾಗಿ ಅಸ್ಸಾಂ ರಾಜ್ಯದ ಭದ್ರತೆಗೆ ಒಂದು ಬೆದರಿಕೆಯಾಗಿದೆ.’’

 ಈ ಕಾವ್ಯವು ಸ್ಥಳೀಯ ಉಪಭಾಷೆಗಳನ್ನು ಬಳಸುವುದರಿಂದ ಇದು ಅಸ್ಸಾಮಿ ಭಾಷೆಗೆ ಒಂದು ಅವಮಾನವಾಗಿದೆ ಎಂದು ಈ ಕಾವ್ಯದ ಟೀಕಾಕಾರರು ಹೇಳಿದ್ದಾರೆ. ಇಂತಹ ಟೀಕೆಯ ಹಿನ್ನೆಲೆಯಲ್ಲಿ ಕವಿ ಅಹ್ಮದ್ ಕ್ಷಮಾಯಾಚನೆ ಮಾಡಿದ್ದಾರೆ. ಈ ಇಡೀ ಪ್ರಕರಣ ಹಲವು ಪ್ರಶ್ನೆಗಳನ್ನೆತ್ತಿದೆ. ಮೊದಲನೆಯದಾಗಿ ಇದೆಲ್ಲ ಅಸ್ಸಾಮ್‌ನಲ್ಲಿ ನಡೆಯುತ್ತಿರುವ ಪೌರತ್ವದ ಕುರಿತಾದ ವಿವಾದಗಳಿಂದಾಗಿ ನಡೆಯುತ್ತಿದೆ. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆ ವೇಳೆ ಮತ್ತು ಬಳಿಕ ಬಾಂಗ್ಲಾದೇಶದ ಉದಯದ ವೇಳೆ ಹಿಂದೂಗಳು ಹಾಗೂ ಮುಸ್ಲಿಮರು ಹಲವಾರು ಬಾರಿ ಅಸ್ಸಾಂ ರಾಜ್ಯಕ್ಕೆ ವಲಸಿಗರಾಗಿ ಬಂದಿದ್ದಾರೆ.

ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ) ನಡೆಯುತ್ತಿರುವಂತೆಯೇ, ತಮ್ಮ ಬಳಿ ಅವಶ್ಯಕ ದಾಖಲೆಗಳಿಲ್ಲವೆಂಬ ಕಾರಣಕ್ಕಾಗಿ ನಲವತ್ತು ಲಕ್ಷ ಮಂದಿಯನ್ನು ಪೌರತ್ವದ ದುರಂತ ಕಾಡುತ್ತಿದೆ. ಅವರ ಹೆಸರುಗಳು ಮೊದಲ ಯಾದಿಯಲ್ಲಿ ಕಾಣಿಸುತ್ತಿಲ್ಲ. ಹಿಂದೂ ರಾಷ್ಟ್ರೀಯವಾದದ ಕಾರ್ಯಸೂಚಿ ಅನುಷ್ಠಾನಗೊಳ್ಳುತ್ತಿರುವಂತೆಯೇ ನಾಗರಿಕ ಪೌರತ್ವ ಮಸೂದೆಯು ಸಿಖ್ಖರು, ಜೈನರು ಹಾಗೂ ಹಿಂದೂಗಳಿಗೆ ಪೌರತ್ವ ನೀಡುವ ಆದರೆ ಮುಸ್ಲಿಮರಿಗೆ ನೀಡದೆ ಇರುವ ಮಾತನಾಡುತ್ತಿದೆ. ಆಗಸ್ಟ್ 31ರಂದು ಎನ್‌ಆರ್‌ಸಿ ಅಂತಿಮ ಯಾದಿ ಪ್ರಕಟವಾಗುವುದರಿಂದ ಎಲ್ಲೆಡೆ ಬಿಗಿತ, ಆತಂಕ ಕಾಣಿಸಿಕೊಳ್ಳುತ್ತಿದೆ. ಮಸೂದೆಯ ಪ್ರಕಾರ ಈಗ ಯಾದಿಯಲ್ಲಿ ಇಲ್ಲದವರಲ್ಲಿ ಹಿಂದೂಗಳು ಬಚಾವಾಗುತ್ತಾರೆ. ಮುಸ್ಲಿಮರು ಅಕ್ರಮ ವಲಸಿಗರಾಗುತ್ತಾರೆ.

ಪ್ರತಿಭಟನೆಯ ಕಾವ್ಯವಾಗಿರುವ ಮಿಯಾಹ್ ಕಾವ್ಯ ಏನನ್ನು ಪ್ರತಿಫಲಿಸುತ್ತದೆ? ಏನನ್ನು ಅಭಿವ್ಯಕ್ತಿಸುತ್ತದೆ? ಮೊದಲನೆಯದಾಗಿ ಅದು ಅಸ್ಸಾಮಿ ಜನರ ಅಥವಾ ಅಸ್ಸಾಂ ರಾಜ್ಯದ ವಿರುದ್ಧ ಅಲ್ಲವೆಂಬುದು ಬಹಳ ಸ್ಪಷ್ಟ. ಬಹುಪಾಲು ಅದು ಮುಸ್ಲಿಮರ ಮಾನಸಿಕ ಯಾತನೆ ಮತ್ತು ವೇದನೆಯ ಅಭಿವ್ಯಕ್ತಿ. ಸ್ಥಳೀಯ ನಾಗರಿಕರು ‘ವಿದೇಶಿಯರು’ ಎಂಬ ಆಪಾದನೆಯನ್ನು ಸತತವಾಗಿ ಎದುರಿಸುತ್ತಾ ಬಂದಿದ್ದಾರೆ. ಇದರಲ್ಲಿ ಬಹುಪಾಲು ಮುಸ್ಲಿಮರು ಸೇರಿದ್ದಾರೆ. ಮೊದಲು ‘ಅನುಮಾನಾಸ್ಪದ ಮತದಾರ’ (ಡೌಟ್ ಫುಲ್ ವೋಟರ್), ಡಿ ವೋಟರ್; ಬಳಿಕ ವಿದೇಶಿಯರ ನ್ಯಾಯಮಂಡಳಿ ಜನರನ್ನು ದಿಗ್ಬಂಧನ ಶಿಬಿರಗಳಿಗೆ ತಳ್ಳುವುದು ಮತ್ತು ಈಗ ಎನ್‌ಆರ್‌ಸಿ ಮೂಲಕ ಜನರ ನಾಗರಿಕತ್ವವನ್ನು ಸತತವಾಗಿ ಪರೀಕ್ಷಿಸಲಾಗುತ್ತಿದೆ. ಬಂಗಾಳಿ ಮಾತನಾಡುವ ಹಿಂದೂಗಳನ್ನು ಕೂಡ ಗುರಿ ಮಾಡಲಾಗಿದೆಯಾದರೂ ತಿದ್ದುಪಡಿ ಮಾಡಲಾಗಿರುವ ಪೌರತ್ವ ಮಸೂದೆಯಲ್ಲಿ ಅವರಿಗೆ ವಿನಾಯಿತಿ ಇದೆ. ಏಕೆಂದರೆ ಈ ಮಸೂದೆಯು ಹಿಂದೂಗಳನ್ನು, ಸಿಖ್ಖರನ್ನು ಮತ್ತು ಜೈನರನ್ನು ನಿರಾಶ್ರಿತರೆಂದು ಪರಿಗಣಿಸಿ ಮುಸ್ಲಿಮರನ್ನು ಅಕ್ರಮ ವಲಸಿಗರೆಂದು ಪರಿಗಣಿಸುತ್ತದೆ.

ಕಳೆದ ಒಂದೆರಡು ದಶಕಗಳಲ್ಲಿ 2001ರ 9/11ರ ಬಳಿಕ ಇಸ್ಲಾಮನ್ನು ಭಯೋತ್ಪಾದನೆಯೊಂದಿಗೆ ಜೋಡಿಸುತ್ತ ಜಾಗತಿಕವಾಗಿ ಇಸ್ಲಾಂ ಬಗ್ಗೆ ಭಯ (ಇಸ್ಲಾಮೋಫೋಬಿಯಾ) ಹರಡಲಾಗಿದೆ. ತೈಲದ ಮೇಲಿನ ನಿಯಂತ್ರಣ ಸಾಧಿಸುವ ರಾಜಕೀಯಕ್ಕೆ ಧರ್ಮದ ಉಡುಪು ತೊಡಿಸಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ 1992-93ರಲ್ಲಿ ನಡೆದ ಭಾರೀ ಹಿಂಸೆ, 2002ರ ಗುಜರಾತ್ ಮತ್ತು 2013ರ ಮುಝಫ್ಫರ್ ನಗರ ಹಿಂಸಾ ಘಟನೆಗಳ ಬಳಿಕ ಮುಸ್ಲಿಂ ಸಮುದಾಯದ ಬಗ್ಗೆ ಜನಸಾಮಾನ್ಯರ ದೃಷ್ಟಿಕೋನವೇ ಬದಲಾಗಿಬಿಟ್ಟಿದೆ. ಭಾರತದ ಬಹುಸಂಖ್ಯಾತ ಸಮುದಾಯಕ್ಕೆ ಮುಸ್ಲಿಂ ಸಮುದಾಯವು ಒಂದು ಬೆದರಿಕೆ ಎಂಬಂತೆ ಪ್ರಚಾರ ಮಾಡಲಾಗಿದೆ.

ಮಿಯಾಹ್ ಕಾವ್ಯವು ಒಂದು ರೀತಿಯಲ್ಲಿ ಅಸ್ಸಾಮಿನಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ಅಲ್ಲೋಲ ಕಲ್ಲೋಲ ಪರಿಸ್ಥಿತಿಯನ್ನು ಅಭಿವ್ಯಕ್ತಿಸುತ್ತದೆ. ಈ ಪರಿಸ್ಥಿತಿ ದೇಶದ ಇತರ ಹಲವು ಭಾಗಗಳಲ್ಲೂ ಇದೆ. ಪೌರತ್ವ ಮನ್ನಣೆ ಪ್ರಜೆಗಳ ಬದುಕಿನ ಮೂಲ ಅವಶ್ಯಕತೆಯಾಗಿದೆ. ಸಾಮಾನ್ಯವಾಗಿ ಗೌರವ ಸೂಚಕವಾದ ಮಿಯಾಹ್ ಎಂಬ ಶಬ್ದ ಅಸ್ಸಾಂನಲ್ಲಿ ಬಾಂಗ್ಲಾದೇಶದ ಮುಸ್ಲಿಂ, ಒಬ್ಬ ಅಕ್ರಮ ವಲಸಿಗ ಎಂಬ ಅರ್ಥ ಪಡೆಯುವಂತಾಗಿದೆ. ಜನರ ದಿನನಿತ್ಯದ ಪರಿಭಾಷೆಯಲ್ಲಿ ಅದನ್ನು ಒಂದು ಅವಹೇಳನಕಾರಿ ಪದವಾಗಿ ಬಳಸಲಾಗುತ್ತಿದೆ.

ಯಾತನೆ ಅಭಿವ್ಯಕ್ತಿ ಹಲವು ನೆಲೆಗಳಲ್ಲಿ ನಡೆಯುತ್ತದೆ. ನಾಮದೇವ್ ದಸಾಲ್, ಜೆ.ವಿ. ಪವಾರ್‌ರಂತಹವರ ಶಕ್ತಿಯುತ ಕಾವ್ಯದಲ್ಲಿ ನಾವು ದಲಿತರ ಪ್ರತಿಭಟನೆಯ ಅಭಿವ್ಯಕ್ತಿಯನ್ನು ಕಂಡಿದ್ದೇವೆ. ಮಹಿಳಾ ಚಳವಳಿ ಭಾರತದಲ್ಲಿ ಶ್ರೀಮಂತ ಸಾಹಿತ್ಯ ನೀಡಿದೆ. ಇವೆಲ್ಲವನ್ನೂ ನಾವು ನಮ್ಮ ಸಹಜೀವಿಗಳ ನೋವು ಎಂದು ಅರ್ಥ ಮಾಡಿಕೊಳ್ಳಬೇಕು. ಮನಕಲುಕುವ ಕಾವ್ಯಗಳನ್ನು ಗೌರವಿಸಬೇಕು. ಸ್ವಾತಂತ್ರ್ಯ ಚಳವಳಿಯ ಮೌಲ್ಯಗಳನ್ನು ಎತ್ತಿಹಿಡಿಯುವ ಒಂದು ಭಾರತದ ಕಡೆಗೆ ಸಾಗುವ ಪ್ರಯತ್ನ ಮಾಡಬೇಕು.      

ರಾಮ್ ಪುನಿಯಾನಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)