varthabharthi


ನಿಮ್ಮ ಅಂಕಣ

ಹುತಾತ್ಮ ಯೋಧರಿಗೆ ಬೆಲೆಯೇ ಇಲ್ಲವೇ?

ವಾರ್ತಾ ಭಾರತಿ : 3 Aug, 2019
-ಅನಿಲ್ ಕುಮಾರ್ ಪಿ., ಬೆಂಗಳೂರು

ಮಾನ್ಯರೇ,

ಪುಲ್ವಾಮ ಉಗ್ರರ ದಾಳಿಯಾಗಿ ಐದು ತಿಂಗಳಾದರೂ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಸಂಖ್ಯೆ ಎಷ್ಟೆಂದು ಸರಕಾರ ಇನ್ನೂ ಅಧಿಕೃತವಾಗಿ ಹೇಳಿಲ್ಲ. 40 ರಿಂದ 45 ಜವಾನರು ಹುತಾತ್ಮರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಬೇರೆ ಬೇರೆ ಸಂಖ್ಯೆ ವರದಿಯಾಗುತ್ತಿದೆ. ಆದರೆ ಇತ್ತೀಚೆಗೆ ಹಿಂದಿ ಸಿನೆಮಾ ತಾರೆ ಅಮಿತಾಭ್ ಬಚ್ಚನ್ ಇವರು ಪುಲ್ವಾಮದ 49 ಸಿಆರ್‌ಪಿಎಫ್ ಹುತಾತ್ಮರ ಕುಟುಂಬಿಕರಿಗೆ ತಲಾ ಐದು ಲಕ್ಷ ರೂ. ಪರಿಹಾರ ಧನ ಕೊಟ್ಟಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಅಮಿತಾಭ್ ಬಚ್ಚನ್‌ರಿಗೆ ಈ 49 ಸಂಖ್ಯೆ ಎಲ್ಲಿಂದ ಸಿಕ್ಕಿದ್ದು?

ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ 45-49 ಯೋಧರಲ್ಲದೆ ಇನ್ನೂ ಅನೇಕ ಯೋಧರು ಗಾಯ ಗೊಂಡಿದ್ದರು. ಅವರ ಬಗ್ಗೆ ಎಲ್ಲಿಯೂ ಯಾಕೆ ವರದಿಯಾಗುತ್ತಿಲ್ಲ? ಗಾಯಗೊಂಡ ಜವಾನರ ನಿಜವಾದ ಸಂಖ್ಯೆ ಎಷ್ಟು? ಅವರಿಗೆ ಸರಕಾರ ಅಥವಾ ಬೇರೆ ಯಾರಾದರೂ ಪರಿಹಾರ ಧನ ಕೊಟ್ಟಿದ್ದಾರೆಯೇ? ಇಂದಿಗೂ ಪುಲ್ವಾಮದ ಭದ್ರತಾ ವೈಫಲ್ಯದ ತನಿಖೆ ಆಗದಿರುವುದು ಗುಮಾನಿ ಹುಟ್ಟಿಸಿದೆ. ನಮ್ಮದೇ ಭದ್ರತಾ ವೈಫಲ್ಯದಿಂದ ಉಗ್ರರ ಈ ದಾಳಿ ಸಾಧ್ಯವಾಗಿದ್ದರೆ, ಅಂತಹ ಅದಕ್ಷರ ಮೇಲೆ ಯಾವ ಕ್ರಮ ಸರಕಾರ ಕೈಗೊಂಡಿದೆ? ಐದು ತಿಂಗಳಿಂದ ಈ ಬಗ್ಗೆ ಸರಕಾರದಿಂದ ಯಾವ ಹೇಳಿಕೆಯೂ ಯಾಕೆ ಬರುತ್ತಿಲ್ಲ?

 ಇದೇ ಪುಲ್ವಾಮದ ಹುತಾತ್ಮ ಜವಾನರ ಹೆಸರಲ್ಲಿ ವೋಟು ಕೇಳಿದವರು ಈ ಬಗ್ಗೆ ವೌನವಾಗಿರುವುದು ಯಾಕೆ? ವಿತ್ತ ಸಚಿವರು ಬಜೆಟ್ ಮಂಡಿಸುವ ವೇಳೆ 130 ನಿಮಿಷದಲ್ಲಿ ಪ್ರಧಾನಿ ಮೋದಿ 86 ಸಾರಿ ಮೇಜು ತಟ್ಟಿದರು ಎಂದು ಸರಿಯಾಗಿ ಲೆಕ್ಕ ಇಡುವ ಪತ್ರಕರ್ತರು ನಮ್ಮಲ್ಲಿ ಇದ್ದಾರೆ. ಆದರೆ ಪುಲ್ವಾಮದಲ್ಲಿ ಎಷ್ಟು ಯೋಧರು ಗಾಯಗೊಂಡಿದ್ದರು, ಅವರ ಕುಟುಂಬದ ಸ್ಥಿತಿಗತಿ ಈಗ ಹೇಗಿದೆ ಹಾಗೂ ಅವರಿಗೆ ಎಷ್ಟು ಪರಿಹಾರ ಧನ ಸಿಕ್ಕಿದೆ ಎಂಬ ಲೆಕ್ಕ ಯಾವುದೇ ಪತ್ರಕರ್ತ ಅಥವಾ ರಾಜಕಾರಣಿ ಇಟ್ಟಿಲ್ಲ. ಈ ವೀರ ಯೋಧರು ಕೇವಲ ಚುನಾವಣೆಯಲ್ಲಿ ವೋಟು ಸೆಳೆಯಲು ಮಾತ್ರ ರಾಜಕಾರಣಿಗಳಿಗೆ ಬೇಕೇನೋ?

-ಅನಿಲ್ ಕುಮಾರ್ ಪಿ., ಬೆಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)