varthabharthi


ಸುಗ್ಗಿ

ಶಾಲಾ ದಿನಗಳೇ... ಕನಸುಗಳಾಗಿ ಕಾಡದಿರಿ!

ವಾರ್ತಾ ಭಾರತಿ : 3 Aug, 2019
ಮಾನಸ

ಬಾಲ್ಯ ಮತ್ತು ಕನಸು ಒಂದರ ಜೊತೆಗೆ ಇನ್ನೊಂದು ಬೆಸೆದುಕೊಂಡಿವೆ. ಬಾಲ್ಯವೆನ್ನುವುದು ನಮ್ಮ ಬದುಕಿನ ರಮ್ಯ ಕಾಲ. ಇದು ಕನಸು ಕಾಣುವ ಕಾಲ. ಇದೇ ಸಂದರ್ಭದಲ್ಲಿ ಬೆಳೆದಂತೆಯೇ ತಮ್ಮ ತಮ್ಮ ಬಾಲ್ಯಕ್ಕೆ ಮರಳುವ ಬಯಕೆಯನ್ನು ಹಲವರು ತೋಡಿಕೊಳ್ಳುವುದಿದೆ. ನಾವಿಂದು ಏನಾಗಿದ್ದೇವೋ ಅದು ನಮ್ಮ ಬಾಲ್ಯದ ತಳಹದಿಯ ಮೇಲೆ ನಿಂತಿದೆ. ನಮ್ಮ ಗುಣ ಸ್ವಭಾವಗಳನ್ನು ರೂಪಿಸಿರುವುದು ಕೂಡ ಬಾಲ್ಯವೇ. ಬಾಲ್ಯ ನಮ್ಮ ಕನಸುಗಳಾಗುವುದೇನೋ ನಿಜ, ಆದರೆ ಇದೇ ಬಾಲ್ಯ ಬೇಡ ಬೇಡವೆಂದರೆ ನಮ್ಮ ರಾತ್ರಿಯ ಕನಸುಗಳಲ್ಲಿ ಬಂದು ನಮ್ಮನ್ನು ಕಾಡ ತೊಡಗಿದರೆ!? ಅತ್ಯಂತ ಕುತೂಹಲಕಾರಿ ಸಂಗತಿಗಳೆಂದರೆ ಬಹುತೇಕರ ಕನಸುಗಳಲ್ಲಿ ಬಾಲ್ಯದ ಶಾಲಾ ದಿನಗಳೇ ಮತ್ತೆ ಮತ್ತೆ ಬಂದು ಬೆಚ್ಚಿ ಬೀಳಿಸುತ್ತಿವೆ ಎನ್ನುವುದು ಮಾನಸಿಕ ತಜ್ಞರ ಅಭಿಮತ. ನಿಮ್ಮನ್ನು ಕೂಡ ಈ ಕನಸುಗಳು ಬಂದು ಪದೇ ಪದೇ ಭೀತಿಗೊಳಿಸಿರಬಹುದು. ಆತಂಕಕ್ಕೆ ತಳ್ಳಿರಬಹುದು.

ಇತ್ತೀಚೆಗೆ ನಾನು ಕಂಡ ಕನಸು ಇದು. ‘ಶಾಲೆ ಇನ್ನೇನು ಆರಂಭವಾಗುತ್ತದೆ. ಶಾಲೆಯ ಮೊದಲ ದಿನವಾಗಿರುವುದರಿಂದ ಸರಿಯಾದ ಸಮಯಕ್ಕೆ ತಲುಪಬೇಕಾಗಿದೆ. ಶಾಲೆಯೆಡೆಗೆ ಧಾವಿಸಿರುವ ನಾನು ನನ್ನ ತರಗತಿಗಾಗಿ ಹುಡುಕಾಡುತ್ತಿದ್ದೇನೆ. ವಿಳಾಸ ಕಳೆದು ಹೋಗಿದೆ. ಅತ್ತಿಂದಿತ್ತ ಅಲೆದಾಡುತ್ತಾ ಗೊಂದಲಗೊಂಡಿದ್ದೇನೆ.... ಏನು ಮಾಡಬೇಕು ಎಂದು ತೋಚದೆ ತಳಮಳಿಸುತ್ತಿದ್ದೇನೆ....ಆದರೆ ನನ್ನ ತರಗತಿ ಎಲ್ಲಿದೆ ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ....’ ಎಚ್ಚರಗೊಂಡಾಗ ನಾನು ಆತಂಕಿತನಾಗಿದ್ದೇನೆ. ಎದೆ ಡವಗುಟ್ಟುತ್ತಿದೆ.

ಬಹುತೇಕರ ಕನಸುಗಳಲ್ಲಿ ಶಾಲಾ ದಿನಗಳು ಖಿನ್ನತೆಯ, ಆತಂಕದ ರೂಪಕವಾಗಿ ಕಾಡುವುದು ಎಷ್ಟು ಜನರಿಗೆ ಗೊತ್ತಿದೆ? ಬಹುತೇಕರಿಗೆ ಶಾಲಾ ಪರೀಕ್ಷೆಗಳೇ ಕನಸುಗಳಾಗಿ ಆತಂಕವನ್ನು ತಂದಿಡುತ್ತವೆ. ಪರೀಕ್ಷೆಯ ಕೊಠಡಿಯೊಳಗೆ ಹೋದ ಬಳಿಕ ಪೆನ್ನು ಮರೆತಿರುವುದು ಗೊತ್ತಾಗುವುದು, ಹಾಲ್ ಟಿಕೆಟ್ ಸಂಖ್ಯೆ ಮರೆತಿರುವುದು, ಪರೀಕ್ಷೆಗೆ ಸಿದ್ಧತೆಯನ್ನೇ ಮಾಡಿಲ್ಲದಿರುವುದು, ಅಂದು ತಾನು ಓದಿದ ಪಠ್ಯಕ್ಕೆ ಬದಲಾಗಿ ಬೇರೆ ಪಠ್ಯದ ಪರೀಕ್ಷೆ ನಡೆಯುವುದು ಕೊನೆ ಗಳಿಗೆಯಲ್ಲಿ ಗೊತ್ತಾಗಿ ಬಿಡುವುದು...ಇಷ್ಟೇ ಅಲ್ಲ, ಯಾವುದೋ ಒಂದು ಪರೀಕ್ಷೆಗೆ ತಾನು ಕುಳಿತೇ ಇಲ್ಲ ಎನ್ನುವ ಆತಂಕವೂ ಪದೇ ಪದೇ ಕನಸುಗಳನ್ನು ಪ್ರವೇಶಿಸುತ್ತದೆ. ಪದವಿಯನ್ನೇ ಪಡೆದುಕೊಳ್ಳದೇ ಇರುವುದು... ಹಲವು ದಿನಗಳ ಕಾಲ ಶಾಲೆಗೆ ರಜೆ ಹಾಕಿ ರುವುದು... ಹೊಸದಾಗಿ ಅದೇ ಶಾಲೆಗೆ ಸೇರಲು ಮುಂದಾಗುವುದು... ಹೀಗೆ ಶಾಲಾ ಪರೀಕ್ಷೆ ಮತ್ತು ಅದರ ಸುತ್ತ ಮುತ್ತಲ ವ್ಯವಹಾರಗಳು ಬೇರೆ ಬೇರೆ ರೂಪಗಳಲ್ಲಿ ಮತ್ತೆ ಮತ್ತೆ ಕನಸುಗಳಾಗಿ ಕಾಡುತ್ತಿರುತ್ತವೆ. ಅವು ಬದುಕಿನಲ್ಲಿ ನಿಜವಾಗಿ ನಡೆದಿರಬೇಕಾಗಿಲ್ಲ. ಅಥವಾ ಅವುಗಳಲ್ಲಿ ಕೆಲವು ಬೇರೆ ಬೇರೆ ರೂಪಗಳಲ್ಲಿ ಘಟಿಸಿರುವ ಸಾಧ್ಯತೆಗಳೂ ಇರುತ್ತವೆ.

ಈ ಕನಸುಗಳು ವಯಸ್ಸಾದಂತೆ ಮರೆಯಾಗುತ್ತಾ ಬರುತ್ತದೆ ಎಂದು ಸಂಶೋಧನೆಗಳು ತಿಳಿಸಿದ್ದರೂ ಅವುಗಳು 50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವರಲ್ಲೂ ಸಾಮಾನ್ಯವಾಗಿದೆ ಎನ್ನುವ ಅಂಶ ಈಗಾಗಲೇ ಸಮೀಕ್ಷೆಗಳಿಂದ ಬಯಲಾಗಿದೆ. ವಾಸ್ತವದಲ್ಲಿ ಕೆನಡ, ಅಮೆರಿಕ ಮತ್ತು ಜಪಾನ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಶಾಲೆ, ಶಿಕ್ಷಕರು ಮತ್ತು ಕಲಿಯುವಿಕೆಯ ಕನಸುಗಳೇ ಪದೇ ಪದೇ ಕಾಡುವ ಅಗ್ರ ವಿಷಯಗಳಾಗಿವೆ.

ಆದರೆ ಲಾಕರ್‌ಗಳು, ಹಾಲ್‌ಟಿಕೆಟ್, ಮರೆತು ಹೋದ ಪೆನ್ನು, ಪರೀಕ್ಷೆಯ ಪಠ್ಯ ಬದಲಾವಣೆ, ಕೋಣೆಯ ದಾರಿಗಳು ಮತ್ತು ಕೋರ್ಸ್‌ಗಳ ಅಂಕಗಳು ನಾವು ಶಿಕ್ಷಣ ಪಡೆದು ವರ್ಷಗಳು ಕಳೆದರೂ ನಮ್ಮನ್ನು ಯಾಕೆ ಕಾಡುತ್ತಿರುತ್ತವೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಮೊದಲನೆ ಯದಾಗಿ, ಶಾಲೆಯ ಕನಸುಗಳು ಎಷ್ಟು ಬಾರಿ ಬೀಳುತ್ತದೆ ಎನ್ನುವುದನ್ನು ಗಮನಿಸಬೇಕು. ಅದಕ್ಕಾಗಿ ಒಂದು ವೈಜ್ಞಾನಿಕ ಪ್ರಶ್ನಾವಳಿಯಿದೆ-ಅದರ ಪ್ರಕಾರ ಶಾಲೆಯ ಕನಸುಗಳು ಭ್ರಮೆಗಳಲ್ಲ ಎನ್ನುವುದು ತಿಳಿಯುತ್ತದೆ. 1950ರಲ್ಲಿ ಸಿದ್ಧಪಡಿಸಲಾದ ನಿರ್ದಿಷ್ಟ ಕನಸಿನ ಪ್ರಶ್ನಾವಳಿಯಲ್ಲಿ 55 ಕನಸುಗಳ ಮಾದರಿಗಳನ್ನು ನೀಡಲಾಗಿದ್ದು ಸಂಶೋಧನೆಯಲ್ಲಿ ಭಾಗವಹಿಸು ವವರು ಕಂಡ ಪ್ರತಿ ಕನಸನ್ನು ಪರಿಶೀಲಿಸುವಂತೆ ಮತ್ತು ಅತ್ಯಂತ ಸಾಮಾನ್ಯ ಕನಸನ್ನು ಗುರುತಿಸುವಂತೆ ತಿಳಿಸಲಾಗುತ್ತದೆ. 2003ರಲ್ಲಿ ಕೆನಡದ ಕಾಲೇಜು ವಿದ್ಯಾರ್ಥಿಗಳ ಅಧ್ಯಯನ ನಡೆಸಿದಾಗ, ಇವು ನಾಲ್ಕನೇ ಸಾಮಾನ್ಯ ಕನಸಾಗಿ ಕಾಡುತ್ತಿ ರುವುದು ಕಂಡುಬಂದಿತ್ತು. ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುವ ಕನಸು ಹತ್ತನೇ ಸ್ಥಾನದಲ್ಲಿತ್ತು.

1950ರಲ್ಲಿ ಅಮೆರಿಕ ಮತ್ತು ಜಪಾನೀಸ್ ಕಾಲೇಜು ವಿದ್ಯಾರ್ಥಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ, ಶೇ.71 ಅಮೆರಿಕನ್ ಮತ್ತು ಶೇ.86 ಜಪಾನೀಸ್ ವಿದ್ಯಾರ್ಥಿಗಳು ಶಾಲೆಗೆ ಸಂಬಂಧಿಸಿದ ಕನಸುಗಳ ಬಗ್ಗೆ ತಿಳಿಸಿದ್ದರು. ಈ ಬಾರಿಯೂ ಅದು, ದಾಳಿಗೊಳಗಾಗುವ, ಬೀಳುವ ಮತ್ತು ಏನನ್ನೋ ಪಡೆಯಲು ಮತ್ತೆ ಮತ್ತೆ ಪ್ರಯತ್ನಿಸುವ ಕನಸುಗಳ ನಂತರ ನಾಲ್ಕನೇ ಅತೀ ಹೆಚ್ಚು ಕಾಣುವ ಕನಸಾಗಿ ಹೊರಹೊಮ್ಮಿತ್ತು. ಬೆಂಗಳೂರಿನ 40ರ ಹರೆಯದ ರೋಶನ್‌ಗೆ ಶಾಲಾ ಒತ್ತಡಕ್ಕೆ ಸಂಬಂಧಿಸಿದ ಕನಸು ತಿಂಗಳಲ್ಲಿ ಕನಿಷ್ಠ ಎರಡು ಬಾರಿಯಾದರೂ ಬೀಳುತ್ತದೆ ಮತ್ತು ಹೆಚ್ಚಾಗಿ ಅವುಗಳು ಏನಾದರೂ ಮಾಡಲು ನಡೆಸುವ ಹತಾಶ ಪ್ರಯತ್ನದ ಸುತ್ತ ಸುತ್ತುತ್ತಿರುತ್ತದೆ: ತರಗತಿಗೆ ಹೋಗಲು ಮರೆಯುವುದು, ಕಾರಿನಲ್ಲಿ ತೊಂದರೆ ಕಾಣಿಸಿಕೊಂಡು ತರಗತಿಗೆ ಹೋಗಲು ವಿಫಲ, ತನ್ನ ತರಗತಿಯನ್ನು ಹುಡುಕುತ್ತಾ ಅಲೆಯುವುದು, ತರಗತಿ ಎಷ್ಟು ಗಂಟೆಗೆ ಆರಂಭವಾಗುತ್ತದೆ ಎನ್ನುವುದು ಮರೆತು ಹೋಗುವುದು ಅಥವಾ ಯಾವ ದಿನ ಯಾವ ತರಗತಿಯಿದೆ ಎನ್ನುವುದು ಮರೆತು ಹೋಗುವುದು, ನನ್ನ ಶಾಲಾವಧಿಯನ್ನು ತಿಳಿಯಲು ಮಾರ್ಗದರ್ಶಕ ಕಚೇರಿಯನ್ನು ಹುಡುಕಲು ವಿಫಲವಾಗುವುದು ಹೀಗೆ ದೊಡ್ಡ ಪಟ್ಟಿಯೇ ಇದೆ. ಅಷ್ಟೊಂದು ವೈಜ್ಞಾನಿಕವಲ್ಲದ ಸಮೀಕ್ಷೆಗಳಲ್ಲೂ ಹೆಚ್ಚಿನ ಜನರು ತಮ್ಮ ಶಾಲಾ ದಿನಗಳ ಬಗ್ಗೆ ಕನಸುಗಳನ್ನು ಕಾಣುವುದು ಕಂಡುಬಂದಿದೆ. ಮೂರು ವರ್ಷಗಳ ಹಿಂದೆ ಫ್ಲೊರಿಡದಲ್ಲಿ ನೆಲೆಸಿರುವ ಲೇಖಕಿ ಮತ್ತು ಕನಸುಗಳ ವಿಶ್ಲೇಷಕಿ ಲೌರಿ ಲೊವೆನ್‌ಬರ್ಗ್ 5,000 ಜನರನ್ನು ಸಮೀಕ್ಷೆ ನಡೆಸಿದಾಗ ಅವರಲ್ಲಿ ಶಾಲಾ ಕನಸುಗಳು ಎರಡನೇ ಸ್ಥಾನ ಪಡೆದುಕೊಂಡಿತ್ತು. ಇವುಗಳಲ್ಲಿ ಮೂರು ಸಾಮಾನ್ಯ ಕನಸುಗಳೆಂದರೆ, ತರಗತಿ ಅಥವಾ ಲಾಕರ್ ಪತ್ತೆಯಾಗದಿರುವುದು, ಪರೀಕ್ಷೆಗೆ ಸಿದ್ಧಗೊಳ್ಳದಿರುವುದು ಮತ್ತು ತರಗತಿಗಳನ್ನು ಪುನಃ ತೆಗೆದುಕೊಳ್ಳಬೇಕಾಗುವುದು. ಇವೆಲ್ಲ ಸಂಶೋಧನೆಗಳಿಂದ ಕಂಡುಕೊಂಡ ಒಂದು ಸಾಮಾನ್ಯ ವಿಷಯವೆಂದರೆ ನಾವು ಪ್ರೌಢ ಶಾಲಾ ಆಘಾತಕ್ಕೆ ಹೆಚ್ಚಾಗಿ ಅಂಟಿಕೊಂಡಿದ್ದೇವೆ. ಉದ್ಯೋಗದ ಒತ್ತಡ, ಉದ್ಯೋಗದ ಸಮಸ್ಯೆಗಳು ಶಾಲಾ ಕನಸುಗಳಲ್ಲಿ ಹೆಚ್ಚಾಗಿ ಗೋಚರಿಸುತ್ತವೆ. ಉದ್ಯೋಗ ಸಂಬಂಧಿ ಕನಸುಗಳಲ್ಲೂ ಅದು ಅಷ್ಟು ಹೆಚ್ಚು ಗೋಚರಿಸುವುದಿಲ್ಲ ಎಂದು ಲೌರಿ ಹೇಳುತ್ತಾರೆ. ವಯಸ್ಸಾದಂತೆ ಶಾಲಾ ಕನಸುಗಳು ಬರುವುದೂ ಕಡಿಮೆಯಾಗುತ್ತದೆ. ವೃದ್ಧರಲ್ಲಿ ಹೆಚ್ಚಾಗಿ ಯವ್ವನದ ಕನಸುಗಳು ಬೀಳುತ್ತವೆ. ಕೆಲವರಿಗೆ ಮದುವೆಯಾದ ವರ್ಷಗಳ ನಂತರವೂ ತಮ್ಮ ಮೊದಲ ಪ್ರೀತಿಯ ಕನಸುಗಳು ಬೀಳುತ್ತವೆ. ಒಂದು ರೀತಿಯಲ್ಲಿ ಜೀವನದ ಮೊದಲ ಅನುಭವ ನಮ್ಮ ಉಪಪ್ರಜ್ಞೆಯಲ್ಲಿ ದಾಖಲಾಗಿರುತ್ತದೆ ಮತ್ತು ನಮ್ಮ ಜೀವನದ ಭಾಗವಾಗುತ್ತದೆ ಎಂದು ಲೌರಿ ಹೇಳುತ್ತಾರೆ. ಜರ್ಮನಿಯ ಮನ್‌ಹೇಮ್‌ನಲ್ಲಿರುವ ಕೇಂದ್ರೀಯ ಮಾನಸಿಕ ಆರೋಗ್ಯ ಸಂಸ್ಥೆಯ ನಿದ್ರೆ ಪ್ರಯೋಗಾಲಯದ ಮುಖ್ಯಸ್ಥ ಮೈಕಲ್ ಶ್ರೆಡಿ ಪ್ರಕಾರ, ಶಾಲೆಗೆ ಹೋಗುವ ಕನಸುಗಳು ಒಂದು ಸಾಮಾನ್ಯ ಅನುಭವವಾಗಿದ್ದು ನಮ್ಮ ದೈನಂದಿನ ನಿಜಜೀವನದ ದುಗುಡ-ಆತಂಕಗಳನ್ನು ವ್ಯಕ್ತಪಡಿಸುವ ಮೆದುಳಿನ ಒಂದು ತಂತ್ರವಾಗಿದೆ. ಶಾಲಾ ಕನಸುಗಳನ್ನು ಕಾಣುವ ಅನೇಕ ಮಂದಿ ಅವುಗಳನ್ನು ನಿರ್ದಿಷ್ಟ ಇತಿಹಾಸ ಮತ್ತು ಕಾತರಗಳ ಜೊತೆ ತಾಳೆ ಹಾಕುತ್ತಾರೆ. ಆ್ಯಶ್‌ವಿಲ್ಲೆ ಸಿಟಿಝನ್ ಟೈಮ್ಸ್‌ನ ವರದಿಗಾರರಾಗಿರುವ ಮೈಕ್ ಕ್ರೊನಿನ್ ತನ್ನ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಗಣಿತ ಮನೆಕೆಲಸವನ್ನು ತಪ್ಪಿಸಿಕೊಳ್ಳುತ್ತಿದ್ದರು ಮತ್ತು ಅಂತಿಮ ಗಳಿಗೆಯಲ್ಲಿ ಚಡಪಡಿಸುತ್ತಿದ್ದರು. ಈಗ ಮೈಕ್‌ಗೆ 46ರ ವಯಸ್ಸು. ಗಣಿತದ ಹೋಮ್ ವರ್ಕ್‌ಗಳು ಕನಸುಗಳಲ್ಲಿ ಅವರನ್ನು ಈಗಲೂ ಬೆಂಬತ್ತಿವೆ.

2014ರಲ್ಲಿ ವೈದ್ಯಕೀಯ ಕಾಲೇಜಿಗೆ ಅರ್ಹತೆ ಪಡೆಯುವ ಪರೀಕ್ಷೆ ಬರೆಯಲು ಸಿದ್ಧಗೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ಹಿಂದಿನ ದಿನ ಬಿದ್ದ ಕನಸುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಈ ಸಮೀಕ್ಷೆಯಲ್ಲಿ ಭಾಗವಹಿಸಿದ 719 ವಿದ್ಯಾರ್ಥಿಗಳ ಪೈಕಿ ಶೇ.60 ವಿದ್ಯಾರ್ಥಿಗಳು ಪರೀಕ್ಷೆಯ ಹಿಂದಿನ ರಾತ್ರಿ ಪರೀಕ್ಷೆಯ ಕನಸು ಕಂಡಿದ್ದರು. ಶೇ.78 ಕನಸುಗಳಲ್ಲಿ ವಿದ್ಯಾರ್ಥಿಗಳು ಉತ್ತರಗಳನ್ನು ಮರೆಯುವ, ತಡವಾಗುವ ಅಥವಾ ತಪ್ಪುತಪ್ಪಾಗಿ ಬರೆಯುವ ಕನಸು ಕಂಡಿದ್ದರು. ಆದರೆ ಇದಕ್ಕಿಂತಲೂ ಹೆಚ್ಚು ಆಶ್ಚರ್ಯಕರ ಅಂಶವೆಂದರೆ, ಪರೀಕ್ಷೆಯ ಬಗ್ಗೆ ಹಿಂದಿನ ರಾತ್ರಿ ಕನಸು ಕಂಡ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದರು. ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದ ಕಾರಣ ಅದು ಅವರ ಕನಸಿನಲ್ಲೂ ಪ್ರತಿಫಲಿಸಿತ್ತು ಮತ್ತು ಇದರಿಂದ ಆತಂಕಗೊಂಡ ಅವರು ಹೆಚ್ಚು ಶ್ರಮಪಟ್ಟು ಓದಿದ ಕಾರಣ ಉತ್ತಮ ಅಂಕಗಳನ್ನು ಗಳಿಸಿದ್ದಾರೆ ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ. ನಮ್ಮ ಬಾಲ್ಯ ರಮ್ಯವಿರಬಹುದು, ಆದರೆ ಶಾಲಾ ಒತ್ತಡಗಳು ಆ ಬಾಲ್ಯವನ್ನು ಹಿಂಡಿ ಹಿಪ್ಪೆಗೊಳಿಸಿದೆ ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕಾಗಿದೆ. ನಮ್ಮ ಬಾಲ್ಯವೆಂದರೆ ನಮ್ಮ ಶಾಲಾದಿನಗಳೇ ಆಗಿವೆ. ಅವುಗಳಿಂದ ಹೊರಗಿಡುವ ಸನ್ನಿವೇಶ ಸಿಗುವುದು ಅತ್ಯಲ್ಪ. ಶಾಲಾ ಕಲಿಕೆ ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎನ್ನುವ ಕಾರಣದಿಂದಲೇ, ಶಾಲಾ ದಿನಗಳಲ್ಲಿ ನಾವು ಮಾಡಿರುವ ತಪ್ಪುಗಳು ಅಥವಾ ಯಡವಟ್ಟುಗಳು ನಮ್ಮನ್ನು ಕೀಳರಿಮೆಯಾಗಿ ಬದುಕಿನುದ್ದಕ್ಕೂ ಕಾಡುತ್ತದೆ. ಜೊತೆಗೆ ವರ್ತಮಾನದ ಆತಂಕ, ಅಭದ್ರತೆಗಳು ಮತ್ತೆ ಮತ್ತೆ ಅದೇ ಬಾಲ್ಯದ ಅಭದ್ರತೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ಅಭದ್ರತೆಯಿಂದ ತಪ್ಪಿಸಿಕೊಂಡವರು ತೀರಾ ಅತ್ಯಲ್ಪ ಜನರು. ಅವರು ನಿಜಕ್ಕೂ ಭಾಗ್ಯವಂತರು. ವಾರಕ್ಕೊಮ್ಮೆಯಾದರೂ ಇಂತಹ ಕನಸುಗಳನ್ನು ಕಂಡು ದುಗುಡದಿಂದ, ಆತಂಕದಿಂದ ಮುಂಜಾವವನ್ನು ಆರಂಭಿಸುವವರು ಇದನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ಒಳಗೊಳಗೆ ವಿಚಿತ್ರ ತಳಮಳ ಅಥವಾ ಆ ಕನಸುಗಳು ನಿಜವಲ್ಲ ಎನ್ನುವ ನಿರಾಳತೆಯ ಜೊತೆಗೆ ಸೆಣಸಾಡುತ್ತಿರುತ್ತಾರೆ. ಅವರೆಲ್ಲ ತಿಳಿದುಕೊಳ್ಳಬೇಕಾದ ಸಂಗತಿಯೆಂದರೆ, ಹೀಗೆ ಕನಸು ಕಾಣುವವರು ನಿಮ್ಮ ಜೊತೆಗೆ ದೊಡ್ಡ ಸಂಖ್ಯೆಯಲ್ಲಿದ್ದಾರೆ. ನಮ್ಮ ಜೀವನದ ಹಳೆಯ ಭಾಗವೊಂದನ್ನು ಕನಸುಗಳ ಮೂಲಕ ಬದುಕುತ್ತಾ, ವರ್ತಮಾನದ ಏನನ್ನೋ ತಿದ್ದಿಕೊಳ್ಳಲು ಆ ಕನಸು ನಮಗೆ ಸಜ್ಞೆಗಳನ್ನು ನೀಡುತ್ತಿದೆ ಎಂದು ಭಾವಿಸೋಣ.

*ನಮ್ಮ ಬಾಲ್ಯ ರಮ್ಯವಿರಬಹುದು, ಆದರೆ ಶಾಲಾ ಒತ್ತಡಗಳು ಆ ಬಾಲ್ಯವನ್ನು ಹಿಂಡಿ ಹಿಪ್ಪೆಗೊಳಿಸಿದೆ ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕಾಗಿದೆ. ನಮ್ಮ ಬಾಲ್ಯವೆಂದರೆ ನಮ್ಮ ಶಾಲಾದಿನಗಳೇ ಆಗಿವೆ. ಅವುಗಳಿಂದ ಹೊರಗಿಡುವ ಸನ್ನಿವೇಶ ಸಿಗುವುದು ಅತ್ಯಲ್ಪ. ಶಾಲಾ ಕಲಿಕೆ ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎನ್ನುವ ಕಾರಣದಿಂದಲೇ, ಶಾಲಾ ದಿನಗಳಲ್ಲಿ ನಾವು ಮಾಡಿರುವ ತಪ್ಪುಗಳು ಅಥವಾ ಯಡವಟ್ಟುಗಳು ನಮ್ಮನ್ನು ಕೀಳರಿಮೆಯಾಗಿ ಬದುಕಿನುದ್ದಕ್ಕೂ ಕಾಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)