varthabharthi


ವೈವಿಧ್ಯ

ಜೈಲಿನಿಂದ ಸಂಜೀವ್ ಭಟ್ ಪತ್ರ

ನಾನು ಸೋಲಲಾರೆ, ಶರಣಾಗಲಾರೆ

ವಾರ್ತಾ ಭಾರತಿ : 4 Aug, 2019
ಸಂಜೀವ್ ಭಟ್, ಐಪಿಎಸ್ (ಆಗಸ್ಟ್ 2 ರಂದು ಅವರ ಪತ್ನಿ ಶ್ವೇತಾ ಭಟ್ ಅವರು ಬಹಿರಂಗಪಡಿಸಿದ ಪತ್ರದ ಅನುವಾದ)

ಸ್ನೇಹಿತರೇ, ಭಾರತ ಈಗ ಸಂಕ್ರಮಣ ಘಟ್ಟದಲ್ಲಿದೆ. ಇವತ್ತು ನಾವು ಮಾಡುವ ಆಯ್ಕೆಗಳು ಮುಂದಿನ ಕೆಲವು ದಶಕಗಳ ನಮ್ಮ ಹಣೆಬರಹ ನಿರ್ಧರಿಸಲಿವೆ. ನಮ್ಮಲ್ಲಿ ಇನ್ನು ಯಾರೂ ಕೇವಲ ಮೂಕಪ್ರೇಕ್ಷಕರಾಗಿರಲು ಸಾಧ್ಯವಿಲ್ಲ. ನಾವು ಹೋರಾಟದ ಭಾಗವಾಗಲೇಬೇಕು.

ಸ್ಥಳ : ಅಂಧಕಾರದ ಹೃದಯಭಾಗ
ದಿನಾಂಕ : ಹೋರಾಟದ ಇನ್ನೊಂದು ದಿನ

ಅತ್ಯಂತ ಪ್ರೀತಿಯ ಶ್ವೇತಾ, ಆಕಾಶಿ, ಶಂತನು ಮತ್ತು ಮಿತ್ರರೇ,
ಶ್ವೇತಾ, ನಾನು ನಿನಗೆ ಮೂರು ದಶಕಗಳ ಬಳಿಕ ಈಗ ಪತ್ರ ಬರೆಯುತ್ತಿದ್ದೇನೆ ! ಇದಕ್ಕೆ ಮೊದಲು ನಾನು ನಿನಗೆ ಪತ್ರ ಬರೆದಿದ್ದು ನಾನು ನ್ಯಾಷನಲ್ ಪೊಲೀಸ್ ಅಕಾಡಮಿಯಲ್ಲಿದ್ದಾಗ. ಕಾಲ ಹೇಗೆ ಕಳೆದು ಹೋಯಿತು ಎಂದು ನನಗೀಗ ಅರಿವಾಗುತ್ತಿದೆ. ನಾವು ನಮ್ಮ ಕನಸುಗಳ ಪಯಣವನ್ನು ನಿನ್ನೆಯಷ್ಟೇ ಆರಂಭಿಸಿದಂತೆ ಅನಿಸುತ್ತಿದೆ ನನಗೆ ... ಇಂತಹ ಅದ್ಭುತ ಪಯಣ ಅದು ! ಶ್ವೇತಾ, ನಾನು ನನ್ನ ಭಾವನೆಯನ್ನು ಈವರೆಗೆ ಅಷ್ಟು ಸ್ಪಷ್ಟವಾಗಿ ತೋರಿಸಿಲ್ಲ, ಆದರೆ ಈಗ ನಿನಗೆ ಹೇಳುತ್ತಿದ್ದೇನೆ, ನೀನು ನನ್ನ ಪಾಲಿಗೆ ಅತ್ಯಂತ ಅದ್ಭುತ ಬಾಳ ಸಂಗಾತಿಯಾಗಿದ್ದೆ. ಇವತ್ತು ನಾನು ಏನಾಗಿದ್ದೇನೆಯೋ ಅದೆಲ್ಲವೂ ಕೇವಲ ಮತ್ತು ಕೇವಲ ನಿನ್ನಿಂದ. ನೀನು ನನ್ನ ಪಾಲಿನ ಶಕ್ತಿ ಮತ್ತು ಸ್ಫೂರ್ತಿ. ಎಲ್ಲ ಸವಾಲುಗಳ ಎದುರು ನನ್ನ ಸಿದ್ಧಾಂತ ಹಾಗೂ ಸಂಕಲ್ಪಗಳನ್ನು ಅಚಲವಾಗಿಟ್ಟ ಶಕ್ತಿ ನೀನು. ಕಳೆದ ಮೂರು ದಶಕಗಳಲ್ಲಿ ನಾವು ಅತ್ಯಂತ ಸುಂದರ ದಿನಗಳನ್ನು ಕಳೆದಿದ್ದೇವೆ, ಅಷ್ಟೇ ಸುಂದರ ಕನಸುಗಳನ್ನು ಕಟ್ಟಿದ್ದೇವೆ. ಅದೇ ರೀತಿ, ಪರೀಕ್ಷೆಯ ಕ್ಷಣಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಎದುರಿಸಿದ್ದೇವೆ. ಸುಖ ದುಃಖಗಳಲ್ಲಿ ಸಮಾನವಾಗಿ ಎದುರಿಸುತ್ತಾ ಬದುಕಿನ ಪ್ರತಿ ಕ್ಷಣವನ್ನು ಆಸ್ವಾದಿಸುತ್ತಾ ಇಲ್ಲಿವರೆಗೆ ಬಂದಿದ್ದೇವೆ. ಲವ್ ಯು .. ಎಂದೆಂದಿಗೂ.
ಶ್ವೇತಾ, ಕಳೆದ ಕೆಲವು ವರ್ಷಗಳು ನಿನಗೆ ಮತ್ತು ಮಕ್ಕಳಿಗೆ ಸುಲಭವಾಗಿರಲಿಲ್ಲ. ನಾನು ಮುಂದೆ ಏನು ಮಾಡಲಿದ್ದೇನೆ ಎಂಬ ಬಗ್ಗೆ ಯಾವ ಸ್ಪಷ್ಟತೆ ಇರದಿದ್ದರೂ ನಾನು ನಂಬಿದ ತತ್ವಗಳಿಗೆ ನಿಷ್ಠನಾಗಿ, ಯಾರಿಗೂ ಶರಣಾಗದೆ ಐಪಿಎಸ್ ಸೇವೆ ಬಿಡಲು ನಿರ್ಧರಿಸಿದಾಗ ನೀವೆಲ್ಲರೂ ನನ್ನ ಜೊತೆ ನಿಂತಿರಿ. ನಮ್ಮೆಲ್ಲರಿಗಿಂತಲೂ ಬಹು ಮುಖ್ಯವಾಗಿದ್ದ ವಿಷಯಕ್ಕಾಗಿ ನಾನು ಏನಾಗಬೇಕೋ ಅದಾಗಲಿಕ್ಕಾಗಿ ಎಲ್ಲವನ್ನೂ ಪಣಕ್ಕೆ ಒಡ್ಡುವ ನನ್ನ ನಿರ್ಧಾರವನ್ನು ಬೆಂಬಲಿಸಿ ನೀವೆಲ್ಲರೂ ಅದರ ಬೆಲೆ ತೆತ್ತಿದ್ದೀರಿ.
   ಶ್ವೇತಾ, ಕಳೆದೊಂದು ವರ್ಷ ನಿನಗೆಷ್ಟು ದುಃಖದಾಯಕವಾಗಿತ್ತು ಎಂದು ಊಹಿಸುವುದೂ ಕಷ್ಟ. ನಮ್ಮ ಮನೆಗೆ ಕಾನೂನು ಬದ್ಧವಾಗಿಯೇ ಮಾಡಿದ್ದ ಹೆಚ್ಚುವರಿ ಕಾಮಗಾರಿಯನ್ನು ನಮಗೆ ವಿವರಣೆ ನೀಡುವ ಅವಕಾಶವನ್ನೂ ನೀಡದೆ ಕಳೆದ ವರ್ಷ ಆಗಸ್ಟ್‌ನಲ್ಲಿ ಕಾನೂನು ಬಾಹಿರವಾಗಿ ಧ್ವಂಸಗೊಳಿಸುವ ಮೂಲಕ ಇದೆಲ್ಲ ಪ್ರಾರಂಭವಾಯಿತು. ನೀನು ಅಷ್ಟೊಂದು ಪ್ರೀತಿ, ಕಾಳಜಿಯಿಂದ ಕಟ್ಟಿದ್ದ ಮನೆಯ ಒಂದೊಂದೇ ಭಾಗಗಳನ್ನು ಈ ಗೂಂಡಾ ಸರಕಾರದ ಗುಲಾಮರು ಕೆಡವಿ ಹಾಕುವಾಗ ನಿನಗೆ ಅದೆಷ್ಟು ಸಂಕಟವಾಗಿರಬಹುದು ಎಂದು ನಾನು ಊಹಿಸಲು ಮಾತ್ರ ಶಕ್ತ. ಇದರ ಬೆನ್ನಿಗೆ 24 ವರ್ಷ ಹಳೆಯ ಕೇಸಿಗೆ ಸಂಬಂಧಿಸಿ ಕೇವಲ ಸುಳ್ಳು ಸಾಕ್ಷ್ಯಗಳ ಆಧಾರದಲ್ಲಿ ನನ್ನನ್ನು ಬಂಧಿಸಲಾಯಿತು. ಸಾಲದ್ದಕ್ಕೆ ಟಾಡಾ ಆರೋಪಿಯೊಬ್ಬ ಬಿಡುಗಡೆಯಾಗಿ 18 ದಿನಗಳ ಬಳಿಕ ಸಾವಿಗೀಡಾದ 29 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಅನ್ಯಾಯವಾಗಿ ಮತ್ತು ಅಷ್ಟೇ ಅಕ್ರಮವಾಗಿ ನನ್ನನ್ನು ಅಪರಾಧಿ ಎಂದು ಘೋಷಿಸಲಾಯಿತು. ಶ್ವೇತಾ, ನೀನು ಇವೆಲ್ಲವನ್ನೂ ಏಕಾಂಗಿಯಾಗಿ ಆದರೆ ಅಷ್ಟೇ ಧೈರ್ಯಶಾಲಿಯಾಗಿ ಎದುರಿಸಿದೆ. ಇಡೀ ದೇಶ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ನಿನ್ನ ಧೈರ್ಯ, ಸ್ಥೈರ್ಯ ಹಾಗೂ ಮನೋಬಲವನ್ನು ನೋಡಿದೆ. ಇವತ್ತು ಭಾರತ ಸರಕಾರವೇ ಕೇಂದ್ರೀಕೃತ ಹಾಗೂ ವ್ಯವಸ್ಥಿತ ಹಿಂಸೆಯನ್ನು ಪ್ರತಿನಿಧಿಸುವ ಹಂತಕ್ಕೆ ಬಂದು ತಲುಪಿದೆ. ಇವತ್ತು ಇಲ್ಲಿ ಗೂಂಡಾಗಿರಿಯೇ ಆಡಳಿತದ ಹಂತಕ್ಕೆ ಬಂದಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಗಳು ಎಂದು ಕರೆಸಿಕೊಳ್ಳುವವರು ಈಗ ಪ್ರಭುತ್ವಕ್ಕೆ ಸಂಪೂರ್ಣ ಶರಣಾಗಿಬಿಟ್ಟಿದ್ದಾರೆ. ಎಲ್ಲವೂ ರಾಜಿಯಾಗಿರುವ ಅಥವಾ ರಾಜಿಯಾಗಿಸುವ ಈ ಕಾಲದಲ್ಲಿ ಯಾವ ಸಂಸ್ಥೆಯೂ ಇಲ್ಲಿ ಸುರಕ್ಷಿತವಲ್ಲ. ದೇಶದ ನ್ಯಾಯಾಲಯಗಳು ತೀರ್ಪು ನೀಡುತ್ತಿವೆ ಆದರೆ ಅದರಲ್ಲಿ ಸತ್ಯ ಮತ್ತು ನ್ಯಾಯ ಇರಲೇಬೇಕೆಂದಿಲ್ಲ. ಶ್ವೇತಾ, ಈ ಕಾಲದಲ್ಲಿ ನೀನು ಅನ್ಯಾಯದ ವಿರುದ್ಧ ಹೋರಾಡುವ ದಾರಿ ಆಯ್ಕೆ ಮಾಡಿರುವೆ. ಈ ಆಯ್ಕೆಗೆ ಅದರದ್ದೇ ಬೆಲೆ ತೆರಬೇಕಾಗುತ್ತೆ. ಈ ಸಂದರ್ಭದಲ್ಲಿ ನೀನು ತೋರಿಸಿರುವ ಅಸಾಮಾನ್ಯ ಸ್ಥೈರ್ಯ ಹಲವರು ಈ ಹೋರಾಟಕ್ಕೆ ಸಜ್ಜಾಗುವಂತೆ ಸ್ಫೂರ್ತಿ ತುಂಬುವುದು ಖಚಿತ. ಈ ಅಂಧಕಾರದಲ್ಲಿ ನಿನ್ನ ದಿಟ್ಟ ಹೋರಾಟ ಹೊಸ ಆಶಾಕಿರಣವಾಗಲಿ.
ಆಕಾಶಿ, ನನ್ನ ಪ್ರೀತಿಯ ಮಗಳೇ, ನನ್ನ ವಿರೋಧಿಗಳ ಮೇಲೆ ಹರಿಹಾಯಲು ಸದಾ ಸಿದ್ಧವಾಗಿರುವ ಪುಟ್ಟ ಸಿಪಾಯಿ ನೀನು. ನಾನು ಮತ್ತು ನಿನ್ನ ತಾಯಿ ನಡುವೆ ಏನಾದರೂ ಜಗಳವಾದರೆ ತಕ್ಷಣ ನೀನು ನನ್ನ ಪರ ವಕಾಲತ್ತು ವಹಿಸಿದ ಅದೆಷ್ಟೋ ಸಂದರ್ಭಗಳಿವೆ. ಇವತ್ತು ನೀನು ದೂರದ ಆಕ್ಸ್ ಫರ್ಡ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ನಿನ್ನ ಹೃದಯ, ಮನಸ್ಸು ನನಗಾಗಿ ಮಿಡಿಯುತ್ತಿದೆ ಎಂದು ನನಗೆ ಗೊತ್ತು. ಈಗ ಭಾರತಕ್ಕೆ ಮರಳಿ ನನ್ನ ಹೋರಾಟದಲ್ಲಿ ಜೊತೆಗೂಡಲು ಸಾಧ್ಯವಾಗದೇ ಇರುವುದು ನಿನಗೆ ಎಷ್ಟು ತಳಮಳ ತಂದಿದೆ ಎಂದು ನಾನು ಊಹಿಸಬಲ್ಲೆ. ಮಗೂ, ಇದು ನಾನು ಆಯ್ಕೆ ಮಾಡಿಕೊಂಡಿರುವ ಯುದ್ಧ, ನನ್ನ ಆಯ್ಕೆ ನಿನ್ನ ಜೀವನದ ದಿಕ್ಕು ಬದಲಾಯಿಸುವುದು ನನಗಿಷ್ಟವಿಲ್ಲ. ನಿನ್ನಂತಹ ಮಗಳನ್ನು ಪಡೆಯಲು ನಿನ್ನ ತಾಯಿ ಮತ್ತು ನಾನು ಪುಣ್ಯ ಮಾಡಿದ್ದೇವೆ. ನೀನು ಈ ಹಿಂದೆಯೂ ಇನ್ನು ಮುಂದೆಯೂ ನನ್ನ ಪಾಲಿನ ಆರ್ಯ ಸ್ಟಾರ್ಕ್ (ತನ್ನ ಕುಟುಂಬಕ್ಕೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸುವ ದಿಟ್ಟ ಬಾಲಕಿ) ಆಗಿರುವೆ. ನಿನಗೆ ಈ ಜಗತ್ತಿನ ಎಲ್ಲ ಪ್ರೀತಿ, ಸುಖ, ಸಂತೋಷ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಶಂತನು, ನನ್ನ ರನ್ನಿಂಗ್ ಪಾರ್ಟ್ನರ್, ನನ್ನ ವಾಲಿಬಾಲ್ ಜೊತೆಗಾರ ಮತ್ತು ಹೊಟ್ಟೆಬಾಕತನದಲ್ಲಿ ನನ್ನ ಪಾಲುದಾರ ! ಕಳೆದೊಂದು ವರ್ಷದಲ್ಲಿ ನೀನು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ಹುಡುಗನಿಂದ ತಾಯಿಯ ಹೋರಾಟದಲ್ಲಿ ಜೊತೆಯಾದ ಜವಾಬ್ದಾರಿಯುತ ಯುವಕನಾಗಿ ಬದಲಾಗಿದ್ದನ್ನು ನೋಡಿದೆ. ನೀನು ಇಲ್ಲದ ಒಂದು ವರ್ಷ ಆಕೆಗೆ ಅದೆಷ್ಟು ಕಷ್ಟವಾಗಿರಬಹುದು ಎಂದು ನಾನು ಊಹಿಸಬಲ್ಲೆ. ನೀನು ನಿನ್ನ ತಾಯಿಯ ಪಾಲಿನ ಶಕ್ತಿ. ನನ್ನ ಸ್ಥಾನವನ್ನು ತುಂಬಿದ್ದಕ್ಕೆ ಥ್ಯಾಂಕ್ ಯೂ. ಶಂತನು, ನಾನು ಮಾಡಿದ ಪ್ರತಿಯೊಂದು ಆಯ್ಕೆಯಲ್ಲೂ ರಿಸ್ಕ್ ಇತ್ತು, ಪ್ರತಿ ಆಯ್ಕೆಯಲ್ಲೂ ಅದರದ್ದೇ ಪರಿಣಾಮಗಳಿದ್ದವು... ಆ ಬಗ್ಗೆ ನನಗೆ ವಿಷಾದವಿಲ್ಲ. ಪ್ರತಿಯೊಂದು ನಿಂದನೆ ಹಾಗೂ ದಬ್ಬಾಳಿಕೆಯನ್ನು ಅನ್ಯಾಯದ ವಿರುದ್ಧದ ನಾನು ಆಯ್ದ ಹೋರಾಟಕ್ಕೆ ಸಂದ ಮನ್ನಣೆ ಎಂದೇ ಭಾವಿಸುತ್ತೇನೆ. ಆದರೆ ಕೆಲವೊಮ್ಮೆ ಈ ಹೊರೆಯನ್ನು ನಾನು ನಿನ್ನ ಮೇಲೆ ಹೊರಿಸಿಬಿಟ್ಟೆನೇ ಎಂಬ ಅಪರಾಧಿ ಭಾವ ಕಾಡುತ್ತದೆ. ಆದರೂ ಈ ಅವಧಿಯಲ್ಲಿ ನೀನೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ರೂಪುಗೊಂಡಿದ್ದು ನೋಡಿ ನನಗೆ ಹೆಮ್ಮೆಯಾಗಿದೆ. ನೀನು ಹೋದಲ್ಲೆಲ್ಲ ಇದೇ ರೀತಿ ಖುಷಿಯನ್ನು ಹಂಚುತ್ತಾ ಬದುಕಿನಲ್ಲಿ ಬಯಸಿದ್ದನ್ನು ಗಳಿಸು ಎಂದು ಪ್ರಾರ್ಥಿಸುತ್ತೇನೆ.
ಕೊನೆಯದಾಗಿ, ಈ ಕತ್ತಲ ಕಾಲದಲ್ಲಿ ನನ್ನ ಹಾಗೂ ನನ್ನ ಕುಟುಂಬದ ಜೊತೆ ನಿಂತ ಎಲ್ಲ ಧೈರ್ಯಶಾಲಿ ಮಿತ್ರರಿಗೆ ಹಾಗೂ ಬೆಂ ಬಲಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮಲ್ಲಿ ಪ್ರತಿಯೊಬ್ಬರೂ ನನ್ನನ್ನು ಬೆಂಬಲಿಸಿದ್ದು ಮಾತ್ರವಲ್ಲದೆ ನನ್ನ ಪತ್ನಿ ಶ್ವೇತಾಗೆ ಅತ್ಯಗತ್ಯವಾಗಿ ಬೇಕಾಗಿದ್ದ ಚೈತನ್ಯ ತುಂಬಿ ಸಹಕರಿಸಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಆಕೆಗೆ ಧೈರ್ಯ ತುಂಬಿದ್ದೀರಿ. ಭಾರತದ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿರುವ ದುಷ್ಟ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಆಕೆಯ ಜೊತೆ ನಿಂತಿದ್ದೀರಿ. ಅಧಿಕಾರದಲ್ಲಿರುವ ಗೂಂಡಾಗಳು ಸತ್ಯ, ವಿವೇಕ ಹಾಗೂ ಟೀಕೆಯ ಧ್ವನಿಯನ್ನು ಅಡಗಿಸಲು ತಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಕತ್ತಲ ಕಾಲ. ಆದರೆ ಇರುಳಿನ ಕತ್ತಲೆ ಹೇಗೆ ಒಂದೇ ಕ್ಷಣದಲ್ಲಿ ಆವರಿಸುವುದಿಲ್ಲವೋ ಅದೇ ರೀತಿ ಸರ್ವಾಧಿಕಾರಿ ದಬ್ಬಾಳಿಕೆಯೂ ಒಮ್ಮೆಗೇ ಕಾಣುವುದಿಲ್ಲ. ಅಜ್ಞಾನ ಮತ್ತು ನಿರ್ಲಕ್ಷದಿಂದ ಕತ್ತಲೆ ಹರಡುತ್ತದೆ. ನಾವು ಭಾರತದ ಜನರು, ದ್ವೇಷ, ಸುಳ್ಳು ಹಾಗೂ ಪೊಳ್ಳು ಪುಢಾರಿಕೆ ಆಧಾರಿತ ಗೂಂಡಾ ಪ್ರಭುತ್ವ ಇಲ್ಲಿನ ಒಂದೊಂದೇ ಸಂಸ್ಥೆಗಳನ್ನು ದುರ್ಬಲಗೊಳಿಸುವಾಗ ಮೌನವಾಗಿ ನಿಂತು ನೋಡಿದೆವು. ಭಾರತದ ಕಲ್ಪನೆಯನ್ನು ಒಂದು ಪಕ್ಷ, ಒಂದು ಸಿದ್ಧಾಂತ, ಒಬ್ಬ ವ್ಯಕ್ತಿ ಅಪಹರಿಸುವಾಗ ನಾವು ನಿಂತು ನೋಡಿದೆವು. ಹಾಗಾಗಿ ಇವತ್ತು ಆ ಕಲ್ಪನೆಯನ್ನು ಪ್ರಶ್ನಿಸುವುದೇ ದೇಶ ದ್ರೋಹ ಎಂದು ಹೇಳಲಾಗುತ್ತಿದೆ.
  ಸ್ನೇಹಿತರೇ, ಭಾರತ ಈಗ ಸಂಕ್ರಮಣ ಘಟ್ಟದಲ್ಲಿದೆ. ಇವತ್ತು ನಾವು ಮಾಡುವ ಆಯ್ಕೆಗಳು ಮುಂದಿನ ಕೆಲವು ದಶಕಗಳ ನಮ್ಮ ಹಣೆಬರಹ ನಿರ್ಧರಿಸಲಿವೆ. ನಮ್ಮಲ್ಲಿ ಇನ್ನು ಯಾರೂ ಕೇವಲ ಮೂಕಪ್ರೇಕ್ಷಕರಾಗಿರಲು ಸಾಧ್ಯವಿಲ್ಲ. ನಾವು ಹೋರಾಟದ ಭಾಗವಾಗಲೇ ಬೇಕು. ರಾಜಕೀಯ ಪ್ರೇಕ್ಷಕರ ಆಟವಲ್ಲ. ನಾವು ರಾಜಕೀಯವನ್ನು ನಿರ್ಲಕ್ಷಿಸಬಹುದು, ಆದರೆ ರಾಜಕೀಯ ನಮ್ಮನ್ನು ಬಿಡುವುದಿಲ್ಲ. ನಾವು ಈ ಗೂಂಡಾಗಳನ್ನು ಪ್ರತಿ ಹಂತದಲ್ಲಿ ಎದುರಿಸಿ ಹಿಮ್ಮೆಟ್ಟಿಸಲೇಬೇಕು. ಗೂಂಡಾಗಿರಿಯನ್ನು ಆಡಳಿತದ ಹಂತಕ್ಕೆ ಬರಲು ಬಿಡಲೇಬಾರದು. ಏನೇ ಬೆಲೆ ತೆತ್ತಾದರೂ ಅಧಿಕಾರದಲ್ಲಿರುವ ಗೂಂಡಾಗಳನ್ನು ಎದುರಿಸಬೇಕು. ನಾವು ಕೆಲವು ಕಠಿಣ ಆಯ್ಕೆಗಳನ್ನು ಮಾಡಲೇಬೇಕಿದೆ .. ಕೊನೆಗೆ ನಾವು ಏನು ಎಂಬುದು ನಮ್ಮ ಆಯ್ಕೆಗಳಿಂದಲೇ ನಿರ್ಧಾರವಾಗುತ್ತದೆ. ನನ್ನಂತಹ, ನಿಮ್ಮಂತಹ ಜನರು ತಾವು ನಂಬುವ ಸಿದ್ಧಾಂತಕ್ಕಾಗಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿದರೆ ಇಲ್ಲಿ ಏನೂ ಬದಲಾಗುವುದಿಲ್ಲ. ಪ್ರತಿಬಾರಿ ನಾವು ಸತ್ಯವನ್ನು ನೋಡಿಯೂ ಮಾತಾಡದೆ ಇದ್ದಾಗ ನಾವು ಕಂತುಗಳಲ್ಲಿ ಸಾಯುತ್ತೇವೆ. ದುಷ್ಟರು ಬೇರು ಇಳಿಸಿಕೊಳ್ಳಲು ಮುಖ್ಯ ಕಾರಣ ಒಳ್ಳೆಯವರು ಏನೂ ಮಾಡದೆ ಸುಮ್ಮನಿರುವುದು. ಅವರು ಅವರ ಕೆಲಸ ಮಾಡುತ್ತಲೇ ಇರುತ್ತಾರೆ. ದುಷ್ಟತೆ ಮತ್ತು ಅನ್ಯಾಯದ ವಿರುದ್ಧ ಹೋರಾಟ ಕಡ್ಡಾಯವಲ್ಲ, ಆದರೆ ಹಾಗೆ ನೋಡಿದರೆ ನಮ್ಮ ಪ್ರಜಾಪ್ರಭುತ್ವ ಉಳಿಯುವುದೂ ಕಡ್ಡಾಯವಲ್ಲ. ಹಾಗಾಗಿ ಸರಿಯಾದ ಆಯ್ಕೆ ಮಾಡುವ ವಿವೇಕ ಹಾಗೂ ಧೈರ್ಯ ನಮಗೆ ಸಿಗಲಿ. ಭಾರತೀಯ ಪ್ರಜಾಪ್ರಭುತ್ವದ ಮೇಲೆ ಒಂದಲ್ಲ, ಹಲವು ರೀತಿಯಲ್ಲಿ ಕತ್ತಲು ಆವರಿಸುತ್ತಿದೆ. ಆದರೆ ನಿಮ್ಮಂತಹವರು ಇರುವಾಗ ಇನ್ನೂ ಭರವಸೆ ಉಳಿದುಕೊಂಡಿದೆ. ದುಷ್ಟ ಶಕ್ತಿಗಳನ್ನು ಎದುರಿಸುವಾಗ ಪ್ರತಿರೋಧದ ಯಾವ ಕೆಲಸವೂ, ಯಾವ ಹೋರಾಟವೂ ಸಣ್ಣದಲ್ಲ. ಅತ್ಯಂತ ದೊಡ್ಡ ಹಿಮಪಾತವೂ ಪುಟ್ಟ ಮಂಜಿನ ಕಣಗಳಿಂದಲೇ ರೂಪುಗೊಳ್ಳುತ್ತದೆ. ನಾವು ಪ್ರತಿರೋಧಿಸೋಣ. ನಾವು ಹೋರಾಡೋಣ. ನಾವು ಇದನ್ನು ಹಿಮ್ಮೆಟ್ಟಿಸಿ ಗೆಲ್ಲೋಣ. ಅದು ಖಚಿತ.
ಲಕ್ಷ ಲಕ್ಷ ಧನ್ಯವಾದಗಳು ಹಾಗೂ ಪ್ರೀತಿಯೊಂದಿಗೆ, ನಾನು - ಸೋಲಲಾರೆ, ಶರಣಾಗಲಾರೆ, ಕುಗ್ಗಿ ಹೋಗಲಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)