varthabharthi


ಸುಗ್ಗಿ

ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಸಾಂಸ್ಕೃತಿಕ ಆತಂಕಗಳು

ವಾರ್ತಾ ಭಾರತಿ : 4 Aug, 2019
ಡಾ. ಬಿ.ಭಾಸ್ಕರ ರಾವ್

ಬಹುಮುಖ ಪ್ರತಿಭೆಯ ಏರ್ಯರು ಗಾಂಧೀಜಿ ಮತ್ತು ಕಾರ್ನಾಡ್ ಸದಾಶಿವ ರಾವ್‌ರವರಿಂದ ಪ್ರೇರಣೆ ಪಡೆದು ತನ್ನ ಎಳೆಯ ಹರೆಯದಲ್ಲಿ ಹರಿಜನ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದರು ಎನ್ನುವುದು, ಗಾಂಧೀಜಿಯನ್ನು ಬದಿಗೆ ಸರಿಸುವ ರಾಜಕೀಯ ಪ್ರಯತ್ನಗಳನ್ನು ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ತುಳುನಾಡಿನ ಯುವಕ ಯುವತಿಯರಿಗೆ ಸಾಂಸ್ಕೃತಿಕ-ಧಾರ್ಮಿಕ ಸಾಮರಸ್ಯಕ್ಕಾಗಿ ಕ್ರಿಯಾಶೀಲರಾಗಲು ಒಂದು ಸ್ಫೂರ್ತಿಯಾಗಬೇಕು.

ಇಂದಿನ ಐಟಿ ಬಿಟಿ, ಇಂಟರ್ನೆಟ್, ಮೊಬೈಲ್ ಸಂಸ್ಕೃತಿಯಿಂದಾಗಿ ಸಾಹಿತ್ಯ, ಸಂಗೀತದ ಕಡೆಗೆ ಯುವ ಜನಾಂಗ ಆಸಕ್ತಿಯನ್ನೇ ತೋರಿಸುತ್ತಿಲ್ಲ. ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಸೇಡಿಯಾಪು, ಕಡಂಗೋಡ್ಲು ಪ್ರಶಸ್ತಿಯಂತಹ ಪ್ರಶಸ್ತಿಗಳೇ ಸಮಾಜಕ್ಕೆ ಅಪ್ರಸ್ತುತ ಅನ್ನಿಸಿದರೆ ಆಶ್ಚರ್ಯವಿಲ್ಲ ಎಂಬ ಆತಂಕ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

‘‘ಇನ್ನೂ ಯಾಕೆ, ಎಷ್ಟು ಸಮಯ ಬದುಕಬೇಕು’’?

ಮೊನ್ನೆ ಜುಲೈ 27ರಂದು ಇಹಯಾತ್ರೆ ಮುಗಿಸಿದ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಸಂಘಟಕ ಹಾಗೂ ಸಂಸ್ಕೃತಿ ಚಿಂತಕ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವರು ನನ್ನಲ್ಲಿ ಕೇಳಿದ ಪ್ರಶ್ನೆ ಇದು.

ಅವರು ನಿಧನರಾಗುವ 49 ದಿನಗಳ ಮೊದಲು ಉಡುಪಿಯ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ನನ್ನ ವಿದ್ಯಾಗುರುಗಳಾದ ಪ್ರೊ. ಎನ್.ಟಿ. ಭಟ್‌ರವರಿಗೆ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ನೀಡಿಕೆ ಸಮಾರಂಭದ ಅಧ್ಯಕ್ಷತೆ ವಹಿಸಲು ಬಂದಿದ್ದ ಏರ್ಯರನ್ನು ಮಂಟಪದ ಬದಿಯಲ್ಲಿರುವ ಮಠದ ಅಡಿಯಲ್ಲಿ ನಿಂತು ಮಾತಾಡಿಸಿದ್ದೆ. ‘‘ನಮಸ್ತೆ ಸರ್. ಹೇಗಿದ್ದೀರಿ?’’ ಎಂದಾಗ ನನ್ನ ಎರಡೂ ಕೈಗಳನ್ನು ಅವರ ಕೈಗಳಲ್ಲಿ ಹಿಡಿದುಕೊಂಡು ಮುಗುಳ್ನಕ್ಕು ಮಾತಾಡಿಸಿದರು. ಅವರ ಅಂಗೈಗಳ ಬಿಸಿ ಅಪ್ಪುಗೆಯಲ್ಲಿ ಎಂದಿನಂತೆ ಉಭಯ ಕುಶಲೋಪರಿಯ ಬಳಿಕ ‘‘ನೀವು ನೂರುವರ್ಷ ಬದುಕಬೇಕು’’

ಎಂದು ಹಾರೈಸಿದೆ. ಆಗ ಅವರು ಹೇಳಿದ ಮಾತು: ‘‘ಇನ್ನೂ ಯಾಕೆ, ಎಷ್ಟು ಸಮಯ ಬದುಕಬೇಕು?’’

 ‘‘ನಿಮ್ಮಿಂದ ಇನ್ನೂ ಸಮಾಜಕ್ಕೆ ಮಾರ್ಗದರ್ಶನ ಸಿಗುತ್ತಿರಬೇಕು’’ ಎಂದೆ. ಬಳಿಕ ನನ್ನ ಜೊತೆ ಕೆಲವು ಹೆಜ್ಜೆ ನಡೆದ ಅವರು ಅವರ ಸಹಾಯಕರೊಂದಿಗೆ ನೆಟ್ಟಗೆ ನಡೆಯುತ್ತ ಸಭಾಮಂಟಪಕ್ಕೆ ಬಂದರು. ವೇದಿಕೆಯ ಮೇಲೆ ಏರುವಾಗಲೂ ಯುವಕರು ನಾಚುವಂತೆ ನೆಟ್ಟಗೆ ನಡೆಯುತ್ತ ಸಭಾಧ್ಯಕ್ಷನ ಸ್ಥಾನದಲ್ಲಿ ಕುಳಿತರು.

                ಸೇಡಿಯಾಪು ಕೃಷ್ಣಭಟ್ಟ

ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರತಿ ವರ್ಷ ನಡೆಯುವ ಕಡಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಸೇಡಿಯಾಪು ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅವರನ್ನು ಹಲವು ಬಾರಿ ಭೇಟಿಯಾಗಿ ಮಾತಾಡಿಸಿದ್ದೆ. ತುಳು ಸಂಸ್ಕೃತಿಯ ಹಿರಿಯಜ್ಜನಂತೆ ಅವರು ಆಪ್ತವಾಗಿ ಮಾತಾಡಿಸುತ್ತಿದ್ದರು; ‘ಉದಯವಾಣಿ’ಯಲ್ಲಿ 1986ರಿಂದ 2001 ರವರೆಗೆ ಹದಿನೈದು ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ನನ್ನ ‘ಆಶಯ’ ಅಂಕಣದ ಓದುಗರೂ ಆಗಿದ್ದ ಅವರು ಒಂದೆರಡು ಬಾರಿ ನನ್ನ ಬರಹಗಳ ಬಗ್ಗೆ ಸಹೃದಯನಾಗಿ ಅನಿಸಿಕೆಗಳನ್ನು ಹೇಳಿದ್ದೂ ಇದೆ.

ಬಹುಮುಖ ಪ್ರತಿಭೆಯ ಹಿರಿಯರಾಗಿದ್ದ ಏರ್ಯರು ಗಾಂಧೀಜಿ ಮತ್ತು ಕಾರ್ನಾಡ್ ಸದಾಶಿವರಾವ್‌ರವರಿಂದ ಪ್ರೇರಣೆ ಪಡೆದು ತನ್ನ ಎಳೆಯ ಹರೆಯದಲ್ಲಿ ಹರಿಜನ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದರು ಎನ್ನುವುದು, ಗಾಂಧೀಜಿಯನ್ನು ಬದಿಗೆ ಸರಿಸುವ ರಾಜಕೀಯ ಪ್ರಯತ್ನಗಳನ್ನು ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ತುಳುನಾಡಿನ ಯುವಕ ಯುವತಿಯರಿಗೆ ಸಾಂಸ್ಕೃತಿಕ-ಧಾರ್ಮಿಕ ಸಾಮರಸ್ಯಕ್ಕಾಗಿ ಕ್ರಿಯಾಶೀಲರಾಗಲು ಒಂದು ಸ್ಫೂರ್ತಿಯಾಗಬೇಕು.

ನನಗೂ ಏರ್ಯರಿಗೂ ವಯಸ್ಸಿನಲ್ಲಿ ಸುಮಾರು ಕಾಲು ಶತಮಾನದ ಅಂತರ. ಅವರ ಕಾಲದ ಸಾಮಾಜಿಕ-ಧಾರ್ಮಿಕ ಕಾಳಜಿಗಳು, ಕುಟುಂಬ ವ್ಯವಸ್ಥೆಯ ಗುಣಾವಗುಣಗಳು, ರಾಜಕೀಯ ಬೆಳವಣಿಗೆಗಳ ಏಳುಬೀಳುಗಳು ಸಮಕಾಲೀನ ಭಾರತದ ವಾಸ್ತವಕ್ಕಿಂತ ತುಂಬ ಭಿನ್ನವಾದವುಗಳು. ಆದರೆ ಏರ್ಯರು ತಲೆಮಾರುಗಳ ಅಂತರವನ್ನು ಸದಾ ತನ್ನ ಅಂತಃಕರಣದ ಸಂವಹನದ ಮೂಲಕ ತುಂಬುತ್ತಿದ್ದರು. ಅವರ ಜೊತೆ ಮಾತಾಡಿದಾಗೆಲ್ಲ ನನಗೆ ಅವರು ಸಾಮಾನ್ಯ ಪರಿಭಾಷೆಯ ‘ಹಳೆಯ ಕಾಲದವರು’ ಅಂತ ಅನ್ನಿಸುತ್ತಿರಲಿಲ್ಲ.

ಕಳೆದ ಕೆಲವು ವರ್ಷಗಳಲ್ಲಿ ತುಳುನಾಡಿನ ಪರಂಪರೆಯ, ಸಂಸ್ಕೃತಿಯ ಕುಟುಂಬ ವ್ಯವಸ್ಥೆಯ ವಿಘಟನೆ ಅವರನ್ನು ತುಂಬ ಆತಂಕಕ್ಕೀಡು ಮಾಡಿತ್ತು. ತನ್ನ ಬದುಕಿನ ಬಹಳ ಅವಧಿಯ ವರೆಗೆ ಅಸ್ತಿತ್ವದಲ್ಲಿದ್ದ ಕೂಡು ಕುಟುಂಬದ ಪರಿಕಲ್ಪನೆಯೆ ವಿಘಟನೆಗೊಳ್ಳುತ್ತಿರುವುದನ್ನು ಅವರು ತುಂಬ ಆತಂಕದಿಂದ, ಹಲವು ಬಾರಿ, ಭಾವುಕರಾಗಿ ಅಭಿವ್ಯಕ್ತಿಸುತ್ತಿದ್ದರು.

ಜೂನ್ 8ರಂದು ಸೇಡಿಯಾಪು ಪ್ರಶಸ್ತಿ ಸಮಾರಂಭದ ತನ್ನ ಅಧ್ಯಕ್ಷೀಯ ಭಾಷಣ ದಲ್ಲೂ ಅವರು ಅದೇ ವಿಷಯವನ್ನು ಪ್ರಸ್ತಾಪಿಸಿದ್ದರು.

ಇತ್ತೀಚೆಗೆ ಈ ಜಿಲ್ಲೆಯ ತನ್ನ ಆತ್ಮೀಯ ಬಂಧುವೊಬ್ಬರ ಮಗ ತನ್ನನ್ನು ಭೇಟಿಯಾದಾಗ ಹೇಳಿದ ಮಾತನ್ನು ಉಲ್ಲೇಖಿಸಿ ಅವರು ಹೇಳಿದರು. ಬೆಂಗಳೂರಿನಲ್ಲಿರುವ ಮಗ ಊರಿಗೆ ಬಂದಿದ್ದ. ಬಂದು ತನ್ನೊಡನೆ ಮಾತಾಡುತ್ತ ತಾನೀಗ ತನ್ನ ಹೆತ್ತವರ ಬಗ್ಗೆ, ಅವರ ಯೋಗ ಕ್ಷೇಮದ ಬಗ್ಗೆ ಚಿಂತಿಸಬೇಕಾಗಿಲ್ಲ. ‘‘I am happy’’ ಎಂದ. ತುಸು ತಡೆದು ‘‘ನಾನು ಅವರಿಗೆ ಒಂದು ಉತ್ತಮ ವೃದ್ಧಾಶ್ರಮದಲ್ಲಿ (ಓಲ್ಡ್ ಏಜ್ ಹೋಮ್‌ನಲ್ಲಿ) ಇರಲು ವ್ಯವಸ್ಥೆ ಮಾಡಿದ್ದೇನೆ’’ ಎಂದು ಹೇಳಿದ.

ಆ ಸಂದರ್ಭವನ್ನು ನೆನೆದು ಆಳ್ವರು ವಿಷಾದ ಮತ್ತು ವ್ಯಂಗ್ಯ ಧ್ವನಿಯಲ್ಲಿ ಅವನ ಮಾತನ್ನು ಪುನರುಚ್ಚಿಸಿದರು.

ಆತ ತನ್ನ ಹಿರಿಯರನ್ನು ಒಂದು ಒಳ್ಳೆಯ ವೃದ್ಧಾಶ್ರಮಕ್ಕೆ ಸೇರಿಸಿರುವ ಬಗ್ಗೆ ‘ಹ್ಯಾಪಿ’ಯಾಗಿದ್ದಾನೆಯೇ ಹೊರತು,ತಾನು ಅವರನ್ನು ತನ್ನ ಜೊತೆ ಇರಿಸಿಕೊಳ್ಳುತ್ತೇನೆ ಎಂದಾಗಲಿ ಅಥವಾ ತಾನು ಊರಿಗೆ ಬಂದು ಅವರನ್ನು ನೋಡಿಕೊಳ್ಳುತ್ತೇನೆ ಎಂದಾಗಲಿ ಅಲ್ಲ!

ಆ ಘಟನೆಯನ್ನು ಉಲ್ಲೇಖಸಿ ಏರ್ಯರು ಹೇಳಿದ ಮಾತು: ನಾವು ಮನುಷ್ಯತ್ವವನ್ನೇ ಮರೆತು, ಯಾವ ಸಾಹಿತ್ಯ, ಸಂಸ್ಕೃತಿಯನ್ನು ಅಭ್ಯಾಸ ಮಾಡಿ ಏನು ಪ್ರಯೋಜನ? ಏರ್ಯರನ್ನು ಇನ್ನೂ ಒಂದು ಆತಂಕ ಕಾಡುತಿತ್ತು. ಅಂದಿನ ಆ ಸಭೆಯಲ್ಲಿ ಹಾಜರಿದ್ದ ಶ್ರೋತೃಗಳಲ್ಲಿ ಬಹುಪಾಲು ಐವತ್ತು-ಅರವತ್ತರ ಹರೆಯ ದಾಟಿದವರು. ‘‘ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಜಾಗದಲ್ಲಿ ಕೂತುಕೊಳ್ಳುವವರು ಯಾರು?’’ ಎಂದು ಅವರು ಕೇಳಿದರು.

ಇಂದಿನ ಐಟಿ ಬಿಟಿ, ಇಂಟರ್ನೆಟ್, ಮೊಬೈಲ್ ಸಂಸ್ಕೃತಿಯಿಂದಾಗಿ ಸಾಹಿತ್ಯ, ಸಂಗೀತದ ಕಡೆಗೆ ಯುವ ಜನಾಂಗ ಆಸಕ್ತಿಯನ್ನೇ ತೋರಿಸುತ್ತಿಲ್ಲ. ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಸೇಡಿಯಾಪು, ಕಡಂಗೋಡ್ಲು ಪ್ರಶಸ್ತಿಯಂತಹ ಪ್ರಶಸ್ತಿಗಳೇ ಸಮಾಜಕ್ಕೆ ಅಪ್ರಸ್ತುತ ಅನ್ನಿಸಿದರೆ ಆಶ್ಚರ್ಯವಿಲ್ಲ ಎಂಬ ಆತಂಕ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಸೇಡಿಯಾಪು ಕೃಷ್ಣಭಟ್ಟರು ತನ್ನನ್ನು ಅವರ ಮನೆಯಲ್ಲೇ ಇರಿಸಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತನಗೆ ಕನ್ನಡ ಸಾಹಿತ್ಯ ಪಾಠ ಹೇಳಿದ್ದನ್ನು ಕೂಡ ಏರ್ಯರು ತುಂಬ ಭಾವುಕರಾಗಿ ವಿವರಿಸುತ್ತಿದ್ದರು. ಆ ದಿನಗಳಲ್ಲಿ ಇದ್ದಂತಹ ಗುರು-ಶಿಷ್ಯರ ಸಂಬಂಧ, ಆ ಸಂಬಂಧದಲ್ಲಿ ಇದ್ದ ಆತ್ಮೀಯತೆ, ಪ್ರೀತಿ ಏರ್ಯರನ್ನು ಭಾವ ಪರವಶಗೊಳಿಸಿಬಿಡುತ್ತಿತ್ತು.

ಏರ್ಯರ ಸಾಹಿತ್ಯಕ ಸಾಧನೆಗಳನ್ನು ವಿದ್ವಾಂಸರು ಈಗಾಗಲೇ ದಾಖಲಿಸಿದ್ದಾರೆ.ಅವರ ರಚನೆಗಳಲ್ಲಿ ಅವರು ಬಳಸಿದ ಪ್ರತಿಮೆಯೊಂದು ನನ್ನ ಮನಸ್ಸಿನಲ್ಲಿ ಸ್ಥಾವರವಾಗಿ ಕುಳಿತಿದೆ. ಬೆಳಗ್ಗಿನ ಜಾವ ಆಕಾಶದಲ್ಲಿ ಬರಿಗಣ್ಣಿಗೆ ಕಾಣಿಸುವ ಬೆಳ್ಳಿಯನ್ನು ಅವರು ಆ ಕವನದಲ್ಲಿ ‘ತಂಞಣ ಕಲ್ವ’ ಎಂದು ಕರೆಯುತ್ತಾರೆ. ಯಾಕೆ ಅದು ‘ತಂಗಳನ್ನ ಕಳ್ಳ’ ಎಂಬುದಕ್ಕೆ ಅಲ್ಲಿ ಅಡಿ ಟಿಪ್ಪಣಿಯೂ ಇದೆ. ‘ನಸುಕಿನಲ್ಲಿ ತುಳು ನಾಡಿನ ರೈತರು ಬೇಗನೆ ಎದ್ದು ಹಿಂದಿನ ದಿನ ಬೇಯಿಸಿ ಇಟ್ಟಿದ್ದ ತಂಗಳು ಅನ್ನವನ್ನು ತಿಂದು ಹೊಲಗಳಿಗೆ ಹೋಗುತ್ತಾರಾದ್ದರಿಂದ ಅಡಿಗೆ ಮನೆಯಲ್ಲಿರುವ ತಂಗಳನ್ನ ಬೆಳಗಾಗಿ ಮನೆಯೊಡತಿ ನೋಡುವಾಗ ಕಾಣೆಯಾಗಿರುತ್ತದೆ! ಯಾರೋ ಅದನ್ನು ಕಳ್ಳತನ ಮಾಡಿ ಕೊಂಡು ಹೋಗಿರುವ ಹಾಗೆ. ಕಾವ್ಯದ ಒಂದು ಮೂಲಭೂತವಾದ ಅವಶ್ಯಕತೆ ಎಂದರೆ ಅದರಲ್ಲಿರಬೇಕಾದ ಒರಿಜಿನಲ್ ಪ್ರತಿಮೆಗಳು, ಸೃಜನಶೀಲ ರೂಪಕಗಳು. ತುಳು ಸಂಸ್ಕೃತಿ, ತುಳು ಭಾಷೆಗೆ ಮಾತ್ರ ಸಾಧ್ಯವಾಗಬಹುದಾದ ‘ತಂಗಳನ್ನ ಕಳ್ಳ’ ಎಂಬ ಪ್ರತಿಮೆಯ ಹಾಗೆ, ತುಳು ಸಂಸ್ಕೃತಿ ಮತ್ತು ಭಾಷೆ ಮಾತ್ರ ನೀಡಬಹುದಾಗಿದ್ದ ಸಾಹಿತ್ಯದ ಕೊಡುಗೆ ಏರ್ಯ ಲಕ್ಷ್ಮೀ ನಾರಾಯಣ ಆಳ್ವರು. ಅವರ ಅಪಾರವಾದ ಸಾಹಿತ್ಯಕ, ಜಾನಪದ, ಸಂಘಟನಾತ್ಮಕ, ಸಹಕಾರಿ ರಂಗದ ಪ್ರತಿಭೆಯೊಂದಿಗೆ ಅವರ ಹೆಸರು ತುಳು ಸಾಹಿತ್ಯ, ಸಂಸ್ಕೃತಿಯಲ್ಲಿ ಯಾವಾಗಲೂ ಪ್ರಕಾಶಿಸುತ್ತಿರಲಿ.

ಸುಮಾರು ಒಂದು ಶತಮಾನ ಬಾಳಿ ಬದುಕಿ ತುಳು ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಚಿಂತಿಸಿದ ಹಿರಿಯ ಸಂಸ್ಕೃತಿ ಚಿಂತಕ ಏರ್ಯರಿಗೆ ಅವರ ಹಸಿರು ನೆನಪಿನೊಂದಿಗೆ ವಂದಿಸುತ್ತೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)