varthabharthi

ಸುಗ್ಗಿ

ಅಧ್ಯಯನ ಮತ್ತು ಅರಿವು

ಮಕ್ಕಳ ಸುಳ್ಳಿನ ಪ್ರಪಂಚ

ವಾರ್ತಾ ಭಾರತಿ : 4 Aug, 2019
ಯೋಗೇಶ್ ಮಾಸ್ಟರ್, ಬೆಳೆಯುವ ಪೈರು

ಕಲಿಕೆಯೆಂಬ ಪ್ರಕ್ರಿಯೆ: ಬಾಗ 32

ಮಕ್ಕಳು ಸುಳ್ಳು ಹೇಳಿದಾಗ ಅಥವಾ ಅವರು ಸುಳ್ಳು ಹೇಳಿದರೆಂದು ತಿಳಿದಾಗ ಬಹಳಷ್ಟು ಪೋಷಕರಿಗೆ ತಮ್ಮ ಪೋಷಣೆಯ ವೈಫಲ್ಯವೆಂದೋ ಅಥವಾ ತಾವು ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವೆಂದೋ ಅನ್ನಿಸುವುದುಂಟು. ಆದರೆ ಹಾಗೇ ಕೊರಗುವುದಕ್ಕಿಂತ ಸುಳ್ಳಿನ ಹಿಂದಿನ ಕಾರಣವನ್ನು ಗುರುತಿಸಿದರೆ ಕಾಲ ಕ್ರಮೇಣ ಸೂಕ್ತ ಕ್ರಮಗಳನ್ನು ಕೈಗೊಂಡು ಸುಳ್ಳಿನ ಪ್ರವಾಹಕ್ಕೆ ತಡೆಯೊಡ್ಡಲು ಸಾಧ್ಯವಿದೆ.

ಬಾಯಿ ಬಿಟ್ಟರೆ ಸುಳ್ಳು

ಮಕ್ಕಳು ಮನೆಯಲ್ಲಿ ಒಂದು ರೀತಿಯಲ್ಲಿ ಸುಳ್ಳುಗಳನ್ನು ಹೇಳುತ್ತಿದ್ದರೆ, ಶಾಲೆಯಲ್ಲಿ ಮತ್ತೊಂದು ಬಗೆಯ ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ನಾನು ಶಿಕ್ಷಕನಾಗಿ ಕಳೆದ ಮೂವತ್ತೈದು ವರುಷಗಳ ವೃತ್ತಿ ಜೀವನದಲ್ಲಿ ಸುಳ್ಳು ಹೇಳದ ಮಕ್ಕಳನ್ನೇ ನೋಡಿಲ್ಲ. ಕೆಲವು ಮಕ್ಕಳು ಕಡಿಮೆ, ಕೆಲವು ಮಕ್ಕಳು ಹೆಚ್ಚು, ಕೆಲವು ಮಕ್ಕಳು ಅತೀ ಹೆಚ್ಚು. ಬಹಳಷ್ಟು ಪೋಷಕರಿಗೆ ಮತ್ತು ಶಿಕ್ಷಕರಿಗೆ ತಮ್ಮ ಮಕ್ಕಳು ಹೇಳುವ ಸುಳ್ಳು ಬಹುದೊಡ್ಡ ತಲೆ ನೋವಾಗಿ ಪರಿಣಮಿಸಿರುತ್ತದೆ. ಕೆಲವರಿಗೆ ಮಕ್ಕಳು ಸುಳ್ಳು ಹೇಳುವುದೇ ಗೊತ್ತಾಗುವುದಿಲ್ಲ. ಕೆಲವು ಮಕ್ಕಳು ಹೇಳುವ ಸುಳ್ಳುಗಳು ಗೊತ್ತಾಗುತ್ತವೆ. ಆದರೆ ಕೆಲವೊಮ್ಮೆ ಮಕ್ಕಳು ಹೇಳುವಾಗ ಅದು ಸುಳ್ಳು ಎಂದು ಗೊತ್ತಾಗುವುದಿಲ್ಲ. ಆದರೆ ಸಾಂದರ್ಭಿಕವಾಗಿಯೋ ಅಥವಾ ಪರಿಶೀಲಿಸಿದ ನಂತರವೋ ಸುಳ್ಳು ಎಂಬುದು ಅರಿವಿಗೆ ಬರುತ್ತದೆ. ಏನೇ ಆಗಲಿ, ಸುಳ್ಳು ಹೇಳುವ ಮಕ್ಕಳು ಯಾವಾಗಲೂ ತಲೆ ನೋವೇ. ಮಕ್ಕಳು ಸುಳ್ಳು ಹೇಳಿದಾಗ ಅಥವಾ ಅವರು ಸುಳ್ಳು ಹೇಳಿದರೆಂದು ತಿಳಿದಾಗ ಬಹಳಷ್ಟು ಪೋಷಕರಿಗೆ ತಮ್ಮ ಪೋಷಣೆಯ ವೈಫಲ್ಯವೆಂದೋ ಅಥವಾ ತಾವು ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವೆಂದೋ ಅನ್ನಿಸುವುದುಂಟು. ಆದರೆ ಹಾಗೇ ಕೊರಗುವುದಕ್ಕಿಂತ ಸುಳ್ಳಿನ ಹಿಂದಿನ ಕಾರಣವನ್ನು ಗುರುತಿಸಿದರೆ ಕಾಲ ಕ್ರಮೇಣ ಸೂಕ್ತ ಕ್ರಮಗಳನ್ನು ಕೈಗೊಂಡು ಸುಳ್ಳಿನ ಪ್ರವಾಹಕ್ಕೆ ತಡೆಯೊಡ್ಡಲು ಸಾಧ್ಯವಿದೆ. ಯಾವುದೇ ಪೋಷಕರು ತಮ್ಮ ಮುದ್ದಿನ ಮತ್ತು ಪ್ರೀತಿಯ ಮಕ್ಕಳು ತಮ್ಮ್ಮೆಂದಿಗೇ ಸುಳ್ಳನ್ನು ಹೇಳಿದಾಗ,

1.ತಾವು ಮಕ್ಕಳ ದೃಷ್ಟಿಯಲ್ಲಿ ಅನುಮಾನಿತರಾಗಿ ಅವಮಾನಿತರಾದ ಅನುಭವವಾಗಬಹುದು.

2.ತಾವು ಸತ್ಯವನ್ನು ಸ್ವೀಕರಿಸುತ್ತೇವೆ ಎಂಬ ವಿಶ್ವಾಸ ಮಕ್ಕಳಲ್ಲಿ ಇಲ್ಲ ಎಂಬ ನೋವಾಗಬಹುದು.

3.ತಾವು ಇಟ್ಟಿರುವ ವಿಶ್ವಾಸವನ್ನು ಅವರು ಭಂಗ ಮಾಡಿದರೆಂಬ ನೋವಾಗಬಹುದು.

4.ತಾವು ಇಷ್ಟು ಪ್ರೀತಿ ಮತ್ತು ವಿಶ್ವಾಸವನ್ನು ಇಟ್ಟಿದ್ದರೂ ಅವರು ಅದನ್ನು ಗುರುತಿಸದೇ ಹೋಗುತ್ತಿದ್ದಾರೆಂಬ ನಿರಾಸೆಯಾಗಬಹುದು.

5.ತಮ್ಮನ್ನೇ ನಂಬಲು ತಯಾರಿಲ್ಲದ ತಮ್ಮ ಮಕ್ಕಳ ಬಗ್ಗೆ ಜಿಗುಪ್ಸೆ ಹುಟ್ಟಬಹುದು.

6.ಇಷ್ಟೇನಾ ಸಂಬಂಧ, ಪ್ರೀತಿ, ವಿಶ್ವಾಸ ಎಲ್ಲಾ? ಎಂದು ಕೌಟುಂಬಿಕ ಸಂಬಂಧಗಳ ಬಗ್ಗೆಜಿಗುಪ್ಸೆ ಹುಟ್ಟ ಬಹುದು. ಪೋಷಕರ ಅಥವಾ ಶಿಕ್ಷಕರ ಭಾವುಕತೆಗೆ ಯಾವುದೇ ಬಗೆಯ ನೋವಾಗಲಿ, ಅಥವಾ ಬಿಡಲಿ. ಆದರೆ ಅವರು ಸುಳ್ಳು ಹೇಳುವುದರ ಕಾರಣದ ಕಡೆಗೆ ವೈಚಾರಿಕವಾಗಿ, ವೈಜ್ಞಾನಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಗಮನ ಹರಿಸಲೇ ಬೇಕು. ಬಹಳಷ್ಟು ಶಿಕ್ಷಕರು ಮತ್ತು ಪೋಷಕರು ಮಕ್ಕಳ ಕುರಿತಾಗಿ ಹೇಳುತ್ತಿರುತ್ತಾರೆ, ಅವನು/ಅವಳು ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾನೆ/ಳೆ ಎಂದು. ನಿಜವೇ. ಆದರೆ ಅದು ಮಕ್ಕಳ ವಿಷಯದಲ್ಲಿ ಮಾತ್ರವಲ್ಲ ಎಂಬುದನ್ನೂ ನಾವು ಗಮನಕ್ಕೆ ತಂದುಕೊಳ್ಳಬೇಕು. ಬಾಲ್ಯದಲ್ಲಿ ಮಗುವಿಗೆ ಸುಳ್ಳು ಹೇಳುವ ರೂಢಿಯನ್ನು ತಪ್ಪಿಸದಿದ್ದರೆ, ಅಥವಾ ಮಗುವಿಗೇ ಅದು ಅರಿವೆಗೆ ಬರದಿದ್ದರೆ ಅದು ದೊಡ್ಡವನಾದ ಮೇಲೂ ಅದನ್ನೇ ಮುಂದುವರಿಸುತ್ತದೆ. ಆದರೆ ಒಂದು ವಿಷಯವಂತೂ ನಿಜ. ಮಕ್ಕಳು ಸುಳ್ಳು ಹೇಳುವುದೆಂದರೆ ನೈತಿಕವಾಗಿ ಪಾಪದ ವಿಷಯವೇನಲ್ಲ. ಅದು ಅದರ ಮೆದುಳಿನ ಬೆಳವಣಿಗೆಯ ಒಂದು ಹಂತದ ಪ್ರತಿಫಲನವೇ.

ಮಕ್ಕಳು ಸುಳ್ಳು ಹೇಳುವುದೇಕೆ?

ಮೊದಲು ಒಂದು ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ, ಮಕ್ಕಳು ಮತ್ತು ಹದಿ ಹರೆಯದವರು ದೊಡ್ಡವರಂತೆ ಆಲೋಚಿಸಲಾರರು. ಅಮೆರಿಕದ ವಿಶ್ವವಿದ್ಯಾನಿಲಯವೊಂದರಲ್ಲಿ ಈ ಮಕ್ಕಳ ವಿಷಯವಾಗಿ ಒಂದು ಪ್ರಯೋಗವನ್ನು ಮಾಡಲಾಯಿತು. ನಾಲ್ಕರಿಂದ ಒಂಬತ್ತು ವರ್ಷದ ಮಕ್ಕಳನ್ನು ಪ್ರಯೋಗಕ್ಕೆ ಆರಿಸಿಕೊಳ್ಳಲಾಯಿತು. ಒಂದು ವಿಶಾಲವಾದ ಕೋಣೆಯಲ್ಲಿ ಡಾರ್ಟ್ ಬೋರ್ಡೊಂದನ್ನು ಇರಿಸಿದ್ದರು (ಗುರಿ ಫಲಕ). ಯಾರ್ಯಾರು ಎಷ್ಟೆಷ್ಟು ಡಾರ್ಟ್ (ಗುರಿಸೂಜಿ)ಯನ್ನು ಫಲಕಕ್ಕೆ ಎಸೆದು ಗುರಿ ಭೆೇದಿಸಿರುತ್ತಾರೆಯೋ ಅವರಿಗೆ ಅಷ್ಟು ಚಾಕೊಲೇಟ್ ಮತ್ತು ಕ್ಯಾಂಡಿಗಳನ್ನು ಕೊಡಲಾಗುವುದು. ಯಾರ ಡಾರ್ಟ್‌ಗಳು ಕೆಳಕ್ಕೆ ಬಿದ್ದಿರುತ್ತವೆಯೋ ಅಷ್ಟಕ್ಕೆ ಸಿಹಿ ಸಿಗುವುದಿಲ್ಲ. ನಿಯಮದ ಪ್ರಕಾರ ಬೋರ್ಡಿಗೆ ಸ್ವಲ್ಪ ದೂರ ಹಳದೀ ಪಟ್ಟಿ ಬಳೆಯಲಾಗಿತ್ತು. ಗುರಿ ಎಸೆಯುವ ಮಕ್ಕಳು ಅದನ್ನು ದಾಟಬಾರದಿತ್ತು. ಒಂದೊಂದೇ ಮಗುವನ್ನು ಒಳಕ್ಕೆ ಕಳುಹಿಸಲಾಗಿತ್ತು. ಪ್ರಯೋಗಕಾರರು ನೋಡಿದಾಗ ಸುಮಾರು ಶೇ.90ರಷ್ಟು ಮಕ್ಕಳು ತಾವು ಎಸೆದೆವು ಎಂದು ಸುಳ್ಳು ಹೇಳಿದ್ದರು. ಅಲ್ಲಿ ರಹಸ್ಯ ಕ್ಯಾಮರಾವನ್ನು ಇಡಲಾಗಿತ್ತು. ಮಕ್ಕಳ ಸುಳ್ಳು ಬಯಲಾಗಿತ್ತು. ಅದೇ ರೀತಿಯಲ್ಲಿ ಇನ್ನೊಮ್ಮೆ, ಅದೇ ರೀತಿಯ ಪ್ರಯೋಗವನ್ನು ಮಾಡುವಾಗ ಅದೇ ವಯೋಮಿತಿಯ ಮಕ್ಕಳನ್ನು ಆಯ್ದು ಕೊಂಡಿದ್ದು, ಆ ಕೋಣೆಯಲ್ಲಿ ಖಾಲಿ ಕುರ್ಚಿಯೊಂದನ್ನು ಇಟ್ಟಿದ್ದರು. ಮಕ್ಕಳಿಗೆ ಆ ಕುರ್ಚಿಯ ಮೇಲೆ ಕಣ್ಣಿಗೆ ಕಾಣದ ರಾಜಕುಮಾರಿಯೊಬ್ಬಳು ಕುಳಿತಿದ್ದಾಳೆಂದೂ ಅವಳು ಎಲ್ಲವನ್ನೂ ನೋಡುತ್ತಿರುತ್ತಾಳೆಂದೂ ಹೇಳಿದ್ದರು. ಆಗ ಸುಳ್ಳು ಹೇಳುವವರ ಸಂಖ್ಯೆ ಬಹಳಷ್ಟು ಗಮನೀಯವಾಗಿ ಕಡಿಮೆಯಾಗಿತ್ತು. ಮಗುವಿನ ಯಾವುದೋ ಮಾನಸಿಕ ಅಥವಾ ಭಾವನಾತ್ಮಕ ಸಮಸ್ಯೆಯಿಂದಾಗಿಯೋ, ಅಥವಾ ಮಕ್ಕಳನ್ನು ಬೆಳೆಸುವುದರಲ್ಲಿಯೇ ತಪ್ಪಿದ್ದೇವೆ ಎಂದೋ ಭಾವಿಸುವ ಅಗತ್ಯವಿಲ್ಲ.

ಎರಡನೆಯ ಪ್ರಯೋಗದಲ್ಲಿ ಗಮನಿಸಿದಾಗ, ಯಾರೋ ಒಬ್ಬರು ತಮ್ಮನ್ನು ನೋಡುತ್ತಿದ್ದಾರೆ ಎಂದು ತಿಳಿದಾಗ ಸುಳ್ಳು ಹೇಳದಿರಲು ಯತ್ನಿಸಿದರು. ನಿಜ ಹೇಳಬೇಕೆಂದರೆ, ತಾವು ಮಾತಾಡುವಷ್ಟು ಸಹಜವಾಗಿಯೇ ಸುಳ್ಳು ಹೇಳುತ್ತಾರೆ. ಅವರಿಗೆ ತಮ್ಮ ಶಿಕ್ಷಕರಾಗಲಿ, ಪೋಷಕರಾಗಲಿ ಹೀಗೆ ಸುಳ್ಳು ಹೇಳುವುದಕ್ಕೆ ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಾರೆ ಎಂದು ಅರ್ಥವೇ ಆಗುವುದಿಲ್ಲ. ಎಷ್ಟೋ ಬಾರಿ ಅವರು ದೊಡ್ಡವರನ್ನು ಖುಷಿ ಪಡಿಸಲೆಂದೇ ಸುಳ್ಳು ಹೇಳುವುದು.

ಮಕ್ಕಳಿಗೆ ಆಯಾಯ ವಯಸ್ಸಿನಲ್ಲಿ ಆಯಾಯ ಅಗತ್ಯಗಳು ಮತ್ತು ಆಸೆಗಳಿದ್ದಂತೆ ಆಯಾ ಪ್ರಮಾಣದ ಸುಳ್ಳುಗಳೂ ಕೂಡಾ ಹುಟ್ಟಿಕೊಳ್ಳುತ್ತಿರುತ್ತವೆ. ಆದರೆ, ಮಕ್ಕಳು ದೊಡ್ಡವರಷ್ಟು ಪರಿಣಿತರಲ್ಲದ ಕಾರಣ ಸಾಕಷ್ಟು ಬಾರಿ ದೊಡ್ಡವರ ಮುಂದೆ ಸುಳ್ಳು ಹೇಳುವಾಗ ಸಿಕ್ಕಿಬೀಳುತ್ತಾರೆ. ಆದರೆ ಸರಳವಾದ ಸುಳ್ಳುಗಳು ದೊಡ್ಡವರನ್ನು ಸುಲಭವಾಗಿ ಮೋಸಗೊಳಿಸುತ್ತವೆ. ದೊಡ್ಡದೊಡ್ಡ ಕತೆ ಕಾದಂಬರಿಗಳನ್ನು ಹೆಣೆವ ಮಕ್ಕಳು ತಾರ್ಕಿಕವಾಗಿ ಮತ್ತು ಇತರ ತಾಂತ್ರಿಕ ಮಂಡನೆಗಳಲ್ಲಿ ವಿಷಯದ ಅಭಾವದಿಂದ ಸಿಕ್ಕಿ ಬೀಳುತ್ತಾರೆ. ಮಕ್ಕಳು ಸುಳ್ಳು ಹೇಳಿದಾಗ ಸಿಕ್ಕಿ ಬೀಳುವ ವಿಷಯಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾಗಿರುವುದು ಅವರು ಯಾವ್ಯಾವ ವಿಷಯಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ? ಯಾಕೆ ಹೇಳುತ್ತಿದ್ದಾರೆ? ಎಷ್ಟು ಪ್ರಮಾಣದಲ್ಲಿ ಹೇಳುತ್ತಿದ್ದಾರೆ? ಈ ಸುಳ್ಳುಗಳಲ್ಲಿ ಹಾನಿಕಾರಕವಲ್ಲದ್ದು ಯಾವುದು? ಮಾರಕವಾಗಿರುವವು ಯಾವುವು? ಯಾವ ಸುಳ್ಳುಗಳು ಸಹಜವಾಗಿರುವ ಸುಳ್ಳುಗಳು? ಯಾವ ಸುಳ್ಳುಗಳು ಮನೋರೋಗ ಸಮಸ್ಯೆಯ ಸಂಕೇತಗಳು? ಎಂತಹ ಸುಳ್ಳುಗಳು ಮಕ್ಕಳ ವ್ಯಕ್ತಿತ್ವವನ್ನು ರೂಪುಗೊಳಿಸುವಲ್ಲಿ ಎಂತಹ ಪಾತ್ರವನ್ನು ವಹಿಸುತ್ತವೆ? ಎಂತಹ ಸುಳ್ಳುಗಳು ವರ್ತನೆಗಳನ್ನು ರೂಪಿಸುತ್ತವೆ? ಇತ್ಯಾದಿ ಅನೇಕ ವಿಷಯಗಳನ್ನು ಪೋಷಕರು ಮತ್ತು ಶಿಕ್ಷಕರು ಕಂಡುಕೊಳ್ಳಬೇಕಾಗುತ್ತದೆ. ಉಪ್! ಸುಳ್ಳೇನೂ ಸರಳವಲ್ಲ. ಸುಲಭವಾಗಿ ನಿರ್ಲಕ್ಷಿಸಲೂ ಸಾಧ್ಯವಿಲ್ಲ. ಏಕೆ? ಮುಂದೆ ನೋಡೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)