varthabharthi

ಸುಗ್ಗಿ

ಬಾಲ್ಯದ ಗಾಯಗಳು: ಭಾಗ - 7

ಕಡೆಯ ಅಧ್ಯಾಯಗಳು

ವಾರ್ತಾ ಭಾರತಿ : 4 Aug, 2019
ನಿರೂಪಣೆ: ಸೌಮ್ಯಶ್ರೀ ಗೋಣೀಬೀಡು

ಏನೆಲ್ಲಾ ಆಗಿದ್ದರೂ ನನ್ನ ಜೀವನವೇನೂ ನಿಂತು ಹೋಗಿರಲಿಲ್ಲ. ನಾನು ಸ್ಕೂಲಿನುದ್ದಕ್ಕೂ ಆಶುಭಾಷಣ ಸ್ಪರ್ಧೆ, ಭಕ್ತಿಗೀತೆ, ಭಾವಗೀತೆ, ಪದ್ಯ ಕಂಠಪಾಠ ಸ್ಪರ್ಧೆ, ನೆನಪಿನ ಸ್ಪರ್ಧೆ ಮುಂತಾದವುಗಳಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದೆ. ಓದಿನಲ್ಲಿ ಮುಂದಿದ್ದೆ. ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದೆ. ಒಂದಷ್ಟು ಗೆಳೆಯ ಗೆಳತಿಯರಿದ್ದರು. ಬದುಕು ಏನೂ ಆಗಿಲ್ಲದ ಹಾಗೆ ಮುಂದುವರಿಯುತ್ತಿತ್ತು.

ಕಾಲೇಜಿನಲ್ಲಿ ಕೂಡ ಚರ್ಚಾ ಸ್ಪರ್ಧೆ ಮತ್ತು ಆಶುಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನ ಗೆದ್ದೆ. ಓದಿನಲ್ಲೂ ಮುಂದಿದ್ದು ಪ್ರಾಧ್ಯಾಪಕರ ಅಚ್ಚುಮೆಚ್ಚಾಗಿದ್ದೆ. ಹೊರನೋಟಕ್ಕೆ ನನ್ನ ಬದುಕು ಶಾಂತಿಯಿಂದ ಹರಿಯುವ ನದಿಯಂತೆ ಗೋಚರಿಸುತ್ತಿತ್ತು. ನನ್ನ ಒಳಗಾಗುತ್ತಿದ್ದ ತಳಮಳಗಳು ನನಗಷ್ಟೇ ಗೊತ್ತು. ನನ್ನ ಕುಟುಂಬದಲ್ಲಿ ಯಾರಿಗೂ ಈ ವಿಷಯ ಗೊತ್ತಿರಲಿಲ್ಲ. ನನ್ನ ಸೋದರತ್ತೆ, ಚಿಕ್ಕಮ್ಮಂದಿರು, ನನ್ನ ಬಾಲ್ಯ, ಬದುಕು ಚೆನ್ನಾಗಿದೆ ಎಂದೇ ನಂಬಿದ್ದರು. ನದಿಯ ಒಳಪ್ರವಾಹದ ಅರಿವು ನೀರಿಗಿಳಿದ ನನಗಷ್ಟೇ ಗೊತ್ತಿತ್ತು.

ಮುಕ್ತಾಯ

ಮೂವತ್ತೆರಡು ವರ್ಷ ವಯಸ್ಸಾದ ನಾನು ಈ ವಿಷಯವನ್ನು ಮೊದಲ ಬಾರಿಗೆ ನನ್ನ ಕುಟುಂಬದ ಒಬ್ಬರೊಂದಿಗೆ ಹಂಚಿಕೊಂಡೆ. ಮೊದಲು ಅವರು ನನ್ನನ್ನು ನಂಬಲಿಲ್ಲ. ನಾನೇ ತಪ್ಪು ತಿಳಿದಿರಬಹುದು ಎಂದರು. ಆ ತೊಂದರೆ ವ್ಯಕ್ತಿಯ ಚರಿತ್ರೆಯ, ನಡವಳಿಕೆಯ ಬಗ್ಗೆ ಸರ್ಟಿಫಿಕೇಟ್ ಕೊಟ್ಟರು. ಘಟನೆಗಳನ್ನು ವಿಸ್ತಾರವಾಗಿ ಹೇಳಿದ ಮೇಲೆ ನಂಬಿದರು. ನಂಬಿದ ಮೇಲೆ, ‘ಇದನ್ನು ಯಾರ ಬಳಿಯೂ ಹೇಳಬೇಡ. ನಿನ್ನ ಚಾರಿತ್ರದ ಮೇಲೆ ಆಪಾದನೆ, ಕಳಂಕ ಬರುತ್ತದೆ’ ಎಂದರು. ‘‘ನೀನು ಬೇಕೆಂದೇ ಹೇಳುತ್ತಿದ್ದೀಯ ಎನ್ನುತ್ತಾರೆ, ಅವರ ಮಕ್ಕಳ ಜೊತೆ ಸಂಬಂಧ ಹಾಳಾಗುತ್ತದೆ, ಸುಮ್ಮನಿರು’’. ಅಪ್ಪ, ಅಮ್ಮನಿಗೆ ಹೇಳಿದೆ. ಅವರು ಏನೂ ಪ್ರಶ್ನಿಸಲೂ ಇಲ್ಲ, ಕೇಳಲೂ ಇಲ್ಲ. ಮಾತು ನಾನು ಆಡಿದ್ದಷ್ಟೇ. ಹಳೆಯದನ್ನು ಮತ್ಯಾಕೆ ಕೆದಕುವುದು, ಬಿಟ್ಟುಬಿು ಎಂದರು. ಮುಗಿದೇ ಹೋಯಿತು.

ಐದಾರು ವರ್ಷ ವಯಸ್ಸಿನಿಂದ ಅಥವಾ ಅದಕ್ಕೂ ಮುಂಚಿನಿಂದ ಶುರುವಾಗಿ, ಮೂವತ್ತೆರಡು ವರ್ಷದವರೆಗೂ ನನ್ನ ಬಳಿ ಗುಟ್ಟಾಗಿದ್ದ ಈ ವಿಷಯ ರಟ್ಟುಮಾಡಿದರೆ ಸಹಾಯ, ಅನುಕಂಪ, ಸಹಾನುೂತಿ, ಪ್ರೀತಿ, ಯಾವುದೂ ದೊರಕಲಿಲ್ಲ.

ತೊಂದರೆಯ ವ್ಯಕ್ತಿ ನನ್ನೊಡನೆ ಲೈಂಗಿಕ ಕ್ರಿಯೆ ನಡೆಸಿರಲಿಲ್ಲ, ನನ್ನ ಬಟ್ಟೆ ಬಿಚ್ಚಿರಲಿಲ್ಲ ಅಥವಾ ತಾವು ನನ್ನ ಮುಂದೆ ನಗ್ನರಾಗಿರಲಿಲ್ಲ. ಗಾಬರಿಯಾಗಿ ಓಡಿಹೋಗುವಂತಹ ಯಾವುದನ್ನೂ ಅವರು ಮಾಡಿರಲಿಲ್ಲ. ಆದರೆ ಅವರು ನನ್ನನ್ನು ಏಕಾಂತಕ್ಕೆ ಕರೆದೊಯ್ಯುತ್ತಿದ್ದರು, ಮುತ್ತು ಕೊಡು ಎಂದು ಬಲವಂತ ಮಾಡಿದ್ದರು, ನನ್ನ ಎಂಜಲನ್ನು ಆಸೆಪಟ್ಟು ತಿನ್ನುತ್ತಿದ್ದರು, ನನ್ನ ಕೈಯಿಂದ ಅವರ ಕೆನ್ನೆಗೆ ಹೊಡೆಸಿಕೊಳ್ಳುತ್ತಿದ್ದರು, ನನ್ನ ತುಟಿಗಳನ್ನು ತುಂಬಾ ನೋಡುತ್ತಿದ್ದರು. ನನ್ನ ಕೈ, ತೋಳು ಹಿಡಿದು ಎಳೆಯುವುದು, ಗಟ್ಟಿಯಾಗಿ ಹಿಡಿದುಕೊಳ್ಳುವುದು ಎಲ್ಲಾ ಇತ್ತು. ಇದಷ್ಟೇ ಅಲ್ಲದೆ, ಒಟ್ಟಿನಲ್ಲಿ ಅವರ ನಡವಳಿಕೆ ಏನೋ ಸರಿಯಿರಲಿಲ್ಲ ಎಂದು ನನಗೆ ಅನ್ನಿಸುತ್ತಿತ್ತು. ಆದರೆ ನನ್ನ ಬಳಿ ಅವರ ನಡವಳಿಕೆ ತಪ್ಪೋ ಸರಿಯೋ ಗೊತ್ತಿರಲಿಲ್ಲ. ಈ ಗೊಂದಲ ನಾನು ನನ್ನ ಇಪ್ಪತ್ತರ ವಯಸ್ಸಿನಲ್ಲಿ ಅನುಭವಿಸಿದೆ. ಮೂವತ್ತು ವರ್ಷದ ಆಸುಪಾಸಿಗೆ ಬಂಜಾರಾ ಅಕಾಡಮಿ ಎಂಬ ಜಾಗದಲ್ಲಿ, ಒಬ್ಬ ಆಪ್ತ ಸಲಹೆಗಾರರ ಬಳಿ ಈ ವಿಷಯ ಹೇಳಿದಾಗ, ಅವರು ಆ ವ್ಯಕ್ತಿಯ ನಡವಳಿಕೆ ಉಚಿತವಲ್ಲ ಎಂದು ಖಂಡಿತವಾಗಿ ಹೇಳಿ, ನನ್ನ ಗೊಂದಲಕ್ಕೆ ಉತ್ತರ ಕೊಟ್ಟರು. ಈ ಉತ್ತರದ ಮೇಲೆ ನಂಬಿಕೆ ಇನ್ನೂ ಗಟ್ಟಿಯಾಗಿದ್ದು ಎನ್ಫೋಲ್ಡ್ ಸಂಸೆ್ಥಯಲ್ಲಿ.

ತೊಂದರೆಯ ವ್ಯಕ್ತಿ ಕತ್ತೆಯಂತೆ ದುಡಿದು, ತಮ್ಮ ಮಕ್ಕಳನ್ನು ಓದಿಸಿದರು. ಅವರಿಗೆ ಅವರ ಹೆಂಡತಿಯ ಮೇಲೆ ಪ್ರೀತಿಯಿತ್ತು. ಬಹುಶಃ ಅವರು ಒಳ್ಳೆಯ ಗಂಡ, ಅಪ್ಪ ಆಗಿದ್ದರು. ನನ್ನ ಕುಟುಂಬದಲ್ಲಿ ಈಗಲೂ ಅವರ ಮೇಲೆ ಗೌರವವಿದೆ. ಆದರೆ ನನಗೆ ಅವರು, ಆ ಮೂವರೂ ನರಳಿ, ನರಳಿ, ಒದ್ದಾಡಿ ಸಾಯಬಾರದೇ ಎಂಬಷ್ಟು ಕೋಪ. ವಿಧಿ, ಕರ್ಮ, ಯಾವುದಾದರೂ ಅವರ ತಪ್ಪುಗಳಿಗೆ ಕ್ಕ ಶಿಕ್ಷೆ ವಿಧಿಸಬಾರದೇ ಎಂದು ಆಸೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಕಣ್ಣಿಗೆ ರಾಚುವಂತೆ ಅಷ್ಟೇ ಅಲ್ಲ, ನದಿಯ ಒಳಗಿನ ಹರಿವಂತೆ ಹೀಗೆ ತಣ್ಣಗೂ ಆಗುತ್ತದೆ. ನನ್ನ ಜೀವನದಲ್ಲಿ ಇದು ಒಂದು ಸ್ವತಂತ್ರ ಘಟನೆಯಾಗದೆ, ನನ್ನ ಜೀವನದ ಇತರ ಘಟನೆಗಳ ಮತ್ತದರ ಪರಿಣಾಮಗಳ ಜೊತೆಗೆ ಸಿಕ್ಕಿಕೊಂಡು, ಹೊಂದಿಕೊಂಡು, ಒಂದನ್ನೊಂದು ಬೇರೆ ಮಾಡಿ ನೋಡದಂತೆ ಬೆಸೆದುಕೊಡಿದೆ.

ಇಂದು

ಮದುವೆ ಮುರಿದು, ಒಂಟಿಯಾದ ಮೇಲೆ, ನನ್ನ ಬದುಕನ್ನು ನನಗೆ ಬೇಕಾದ ರೀತಿ ಸರಿಮಾಡತೊಡಗಿದೆ. ಇಪ್ಪತ್ತೇಳು - ಇಪ್ಪತ್ತೆಂಟನೇ ವಯಸ್ಸಿನಲ್ಲಿ ನಾನು ನನ್ನ ಬಾಲ್ಯದ ಗಾಯಗಳನ್ನು ಗುಣಪಡಿಸಿಕೊಳ್ಳಲು ಕೆಲಸ ಶುರುಮಾಡಿದೆ. ಬಹಳಷ್ಟು ಆಪ್ತಸಮಾಲೋಚನೆಗೆ ಹೋದೆ. ನನ್ನ ಆಪ್ತಸಮಾಲೋಚಕರ ಮುಂದೆ ನನ್ನ ಬದುಕನ್ನು ತೆರೆದಿಟ್ಟು ಗಂಟೆಗಟ್ಟಲೆ ಅತ್ತಿದ್ದೇನೆ. ಅವರು ಸಲಹೆ ನೀಡಿದ ಹಾಗೆ, ನನ್ನನ್ನು ನಾನು ಪ್ರೀತಿಸಿಕೊಳ್ಳುವ ಕೆಲಸ ಮಾಡಿದ್ದೇನೆ. ನನ್ನ ದೌರ್ಜನ್ಯದ ಅನುಭವಗಳನ್ನು ಹಲವು ಬಾರಿ, ಹಲವರ ಜೊತೆ ಹಂಚಿಕೊಂಡಿದ್ದೇನೆ. ಮಕ್ಕಳ ಮೇಲೆ ದೌರ್ಜನ್ಯದ ಬಗ್ಗೆ ಅಧ್ಯಯನ ಮಾಡಿದ್ದೇನೆ. ಇದು ಎಷ್ಟು ಸಾಮಾನ್ಯ, ಇದರ ಬಗ್ಗೆ ಮಾತನಾಡುವುದು ಎಷ್ಟು ಕಷ್ಟ ಎಂದು ಅರಿತಿದ್ದೇನೆ. ನನ್ನ ಕೈಲಾದ ಸಹಾಯ ಮಾಡಿದ್ದೇನೆ.

ಹೀಗೆ ನನ್ನ ಗೊಂದಲಗಳು ನಿಧಾನವಾಗಿ ಕಡಿಮೆಯಾದವು. ನಾನು ಪರಿಸ್ಥಿತಿಯ ಕೈಗೊಂಬೆಯಷ್ಟೇ. ನನ್ನ ಬದುಕಿನ ಲಗಾಮು ಸಂಪೂರ್ಣ ನನ್ನ ಕೈಗೇ ಬಂದ ನಂತರ, ಬದುಕು ತಹಬಂದಿಗೆ ಬರಲು ಶುರುವಾಯಿತು.

ನನಗಾಗಿದ್ದು ದೌರ್ಜನ್ಯವೇ, ಅದರಲ್ಲಿ ನನ್ನ ತಪ್ಪೇನೂ ಇಲ್ಲ ಎಂದು ಮನದಟ್ಟು ಮಾಡಿಕೊಂಡೆ. ಒಂದಷ್ಟು ಜನರಿಗೆ, ನನಗೆ ತಿಳಿದ ರೀತಿ, ಸಹಾಯ ಮಾಡಿ, ನನ್ನಲ್ಲಿರುವ ಒಳ್ಳೆಯ ಗುಣಗಳನ್ನು ಆಚೆ ತಂದೆ, ನನ್ನ ಕಣ್ಣಿಗೆ ಬೀಳುವಂತೆ ಮಾಡಿದೆ. ಕಾಮದ ಯಾವುದೇ ಭಾವನೆಗಳಿಲ್ಲದ ಗೆಳೆಯರನ್ನು ಸಂಪಾದಿಸಿದೆ. ದೊಡ್ಡ ಸಂಬಳದ ಕೆಲಸ ಬಿಟ್ಟು ಮಕ್ಕಳಿಗೆ ಉಪಕಾರವಾಗುವ ಕೆಲಸ ಹಿಡಿದೆ. ನನ್ನಲ್ಲಿ ರೂಪವನ್ನೂ, ಗುಣವನ್ನೂ, ಒಳ್ಳೆಯತನವನ್ನೂ, ಶಕ್ತಿಯನ್ನೂ ಕಂಡುಕೊಂಡೆ. ಅನುಚಿತವಾಗಿ ನಡೆದುಕೊಂಡ ಒಬ್ಬರಿಗೆ ಅವರ ವರ್ತನೆ ಸರಿಯಲ್ಲ ಎಂದು ಹೇಳುವ ಧೈರ್ಯಮಾಡಿದೆ. ಬಸ್ಸಿನಲ್ಲಿ ಅಲ್ಲಿ, ಇಲ್ಲಿ ಮುಟ್ಟುವ ಒಂದಿಬ್ಬರಿಗೆ ಬೈಗಳು, ಬೆನ್ನ ಮೇಲೊಂದು ಏಟು ಕೊಟ್ಟೆ. ಈ ಬರವಣಿಗೆ ಕೂಡ ನನ್ನ ಮನಸ್ಸಿನ ಮೇಲಾದ ಗಾಯಗನ್ನು ವಾಸಿಮಾಡಲು ಸಹಾಯಕವಾಗಿದೆ.

ನನ್ನನ್ನು ಕಾಯಬೇಕಾದ ನನ್ನ ಅಪ್ಪ, ಅಮ್ಮ, ಅವರ ಕರ್ತವ್ಯದಲ್ಲಿ ಅಸಫಲರಾಗಿದ್ದರು. ಅವರ ಮೇಲಿನ ಕೋಪ, ನಿರಾಸೆ, ಈಗ ಅಂಟಾರ್ಟಿಕಾದ ಐಸಿನಂತೆ ನಿಧಾನಕ್ಕೆ ಕರಗುತ್ತಿದೆ. ಅಜ್ಜಿ, ಅಜ್ಜರನ್ನು ಸುಲಭವಾಗಿ ಕ್ಷಮಿಸಿದ ನನಗೆ ಅಪ್ಪ, ಅಮ್ಮರನ್ನು ಅಷ್ಟು ಸುಲಭವಾಗಿ ಕ್ಷಮಿಸಲಾಗಿಲ್ಲ. ನನ್ನ ಪೋಷಕರು ಕೆಟ್ಟವರಲ್ಲ. ಅವರಿಗೆ ತಿಳಿದ ರೀತಿಯಲ್ಲಿ, ಅವರ ಕೈಲಾದಷ್ಟು ನನ್ನನ್ನು ಪ್ರೀತಿಸಿದರು, ಕಾಪಾಡಿದರು, ಬೆಳೆಯಲು ಅವಕಾಶ ಮಾಡಿದರು. ಸಾವಿರ ಒಳ್ಳೆಯ ಕೆಲಸಗಳ ನಡುವೆ ಇದು ಒಂದು ಮಸಿ.

ನನ್ನನ್ನು ನಾನು ಪ್ರೀತಿಸುವುದನ್ನು ಇನ್ನೂ ಕಲಿಯುತ್ತಿದ್ದೇನೆ. ನಾನು ನನ್ನ ಬದುಕಿಗೆ ಎರಡನೇ ಅವಕಾಶ ಕೊಟ್ಟಿದ್ದೇನೆ. ಬದುಕಿನ ಲಹರಿ ಬದಲಿಸಿದೆ. ಮತ್ತೆ ಮದುವೆಯಾದೆ. ತಾಯಿಯಾದೆ.

ನನ್ನ ಗಂಡನನ್ನೂ, ಮಗುವನ್ನೂ, ತಂದೆ ತಾಯಿಯರನ್ನೂ ಪ್ರೀತಿಸಲು ಕಲಿಯುತ್ತಿದ್ದೇನೆ. ನನ್ನ ಜೀವನದ ಸಹಭಾಗಿ ನನ್ನನ್ನು ಗೌರವಿಸುತ್ತಾನೆ, ನನ್ನ ಬೆನ್ನ ಹಿಂದೆಯೇ ಇದ್ದಾನೆ. ನಾನೆಷ್ಟು ಒಳ್ಳೆಯವಳು ಎಂದು ನನ್ನ ಗಂಡ, ಅತ್ತೆ, ಮಾವ ನೋಡಿದ್ದಾರೆ ಮತ್ತು ಅದನ್ನು ನನಗೂ ಕಾಣಿಸಿದ್ದಾರೆ. ರೂಪ, ಗುಣ, ಮನಸ್ಸು ಎಲ್ಲಾ ಸುಂದರವಾಗಿದೆ ಎಂದು ನಿಧಾನಕ್ಕೆ ಮನದಟ್ಟಾಗುತ್ತಿದೆ. ಸಹಜ ಸಾಮಾನ್ಯ ಎಂದು ಏನೂ ಇಲ್ಲವೇನೋ. ನನ್ನ ಜೀವನ ಸಹಜ ಸಾಮಾನ್ಯವಾಗಿ ನಡೆಯುತ್ತಿದೆಯೆಂದು ಹೇಳಬಹುದೇನೋ ಗೊತ್ತಿಲ್ಲ. ಆದರೆ, ಪ್ರತಿ ಜೀವವೂ ಅನನ್ಯ, ವಿಶೇಷ ಎಂದು ಮಾತ್ರ ಈಗ ಗೊತ್ತಾಗಿದೆ. ನನ್ನದೂ ಕೂಡ. ನಿಮ್ಮದೂ ಕೂಡ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)