varthabharthi


ವೈವಿಧ್ಯ

ನಮ್ಮನ್ನು ನಾಶ ಮಾಡಬಲ್ಲ ನೀರಿನ ಬಿಕ್ಕಟ್ಟು

ವಾರ್ತಾ ಭಾರತಿ : 5 Aug, 2019
ಪ್ರಸಂಜಿತ್ ಚೌಧರಿ

ಆಹಾರದ ಭದ್ರತೆ ಮತ್ತು ನೀರಿನ ಭದ್ರತೆಯ ನಡುವೆ ಒಂದು ಸಮತೋಲನ ಸಾಧಿಸಲು ಮತ್ತು ಎಲ್ಲಾ ಸ್ಪರ್ಧಾತ್ಮಕ ನೀರಿನ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿಭಾಯಿಸಲು ನಾವು ಕಲಿಯದಿದ್ದಲ್ಲಿ ನಮ್ಮ ರಾಷ್ಟ್ರೀಯ ಭದ್ರತೆಗೇ ಅಪಾಯ ಎದುರಾಗಲಿದೆ. ಗತ ಇತಿಹಾಸದಲ್ಲಿ ಮೊಹೆಂಜೊದಾರೋ ಮತ್ತು ಇತರ ನಾಗರಿಕತೆಗಳನ್ನು ನೀರಿನ ಸಮಸ್ಯೆಗಳು ನಾಶ ಮಾಡಿವೆ. ನಾವು ತುರ್ತಾಗಿ ಆ ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ.

ಬದಲಾವಣೆಗಳು ಹೆಚ್ಚು ಹೆಚ್ಚು ಆದಷ್ಟೂ ಪರಿಸ್ಥಿತಿ ಬದಲಾಗದೆ ಇದ್ದಹಾಗೆಯೇ ಇರುತ್ತದೆ. ವಿಶ್ವಬ್ಯಾಂಕ್ 2005ರಲ್ಲಿ, ಭಾರತದಲ್ಲಿ ಇನ್ನು ಇಪ್ಪತ್ತು ವರ್ಷಗಳೊಳಗಾಗಿ ಭೂಮಿಯಲ್ಲಿ ನೀರನ್ನು ಹಿಡಿದುಕೊಳ್ಳುವ ಎಲ್ಲ ಜಲಪದರ(ಅಕ್ವಿಪರ್)ಗಳು ತುಂಬ ಬಿಕ್ಕಟ್ಟಿನ ಸ್ಥಿತಿಯಲ್ಲಿರುತ್ತವೆ ಎಂದು ಭವಿಷ್ಯ ನುಡಿದಿತ್ತು. ಕೇವಲ ಹದಿನಾಲ್ಕು ವರ್ಷಗಳ ಬಳಿಕ ಆ ಭವಿಷ್ಯ ನಿಜವಾಗಿದೆ. ನೀತಿ ಆಯೋಗದ 2018ರ ಸಂಯುಕ್ತ ಜಲ ನಿರ್ವಹಣೆ ಸೂಚ್ಯಂಕದ (ಕಾಂಪೊಸಿಟ್ ವಾಟರ್) ಮ್ಯಾನೇಜ್‌ಮೆಂಟ್ ಇಂಡೆಕ್ಸ್- ಸಿಡಬ್ಲೂಎಂಐ) ಪ್ರಕಾರ, ದೇಶದ 21 ದೊಡ್ಡ ನಗರಗಳು (ದಿಲ್ಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಇತರ ನಗರಗಳು) 2020ರ ವೇಳೆ ಶೂನ್ಯ ಅಂತರ್ಜಲ ಮಟ್ಟ ತಲುಪುವ ಓಟದಲ್ಲಿದೆ. ಇದರಿಂದಾಗಿ ಒಂದು ನೂರು ಮಿಲಿಯಕ್ಕಿಂತಲೂ ಹೆಚ್ಚು ಜನರಿಗೆ ನೀರಿನ ಸಮಸ್ಯೆ ಬಾಧಿಸಲಿದೆ. 2030ರ ವೇಳೆಗೆ ದೇಶದಲ್ಲಿ ಲಭ್ಯವಿರಲಿರುವ ನೀರಿನ ಎರಡು ಪಾಲಿನಷ್ಟು ನೀರಿಗೆ ಬೇಡಿಕೆ ಇರುತ್ತದೆ. ಮಿಲಿಯಗಟ್ಟಲೆ ಜನರಿಗೆ ನೀರಿನ ಕೊರತೆಯ ಜೊತೆಗೆ ಶೇ.6 ಜಿಡಿಪಿ ನಷ್ಟವೂ ಸೇರಿ ನಮ್ಮ ತಪ್ಪು ಜಲನಿರ್ವಹಣೆ ಹಾಗೂ ಹಲವಾರು ವರ್ಷಗಳಿಂದ ಆಗುತ್ತಿರುವ ಕಡಿಮೆ ಮಳೆ ನಮ್ಮ ಜಲ ಪರಿಸರ ವ್ಯವಸ್ಥೆಯ ಮೇಲೆ ಅನಾಹುತಕಾರಿ ಪರಿಣಾಮ ಬೀರಲಿದೆ.

ಸಮಸ್ಯೆಯ ತಿರುಳು ಮೊದಲಿದ್ದದ್ದೇ ಆಗಿದೆ. ಮಳೆ ನೀರಿನ 90% ಮಳೆ ಕೃಷಿ ರಂಗಕ್ಕೆ ವ್ಯಯವಾಗುತ್ತಿದೆ. ಸಿಡಬ್ಲೂಎಂಐ ವರದಿಯ ಪ್ರಕಾರ, ಮೈಕ್ರೊ-ನೀರಾವರಿ ತಂತ್ರಗಳನ್ನು ಅಳವಡಿಸುವ ಮೂಲಕ ಸುಮಾರು 20ಶೇ. ಅಂತರ್ಜಲವನ್ನು ಪ್ರತಿವರ್ಷ ಉಳಿತಾಯ ಮಾಡಬಹುದು. ಆದರೆ ಇಂತಹ ತಂತ್ರಗಳನ್ನು ಬಳಸುವಂತೆ ರೈತರಿಗೆ ಮನವರಿಕೆ ಮಾಡಿಸುವುದು ಸುಲಭದ ಕೆಲಸವಲ್ಲ ಅನ್ನಿಸುತ್ತದೆ.

ವಿದ್ಯುತ್ ಸಬ್ಸಿಡಿ ನೀಡುವ ಸರಕಾರದ ನೀತಿ ಒಂದೆಡೆಯಾದರೆ, ಇನ್ನೊಂದೆಡೆ ಅಂತರ್ಜಲ ನೀರಾವರಿ ಪಂಪ್‌ಗಳಲ್ಲಿ ಬಹುಪಾಲು ಪಂಪ್‌ಗಳಿಗೆ ಬಳಕೆಯಾದ ವಿದ್ಯುತ್‌ನ ಪ್ರಮಾಣವನ್ನು ಅಳೆಯುವ ಮೀಟರ್‌ಗಳೇ ಇಲ್ಲ. ಕೆರೆ ನೀರಿನ ಆಶ್ರಯವಿರುವ ಎಲ್ಲ ಭೂಮಿಯನ್ನು ಒತ್ತುವರಿ ಮಾಡಿ ಅಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆಯೇ ಹೊರತು ಆ ಜಾಗಗಳನ್ನು ಜಲಸಂರಕ್ಷಣೆಯ ಅಮೂಲ್ಯ ಸ್ಥಳವೆಂದು ಪರಿಗಣಿಸಲಾಗುತ್ತಿಲ್ಲ.

ಕನಿಷ್ಠ ಬೆಂಬಲಬೆಲೆಯ ಮೂಲಕ ರೈತರಿಗೆ ಅಕ್ಕಿ ಮತ್ತು ಕಬ್ಬಿನಂತಹ ತುಂಬ ಹೆಚ್ಚು ನೀರು ಬೇಕಾಗುವ, ಬೆಳೆಗಳನ್ನು ಬೆಳೆಸಲು ಪ್ರೋತ್ಸಾಹಿಸಲಾಗುತ್ತಿದೆ. ಈ ಬೆಳೆಗಳಿಗೆ ಉಚಿತ ವಿದ್ಯುತ್ ಪಂಪ್‌ಗಳ ಮೂಲಕ ಮುಖ್ಯವಾಗಿ ಅಂತರ್ಜಲವೇ ಬಳಕೆಯಾಗುವುದರಿಂದ, ಕಲವೇ ವರ್ಷಗಳಲ್ಲಿ ಅಂತರ್ಜಲ ಬರಿದಾಗಿ ದೇಶದ ಆಹಾರ ಭದ್ರತೆಗೆ ಗಂಭೀರ ಅಪಾಯ ಎದುರಾಗಲಿದೆ.

 ಈಗಾಗಲೇ ಚೆನ್ನೈ ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ನೀರಿನ ಕೊರತೆಯ ಸಮಸ್ಯೆ ಉಲ್ಬಣಿಸಿದೆ. ನಾವು ಇದರಿಂದ ಇನ್ನೂ ಪಾಠ ಕಲಿತಿಲ್ಲ. ಲಾತೂರಿನಲ್ಲಿ ನೀರಿಗಾಗಿ ದೊಂಬಿಗಳು ನಡೆಯುವುದನ್ನು ತಡೆಯಲಿಕ್ಕಾಗಿ ಬರಪೀಡಿತ ಪ್ರದೇಶಗಳಿಗೆ ರೈಲುಗಳ ಮೂಲಕ ಮಿಲಿಯಗಟ್ಟಲೆ ಲೀಟರ್ ನೀರನ್ನು ಸರಬರಾಜು ಮಾಡಬೇಕಾಯಿತು. ಮುಂಬೈ ಮತ್ತು ಅಸ್ಸಾಮಿನಲ್ಲಿ ಬಂದ ನೆರೆಗಳ ಕುರಿತಾದ ವರದಿಗಳು, ಆಡಳಿತ ಯಂತ್ರವು ಮಳೆನೀರಿನ 90ಶೇ. ನೀರು ಸಮುದ್ರ ಸೇರುವಂತೆ ಮಾಡಿತೇ ವಿನಹ ಅದನ್ನು ಹಿಡಿದಿಟ್ಟು ಸಂರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಯಿತು ಎಂಬುದನ್ನು ಸಾಬೀತುಪಡಿಸಿವೆ.

 ನೀರಿಗಾಗಿ ಯುದ್ಧ

ದೇಶದ ಪ್ರಮುಖ ನದಿಗಳಾಗಿರುವ ಎಲ್ಲ ಹದಿನಾಲ್ಕು ನದಿಗಳು ಮಲಿನಗೊಂಡಿವೆ. ಯಾಕೆಂದರೆ ಅವುಗಳು ಪ್ರತಿವರ್ಷ 50 ಮಿಲಿಯ ಘನ ಮಿಟರ್‌ಗಳಷ್ಟು ಕೊಳಚೆ ನೀರನ್ನು ದೇಶದ ಕರಾವಳಿ ಜಲಮೂಲಗಳಿಗೆ ಸಾಗಿಸುತ್ತವೆ. ದಿಲ್ಲಿ ಒಂದೇ ನಗರ 200 ಮಿಲಿಯ ಲೀಟರ್‌ಗಳಿಗಿಂತಲೂ ಹೆಚ್ಚು ಕಚ್ಚಾ ಚರಂಡಿ ನೀರನ್ನು ಮತ್ತು 20 ಮಿಲಿಯ ಲೀಟರ್‌ಗಳಷ್ಟು ಔದ್ಯಮಿಕ ತ್ಯಾಜ್ಯವನ್ನು ಯಮುನಾ ನದಿಗೆ ಕಳುಹಿಸುತ್ತದೆ. ಈ ಅಂದಾಜು ಒಂದು ದಶಕದ ಹಿಂದಿನದು. ಆ ಬಳಿಕದ ವಾಸ್ತವ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇಷ್ಟೇ ಅಲ್ಲದೆ, ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ನಡೆಯುತ್ತಿರುವ ಜಲ ವಿವಾದವಷ್ಟೆ ಅಲ್ಲದೆ, ಕೃಷ್ಣ, ಗೋದಾವರಿ, ನರ್ಮದಾ ಇತ್ಯಾದಿ ನದಿಗಳ ಕುರಿತಾದ ಜಲವಿವಾದಗಳ ದೊಡ್ಡ ಇತಿಹಾಸವೇ ನಮ್ಮ ದೇಶಕ್ಕಿದೆ.

ಅಗತ್ಯವಿದ್ದರೆ ದೇಶದೊಳಗೆ ಮತ್ತು ದೇಶದ ಹೊರಗೆ ನೀರಿಗಾಗಿ ಒಂದು ಯುದ್ಧ ನಡೆಸಲು ಭಾರತ ಸಿದ್ಧವಿದೆಯೇ? ಸಿಂಧೂ ನದಿ ಮತ್ತು ಅದರ ಉಪನದಿಗಳು ಹರಿಯುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ತನ್ನದಾಗಿ ಮಾಡಿಕೊಳ್ಳಲು ಭಾರತಕ್ಕೆ ಸಾಧ್ಯವಾದೀತೇ?

 ಈಗ ವಿವಾದಿತವಾಗಿರುವ ಡಯಾಮರ್ ಭಾಷಾ ಅಣೆಕಟ್ಟು ಯೋಜನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜಲಸಂಪತ್ತನ್ನು ಪಾಕಿಸ್ತಾನ ಹೇಗೆ ಬರಿದು ಮಾಡುತ್ತಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಹೀಗಾಗಿ, ಈ ನಿಟ್ಟಿನಲ್ಲಿ ಕಾಶ್ಮೀರ ಕುರಿತಂತೆ ಭಾರತ ಇತ್ಯಾತ್ಮಕ ಹೆಜ್ಜೆ ಇಡಬೇಕಾಗಿದೆ.

ಅಂತರ್‌ರಾಷ್ಟ್ರೀಯ ಭಯೋತ್ಪಾದನೆ, ಧಾರ್ಮಿಕ ಆತಂಕವಾದ, ಅಕ್ರಮ ದ್ರವ್ಯ ಸಾಗಣೆ, ಪರಿಸರ ಹಾನಿ ಮತ್ತು ನೀರಿನ ಕೊರತೆಯೂ ಸೇರಿದಂತೆ ಏಶ್ಯದ ಬಹುಭಾಗ ಸಂಕೀರ್ಣವಾದ ಬೆದರಿಕೆಗಳನ್ನೆದುರಿಸುತ್ತಿದೆ. ನೀರು ಹಂಚಿಕೆ ಸಮಸ್ಯೆ ಪರಿಹಾರಕ್ಕೆ ಈ ಭಾಗದ ದೇಶಗಳು ಎಲ್ಲ ದೇಶಗಳಿಗೂ ಒಪ್ಪಿಗೆಯಾಗುವಂತಹ ಒಂದು ಸಾಮಾನ್ಯ ನಿರ್ಧಾರಕ್ಕೆ ಬರಬೇಕಾದ ಅವಶ್ಯಕತೆ ಇದೆ.

ಆಹಾರದ ಭದ್ರತೆ ಮತ್ತು ನೀರಿನ ಭದ್ರತೆಯ ನಡುವೆ ಒಂದು ಸಮತೋಲನ ಸಾಧಿಸಲು ಮತ್ತು ಎಲ್ಲಾ ಸ್ಪರ್ಧಾತ್ಮಕ ನೀರಿನ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿಭಾಯಿಸಲು ನಾವು ಕಲಿಯದಿದ್ದಲ್ಲಿ ನಮ್ಮ ರಾಷ್ಟ್ರೀಯ ಭದ್ರತೆಗೇ ಅಪಾಯ ಎದುರಾಗಲಿದೆ. ಗತ ಇತಿಹಾಸದಲ್ಲಿ ಮೊಹೆಂಜೊದಾರೋ ಮತ್ತು ಇತರ ನಾಗರಿಕತೆಗಳನ್ನು ನೀರಿನ ಸಮಸ್ಯೆಗಳು ನಾಶ ಮಾಡಿವೆ. ನಾವು ತುರ್ತಾಗಿ ಆ ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ.

ಕೃಪೆ: deccanherald.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)