varthabharthi


ಗಲ್ಫ್ ಸುದ್ದಿ

ಕುವೈತ್ ನಲ್ಲಿ ಸಂಕಷ್ಟ ಪ್ರಕರಣ: ಸ್ವದೇಶ ತಲುಪಿದ ಕರಾವಳಿಯ 8 ಮಂದಿ

ವಾರ್ತಾ ಭಾರತಿ : 5 Aug, 2019
ವರದಿ: ಅಬ್ದುಲ್ ಶುಕೂರ್ ಮಲ್ಪೆ

ಕುವೈತ್, ಆ.5: ಉದ್ಯೋಗಕ್ಕೆಂದು ಕುವೈತ್‌ಗೆ ತೆರಳಿ ವಂಚನೆಗೊಳಗಾಗಿದ್ದ ಕರಾವಳಿಯ 34 ಮಂದಿ ಪೈಕಿ ಇನ್ನೂ ಅಲ್ಲೇ ಬಾಕಿ ಉಳಿದಿದ್ದವರ ಪೈಕಿ ಕರಾವಳಿ ಮೂಲದ 8 ಮಂದಿ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ (ಕೆಕೆಎಂಎ) ಇದರ ಕರ್ನಾಟಕ ಶಾಖೆಯ ನೆರವಿನಿಂದ ಮಂಗಳವಾರ ಮಂಗಳೂರು ತಲುಪಲಿದ್ದಾರೆ. 

ಸಂತ್ರಸ್ತರು ರವಿವಾರ ರಾತ್ರಿ ಕುವೈತ್ ನಿಂದ ಹೊರಟಿದ್ದು, ಸೋಮವಾರ ಮುಂಜಾನೆ ಮುಂಬಯಿ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿಂದ ಬಸ್ಸಿನ ಮೂಲಕ  ಮಂಗಳೂರಿಗೆ ತೆರಳಲಿದ್ದು, ಮಂಗಳವಾರ ಬೆಳಗ್ಗೆ ತಲುಪುವ ಸಾಧ್ಯತೆ ಇದೆ.

ದುಡಿಮೆಯೂ ಇಲ್ಲದೆ, ತವರಿಗೆ ವಾಪಸಾಗಲೂ ಸಾಧ್ಯವಾಗದೆ ವಿದೇಶದಲ್ಲೇ ಸಂಕಷ್ಟಕ್ಕೊಳಗಾದವರ ಪೈಕಿ ಇತರ 23 ಮಂದಿ ಹಂತ-ಹಂತಗಳಲ್ಲಿ ಅನಿವಾಸಿ ಭಾರತೀಯರ ನೆರವಿನಲ್ಲಿ ಸ್ವದೇಶಕ್ಕೆ ವಾಪಸಾಗಿದ್ದರು. ಅತಂತ್ರರಾಗಿದ್ದವರ ಪೈಕಿ   6 ಮಂದಿಯ ದಂಡ ಮೊತ್ತ 690 ದಿನಾರ್, 8 ಜನರ ಟಿಕೆಟ್ ಮೊತ್ತ 500 ದಿನಾರ್ ಹಾಗೂ ಮುಂಬೈಯಿಂದ  ಮಂಗಳೂರು ತಲುಪಲು ಬಸ್ ಟಿಕೆಟ್ ಮೊತ್ತ 10,000 ರೂ.ನ್ನು ಕೂಡ ಕೆಕೆಎಂಎ ಭರಿಸಿದೆ. ಇನ್ನೂ ಇಬ್ಬರು ಕೆಲವು ಕಾನೂನಾತ್ಮಕ ಸಮಸ್ಯೆ ಕಾರಣ ಕುವೈತ್ ನಲ್ಲೇ ಉಳಿದುಕೊಂಡಿದ್ದಾರೆ. ಅವರನ್ನು ಕೂಡಾ ತವರು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೆಕೆಎಂಎ ಪದಾಧಿಕಾರಿಗಳು ತಿಳಿಸಿದ್ದಾರೆ.

ಅತಂತ್ರರಾಗಿದ್ದ ಎಂಟು ಮಂದಿಯನ್ನು ಕೆಕೆಎಂಎ ಪದಾಧಿಕಾರಿಗಳಾದ ಮಾಬಿಯ ಕಡಬ, ನೌಶಾದ್ ಬಜ್ಪೆ, ರಿಯಾಝ್ ಮಂಚಿಲ, ಶಿಹಾಬ್ ಬೆಂಗರೆ, ರವೂಫ್ ಉಳ್ಳಾಲ, ಲತೀಫ್ ಶೇಡಿಯಾ, ಅಮೀನ್ ಕೋಟೇಶ್ವರ, ಮೋಹನ್ ದಾಸ್ ಕಾಮತ್ ಮಂಜೇಶ್ವರ, ರಾಜ್ ಭಂಡಾರಿ ಸೂರಿಂಜೆ, ಮಾಧವ ನಾಯಕ್, ವಿಜಯ್ ಫೆರ್ನಾಂಡಿಸ್ ಮತ್ತಿತರರು ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)