varthabharthi


ವಿಶೇಷ-ವರದಿಗಳು

ಹಳೆ ಪತ್ರಿಕೆಗಳ ಮರುಬಳಕೆಗೆ ಮುನ್ನುಡಿ ಬರೆದ ಪಕ್ಷಿಕೆರೆ ನಿತಿನ್ ವಾಸ್

ರದ್ದಿಯಿಂದ ಚಿನ್ನ ತೆಗೆಯುವ ಪರಿಸರ ಪ್ರೇಮಿ

ವಾರ್ತಾ ಭಾರತಿ : 5 Aug, 2019
ಬಂದೇನವಾಝ್ ಮ್ಯಾಗೇರಿ

ಮಂಗಳೂರು, ಆ.4: ಹಳೆಯ ದಿನಪತ್ರಿಕೆಗಳು ನಿಷ್ಪ್ರಯೋಜಕವೆಂದು ಭಾವಿಸಿ ತೂಕಕ್ಕೆ ಹಾಕಿ ಕೈತೊಳೆದುಕೊಳ್ಳುವವರೇ ಇರುವ ಸಮಯದಲ್ಲಿ ರದ್ದಿಯನ್ನು ಮರುಬಳಕೆ ಮಾಡುತ್ತಾ ತನ್ನದೇ ಆಯಾಮದಲ್ಲಿ ಪರಿಸರಕ್ಕೆ ಕೊಡುಗೆ ನೀಡುವ ಪ್ರತಿಭೆಗೆ ಕರಾವಳಿ ಸಾಕ್ಷಿಯಾಗಿದೆ.

ದಿನಪತ್ರಿಕೆಗೆ ಒಂದು ದಿನದ ಬಾಳಿಕೆ. ವಿದ್ಯಮಾನಗಳನ್ನು ತಿಳಿಸುವ ಪತ್ರಿಕೆ ಮರುದಿನ ರದ್ದಿಯಾಗಿರುತ್ತದೆ. ಇಂತಹದ್ದನ್ನೇ ಉಪಯೋಗಿಸಿಕೊಂಡು ತಹರೇವಾರಿ ವಸ್ತುಗಳನ್ನಾಗಿ ಪ್ರತಿಭಾನ್ವಿತ ಯುವಕನೋರ್ವ ಮಾರ್ಪಾಡಿಸುತ್ತಿದ್ದಾರೆ. ಮಂಗಳೂರಿನಿಂದ 23 ಕಿ.ಮೀ. ಸಮೀಪದ ಪಕ್ಷಿಕೆರೆಯ ಪರಿಸರ ಪ್ರೇಮಿ ನಿತಿನ್ ವಾಸ್ ಬೆರಗು ಮೂಡಿಸುತ್ತಿರುವ ಬಹುಮುಖ ಪ್ರತಿಭೆ.

ಸಾಮಾನ್ಯ ಪೇಪರ್‌ಗಳ ಬದಲಿಗೆ ಬೀಜಗಳನ್ನೊಳಗೊಂಡ ಪೇಪರ್‌ಗಳು ಮಾರುಕಟ್ಟೆಗೆ ದಾಂಗುಡಿ ಇಡಲಿವೆ. ಇವುಗಳನ್ನು ಉಪಯೋಗಿಸಿದ ಬಳಿಕ ಪರಿಸರದಲ್ಲಿ ಬಿಸಾಡಿದಾಗ ಅದರಲ್ಲಿನ ಬೀಜಗಳು ಮೊಳಕೆಯೊಡೆದು ಸಸಿಗಳಾಗಿ ಹುಟ್ಟುತ್ತವೆ. ಈ ಮೂಲಕ ಪರಿಸರಕ್ಕೆ ವಿಭಿನ್ನ ರೀತಿಯಲ್ಲಿ ಕೊಡುಗೆ ನೀಡುವ ಕಲ್ಪನೆಯೊಂದನ್ನು ‘ಪೇಪರ್ ಸೀಡ್’ ಸಂಸ್ಥಾಪಕ, ಸಮಾಜಸೇವಕ, ಪರಿಸರತಜ್ಞ ನಿತಿನ್ ವಾಸ್ ವ್ಯಾಖ್ಯಾನಿಸಿದ್ದಾರೆ.

ರದ್ದಿ ಪತ್ರಿಕೆ, ಹಳೆ ಪುಸ್ತಕಗಳನ್ನು ಬಳಸಿಕೊಂಡು ಪೆನ್ನು, ಪೆನ್ಸಿಲ್, ಆಮಂತ್ರಣ ಪತ್ರಿಕೆ, ಭಾರತ ಧ್ವಜ, ಗಣೇಶ ಮೂರ್ತಿ, ನೋಟ್ ಪ್ಯಾಡ್, ಅಗರಬತ್ತಿ, ಬೌಲ್, ಆಭರಣ ಡಬ್ಬಿ, ಸಿನೆಮಾ ಟಿಕೆಟ್ ಇತ್ಯಾದಿ ಇತ್ಯಾದಿ ವಸ್ತುಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ವಿವಿಧ ತರಕಾರಿ ಮತ್ತು ಹೂವುಗಳ ಬೀಜಗಳಿರುತ್ತವೆ.

ಈ ವಸ್ತುಗಳನ್ನು ಬಳಸಿದ ಬಳಿಕ ಎಸೆದರೆ ಅವುಗಳಿಂದ ಬೀಜ ಮೊಳಕೆಯೊಡೆದು ಬೆಂಡೆ, ಮೂಲಂಗಿ, ಕೊತ್ತಂಬರಿ ಸೊಪ್ಪು, ಟೊಮೆಟೊ ಇತ್ಯಾದಿ ಇತ್ಯಾದಿಗಳು ಬೆಳೆಯುತ್ತವೆ ಎನ್ನುತ್ತಾರೆ ನಿತಿನ್ ವಾಸ್.

ಸೀಡ್ ಬಾಂಬ್: ರದ್ದಿ ಪತ್ರಿಕೆಗಳಿಂಲೇ ಸೀಡ್ ಬಾಂಬ್ ತಯಾರಾಗುತ್ತದೆ. ಈ ಸೀಡ್ ಬಾಂಬ್‌ನಲ್ಲಿ ತರಕಾರಿ ಬೀಜಗಳನ್ನು ಹಾಕಲಾಗಿರುತ್ತದೆ. ಇದನ್ನು ಯಾವುದೇ ಪ್ರದೇಶದಲ್ಲಿ ಎಸೆದರೂ ಅದು ನೀರಿಗೆ ತಾಗಿದರೆ ಬೀಜಗಳು ಮೊಳಕೆಯೊಡೆಯುತ್ತವೆ.

ಪೆನ್ಸಿಲ್‌ಗಳ ತಯಾರಿಗೆ ಸಾಮಾನ್ಯವಾಗಿ ಗಿಡ-ಮರಗಳೇ ಮೂಲವಸ್ತು. ರದ್ದಿ ಪತ್ರಿಕೆಯ ಮೂಲವೂ ಮರಗಳಾದರೂ ‘ಪೇಪರ್ ಸೀಡ್’ನಿಂದ ತಯಾರಿಸುವ ಪೆನ್ಸಿಲ್ ವಿಭಿನ್ನ ದೃಷ್ಟಿಯಿಂದ ಜನಮನ್ನಣೆ ಪಾತ್ರವಾಗಿದೆ. ಪೆನ್ಸಿಲ್‌ನ ಒಂದು ತುದಿಯಲ್ಲಿ ತರಕಾರಿ ಬೀಜಗಳಿರುತ್ತವೆ. ಅದನ್ನು ಎಸೆದ ದಿನದಂದು ಅದು ಮೊಳಕೆಯೊಡೆದು ಬೆಳೆಯಲು ಪ್ರಾರಂಭಿಸುತ್ತದೆ ಎಂದು ನಿತಿನ್ ಹೇಳುತ್ತಾರೆ.

ಕಾರ್ಯ ವಿಧಾನ

ರದ್ದಿ ಪತ್ರಿಕೆಗಳನ್ನು ಮೊದಲು ಚಿಕ್ಕಚಿಕ್ಕ ತುಂಡುಗಳನ್ನಾಗಿ ಕತ್ತರಿಸಲಾಗುತ್ತದೆ. ಇವುಗಳನ್ನು ಕನಿಷ್ಠ 14 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ರದ್ದಿಯ ತುಂಡುಗಳು ಹೆಚ್ಚು ನೆನೆದಂತೆ ಅದರಲ್ಲಿನ ಬಣ್ಣ ಸೇರಿದಂತೆ ರಾಸಾಯನಿಕ ಅಂಶಗಳು ನೀರಿನ ಮೇಲೆ ತೇಲುತ್ತಿರುತ್ತದೆ. ರಾಸಾಯನಿಕ ಅಂಶಗಳನ್ನು ಹೊರಗೆ ತೆಗೆದರೆ ಉತ್ತಮ ಗುಣಮಟ್ಟದ ಪಲ್ಕ್ (ರಾಸಾಯನಿಕ ರಹಿತ ರದ್ದಿಯ ಮಿಶ್ರಣ) ಪಡೆಯಬಹುದು.

ಬಳಿಕ ಮತ್ತೊಂದು ಬಾಕ್ಸ್ ಆಕಾರದ ಟ್ರೇನಲ್ಲಿ ನೀರನ್ನು ತುಂಬಿಸಬೇಕು. ಅದರಲ್ಲಿ ಒಂದು ಕಪ್‌ನಷ್ಟು ಪಲ್ಕ್ ಮಿಶ್ರಣವನ್ನು (ಒಂದು ಕಪ್ ಪಲ್ಕ್‌ನಿಂದ ಮೂರು ಎ-3 ಹಾಳೆಗಳನ್ನು ತಯಾರಿಸಬಹುದು) ನಿಗದಿತ ಪ್ರಮಾಣದಲ್ಲಿ ಹಾಕಿಕೊಂಡು ಎರಡು ನಿಮಿಷಗಳ ಕಾಲ ನೀರಿನಲ್ಲಿ ಮಿಶ್ರಣ ಮಾಡಬೇಕು. ಬಳಿಕ ಜರಡಿ ಬಳಸಿಕೊಂಡು ಸೂಕ್ಷ್ಮ ಗಾತ್ರದ ರದ್ದಿಯ ತುಂಡುಗಳನ್ನು ಹೊರತೆಗೆದು, ಮಸ್ಲಿನ್ ಬಟ್ಟೆಯ ಮೇಲೆ ಹರಡಲಾಗುತ್ತದೆ. ಅದರ ಮೇಲೊಂದು ಮಸ್ಲಿನ್ ಬಟ್ಟೆ ಹಾಕಿ ರದ್ದಿಯ ಸೂಕ್ಷ್ಮ ತುಂಡುಗಳಲ್ಲಿನ ನೀರಿನ ಅಂಶವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಬೇಕು. ನಂತರ ಅದನ್ನು ಯಂತ್ರ ಬಳಸಿಕೊಂಡು ಗಟ್ಟಿಗೊಳಿಸಲಾಗುತ್ತದೆ. ಇದನ್ನು ಕೆಲವು ಗಂಟೆಗಳ ಕಾಲ ಗಾಳಿಯಲ್ಲಿ ಆರಲು ಬಿಡಲಾಗುತ್ತದೆ. ಆನಂತರ ಇದನ್ನು ಪೆನ್, ಪೆನ್ಸಿಲ್ ಮತ್ತಿತರ ವಸ್ತುಗಳನ್ನು ತಯಾರಿಸಲು ಸಿದ್ಧಗೊಳ್ಳುತ್ತದೆ.

‘ಹೂಗಳಿಂದ ಅಗರಬತ್ತಿ’

 ದೇವಸ್ಥಾನಗಳಲ್ಲಿ ಪೂಜೆಯ ನಂತರ ಎಸೆಯಲಾಗುವ ಹೂಗಳನ್ನು ಸಂಗ್ರಹಿಸಿ, ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಬಳಿಕ ಸಣ್ಣಸಣ್ಣ ಎಸಳುಗಳನ್ನಾಗಿಸಿಕೊಂಡು ಪುಡಿ ಮಾಡುತ್ತೇವೆ. ಪುಡಿಗೆ ಸ್ವಲ್ಪ ನೀರು ಬೆರೆಸಿಕೊಂಡು ಕಡ್ಡಿಗಳ ಸಹಾಯದಿಂದ ಅಗರಬತ್ತಿ ತಯಾರಿಸಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಸಿಗುವ ಅಗರಬತ್ತಿಗಿಂತಲೂ ಸುವಾಸನೆಭರಿತವಾಗಿರುತ್ತದೆ. ಇದರಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ. ಆರೋಗ್ಯದ ಮೇಲೂ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ನಿತಿನ್ ವಾಸ್ ತಿಳಿಸಿದರು.

‘ಪೇಪರ್ ಸೀಡ್’ ಸಂಸ್ಥೆಯಲ್ಲಿ ತಯಾರಾಗುವ ವಸ್ತುಗಳು ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳಿಂದ ಬೇಡಿಕೆ ಬರುತ್ತಿದೆ. ರಾಸಾಯನಿಕ ಮುಕ್ತ ವಸ್ತುಗಳನ್ನು ತಯಾರಿಸುತ್ತೇವೆ.

- ನಿತಿನ್ ವಾಸ್,

‘ಪೇಪರ್ ಸೀಡ್’ ಸಂಸ್ಥಾಪಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)