varthabharthi


ವೈವಿಧ್ಯ

ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಯಾವಾಗ?

ವಾರ್ತಾ ಭಾರತಿ : 7 Aug, 2019
ಸದ್ದಾಂಹುಸೇನ್ ಬಿ. ಬಳಗಾನೂರ, ಗಣಿಹಾರ, ವಿಜಯಪುರ

ಬರಗಾಲದಿಂದ ತತ್ತರಿಸುವ ಹಾಗೂ ಕುಡಿಯುವ ನೀರಿಗೆ ಪರದಾಡುತ್ತಿರುವ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಯ ಜನರ ನೀರಿನ ದಾಹ ನೀಗಿಸಲು ಕೈಗೊಂಡ ಯೋಜನೆಯೇ ಕಳಸಾ ಬಂಡೂರಿ ನಾಲಾ ಯೋಜನೆ. 2000ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ್ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದ್ದರು.

ಕರ್ನಾಟಕ ಮತ್ತು ಗೋವಾ ನಡುವೆ ಮಹದಾಯಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ವಿವಾದ ಮುಂದುವರಿದಿದೆ. ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಕಳಸಾ-ಬಂಡೂರಿ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಳಸಾ ಮತ್ತು ಬಂಡೂರಿ ನಾಲೆ ನಿರ್ಮಿಸಿ ಉತ್ತರ ಕರ್ನಾಟಕದ ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರ ಜೊತೆ ಕಳಸಾ-ಬಂಡೂರಿ ಯೋಜನೆಯ ಬಗ್ಗೆ ಚರ್ಚೆ ನಡೆಸಿ ಇದಕ್ಕೊಂದು ಪರಿಹಾರ ಕೊಡಿಸಬಹುದು.
ಮಹದಾಯಿ ನದಿ ಕರ್ನಾಟಕದಲ್ಲೇ ಹುಟ್ಟಿದ್ದರೂ ನೀರನ್ನು ಬಳಸಿಕೊಳ್ಳದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇದಕ್ಕೆ ಪೂರಕವಾಗಿ ಮಹದಾಯಿ ನ್ಯಾಯಾಧೀಕರಣ ಕರ್ನಾಟಕದ ಮನವಿಯನ್ನು ತಿರಸ್ಕರಿಸಿದೆ. ಕಳಸಾ-ಬಂಡೂರಿ ಮಹದಾಯಿ ನದಿಯ ಉಪನದಿಗಳಾಗಿವೆ. ಮಹದಾಯಿ ನದಿ ರಾಜ್ಯದ ಬೆಳಗಾವಿಯ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡದ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಕರ್ನಾಟಕದಲ್ಲಿ 22 ಕೀ.ಮೀ., ಗೋವಾದಲ್ಲಿ 52 ಕೀ.ಮೀ. ಹರಿದು ಪಣಜಿಯ ಅರಬ್ಬೀ ಸಮುದ್ರ ಸೇರುತ್ತದೆ. ಮಹದಾಯಿ ಗೋವಾದ ಜೀವ ನದಿಯಾಗಿದ್ದು, ಇದಕ್ಕೆ ಗೋವಾದಲ್ಲಿ ಮಾಂಡೋವಿ ಎಂದು ಕರೆಯುತ್ತಾರೆ.
ಬರಗಾಲದಿಂದ ತತ್ತರಿಸುವ ಹಾಗೂ ಕುಡಿಯುವ ನೀರಿಗೆ ಪರದಾಡುತ್ತಿರುವ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಯ ಜನರ ನೀರಿನ ದಾಹ ನೀಗಿಸಲು ಕೈಗೊಂಡ ಯೋಜನೆಯೇ ಕಳಸಾ ಬಂಡೂರಿ ನಾಲಾ ಯೋಜನೆ. 2000ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ್ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದ್ದರು.
♦ ಯೋಜನೆಗೆ ಗೋವಾದ ವಿರೋಧವೇಕೆ?
ಮಹದಾಯಿ ನದಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶವಾಗಿದೆ. ಆದ್ದರಿಂದ ನೀರಿನ ಕೊರತೆ ಇರುವ ಕಣಿವೆಯಿಂದ ನೀರನ್ನು ಬೇರೆ ಕಡೆ ವರ್ಗಾಯಿಸುವುದು ಸರಿಯಲ್ಲ. ಇದರಿಂದ ಪಶ್ಚಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಉಂಟಾಗಿ, ನದಿ ಉಗಮ ಪ್ರದೇಶದ ಅರಣ್ಯ ನಾಶವಾಗಿ ನೀರಿನ ಹರಿವಿಗೆ ಕೊರತೆಯಾಗುತ್ತದೆ ಎಂಬುದು ಗೋವಾದ ವಾದವಾಗಿದೆ.
♦ ಅಧ್ಯಯನ ಮತ್ತು ಸಮೀಕ್ಷೆಗಳು ಹೇಳುವುದೇನು?
ಕರ್ನಾಟಕ ಸರಕಾರದ ಮನವಿ ಮೇರೆಗೆ ಕೇಂದ್ರದ ಸಲಹೆಯಂತೆ ಸಮೀಕ್ಷೆ ನಡೆದಿದ್ದು, ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದು ಹೇಳುತ್ತದೆ. ಅದರಂತೆ ರಾಷ್ಟ್ರೀಯ ನೀರಿನ ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಜಲ ಆಯೋಗಗಳು ಅಧ್ಯಯನ ನಡೆಸಿ ಗೋವಾದ ವಾದದಲ್ಲಿ ಹುರುಳಿಲ್ಲ ಎಂಬುದನ್ನು ತಿಳಿಸಿವೆ. ಆದರೆ ಗೋವಾ ಸರಕಾರ ಮಾತ್ರ ಈ ವರದಿಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ.
♦ ಯೋಜನೆಗೆ ಕೇಂದ್ರದ ಒಪ್ಪಿಗೆ ಹಾಗೂ ತಡೆ
ಕರ್ನಾಟಕ ಸರಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ 2002ರಲ್ಲಿ ಕಳಸಾ ಬಂಡೂರಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತು. ನಂತರ ಐದು ತಿಂಗಳಲ್ಲೇ ಗೋವಾ ಸರಕಾರದ ಹಠಮಾರಿತನ, ವಿರೋಧಗಳಿಗೆ ಬಗ್ಗಿ ಕೇಂದ್ರ ಜಲ ಆಯೋಗ ತಾನೇ ನೀಡಿದ ಒಪ್ಪಿಗೆಗೆ ತಡೆ ನೀಡಿತು.
♦ ನ್ಯಾಯಾಧೀಕರಣ ನೇಮಕ
2002ರ ಜುಲೈ ತಿಂಗಳಿನಲ್ಲಿ ಗೋವಾ ಸರಕಾರ ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ನ್ಯಾಯಾಧೀಕರಣ ರಚಿಸುವಂತೆ ಪತ್ರ ಬರೆಯಿತು. 2006ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಕಳಸಾ ಬಂಡೂರಿ ಕಾಮಗಾರಿ ಹಾಗೂ ನ್ಯಾಯಾಧೀಕರಣ ನೇಮಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕೆಂದು ವಿನಂತಿಸಿಕೊಂಡಿತ್ತು.
♦ಕನ್ನಡಿಗರು ಗಮನಿಸಬೇಕಾದದ್ದು ಏನು?
2006ರ ನವೆಂಬರ್‌ನಲ್ಲಿ ಕೇಂದ್ರ ನೀರಾವರಿ ಮಂತ್ರಾಲಯವು ಕರ್ನಾಟಕ ಸರಕಾರವನ್ನು ಸಂಪರ್ಕಿಸಿ ‘‘ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಅಸಾಧ್ಯ’’ ಎಂಬ ಅಭಿಪ್ರಾಯಕ್ಕೆ ಬಂದಿದೆ. ಆದ್ದರಿಂದ ಮುಂದಿನ ಕ್ರಮವನ್ನು 1956ರ ಅಂತರ್ ರಾಜ್ಯ ಜಲವಿವಾದ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿತು. ಕೇಂದ್ರ ಸರಕಾರ 2010ರ ನವೆಂಬರ್ 16ರಂದು ಮಹದಾಯಿ ಜಲವಿವಾದ ನ್ಯಾಯಾಧೀಕರಣ ರಚಿಸಿತು. ಹೀಗಾಗಿ ಕಳಸಾ ಬಂಡೂರಿ ಯೋಜನೆ ಈ ನ್ಯಾಯಾಧೀಕರಣದ ಅಂಗಳದಲ್ಲಿದೆ.
♦ ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು
2016ರ ಜುಲೈ 27ರಂದು ಮಹದಾಯಿ ನದಿಯಿಂದ 7 ಟಿಎಂಸಿ ನೀರನ್ನು ಏತನೀರಾವರಿ ಮೂಲಕ ಮಲಪ್ರಭ ನದಿಗೆ ಹರಿಸುವಂತೆ ಕರ್ನಾಟಕ ಮಧ್ಯಂತರ ಅರ್ಜಿಯನ್ನು ನ್ಯಾ. ಜೆ.ಎಂ. ಪಾಂಚಾಲ್ ತ್ರಿಸದಸ್ಯ ನ್ಯಾಯಾಧೀಕರಣ ಆಗ ಆ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ ಎಂಬ ಕಾರಣದಿಂದ ನೀಡಿದರು. ಮತ್ತೆ ಬೇಡಿಕೆಯಲ್ಲಿ ಹಲವು ದೋಷಗಳಿವೆ ಎಂದು ಅರ್ಜಿಯನ್ನು ವಜಾಗೊಳಿಸಲಾಯಿತು.
♦ಹೋರಾಟದ ರೂಪುರೇಷೆ ಏನು?
ಕುಡಿಯುವ ನೀರಿನ ಈ ನ್ಯಾಯಯುತ ಯೋಜನೆಯ ವಿವಾದಕ್ಕಿರುವ ಪರಿಹಾರ ಮಾರ್ಗಗಳೆಂದರೆ....
1) ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಹಾಗೂ ಗೋವಾದ ಮುಖ್ಯಮಂತ್ರಿಗಳನ್ನು ಕರೆದು ವಿವಾದ ಪರಿಹರಿಸುವ ಕಾರ್ಯ ಮಾಡಬೇಕು.
2) ಕರ್ನಾಟಕ ಸರಕಾರ ಮಹದಾಯಿ ಮಧ್ಯಂತರ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕು. ತನ್ನ ದಾಖಲೆಗಳನ್ನು ಸಲ್ಲಿಸಿ ತನ್ನ ಪರವಾಗಿ ತೀರ್ಪು ಬರುವಂತೆ ಮೊರೆ ಹೋಗುವುದು.
3) ರಾಜ್ಯ ಸರಕಾರ ನ್ಯಾಯಾಧೀಕರಣದ ಅಂತಿಮ ತೀರ್ಪು ಕರ್ನಾಟಕದ ಪರವಾಗಿ ಬರುವಂತೆ ಸಿದ್ಧತೆ ಮಾಡಿಕೊಳ್ಳಬೇಕು. ತನ್ನ ವಾದ ಮಂಡಿಸಿ ಉತ್ತರ ಕರ್ನಾಟಕದ ಜನರ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನ ಸಾಕಾರಗೊಳಿಸುವುದು.
ಇವೆಲ್ಲವುಗಳು ಸಾಕಾರಗೊಂಡಾಗ ಮಾತ್ರ ಉತ್ತರ ಕರ್ನಾಟಕದ ಕನಸು ನನಸಾಗಲಿದೆ. ಇದರ ಜೊತೆಗೆ ಜನರ ನೀರಿನ ಸಮಸ್ಯೆ ದೂರಾಗಬಹುದು. ತಕ್ಷಣ ಸಂಬಂಧ ಪಟ್ಟ ಆಯೋಗ ಇದಕ್ಕೊಂದು ಪರಿಹಾರ ಕಂಡುಕೊಂಡು ಸಮಸ್ಯೆಗಳನ್ನು ಆದಷ್ಟು ಬೇಗ ದೂರ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಎರಡನೇ ಭಾರಿ ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿತ್ತು. ಆದರೆ ಈಗ ಕರ್ನಾಟಕ ಮತ್ತು ಗೋವಾ ರಾಜ್ಯ ಹಾಗೂ ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರ ನಡೆಸುತ್ತಿದೆ. ಆದ್ದರಿಂದ ತಕ್ಷಣ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದತ್ತ ಸರಕಾರಗಳು ಗಮನ ಹರಿಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)