varthabharthi


ವಿಶೇಷ-ವರದಿಗಳು

ಎಸ್.ವೈ.ಕುರೇಷಿ, ಮಾಜಿ ಮುಖ್ಯ ಚುನಾವಣಾ ಆಯುಕ್ತರು

ನನಗೆ ನೀಡಿದ್ದ ಭರವಸೆಯನ್ನು ಈಡೇರಿಸದೆಯೇ ಹೊರಟು ಬಿಟ್ಟಿರಲ್ಲಾ ಸುಷ್ಮಾಜಿ...

ವಾರ್ತಾ ಭಾರತಿ : 7 Aug, 2019

ಸುಷ್ಮಾ ಸ್ವರಾಜ್ ಅವರು ಸಾಧಾರಣ ನಾಯಕಿಯಾಗಿರಲಿಲ್ಲ, ಪ್ರಕೃತಿಯು ಅವರಿಗೆ ಹಲವಾರು ಉಡುಗೊರೆಗಳನ್ನು ನೀಡಿತ್ತು. ಹಸನ್ಮುಖಿ ವ್ಯಕ್ತಿತ್ವ,ಒಳ್ಳೆಯ ಮನಸ್ಸು ಮತ್ತು ಮಾನವೀಯ ಗುಣವನ್ನು ಹೊಂದಿದ್ದ ಅವರು ತನ್ನೊಂದಿಗೆ ಸಂಭಾಷಿಸುವವರ ಮಾತುಗಳನ್ನು ಗೌರವಪೂರ್ವಕವಾಗಿ,ಅತ್ಯಂತ ಗಮನವಿಟ್ಟು ಆಲಿಸುತ್ತಿದ್ದರು.

1977ರಲ್ಲಿ ತನ್ನ 25ನೇ ವರ್ಷ ಪ್ರಾಯದಲ್ಲಿಯೇ ಹರ್ಯಾಣದ ಸಂಸ್ಕೃತಿ ಸಚಿವರಾಗಿ ನೇಮಕಗೊಂಡ ಸ್ವರಾಜ್ ಭಾರತದಲ್ಲಿ ಸಚಿವ ಹುದ್ದೆಗೇರಿದ ಅತ್ಯಂತ ಕಿರಿಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಗ ನಾನು ಸಂಸ್ಕೃತಿ ನಿರ್ದೇಶಕ ಹುದ್ದೆಯಲ್ಲಿದ್ದೆ ಮತ್ತು ಅವರ ಸಂಪರ್ಕ ಹೊಂದುವ ಅದೃಷ್ಟ ನನ್ನದಾಗಿತ್ತು.

 ಸಚಿವೆಯಾದ ಆರಂಭದ ಕೆಲವು ದಿನಗಳ ಕಾಲ ಅವರು ಅನನುಭವಿ ಮತ್ತು ಭೋಳೆ ಸ್ವಭಾವದವರಾಗಿ ಕಂಡು ಬಂದಿದ್ದರೂ ಕೆಲವೇ ಸಮಯದಲ್ಲಿ ಸಚಿವಾಲಯ ನಿರ್ವಹಣೆಗೆ ಅಗತ್ಯವಾದ ಎಲ್ಲ ಪಟ್ಟುಗಳನ್ನು ಕಲಿತುಕೊಂಡು ತುಂಬ ಅನುಭವಿಗಳನ್ನೂ ಮೀರಿಸಿದ್ದರು. ನಾನು ವಯಸ್ಸಿನಲ್ಲಿ ಅವರಿಗಿಂತ ಆರು ವರ್ಷ ಹಿರಿಯನಾಗಿದ್ದರೂ ನನ್ನನ್ನು ಯಾಕೂಬ್ ಎಂಬ ನನ್ನ ಮೊದಲ ಹೆಸರಿನಿಂದಲೇ ಸಂಬೋಧಿಸುತ್ತಿದ್ದರು. ನಾನು ಆಗಷ್ಟೇ ಮದುವೆಯಾಗಿದ್ದೆ ಮತ್ತು ನನ್ನ ಪತ್ನಿ ಪತ್ರಕರ್ತೆಯಾಗುವ ದಾರಿಯಲ್ಲಿ ಮೊದಲ ಹೆಜ್ಜೆಗಳನ್ನು ಇಡತೊಡಗಿದ್ದಳು. ಸಂಡೇ ಮ್ಯಾಗಝಿನ್‌ನ ಕೊನೆಯ ಪುಟಕ್ಕಾಗಿ ಸ್ವರಾಜ್ ನನ್ನ ಪತ್ನಿಗೆ ಸಂದರ್ಶನವೊಂದನ್ನು ನೀಡಿದ್ದರು ಮತ್ತು ಅದು ಇಬ್ಬರಿಗೂ ಪ್ರಥಮವಾಗಿತ್ತು. ಅಂದ ಹಾಗೆ ಅವರು ನನ್ನ ಪತ್ನಿಯನ್ನೂ ಮೊದಲ ಹೆಸರಿನಿಂದಲೇ ಕರೆಯುತ್ತಿದ್ದರು.

 ಕಾಲ ಕ್ರಮೇಣ ನಾವಿಬ್ಬರೂ ಬೇರೆ ಬೇರೆ ಇಲಾಖೆಗಳಿಗೆ ತೆರಳಿದ್ದೆವು,ಆದರೆ ನಮ್ಮಿಬ್ಬರ ನಡುವಿನ ನಂಟು ದೃಢವಾಗಿಯೇ ಉಳಿದುಕೊಂಡಿತ್ತು. ಎರಡು ದಶಕಗಳ ಬಳಿಕ ಸ್ವರಾಜ್ ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವೆಯಾಗಿದ್ದಾಗ ನಾನು ಹರ್ಯಾಣದ ಮುಖ್ಯಮಂತ್ರಿ ಓಂ ಪ್ರಕಾಶ ಚೌತಾಲಾ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಅದೊಂದು ದಿನ ನನಗೆ ಕರೆ ಮಾಡಿದ್ದ ಸ್ವರಾಜ್ ದೂರದರ್ಶನದ ಮಹಾ ನಿರ್ದೇಶಕ ಹುದ್ದೆಯ ಕೊಡುಗೆಯನ್ನು ನನ್ನ ಮುಂದಿಟ್ಟಿದ್ದರು. ‘ರಾಜ್ಯದ ಅತ್ಯಂತ ಪ್ರಭಾವಿ ಹುದ್ದೆಯೆಂದು ಪರಿಗಣಿಸಲಾಗಿದ್ದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ನಾನು ಚೌತಾಲಾರನ್ನು ಕೋರಿಕೊಂಡರೆ ಅದು ಕೃತಘ್ನತೆಯಾಗಬಹುದು,ಹೀಗಾಗಿ ನೀವೇ ಈ ವಿಷಯವನ್ನು ಚೌತಾಲಾರ ಬಳಿ ಪ್ರಸ್ತಾಪಿಸಿ. ಅವರು ಒಪ್ಪಿಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಅವರು ನನ್ನ ಬಗ್ಗೆ ಸಿಟ್ಟಾಗುವ ಪ್ರಮೇಯವಿರುವುದಿಲ್ಲ ’ಎಂದು ನಾನು ಸ್ವರಾಜ್ ಅವರಿಗೆ ಸೂಚಿಸಿದ್ದೆ.

 ಹರ್ಯಾಣದಲ್ಲಿ ಬಿಜೆಪಿಯೊಂದಿಗೆ ಚೌತಾಲಾರ ಪಕ್ಷದ ಮೈತ್ರಿಯನ್ನು ತಾನು ವಿರೋಧಿಸಿದ್ದೆ, ಹೀಗಾಗಿ ತಾನು ಅವರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ ಎಂಬ ಕಾರಣದಿಂದ ಸ್ವರಾಜ್ ನನ್ನ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ ನಾನು ಓಲೈಸಿದ ಬಳಿಕ ಒಪ್ಪಿಕೊಂಡ ಅವರು ಚೌತಾಲಾರಿಗೆ ದೂರವಾಣಿ ಕರೆಯನ್ನು ಮಾಡಿ ತನ್ನ ಸಚಿವಾಲಯದಲ್ಲಿಯ ಆಕಾಶವಾಣಿ ಮತ್ತು ದೂರದರ್ಶನದ ಎರಡು ಮಹಾ ನಿರ್ದೇಶಕರ ಹುದ್ದೆಗಳಿಗೆ ಹರ್ಯಾಣದ ಅಧಿಕಾರಿಗಳನ್ನು ನೇಮಕಗೊಳಿಸಲು ತಾನು ಬಯಸಿರುವುದಾಗಿ ತಿಳಿಸಿದ್ದರು. ಈ ಸಂದರ್ಭ ನಾನು ಮುಖ್ಯಮಂತ್ರಿಗಳೊಂದಿಗೆ ಕುಳಿತಿದ್ದೆ. ಆರಂಭದಲ್ಲಿ ‘ಹೇಳಿ ಬೆಹನ್‌ಜಿ,ನಿಮಗೆ ಯಾವ ಅಧಿಕಾರಿ ಬೇಕೋ ಅವರನ್ನು ನಾನು ಕಳುಹಿಸುತ್ತೇನೆ ’ಎಂದು ಹೇಳಿದ್ದ ಚೌತಾಲಾ ಸ್ವರಾಜ್ ಅವರು ನನ್ನ ಹೆಸರನ್ನು ಉಲ್ಲೇಖಿಸಿದ ತಕ್ಷಣ ಕೆಂಡಾಮಂಡಲಗೊಂಡು ಖಂಡಿಸತೊಡಗಿದ್ದರು. ಅವರ ಬಾಯಿಯಿಂದ ಉದುರಿದ್ದ ಶಬ್ದಗಳನ್ನು ಉಚ್ಚರಿಸಲೂ ನನಗೆ ಸಾಧ್ಯವಿಲ್ಲ. ಅದನ್ನು ನಾನು ‘ನೀವು ನನ್ನನ್ನು ಹಾಳು ಮಾಡಲು ಬಯಸಿದ್ದೀರಾ ’ಎಂದು ಚೌತಾಲಾ ಪ್ರಶ್ನಿಸಿದ್ದರು ಎಂದು ಸೌಮ್ಯಶಬ್ದಗಳಲ್ಲಿ ಹೇಳಬಹುದು.

ಕೆಲ ದಿನಗಳ ಬಳಿಕ ಸ್ವರಾಜ್ ನನಗೆ ಕರೆ ಮಾಡಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕೆಲವೇ ದಿನಗಳು ಉಳಿದಿವೆ,ನೀವೇ ಏನಾದರೂ ಮಾಡಿ ಬರಲು ಸಾಧ್ಯವೇ ಎಂದು ನೋಡಿ ಎಂದು ಹೇಳಿದ್ದರು. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿಯ ಕೆಲವು ಸಹೋದ್ಯೋಗಿಗಳ ನೆರವಿನಿಂದ ನಾನು ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ತೊರೆದು ದಿಲ್ಲಿಗೆ ಹೋಗಲು ಸಾಧ್ಯವಾಗಿತ್ತು. ಅಂದ ಹಾಗೆ ಆ ಸಹೋದ್ಯೋಗಿಗಳಿಗೆ ಮೊದಲಿನಿಂದಲೂ ನನ್ನ ಬಗ್ಗೆ ಅಸೂಯೆಯಿತ್ತು, ಹೀಗಾಗಿ ನಾನು ನಿರ್ಗಮಿಸಲಿದ್ದೇನೆ ಎಂಬ ಯೋಚನೆಯಿಂದಲೇ ಅವರು ಪುಳಕಿತರಾಗಿದ್ದರು!

 ಅತ್ಯಂತ ಸೂಕ್ಷ್ಮವಾದ ಹುದ್ದೆಗೆ ಮುಸ್ಲಿಂ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಕ್ಕೆ ಸ್ವರಾಜ್ ತನ್ನ ಪಕ್ಷದ ನಾಯಕರಿಂದ,ವಿಶೇಷವಾಗಿ ನನ್ನ ಪತ್ರಕರ್ತೆ ಪತ್ನಿ ಬಿಜೆಪಿಯ ಕಟು ಟೀಕಾಕಾರಳು ಎನ್ನುವುದು ಗೊತ್ತಿದ್ದವರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆದರೆ ಅವರು ಬಂಡೆಗಲ್ಲಿನಂತೆ ದೃಢವಾಗಿ ನಿಂತು ನನ್ನನ್ನು ಸಮರ್ಥಿಸಿಕೊಂಡಿದ್ದು ನನ್ನ ಪಾಲಿಗೆ ಅತ್ಯಂತ ಹೃದಯಸ್ಪರ್ಶಿಯಾಗಿತ್ತು. ಅವರು ಇಂತಹ ಸಂವಾದಗಳೆಲ್ಲವನ್ನೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು.

 ವಾರಕ್ಕೊಮ್ಮೆ ಎರಡು ಗಂಟೆ ಕಾಲ ಭೇಟಿಯು ನಾವಿಬ್ಬರು ಮಾಡಿಕೊಂಡಿದ್ದ ವ್ಯವಸ್ಥೆಯಾಗಿತ್ತು. ಇಂತಹ ಭೇಟಿಗಳಲ್ಲಿ ನಾನು ಒಂದೂವರೆ ಗಂಟೆ ಮಾತನಾಡಿದರೆ ಅವರ ಮಾತುಗಳು ಹತ್ತು ನಿಮಿಷಗಳನ್ನು ಮೀರುತ್ತಿರಲಿಲ್ಲ. ಅವರು ಎಷ್ಟೊಂದು ಬುದ್ಧಿವಂತ ಕೇಳುಗರಾಗಿದ್ದಾರೆ ಎನ್ನುವುದು ನನಗೆ ಆಗಲೇ ಗೊತ್ತಾಗಿದ್ದು. ಪ್ರತಿಯೊಂದೂ ಶಬ್ದವನ್ನೂ ಗಮನವಿಟ್ಟು ಆಲಿಸುತ್ತಿದ್ದ ಅವರು ಅವೆಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು ಮತ್ತು ನಾನು ಹೇಳಿದ್ದು ಕೆಲವೊಮ್ಮೆ ನನಗೇ ತಿರುಗುಬಾಣವಾಗುತ್ತಿತ್ತು. ಅದೊಂದು ದಿನ ನಾನು ಕೆಲವು ಅಂಕಿಅಂಶಗಳನ್ನು ಅವರಿಗೆ ತಿಳಿಸಿದ್ದೆ, ತಕ್ಷಣವೇ,‘ಯಾಕೂಬ್,ನೀವು ಆರು ತಿಂಗಳುಗಳ ಹಿಂದೆ ನನಗೆ ಬೇರೆಯೇ ಅಂಕಿಅಂಶಗಳನ್ನು ನೀಡಿದ್ದೀರಲ್ಲ’ಎಂದು ಅವರು ಪ್ರಶ್ನಿಸಿದಾಗ ನಾನು ಕಕ್ಕಾಬಿಕ್ಕಿಯಾಗಿದ್ದೆ. ಸ್ವರಾಜ್ ಜೊತೆ ಮಾತನಾಡುವಾಗ ಅತ್ಯಂತ ಎಚ್ಚರಿಕೆ ಬೇಕು ಎಂದು ನಾನಂದು ತಿಳಿದುಕೊಂಡಿದ್ದೆ. ಬಹುಶಃ ಇನ್ನೊಬ್ಬರ ಮಾತುಗಳನ್ನು ಶ್ರದ್ಧೆಯಿಂದ ಆಲಿಸುವ ಅವರ ಈ ಗುಣವೇ ಅವರನ್ನು ಒಳ್ಳೆಯ ವಾಗ್ಮಿಯನ್ನಾಗಿಸಿತ್ತು ಮತ್ತು ಅವರ ವಿಶಾಲ ಜ್ಞಾನಕ್ಕೆ ಕಾರಣವಾಗಿತ್ತು.

ಕಾಲಕ್ರಮೇಣ ಸ್ವರಾಜ್ ಅವರನ್ನು ದಿಢೀರ್ ಆಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಆರೋಗ್ಯ ಸಚಿವಾಲಯಕ್ಕೆ ವರ್ಗಾಯಿಸಲಾಗಿತ್ತು. ಅಧಿಕಾರ ವಹಿಸಿಕೊಂಡ ಎರಡನೇ ದಿನವೇ ಅವರಿಗೆ ಲೋಕಸಭೆಯಲ್ಲಿ ಚುಕ್ಕಿ ಗುರುತಿನ ಪ್ರಶ್ನೆಗಳು ಎದುರಾಗಿದ್ದವು. ಅವುಗಳನ್ನು ಅವರು ಎದುರಿಸಿದ್ದ ರೀತಿಯು ಅವರ ಟೀಕಾಕಾರರು ಸೇರಿದಂತೆ ಪ್ರತಿಯೊಬ್ಬರಿಗೂ ಅಚ್ಚರಿಯನ್ನುಂಟು ಮಾಡಿತ್ತು.

ನಾನು ಸ್ವರಾಜ್ ಅವರ ಶಿಷ್ಯ ಎಂದೇ ಪರಿಗಣಿಸಲ್ಪಟ್ಟಿದ್ದರಿಂದ ನನ್ನನ್ನೂ ಶೀಘ್ರವೇ ದೂರದರ್ಶನದಿಂದ ಎತ್ತಂಗಡಿ ಮಾಡಲಾಗಿತ್ತು. ನನ್ನ ವರ್ಗಾವಣೆಗೆ ಕೋಮು ಬಣ್ಣ ನೀಡಲು ಹಲವರು ಪ್ರಯತ್ನಿಸಿದ್ದರು,ಆದರೆ ಸ್ವರಾಜ್ ಅವರೊಂದಿಗಿನ ಸಾಮೀಪ್ಯ ಇದಕ್ಕೆ ಕಾರಣ ಎನ್ನುವುದು ನನಗೆ ಯಾವಾಗಲೂ ಸ್ಪಷ್ಟವಿತ್ತು.

ದೂರದರ್ಶನದಲ್ಲಿದ್ದಾಗ ನಾನು ಡಿಡಿ ಆರ್ಕೈವ್ಸ್,ಡಿಡಿ ಇಂಡಿಯಾ ಸ್ಥಾಪಿಸಲು ಸ್ವರಾಜ್ ಅವರೇ ನನಗೆ ಉತ್ತೇಜಕ ಶಕ್ತಿಯಾಗಿದ್ದರು. ಅದುವರೆಗೂ ಪಾವತಿ ಚಾನೆಲ್ ಆಗಿದ್ದ ಡಿಡಿ ಸ್ಪೋರ್ಟ್ಸ್‌ನ್ನು ನಾನು ಉಚಿತ ಚಾನೆಲ್ ಆಗಿ ಪರಿವರ್ತಿಸಿದಾಗ ವಾರ್ಷಿಕ 20 ಕೋ.ರೂ.ನಷ್ಟವಾಗುತ್ತಿದ್ದರೂ ಸ್ವರಾಜ್ ನನ್ನನ್ನು ಬೆಂಬಲಿಸಿದ್ದರು. ಅವರು ಸಚಿವಾಲಯಿಂದ ನಿರ್ಗಮಿಸಿದ ಬಳಿಕ ನಾನು ಅಂತಿಮವಾಗಿ ವರ್ಗಾವಣೆಗೊಳ್ಳುವವರೆಗೆ ನನ್ನ ಪಾಲಿಗೆ ಅತ್ಯಂತ ಕಠಿಣ ಸಮಯವಾಗಿತ್ತು.

ಒಂದು ಘಟನೆ ನನ್ನ ನೆನಪಿನಲ್ಲಿ ಅಚ್ಚೊತ್ತಿಬಿಟ್ಟಿದೆ. ನನ್ನ ಮಗಳ ಮದುವೆ ಸಂದರ್ಭದಲ್ಲಿ ಸ್ವರಾಜ್ ಅವರು ಅಮೆರಿಕಕ್ಕೆ ಅಧಿಕೃತ ಭೇಟಿಯನ್ನು ಹಮ್ಮಿಕೊಂಡಿದ್ದರು. ತನ್ನ ಆಪ್ತ ಕಾರ್ಯದರ್ಶಿ ಅಂಶು ಪ್ರಕಾಶ್ ನನ್ನ ಮಗಳ ಮದುವೆಯ ಬಗ್ಗೆ ನೆನಪಿಸಿದಾಗ ತಕ್ಷಣವೇ ಸ್ವರಾಜ್ ತನ್ನ ಅಮೆರಿಕ ಭೇಟಿಯನ್ನು ರದ್ದುಗೊಳಿಸಿದ್ದರು. ಆ ವೇಳೆಗಾಗಲೇ ಸ್ವರಾಜ್ ಬಗ್ಗೆ ಪ್ರತಿಕೂಲ ಭಾವನೆಗಳನ್ನು ಬೆಳೆಸಿಕೊಂಡಿದ್ದ ನನ್ನ ಪತ್ನಿ ನಾನು ಮಗಳ ಮದುವೆಗೆ ಯಾವುದೇ ರಾಜಕಾರಣಿಯನ್ನು ಆಹ್ವಾನಿಸಕೂಡದು ಎಂಬ ಷರತ್ತು ಹಾಕಿದ್ದಳು.

  ನಾನು ಧರ್ಮಸಂಕಟದಲ್ಲಿದ್ದೆ. ಸ್ವರಾಜ್ ನನ್ನ ಮಗಳಿಗೆ ಆಶೀರ್ವದಿಸಲು ನನ್ನ ಆಹ್ವಾನಕ್ಕಾಗಿ ಕಾಯುತ್ತಿದ್ದರು. ಅಂತಿಮವಾಗಿ ಆಹ್ವಾನ ಪತ್ರಿಕೆಯೊಂದಿಗೆ ಅವರನ್ನು ಭೇಟಿಯಾದ ನಾನು ಮದುವೆಗೆ ಬರದಿರುವಂತೆ ಕೋರಿಕೊಂಡಿದ್ದೆ. ಒಂದು ಕ್ಷಣ ಅವರು ದಿಗ್ಭ್ರಾಂತರಾಗಿದ್ದರು. ಆದರೆ ಕೆಲವೇ ಸೆಕೆಂಡ್‌ಗಳಲ್ಲಿ ಚೇತರಿಸಿಕೊಂಡ ಅವರು ಮಗಳ ಮದುವೆಯನ್ನು ಸರಳವಾಗಿ ನಡೆಸುತ್ತಿರುವುದಕ್ಕಾಗಿ ನನ್ನನ್ನು ಹೀರೊವನ್ನಾಗಿ ಮಾಡಿದ್ದರು. ನನಗೆ ಸಮಾಧಾನವನ್ನುಂಟು ಮಾಡಲು ಕೇವಲ ಏಳು ಅಥಿತಿಗಳು ಉಪಸ್ಥಿತರಿದ್ದ ತನ್ನ ಕುಟುಂಬದಲ್ಲಿಯ ಮದುವೆಯೊಂದನ್ನು ಉಲ್ಲೇಖಿಸಿದ್ದರು.

ಚುನಾವಣಾ ಆಯೋಗದಲ್ಲಿ ನನ್ನ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಕೆಲವು ಸ್ಪಷ್ಟನೆಗಳನ್ನು ಕೋರಿಕೊಂಡು ಕೇವಲ ಎರಡು ಬಾರಿ ಸ್ವರಾಜ್ ನನ್ನನ್ನು ಭೇಟಿಯಾಗಿದ್ದರು. ಆದರೆ ನನ್ನೊಂದಿಗೆ ಅವರ ನಿಕಟತೆಯ ಬಗ್ಗೆ ತನ್ನ ಪಕ್ಷದವರಿಗೆ ಗೊತ್ತಿದ್ದರೂ ಅವರು ಪಕ್ಷದ ಪರವಾಗಿ ಯಾವುದೇ ಕೆಲಸವನ್ನು ನನ್ನಿಂದ ಮಾಡಿಸಿಕೊಂಡಿರಲಿಲ್ಲ.

ಕೇಂದ್ರದಲ್ಲಿ ಮೋದಿ 2.0 ಸರಕಾರ ರಚನೆಯಾದ ಬಳಿಕ ಜೂ.13ರಂದು ನಾನು ಕೊನೆಯ ಬಾರಿ ಸ್ವರಾಜ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿದೆ ಎಂದು ಬಹಳಷ್ಟು ವದಂತಿಗಳಿದ್ದರೂ ಅವರು ಅತ್ಯಂತ ಆರಾಮವಾಗಿ,ನೆಮ್ಮದಿಯಿಂದ ಇದ್ದರು. ಅವರ ಮುಖದಲ್ಲಿ ಅಪರೂಪದ ಹೊಳಪು ಇತ್ತು. ನಾನು ಅವರ ಆರೋಗ್ಯದ ಬಗ್ಗೆ ಮತ್ತು ಅವರು ಚುನಾವಣಾ ರಾಜಕೀಯದಿಂದ ದೂರವಿದ್ದುದರ ಕುರಿತು ಪ್ರಶ್ನಿಸಿದ್ದೆ. ಮೂತ್ರಪಿಂಡ ಕಸಿ ಮಾಡಿಸಿಕೊಂಡ ಬಳಿಕ ಧೂಳು ಮತ್ತು ದೈಹಿಕವಾಗಿ ಮಾನವ ಸಂಪರ್ಕದಿಂದ ಕಟ್ಟುನಿಟ್ಟಾಗಿ ದೂರವಿರುವಂತೆ ವೈದ್ಯರು ತನಗೆ ಸೂಚಿಸಿದ್ದಾರೆ ಎಂದು ಸ್ವರಾಜ್ ನನಗೆ ತಿಳಿಸಿದ್ದರು. ತನ್ನ ಲೋಕಸಭಾ ಕ್ಷೇತ್ರವಾಗಿದ್ದ ವಿದಿಶಾದಲ್ಲಿ ಧೂಳಿನಿಂದ ಪಾರಾಗಲು ಸಾಧ್ಯವೇ ಇಲ್ಲ,ಇದೇ ರೀತಿ ಸಂಸದೆಯಾಗಿ ಕ್ಷೇತ್ರದ ಜನರಿಂದ ದೂರವಿರುವುದೂ ತನಗೆ ಅಸಾಧ್ಯ ಎಂದೂ ಅವರು ಹೇಳಿದ್ದರು. ಸ್ವರಾಜ್ ಅವರೀಗ ಒಳ್ಳೆಯ ಆರೋಗ್ಯದಿಂದಿದ್ದಾರೆ ಎಂಬ ಸಮಾಧಾನದೊಂದಿಗೆ ನಾನು ಅಲ್ಲಿಂದ ಮರಳಿದ್ದೆ.

ನಾಲ್ಕು ದಶಕಗಳ ಅವರೊಂದಿಗಿನ ಒಡನಾಟದಲ್ಲಿ ನಾನು ಯಾವಾಗಲೂ ಲಘುದಾಟಿಯಲ್ಲಿ ಅವರು ನನಗೆ ನೀಡಿದ್ದ ಭರವಸೆಯನ್ನು ನೆನಪಿಸುತ್ತಿದ್ದೆ. ತಾನೇನಾದರೂ ಪ್ರಧಾನಿಯಾದರೆ ನನ್ನನ್ನೇ ತನ್ನ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿಕೊಳ್ಳುವುದಾಗಿ ಅದೊಮ್ಮೆ ಒಳ್ಳೇ ಮೂಡ್‌ನಲ್ಲಿದ್ದಾಗ ಅವರು ಭರವಸೆ ನೀಡಿದ್ದರು.

ಸುಶ್ಮಾ ಮೇಡಂ,ನೀವು ನಿಮ್ಮ ಭರವಸೆಯನ್ನು ಈಡೇರಿಸದೇ ಹೋಗಿಬಿಟ್ಟಿರಿ. ನೀವು ಸದಾ ಕಾಲ ನನ್ನ ಹೃದಯದಲ್ಲಿರುತ್ತೀರಿ. ನೀವು ಎಲ್ಲೇ ಇರಿ,ಶಾಂತಿಯಲ್ಲಿರಿ...

ಕೃಪೆ: www.dailyo.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)