varthabharthi

ನಿಮ್ಮ ಅಂಕಣ

ಟಿಪ್ಪುಜಯಂತಿ ರದ್ದಾದ ಮಾತ್ರಕ್ಕೆ ಅಭಿಮಾನ ರದ್ದಾಗುವುದೇ?

ವಾರ್ತಾ ಭಾರತಿ : 7 Aug, 2019
- ಕೆ.ಎನ್. ಅಕ್ರಂಪಾಷ, ಚಿಂತಾಮಣಿ

ಮಾನ್ಯರೇ,

ಇತಿಹಾಸ ಮರೆಯಲಾರದ ಛಲದಂಕ ಮಲ್ಲ, ರೈತರ ಆಶಾಕಿರಣ, ದೀನ ದಲಿತರ ಬೆನ್ನೆಲುಬಾಗಿದ್ದ ಸರ್ವಧರ್ಮ ಪ್ರೇಮಿ ಮೈಸೂರು ಹುಲಿ ಟಿಪ್ಪು ಸುಲ್ತಾನರ ಜಯಂತಿಯನ್ನು ಇತ್ತೀಚೆಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸರಕಾರವು ರದ್ದುಗೊಳಿಸಿರುವುದು ನಿಜಕ್ಕೂ ವಿಷಾದನೀಯವಾಗಿದೆ. ಜಯಂತಿಯನ್ನು ರದ್ದು ಮಾಡುವ ಅಧಿಕಾರ ಸರಕಾರಗಳಿಗಿರಬಹುದು, ಆದರೆ ಜನರ ಮನಸ್ಸಿನಲ್ಲಿ ನೆಲೆಯೂರಿರುವ ಮೈಸೂರಿನ ಹುಲಿ ಟಿಪ್ಪುವಿನ ಅಚ್ಚಳಿಯದೆ ಮುದ್ರಿತವಾಗಿರುವ ಅಭಿಮಾನವನ್ನು ಅಳಿಸುವ ಅಧಿಕಾರ ಸರಕಾರಗಳಿಗೆ ಇದೆಯೇ?.

ನಮ್ಮ ರಾಜ್ಯದಲ್ಲಿ ಅನೇಕ ಮಹನೀಯರ ಜಯಂತಿಗಳನ್ನು ಜಾತಿ ಭೇದ ತೋರದೆ ಆಚರಿಸುತ್ತಾ ಬಂದಿದ್ದೇವೆ. ಆದರೆ ಈ ಎಲ್ಲ ಜಯಂತಿಗಳ ಬಗ್ಗೆ ಯಾವುದೇ ಚಕಾರವೆತ್ತದ ಸರಕಾರ ಟಿಪ್ಪುಜಯಂತಿಯನ್ನು ಮಾತ್ರ ಗುರಿಯಾಗಿಸಿಕೊಂಡು ರದ್ದು ಆದೇಶ ಮಾಡಿರುವುದು ರಾಜ್ಯದ ಜನರಿಗೆ ನೋವುಂಟುಮಾಡಿದೆ. ಟಿಪ್ಪುವಿನ ಬಗ್ಗೆ ಇತಿಹಾಸ ತಿಳಿಯದವರು ಸುಳ್ಳು ಇತಿಹಾಸಗಳನ್ನು ಸೃಷ್ಟಿಸಿ ದೇಶದ್ರೋಹಿ, ಮತಾಂಧ, ಕನ್ನಡ ದ್ರೋಹಿ ಹೀಗೆ ಮುಂತಾದ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಜಗತ್ತಿನ ಶ್ರೇಷ್ಠ ಸಂವಿಧಾನವೆಂದು ಪ್ರಸಿದ್ಧಿಯಾಗಿರುವ ಭಾರತ ದೇಶದ ಸಂವಿಧಾನದಲ್ಲಿ ಮೈಸೂರಿನ ಹುಲಿ ಟಿಪ್ಪುಸುಲ್ತಾನರ ಚಿತ್ರವನ್ನು ಮುದ್ರಿಸಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರನೆಂದು ಬರೆದಿರುವುದು ಇಂತಹವರಿಗೆ ಅರಿವಿಲ್ಲವೆನಿಸುತ್ತಿದೆ. ಜಗತ್ತಿನ ದೊಡ್ಡಣ್ಣನೆಂಬ ಖ್ಯಾತಿ ಪಡೆದಿರುವ ಅಮೆರಿಕದ ನಾಸಾ (ವಿಜ್ಞಾನ ಸಂಶೋಧನಾ ಕೇಂದ್ರ)ದಲ್ಲಿ ಮೈಸೂರಿನ ಹುಲಿ ಟಿಪ್ಪುವಿನ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಇಂದಿಗೂ ಜಗತ್ತಿನ ಎಲ್ಲಾ ವಿಜ್ಞಾನಿಗಳು ಪ್ರತಿದಿನ ಗೌರವಿಸುತ್ತಿರುವುದು ಇವರಿಗೆ ಕಾಣುತ್ತಿಲ್ಲವೇ? ದೇಶಕ್ಕಾಗಿ ತನ್ನ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆ ಇಟ್ಟ, ಬಿಳಿಯರಿಗೆ ಸಿಂಹಸ್ವಪ್ನವಾಗಿದ್ದ ಅಪ್ಪಟ ದೇಶಪ್ರೇಮಿ ಟಿಪ್ಪುವಿನಂತ ರಾಜ ಇನ್ನೊಬನಿದ್ದಾನೆಯೇ? ಇಂತಹ ದೇಶ ಪ್ರೇಮಿಯ ಜಯಂತಿಯನ್ನು ರದ್ದು ಮಾಡಿದ ಮಾತ್ರಕ್ಕೆ ಟಿಪ್ಪು ಮೇಲಿನ ಅಭಿಮಾನ ಕುಂದುವುದೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)