varthabharthi

ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ಸರಳ ಗದ್ಯದಲ್ಲಿ ಹರಿಶ್ಚಂದ್ರ ಚರಿತೆ

ವಾರ್ತಾ ಭಾರತಿ : 8 Aug, 2019
-ಕಾರುಣ್ಯಾ

 ಹಲವು ಮಹಾತ್ಮರ ಬದುಕನ್ನು ಅವಲೋಕಿಸಿದಾಗ, ಅವರು ಬಾಲ್ಯದಲ್ಲಿ ಸತ್ಯ ಹರಿಶ್ಚಂದ್ರನ ಕತೆಯಿಂದ ಪ್ರಭಾವಿತರಾದುದು ಬೆಳಕಿಗೆ ಬರುತ್ತದೆ. ಸತ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಹರಿಶ್ಚಂದ್ರನ ಕತೆ ಕೇಳಿ ಕಣ್ಣೀರಿಡದ ಮಕ್ಕಳು ಕಡಿಮೆ. ಇಂತಹ ಹರಿಶ್ಚಂದ್ರ ಭಾರತೀಯ ಸಾಹಿತ್ಯದಲ್ಲಿ ಬೇರೆ ಬೇರೆ ರೂಪಗಳಲ್ಲಿ ಹೊರ ಹೊಮ್ಮಿದ್ದಾನೆ. ಸಿನೆಮಾ, ನಾಟಕ, ಕತೆ, ಕಾವ್ಯಗಳಲ್ಲಿ ಹೊಸ ಹೊಸತಾಗಿ ನಿರೂಪಿಸಲ್ಪಟ್ಟಿದ್ದಾನೆ. ಕನ್ನಡದಲ್ಲಿ ಹರಿಶ್ಚಂದ್ರನನ್ನು ಪರಿಚಯಿಸಿದ ಕವಿ ರಾಘವಾಂಕ. ಹರಿಹರನ ಶಿಷ್ಯನಾದ ಈತ ‘ಹರಿಶ್ಚಂದ್ರ ಚಾರಿತ್ರ’ ಎಂಬ ಹೆಸರಿಟ್ಟು ಕಾವ್ಯವನ್ನು ಬರೆದ. ರಾಘವಾಂಕನು ಪ್ರಾಚೀನ ಕಾವ್ಯ ಪದ್ಧತಿಯನ್ನನುಸರಿಸಿ ಈ ಕಾವ್ಯವನ್ನು ರಸವತ್ತಾಗಿ ನಿರ್ಮಿಸಿದ್ದಾನೆ. ಹರ್ಷ, ವಿಷಾದ, ಶೋಕ, ಕ್ರೋಧ ಮೊದಲಾದ ಚಿತ್ತವೃತ್ತಿಗಳನ್ನು ಮನೋಜ್ಞವಾಗಿ ವರ್ಣಿಸಿದ್ದಾನೆ. ಹರಿಶ್ಚಂದ್ರನ ಧೀರೋದಾತ್ತತೆ, ಸತ್ಯನಿಷ್ಠೆಗಳು, ಚಂದ್ರಮತಿಯ ಸೌಜನ್ಯ ಸಚ್ಚಾರಿತ್ರಗಳು, ವಿಶ್ವಾಮಿತ್ರನ ವಂಚನಾನೈಪುಣ್ಯ ಛಲಗಳು ಓದುಗರನ್ನು ಸೆಳೆಯುತ್ತವೆ. ಪ್ರಕೃತಿ ಚಿತ್ರಣದಲ್ಲೂ ರಾಘವಾಂಕ ಸಿದ್ಧಹಸ್ತ. ನಡುಗನ್ನಡದಲ್ಲಿರುವ ಈ ಕಾವ್ಯ ಕೇವಲ ವಿದ್ವಾಂಸರಿಗಷ್ಟೇ ಸೀಮಿತ ಎನ್ನುವಾಗ, ಅದನ್ನು ಸರಳವಾದ ಕನ್ನಡದಲ್ಲಿ ಗದ್ಯರೂಪದಲ್ಲಿ ಅನುವಾದಿಸಿದ್ದಾರೆ ಎನ್. ರಂಗನಾಥ ಶರ್ಮಾ. ಎನ್. ಬಸವಾರಾಧ್ಯ ಎಂ. ಎ. ಮತ್ತು ಪಂಡಿತ ಎಸ್. ಬಸಪ್ಪ ಇವರು ಸಂಪಾದಿಸಿದ ಕಾವ್ಯವನ್ನು ಈ ಅನುಾದದಲ್ಲಿ ಮೂಲವೆಂದು ಬಳಸಲಾಗಿದೆ.

ಒಟ್ಟು 15 ಅಧ್ಯಾಯಗಳಿವೆ. ಪೀಠಿಕೆ, ಕಥಾರಂಭ, ವಶಿಷ್ಠ-ವಿಶ್ವಾಮಿತ್ರರ ವಿವಾದ, ವಸಂತ ವಿಹಾರ, ನಗರ ಪರ್ಯಟನ, ಮೃಗಯಾ ಪ್ರಸಂಗ, ವಿಶ್ವಾಮಿತ್ರ ಶ್ರಮ ಪ್ರವೇಶ, ಚಂಡಾಲಕನ್ಯಕಾ ಪ್ರಸಕ್ತಿ, ಸರ್ವಸ್ವದಾನ, ಕಾನನಪರಿಭ್ರಮಣ, ವಿಶ್ವನಾಥದರ್ಶನ, ಪತ್ನೀಪುತ್ರ ವಿಕ್ರಯ, ಆತ್ಮವಿಕ್ರಯ, ಲೋಹಿತಾಶ್ವಮರಣ, ವಿಶ್ವನಾಥ ಸಾಕ್ಷಾತ್ಕಾರ, ವರಪ್ರದಾನ, ಸಿಂಹಾಸನಾರೋಹಣ ಎಂಬಿತ್ಯಾದಿ ಅಧ್ಯಾಯಗಳಾಗಿ, ಕಾವ್ಯವನ್ನು ಅನುವಾದಕರು ಮರು ನಿರೂಪಿಸಿದ್ದಾರೆ. ಈ ಕಾವ್ಯ ಎತ್ತಿಹಿಡಿಯುವ ವೈದಿಕ ಹಿರಿಮೆ ಮತ್ತು ಜಾತಿಯ ಕುರಿತಂತೆ ಪ್ರತಿಗಾಮಿ ನಿಲುವುಗಳನ್ನು ಪಕ್ಕಕ್ಕಿಟ್ಟು ಬರೇ ಕಾವ್ಯವಾಗಿ ಓದಿದರೆ, ನಮ್ಮನ್ನು ರಂಜಿಸುವುದರಲ್ಲಿ ಅನುಮಾನವಿಲ್ಲ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಈ ಅನುವಾದ ಸಹಕಾರಿಯಾಗಬಹುದು. ಜೊತೆಗೆ ಹಳೆಗನ್ನಡದ ಒಬ್ಬ ಮಹಾಕವಿಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ತಿಳಿದುಕೊಳ್ಳುವುದಕ್ಕೂ ಈ ಕೃತಿ ಸಹಾಯ ಮಾಡುತ್ತದೆ. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇವರು ಹೊರತಂದಿರುವ ಈ ಕೃತಿ ಐದನೇ ಮುದ್ರಣ ಕಂಡಿರುವುದೇ ಇದರ ಜನಪ್ರಿಯತೆಯನ್ನು ಹೇಳುತ್ತದೆ. 137 ಪುಟಗಳ ಈ ಕೃತಿಯ ಮುಖಬೆಲೆ 70 ರೂಪಾಯಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)