varthabharthi

ಕ್ರೀಡೆ

ದಿನೇಶ್ ಚಾಂಡಿಮಾಲ್, ಮ್ಯಾಥ್ಯೂಸ್ ಮರು ಸೇರ್ಪಡೆ

ನ್ಯೂಝಿಲ್ಯಾಂಡ್ ವಿರುದ್ದ ಟೆಸ್ಟ್: ಶ್ರೀಲಂಕಾ ತಂಡ ಪ್ರಕಟ

ವಾರ್ತಾ ಭಾರತಿ : 9 Aug, 2019

ಕೊಲಂಬೊ, ಆ.9: ನ್ಯೂಝಿಲ್ಯಾಂಡ್ ವಿರುದ್ಧ ಗಾಲೆಯಲ್ಲಿ ಆಗಸ್ಟ್ 14ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಕ್ರಿಕೆಟ್‌ಗೆ ಶ್ರೀಲಂಕಾ ತಂಡ ಮಾಜಿ ನಾಯಕರಾದ ದಿನೇಶ್ ಚಾಂಡಿಮಾಲ್ ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್‌ರನ್ನು ಮರು ಸೇರ್ಪಡೆಗೊಳಿಸಿದೆ.

ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ಚಾಂಡಿಮಾಲ್‌ರನ್ನು ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕ ಪ್ರವಾಸದಿಂದ ಕೈಬಿಡಲಾಗಿತ್ತು. ವಿಶ್ವಕಪ್ ತಂಡದಲ್ಲೂ ಅವರಿಗೆ ಸ್ಥಾನ ನಿರಾಕರಿಸಲಾಗಿತ್ತು. ಸ್ನಾಯು ಸೆಳೆತದಿಂದಾಗಿ ದಕ್ಷಿಣ ಆಫ್ರಿಕ ಪ್ರವಾಸದಿಂದ ವಂಚಿತವಾಗಿದ್ದ ಮ್ಯಾಥ್ಯೂಸ್ ವಿಶ್ವಕಪ್‌ನಲ್ಲಿ ಆಡಿದ್ದರು. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯಲ್ಲಿ ನೀಡಿರುವ ಉತ್ತಮ ಪ್ರದರ್ಶನದ ಆಧಾರದಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

 ವಿಶ್ವಕಪ್‌ನಿಂದ ಹೊರಗುಳಿದಿದ್ದ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ನಿರೊಶನ್ ಡಿಕ್ವೆಲ್ಲಾ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಮುಖ ಆಟಗಾರನಾಗಿದ್ದಾರೆ.

ತಂಡದಲ್ಲಿ ಮೂವರು ವೇಗಿಗಳಾದ ಸುರಂಗ ಲಕ್ಮಲ್, ಲಹಿರು ಕುಮಾರ ಹಾಗೂ ವಿಶ್ವ ಫೆರ್ನಾಂಡೊ ಅವರಿದ್ದಾರೆ. ಆಲ್‌ರೌಂಡರ್ ಧನಂಜಯ ಡಿಸಿಲ್ವಾ ಸ್ಪಿನ್ ವಿಭಾಗಕ್ಕೆ ಬಲ ನೀಡಲಿದ್ದಾರೆ. ಬುಧವಾರ ಹಂಗಾಮಿ ಕೋಚ್ ಆಗಿ ನೇಮಕಗೊಂಡಿರುವ ಮಾಜಿ ವೇಗದ ಬೌಲರ್ ರಮೇಶ್ ರತ್ನನಾಯಕೆ ಶ್ರೀಲಂಕಾಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಮುಖ್ಯ ಕೋಚ್ ಚಂಡಿಕಾ ಹಥುರಸಿಂೆ ಅವರನ್ನು ಉಚ್ಚಾಟಿಸಲಾಗಿದೆಯೇ ಎಂದು ಸ್ಪಷ್ಟನೆ ನೀಡಲು ಶ್ರೀಲಂಕಾ ಕ್ರಿಕೆಟ್ ನಿರಾಕರಿಸಿದೆ.

► ಶ್ರೀಲಂಕಾ ತಂಡ

ಡಿಮುತ್ ಕರುಣರತ್ನೆ(ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್, ಲಹಿರು ತಿರಿಮನ್ನೆ, ಕುಸಾಲ್ ಮೆಂಡಿಸ್, ಕುಸಾಲ್ ಜೆ.ಪೆರೇರ, ನಿರೊಶನ್ ಡಿಕ್ವೆಲ್ಲಾ, ಧನಂಜಯ ಡಿಸಿಲ್ವಾ, ಅಕಿಲ ಧನಂಜಯ, ಲಸಿತ್ ಎಂಬುಲ್ಡೇನಿಯ, ಸುರಂಗ ಲಕ್ಮಲ್, ಲಹಿರು ಕುಮಾರ, ಒಶಾಡ ಫೆರ್ನಾಂಡೊ, ಲಕ್ಷಣ್ ಸಂಡಕನ್, ವಿಶ್ವ ಫೆರ್ನಾಂಡೊ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)