varthabharthi

ಸಂಪಾದಕೀಯ

ಕೊಚ್ಚಿ ಹೋಗುತ್ತಿರುವ ಬೆಳಗಾವಿ ಯಾರದು?

ವಾರ್ತಾ ಭಾರತಿ : 10 Aug, 2019

ಮಳೆಯ ಕೊರತೆಯೇ ಈ ಬಾರಿ ನಾಡಿನ ಹಾಹಾಕಾರಕ್ಕೆ ಕಾರಣವಾಗುತ್ತದೆಯೋ ಎಂಬ ಭಯ ಇದೀಗ ತಿರುಗುಬಾಣವಾಗಿದೆ. ಕಳೆದ ಬಾರಿ ಕೊಡಗು ಸೇರಿದಂತೆ ಮಲೆನಾಡನ್ನು ಕಾಡಿದ ಅತಿವೃಷ್ಟಿ ಈ ಬಾರಿ ಅರ್ಧ ಕರ್ನಾಟಕವನ್ನೇ ಮುಳುಗಿಸಿ ಬಿಟ್ಟಿದೆ. ಉತ್ತರ ಕರ್ನಾಟಕ ಒಂದೆಡೆ ಮಳೆ, ಮಗದೊಂದೆಡೆ ಮಹಾರಾಷ್ಟ್ರ ಸೃಷ್ಟಿಸಿದ ಕೃತಕ ನೆರೆ ಎರಡರ ನಡುವೆ ಸಿಲುಕಿ ತತ್ತರಿಸಿದೆ. ಇಂದಿನವರೆಗೆ ಸುಮಾರು 23 ಗ್ರಾಮಗಳ 28,000ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇತ್ತ ಮಲೆನಾಡಿನಲ್ಲಿ ಚಾರ್ಮಾಡಿ ಘಾಟ್ ಸೇರಿದಂತೆ ಹಲವು ಪ್ರಮುಖ ಹೆದ್ದಾರಿಗಳು ಮುಚ್ಚಲ್ಪಟ್ಟ ಕಾರಣದಿಂದ ವ್ಯಾಪಾರ ವ್ಯವಹಾರಗಳ ಮೇಲೂ ಅತಿವೃಷ್ಟಿ ತೀವ್ರ ಪರಿಣಾಮಗಳನ್ನು ಬೀರುತ್ತಿದೆ. ಕರ್ನಾಟಕದಲ್ಲಿ ಈ ಹಿಂದೆ ಇಂತಹ ಪರಿಸ್ಥಿತಿ ಬಂದೇ ಇಲ್ಲ ಎಂದಲ್ಲ. ಉತ್ತರ ಕರ್ನಾಟಕವಂತೂ ಹತ್ತು ಹಲವು ಬಾರಿ ಇಂತಹ ನೆರೆ ಮಾತ್ರವಲ್ಲದೆ, ಬರದ ಕಾರಣಗಳಿಗಾಗಿಯೂ ನೊಂದು ಬೆಂದಿದೆ. ಮಳೆಗಾಲವಿರಲಿ, ಬೇಸಿಗೆಯಿರಲಿ ಅದನ್ನು ಸಮರ್ಥವಾಗಿ ಎದುರಿಸಲು ಸರಕಾರ ಸಕಲ ಸಿದ್ಧತೆ ಮಾಡಿದ್ದೇ ಆದರೆ ಅರ್ಧ ಅನಾಹುತಗಳನ್ನು ತಡೆಯಬಹುದು. ಆದರೆ ದುರದೃಷ್ಟಕ್ಕೆ, ಇಂದು ನಾಡು ಎದುರಿಸುತ್ತಿರುವ ಪ್ರಕೋಪಗಳನ್ನು ತಡೆಯಲು ಅಧಿಕೃತ ಸರಕಾರವೇ ಇಲ್ಲ.

  ಈ ವಿಕೋಪಗಳನ್ನು ತಡೆಯಲು ಕನಿಷ್ಠ ಎರಡು ತಿಂಗಳ ಹಿಂದೆಯೇ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ, ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಕಳೆದ ಬಾರಿ ಕೊಡಗು ಸೇರಿದಂತೆ ವಿವಿಧೆಡೆ ಸಂಭವಿಸಿರುವ ಮಳೆಹಾನಿಯಿಂದ ರಾಜಕಾರಣಿಗಳು ಪಾಠ ಕಲಿತಿದ್ದರೆ ಇಂದು ಸರಕಾರ ದಾನಿಗಳ ಕಡೆಗೆ ಕೈ ತೋರಿಸಬೇಕಾಗಿರಲಿಲ್ಲ. ಮುಖ್ಯವಾಗಿ ಇಂತಹದೊಂದು ಸಿದ್ಧತೆ ನಡೆಸಲು ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲೇ ಇದ್ದಿರಲಿಲ್ಲ. ಒಬ್ಬರು ಸರಕಾರ ಬೀಳಿಸುವ ಕಾರ್ಯತಂತ್ರದಲ್ಲಿ ಮಗ್ನರಾಗಿದ್ದರೆ, ಇನ್ನೊಬ್ಬರು ಸರಕಾರವನ್ನು ಉಳಿಸಲು ಹರಸಾಹಸ ಪಡುತ್ತಿದ್ದರು. ಕಳೆದ ಮೂರು ತಿಂಗಳು ವಿಧಾನಸಭೆ ದೂರದ ಮುಂಬೈಯ ರೆಸಾರ್ಟ್‌ಗಳಿಗೆ ವರ್ಗಾವಣೆಯಾಗಿತ್ತು. ತಾನು ಮುಖ್ಯಮಂತ್ರಿಯಾಗಿ ಉಳಿಯುತ್ತೇನೋ ಇಲ್ಲವೋ ಎನ್ನುವುದು ಸ್ಪಷ್ಟವಿಲ್ಲದ ಕುಮಾರಸ್ವಾಮಿ, ಇನ್ನೇನು ಸರಕಾರವನ್ನು ಉರುಳಿಸಿ ಅಧಿಕಾರಕ್ಕೇರಿಯೇ ಬಿಡುತ್ತೇನೆ ಎಂದು ಹಠತೊಟ್ಟು ಹಗಲಿರುಳು ಅದಕ್ಕಾಗಿ ಶ್ರಮಿಸುತ್ತಿದ್ದ ಯಡಿಯೂರಪ್ಪ, ಬ್ಲಾಕ್‌ಮೇಲ್ ಮಾಡುತ್ತಿದ್ದ ಶಾಸಕರನ್ನು ಒಲಿಸಲು ರೆಸಾರ್ಟ್ ಬಾಗಿಲ ಮುಂದೆ ನಿಂತಿದ್ದ ಡಿ.ಕೆ. ಶಿವಕುಮಾರ್ ಇವರ ನಡುವೆ ಸಿಲುಕಿಕೊಂಡು ಆಡಳಿತ ಯಂತ್ರ ಸ್ತಬ್ಧವಾಗಿತ್ತು. ತಮ್ಮನ್ನು ವಿಚಾರಿಸುವವರೇ ಇಲ್ಲವೆಂದ ಮೇಲೆ, ಅಧಿಕಾರಿಗಳಾದರೂ ಮುಂಬರುವ ವಿಕೋಪಗಳ ಕುರಿತಂತೆ ಅತಿ ಆಸಕ್ತಿಯನ್ನು ಯಾಕೆ ತೋರಿಸಿಯಾರು? ಹವಾಮಾನ ಇಲಾಖೆ ನೀಡುತ್ತಿದ್ದ ನೆರೆ, ಚಂಡಮಾರುತದ ಎಚ್ಚರಿಕೆಗಳೆಲ್ಲ ಅರಣ್ಯರೋದನವಾಯಿತು. ಜಿಲ್ಲಾಡಳಿತ ತಮ್ಮ ಕರ್ತವ್ಯವನ್ನು ನಿಭಾಯಿಸಿಲ್ಲ ಎಂದು ಅರ್ಥವಲ್ಲ. ಆದರೆ ಸ್ಪಷ್ಟ ಮಾರ್ಗದರ್ಶನ ನೀಡಲು ಒಂದು ಸರಕಾರವೇ ಇಲ್ಲವಾಗಿರುವಾಗ, ಅಧಿಕಾರಿಗಲಾದರೂ ಯಾವ ಧೈರ್ಯದ ಮೇಲೆ ಮುಂದೆ ಹೆಜ್ಜೆ ಇಟ್ಟಾರು.
  
ಸದ್ಯ ಮೈತ್ರಿ ಸರಕಾರವನ್ನು ಇಳಿಸಿ ಬಿಜೆಪಿ ರಾಜ್ಯದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿದೆ. ಇನ್ನಾದರೂ ನಾಡಿನ ಪರಿಸ್ಥಿತಿ ಸುಧಾರಿಸೀತು ಎಂದು ಜನರು ಭಾವಿಸಿದ್ದರೆ , ಅಂತಹ ಯಾವ ಬೆಳವಣಿಗೆಗಳೂ ಕಾಣುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಿತಿ ‘ಮೊಸಳೆಯನ್ನು ನುಂಗಿದ ಹೆಬ್ಬಾವಿನಂತೆ’ ಆಗಿದೆ. ಗಂಟಲಿನಿಂದ ಹೊಟ್ಟೆಗಿಳಿಸಿ ಜೀರ್ಣಿಸಿಕೊಳ್ಳುವುದಕ್ಕೆ ಅವರಿಂದ ಇನ್ನೂ ಸಾಧ್ಯ ಆಗಿಲ್ಲ. ಮುಖ್ಯಮಂತ್ರಿಯಾಗಿ ಎರಡುವಾರ ಕಳೆದಿದೆಯಾದರೂ ಅವರಿಗೆ ಸಂಪುಟ ವಿಸ್ತರಣೆ ಸಾಧ್ಯವಾಗಿಲ್ಲ. ಸಂಪುಟ ವಿಸ್ತರಣೆಯಾಗದೆ ಆಡಳಿತ ಯಂತ್ರ ಚುರುಕಾಗುವುದು ಸಾಧ್ಯವೇ ಇಲ್ಲ. ಸಂಪುಟ ವಿಸ್ತರಣೆಯ ಸಾಹಸಕ್ಕಿಳಿದರೆ ಎಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದು ಸರಕಾರ ಉರುಳಿ ಬಿಡುತ್ತದೆಯೋ ಎನ್ನುವ ಭಯ ವರಿಷ್ಠರನ್ನು ಕಾಡುತ್ತಿದೆ. ಹಾಗೆಂದು, ಕೇವಲ ಯಡಿಯೂರಪ್ಪ ಅವರೊಬ್ಬರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಸಾಧ್ಯವೇ? ‘ವರಿಷ್ಠರು ಆದೇಶ ನೀಡಿದಾಕ್ಷಣ ಸಂಪುಟ ವಿಸ್ತರಣೆ ಮಾಡಲಿದ್ದೇನೆ’ ಎಂದು ಯಡಿಯೂರಪ್ಪ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ಅತ್ತ ದಿಲ್ಲಿಯ ಬಿಜೆಪಿ ನಾಯಕರು ಕಾಶ್ಮೀರದ ‘ವಿಧಿ’ಯೊಂದಿಗೆ ಗುದ್ದಾಡುತ್ತಿದ್ದಾರೆ. ಯಡಿಯೂರಪ್ಪರ ಮಾತುಗಳನ್ನು ಆಲಿಸುವ ಜನರೇ ದಿಲ್ಲಿಯಲ್ಲಿ ಇಲ್ಲ ಎಂಬಂತಾಗಿದೆ. ಎರಡು ದಿನಗಳ ಹಿಂದೆ ಸಂಪುಟ ವಿಸ್ತರಣೆಯ ಕುರಿತಂತೆ ಚರ್ಚೆ ನಡೆಸಲು ದಿಲ್ಲಿಗೆ ಧಾವಿಸಿದ್ದ ಯಡಿಯೂರಪ್ಪ ಬರಿಗೈಯಲ್ಲಿ ವಾಪಸಾಗಿದ್ದಾರೆ. ಇದೀಗ ನೋಡಿದರೆ, ರಾಜ್ಯ ಅತಿವೃಷ್ಟಿಗೆ ಕೊಚ್ಚಿ ಹೋಗುತ್ತಿದೆ. ಎಲ್ಲ ಹೊಣೆಗಾರಿಕೆಯೂ ಯಡಿಯೂರಪ್ಪ ಅವರೇ ನಿಭಾಯಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಯಡಿಯೂರಪ್ಪರ ಸದ್ಯದ ಸ್ಥಿತಿಗೆ ವಿರೋಧ ಪಕ್ಷಗಳಿರಲಿ, ಸ್ವತಃ ಬಿಜೆಪಿಯೊಳಗಿರುವ ನಾಯಕರೇ ಸಂಭ್ರಮಿಸುತ್ತಿದ್ದಾರೆ. ತನ್ನೆಲ್ಲ ಮಿತಿಯ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದಾರಾದರೂ ಅದು ನಿರೀಕ್ಷಿತವಾದ ಪರಿಣಾಮಗಳನ್ನು ಬೀರುತ್ತಿಲ್ಲ. ಸಾಧಾರಣವಾಗಿ ಸರಕಾರ ನೆರೆಪರಿಹಾರ ವ್ಯವಸ್ಥೆಯನ್ನು ಮಾಡಿದ ಬಳಿಕ ‘ದಾನಿಗಳ ಕಡೆಗೆ’ ಕೈ ಚಾಚುತ್ತದೆ. ಆದರೆ ಯಡಿಯೂರಪ್ಪ ಸರಕಾರ, ಎಲ್ಲವನ್ನೂ ದಾನಿಗಳ ತಲೆಗೆ ಹಾಕಿ ಕೈ ಚೆಲ್ಲಲು ಮುಂದಾಗಿದೆ.

ಒಂದು ಸರಕಾರವನ್ನು ಉರುಳಿಸುವುದಕ್ಕಾಗಿ ರೆಸಾರ್ಟ್ ರಾಜಕಾರಣ ನಡೆಸಿ ಕೋಟಿ ಕೋಟಿ ಹಣವನ್ನು ಉಡಾಯಿಸಲು ಸಾಧ್ಯವಿರುವ ಪಕ್ಷ, ಇದೀಗ ಪರಿಹಾರ ಕಾರ್ಯಕ್ಕಾಗಿ ದಾನಿಗಳ ಮೊರೆ ಹೋಗಿರುವುದು ವಿಪರ್ಯಾಸವೇ ಸರಿ. ಬೆಳಗಾವಿಯ ನೂರಾರು ಗ್ರಾಮಗಳು ಕೊಚ್ಚಿ ಹೋಗುವುದಕ್ಕೆ ಕಾರಣ, ಅತಿವೃಷ್ಟಿ ಅಷ್ಟೇ ಅಲ್ಲ. ಮಹಾರಾಷ್ಟ್ರದ ಅಣೆಕಟ್ಟಿನಿಂದ ಹೊರಗೆ ಬಿಡಲಾಗುತ್ತಿರುವ ಭಾರೀ ಪ್ರಮಾಣದ ನೀರು ಈ ಭಾಗದಲ್ಲಿ ಕೃತಕ ನೆರೆಯನ್ನು ಸೃಷ್ಟಿಸಿದೆ. ದುರಂತವೆಂದರೆ, ಇದೇ ಬೆಳಗಾವಿ ಗಡಿಭಾಗದ ಪ್ರದೇಶಗಳಿಗಾಗಿ ಕರ್ನಾಟಕ ಮತ್ತು ಮಹಾರಾಷ್ಟ ಎರಡೂ ರಾಜ್ಯಗಳು ಬಡಿದಾಡಿಕೊಳ್ಳುತ್ತಿವೆ. ಬೆಳಗಾವಿಯಲ್ಲಿ ಮರಾಠಿಗರು ಕನ್ನಡ ಧ್ವಜಕ್ಕೆ ಅವಮಾನಿಸಿದಾಕ್ಷಣ ಬೆಂಗಳೂರಿನಲ್ಲಿರುವ ಕನ್ನಡ ಪ್ರೇಮಿಗಳ ಕನ್ನಡತನ ಉಕ್ಕಿ ಹರಿಯುತ್ತದೆ. ‘ಬೆಳಗಾವಿ ನಮ್ಮದು’ ಎಂದು ಕೂಗೆಬ್ಬಿಸುತ್ತಾರೆ. ಇದೇ ಸಂದರ್ಭದಲ್ಲಿ ಬೆಳಗಾವಿಗಾಗಿ ಮಹಾರಾಷ್ಟ್ರವೂ ಸದಾ ಕೂಗೆಬ್ಬಿಸುತ್ತಾ ಬಂದಿದೆ. ಆದರೆ ಇಂದು ತನ್ನದೇ ಕಾರಣದಿಂದಾಗಿ ಬೆಳಗಾವಿಯ ಜನರು ನೆರೆಯಿಂದ ತತ್ತರಿಸುತ್ತಿದ್ದಾರಾದರೂ, ಆ ಬಗ್ಗೆ ಮಹಾರಾಷ್ಟ್ರ ಯಾವುದೇ ಭರವಸೆಯ ಹೇಳಿಕೆಯನ್ನು ನೀಡುತ್ತಿಲ್ಲ. ಬೆಂಗಳೂರಿನ ಜನರಿಗೂ ‘ಬೆಳಗಾವಿ ನಮ್ಮದು’ ಅನ್ನಿಸಿಲ್ಲ. ನಿಜಕ್ಕೂ ಬೆಳಗಾವಿ ಯಾರದು? ಎನ್ನುವುದು ನಿರ್ಧಾರವಾಗುವುದು ಇಂತಹ ಸಂಕಷ್ಟಗಳ ಸಂದರ್ಭಗಳಲ್ಲಿ. ಬೆಳಗಾವಿಯೆಂದರೆ ಅಲ್ಲಿನ ಜನಸಾಮಾನ್ಯರ ಬದುಕು. ಆ ಬದುಕಿಗೆ ಧಕ್ಕೆ ಬಂದಾಗ ‘ಬೆಳಗಾವಿ ನಮ್ಮದು’ ಎಂದು ಬೊಬ್ಬಿಡುವವರು ನೆರವಿಗೆ ಧಾವಿಸಬೇಕಾಗಿದೆ. ಆದುದರಿಂದ, ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲವಾದರೂ, ಕನ್ನಡಿಗರೆಂದು ಹೆಮ್ಮೆಯಿಂದ ಕರೆದುಕೊಳ್ಳುವ, ಬೆಳಗಾವಿ ನಮ್ಮದೆಂದು ಕೊಚ್ಚಿಕೊಳ್ಳುವ ನಾವೆಲ್ಲರೂ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಪರಸ್ಪರ ಕೈ ಜೋಡಿಸಿ ನೆರವಿಗೆ ಧಾವಿಸಬೇಕಾಗಿದೆ. ಆ ಮೂಲಕ ಬೆಳಗಾವಿಯನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)