varthabharthi

ಬೆಂಗಳೂರು

ಜೈಶ್ರೀರಾಮ್ ಎನ್ನುವವರನ್ನು ರಾಮನ ಭಕ್ತರೇ ವಿರೋಧಿಸಲಿ: ಬರಗೂರು ರಾಮಚಂದ್ರಪ್ಪ

ವಾರ್ತಾ ಭಾರತಿ : 10 Aug, 2019

ಬೆಂಗಳೂರು, ಆ.9: ಶ್ರೀರಾಮನನ್ನು ಓಟಿನ ರಾಜಕೀಯಕ್ಕೆ ಬಳಸಿಕೊಂಡು ಜೈ ಶೀರಾಮ್ ಎಂದು ಕೂಗುವವರನ್ನು ರಾಮನ ಭಕ್ತರೇ ವಿರೋಧಿಸಲಿ ಎಂದು ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಜನಕ್ರಾಂತಿ ವೇದಿಕೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಆಗಸ್ಟ್ ಕ್ರಾಂತಿಯ ಹೊಸ ಸಂದೇಶ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀರಾಮನನ್ನು ಓಟಿಗೆ ಬಳಸಿಕೊಳ್ಳುತ್ತಿರುವುದು ಶ್ರೀರಾಮನಿಗೆ ಮಾಡುತ್ತಿರುವ ಅವಮಾನ. ಇಂತಹ ಮೂಲಭೂತವಾದಿ ರಾಜಕಾರಣವನ್ನು ರಾಮನ ಭಕ್ತರೇ ವಿರೋಧಿಸುವಂತಾಗಬೇಕೆಂದು ತಿಳಿಸಿದರು.

ರಾಮನಿಗಾಗಿ ಗುಡಿಸಲನ್ನು ಕಟ್ಟಿ ಹಗಲಿರುಳು ರಾಮನ ಭಜನೆ ಮಾಡಿದ ಶಬರಿಯ ಸಂಸ್ಕೃತಿ ಬೇಡವೆ, ರಾಮನ ಬರುವಿಕೆಗಾಗಿ ಸಿಂಹಾಸನವನ್ನೇ ತೊರೆದು ಆಳ್ವಿಕೆ ನಡೆಸಿದ ಭರತನ ಸಂಸ್ಕೃತಿ ಬೇಡವೆ ಎಂಬುದನ್ನು ರಾಮನ ಭಕ್ತರನ್ನು ಕೇಳಬೇಕಾಗಿದೆ. ಧರ್ಮವನ್ನು ರಾಜಕೀಕರಣಗೊಳಿಸುತ್ತಿರುವ ಸಂಘಪರಿವಾರದ ಪಕ್ಷಕ್ಕೆ, ನಿಜವಾದ ಧಾರ್ಮಿಕ ಚಿಂತನೆಗಳ ಮೂಲಕ ಪ್ರತ್ಯುತ್ತರ ನೀಡುವಂತಹ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಇವತ್ತು ಧರ್ಮ, ಸಂಸ್ಕೃತಿ, ರಾಷ್ಟ್ರೀಯತೆ ಎಂಬುದು ಅಪವ್ಯಾಖ್ಯಾನಕ್ಕೆ ಒಳಗಾಗಿದೆ. ಬುದ್ಧ, ಬಸವಣ್ಣ, ವಿವೇಕಾನಂದ, ಗಾಂಧಿ ಪ್ರತಿಪಾದಿಸಿದ್ದ ಧಾರ್ಮಿಕತೆಯನ್ನು ಮೂಲೆಗುಂಪು ಮಾಡಿ, ಸಂಘಪರಿವಾರ ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಮನುವಾದವನ್ನು ಜನತೆಯ ಮೇಲೆ ಹೇರಲಾಗುತ್ತಿದೆ. ಇದನ್ನು ಜನತೆಗೆ ಅರ್ಥೈಸಬೇಕಾದ ಜವಾಬ್ದಾರಿ ಪ್ರಗತಿಪರರದು ಎಂದು ಅವರು ಹೇಳಿದರು.

ಸ್ವಾತಂತ್ರ ಪೂರ್ವ ಚಳವಳಿಯ ಎಲ್ಲ ವಿಚಾರಧಾರೆಗಳ ಒಟ್ಟು ಆಶಯ ರಾಜಕೀಯ ಸರ್ವಾಧಿಕಾರ, ಸಾಮಾಜಿಕ ಸರ್ವಾಧಿಕಾರ ಹಾಗೂ ಆರ್ಥಿಕ ಸರ್ವಾಧಿಕಾರವನ್ನು ನಿರ್ಮೂಲನೆ ಮಾಡುವುದೇ ಆಗಿತ್ತು. ಇದಕ್ಕಾಗಿ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಭಗತ್‌ಸಿಂಗ್, ಲೋಹಿಯಾ ಸೇರಿದಂತೆ ಸಾವಿರಾರು ಮಂದಿ ಶ್ರಮಿಸಿದ್ದಾರೆ. ಆದರೆ, ಇವತ್ತು ಅವರ ಚಿಂತನೆಯ ನಿರ್ಮೂಲನೆ ಮಾಡಲು, ಆರೆಸ್ಸೆಸ್ ಷಡ್ಯಂತ್ರಗಳನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು.

ದೇಶದ ಹಿರಿಯ ಸಮಾಜ ಸುಧಾರಕರು ಪ್ರತಿಪಾದಿಸಿದ ಬಹುತ್ವ ಚಿಂತನೆಗಳ ಮೂಲಕ ವರ್ಣಶಾಹಿ ಆಡಳಿತವನ್ನು, ಜಾತಿವಾದ, ಮೂಲಭೂತ ವಾದವನ್ನು, ಅಸಮಾನತೆ ಹಾಗೂ ಅಸಹಿಷ್ಣುತೆಯನ್ನು ದೇಶದಿಂದ ತೊಲಗಿಸಬೇಕಾಗಿದೆ. ನಮ್ಮ ಯುವಜನತೆಗೆ ಕೇವಲ ಬೀದಿಗಳನ್ನು ಸ್ವಚ್ಛಗೊಳಿಸುವುದು ಮಾತ್ರ ದೇಶಭಕ್ತಿಯಲ್ಲ, ನಮ್ಮ ಬುದ್ಧಿ, ಭಾವಗಳನ್ನು ಶುಚಿಯಾಗಿ, ವೈಚಾರಿಕವಾಗಿ, ಜಾತ್ಯತೀತವಾಗಿ ಇಟ್ಟುಕೊಳ್ಳುವುದೆ ಆಗಿದೆ ಎಂಬುದನ್ನು ನಾವು ಜಾಗೃತಿಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ವೇಳೆ ಪ್ರೊ.ಬಾಬು ಮ್ಯಾಥ್ಯು, ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ, ಬಾಪು ಹೆದ್ದೂರ್ ಶೆಟ್ಟಿ, ಹಿರಿಯ ಲೇಖಕಿ ಲಲಿತಾನಾಯಕ್ ಮತ್ತಿತರರು ಭಾಗವಹಿಸಿದ್ದರು. 

ಪ್ರಗತಿಪರರು ಸೈದ್ಧಾಂತಿಕ ಸೌಹಾರ್ದತೆಯನ್ನು ಸಾಧಿಸಿಕೊಳ್ಳಬೇಕಾಗಿದೆ. ನಮ್ಮ ಮೂಲ ಆಶಯಗಳನ್ನು ಇಟ್ಟುಕೊಂಡೇ ಗಾಂಧೀಜಿಯವರ ನೈತಿಕ ಪ್ರಜ್ಞೆ, ಅಂಬೇಡ್ಕರ್‌ರ ಸಾಮಾಜಿಕ ಪ್ರಜ್ಞೆ, ಲೋಹಿಯಾ ಸಾಂಸ್ಕೃತಿಕ ಪ್ರಜ್ಞೆ, ಕಾರ್ಲ್‌ಮಾರ್ಕ್ಸ್‌ರವರ ಆರ್ಥಿಕ ಚಿಂತನೆ ಹಾಗೂ ವಿವೇಕಾನಂದ ಧಾರ್ಮಿಕ ಪ್ರಜ್ಞೆಯನ್ನು ಸರಿಯಾದ ಸಂದರ್ಭದಲ್ಲಿ ಕಾರ್ಯಗತಗೊಳಿಸುವ ಮೂಲಕ ಆರೆಸ್ಸೆಸ್‌ನ ಮೂಲಭೂತವಾದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕಾಗಿದೆ.

-ಬರಗೂರು ರಾಮಚಂದ್ರಪ್ಪ, ಸಂಸ್ಕೃತಿ ಚಿಂತಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)