varthabharthi

ಸುಗ್ಗಿ

ಸಿದ್ಧಾರ್ಥ ಹೆಗ್ಡೆಯ ಜೀವವಾದಿ ಗುರು-ತಂದೆ "ಗಂಗಯ್ಯ ಹೆಗ್ಡೆ"

ವಾರ್ತಾ ಭಾರತಿ : 10 Aug, 2019
ನರೇಂದ್ರ ರೈ ದೇರ್ಲ

ನರೇಂದ್ರ ರೈ ದೇರ್ಲ

“ಕೃಷಿ ಮತ್ತು ಕೃಷಿಕನ ಸಂಬಂಧ, ಆ ಮೂಲಕ ಮನುಷ್ಯ ಬಾಳ್ವಿಕೆಯ ಬಗ್ಗೆ ಹೆಗ್ಡೆಯವರದು ತುಂಬು ಅನುಭವ. ಅವರಿಗೆ ಕೈಯಾರೆ ಬಿತ್ತಿದ, ಬೆಳೆದ, ಕೊಯ್ದ ಅನುಭವವಿದೆ. ಅದು ಬರೀ ಕಾರ್ಮಿಕರನ್ನೇ ನಂಬಿ ಕಟ್ಟಿದ ಕೃಷಿಗಾಥೆಯಲ್ಲ. ಅವರು ಕೈ ಕಾಲಿಗೆ ಕೆಸರು ಮಣ್ಣು ತಾಗಿಸಿ ಪಡೆದ ಅನುಭವದ ಪಾಯದ ಮೇಲೆ ಅವರ ಹಸಿರು ಯಶಸ್ಸು ನಿಂತಿತ್ತು.”

ಸಾವಿಗೆ ಶರಣಾದ ಸಿದ್ಧಾರ್ಥ ಹೆಗ್ಡೆಯವರನ್ನು ನಿರೂಪಿಸುವ ಸಂದರ್ಭದಲ್ಲೆಲ್ಲಾ ಭಾರತೀಯ ಮಾಧ್ಯಮಗಳು ಅವರೊಂದಿಗೆ ತಳುಕು ಹಾಕುವ ಹೆಸರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರದು. ಮಾಧ್ಯಮ ಸೇರಿ ಅನೇಕರಿಗೆ ಗೊತ್ತಿಲ್ಲದ ಸಂಗತಿ ಸಿದ್ಧಾರ್ಥರ ಸಾಧನೆ, ಯಶಸ್ಸು, ಸಜ್ಜನಿಕೆ, ಪ್ರಾಮಾಣಿಕತೆ, ಮುಗ್ಧತೆ ಈ ಎಲ್ಲದರ ಹಿಂದಿರುವ ಶಕ್ತಿ ಅವರ ತಂದೆ ಗಂಗಯ್ಯ ಹೆಗ್ಡೆಯವರದು. ಮೂಲ ತೋಟ ಚೇತನ ಹಳ್ಳಿಯದು. 60 ವರ್ಷಗಳ ಹಿಂದೆ ಖರೀದಿಸಿದ ಅದನ್ನು ಕಟ್ಟಿ ಬೆಳೆಸಿದ, ಕುವೆಂಪು ಬಂಧು, ತೇಜಸ್ವಿ ಒಡನಾಡಿ, ಪರಮ ಹಂಸರ ಪರಮಭಕ್ತ, ಸಮಾಜ ಸೇವಕ, ರೋಟೇರಿಯನ್ ಗಂಗಯ್ಯ ಹೆಗ್ಡೆಯವರೊಂದಿಗೆ ಈ ಲೇಖಕ ನಿರಂತರ ಒಡನಾಟ ಇಟ್ಟುಕೊಂಡವರು. ಹೆಗ್ಡೆ ಕುಟುಂಬದ ಬಗ್ಗೆ ಪುಸ್ತಕ ಬರೆದವರು. ಆ ನೆನಪುಗಳು ಇಲ್ಲಿವೆ.

ಎರಡು ದಶಕಗಳ ಹಿಂದೆ ನಾನು ಕುಪ್ಪಳ್ಳಿಗೆ ಹೋದವನು ಕವಿಶೈಲದ ಮೇಲೆ ಹೋಗಿದ್ದೆ. ರಾಷ್ಟ್ರ ಕವಿ ಕುವೆಂಪು ಅವರ ಕಾವ್ಯ ಸೃಷ್ಟಿಯ ನೆಲ-ನಿಲ್ದಾಣವದು. ಅವರ ಸಾಹಿತ್ಯ ಬದುಕಿನಲ್ಲಿ ಕವಿ ಶೈಲಕ್ಕೆ ಬಹಳ ಮಹತ್ವವಿದೆ. ಆಗ ಕುವೆಂಪು ಇಲ್ಲವಾಗಿ ವರ್ಷ ಕಳೆದಿತ್ತು. ಆವಾಗಲೇ ಅಲ್ಲಿ ಈ ದೇಶದಲ್ಲಿ ಯಾವ ಸಾಹಿತಿ-ಕವಿಗೂ ಇಲ್ಲದಂಥ ಸ್ಮಾರಕವೊಂದು ನಿರ್ಮಾಣಗೊಂಡಿತ್ತು. ನೂರಾರು ಟನ್ ತೂಕದ ಭೀಮಕಲ್ಲುಗಳನ್ನು ಎಲ್ಲಿಂದಲೋ ತಂದು ಕ್ರೇನ್‌ನಿಂದ ನೆಟ್ಟಗೆ ಎತ್ತಿ ಆಕಾಶಕ್ಕೆ ಮುಖ ಮಾಡಿ ನಿಲ್ಲಿಸಿದ್ದರು. ಬರೀ ಒಂದೆರಡು ಕಲ್ಲುಗಳಲ್ಲ. ಹತ್ತಾರು ಕಲ್ಲುಗಳು. ಇನ್ನೂ ನೂರು, ಸಾವಿರ ವರ್ಷಗಳಲ್ಲ ಈ ಭೂಮಿ ಇರುವವರೆಗೆ ಅವು ಹಾಗೆಯೇ ಉಳಿಯುತ್ತವೆ. ಅವುಗಳಿಗೆ ಸುಣ್ಣ ಬಣ್ಣ ಯಾವುದೂ ಬೇಡ. ಸಹಜಸ್ತಂಭಗಳು. ಕುವೆಂಪು ಪಾಲಿಗೆ ಅದೊಂದು ರೂಪಕ. ಅವರನ್ನು ಕಾಲಾಂತರಕ್ಕೆ ಒಯ್ಯುವ ಸಾಕ್ಷಿ.

ಈ ಶಿಲಾಸ್ಮಾರಕದ ಬಗ್ಗೆ ನಾನು ರಾಜ್ಯಮಟ್ಟದ ಪತ್ರಿಕೆಗೊಂದು ನುಡಿಚಿತ್ರ ಬರೆಯಬೇಕಿತ್ತು. ಕವಿ ಪುತ್ರ ಪೂರ್ಣಚಂದ್ರ ತೇಜಸ್ವಿಯವರನ್ನು ಕೇಳಿದೆ. ಅವರು ಆ ಅಪೂರ್ವ ಸ್ಮಾರಕದ ಕಲ್ಪನೆ, ಪ್ರಕೃತಿಯೊಂದಿಗೆ ಅದರ ಸಹಜತೆ ಹೀಗೆ ಎಲ್ಲವನ್ನೂ ವಿವರಿಸಿದರು. ಆದರೆ ಅದನ್ನು ಕವಿಶೈಲಕ್ಕ್ಕೆ ಕೊಡುಗೆಯಾಗಿ ನೀಡಿದವರು ಹೆಸರು ಹೇಳಲೇ ಇಲ್ಲ. ನೂರಾರು ಮೈಲು ದೂರದಿಂದ ಅಂಥ ಕಲ್ಲುಗಳನ್ನು ಕವಿಶೈಲಕ್ಕೆ ತಂದದ್ದು, ಬೆಟ್ಟದ ಮೇಲೆ ಏರಿಸಿದ್ದು, ನಿಲ್ಲಿಸಿದ್ದು, ಅದಕ್ಕಾಗಿ ಆದ ಲಕ್ಷ ಲಕ್ಷ ಖರ್ಚು ವೆಚ್ಚವನ್ನು ಒಬ್ಬರೇ ನಿಭಾಯಿಸಿದ್ದು, ಆ ದಾನಿಯ ಹೆಸರನ್ನು ತೇಜಸ್ವಿಯವರು ಹೇಳಲೇ ಇಲ್ಲ. ನಾನು ಹಠ ಬಿಡಲಿಲ್ಲ. ಕೊನೆಗೆ ತೇಜಸ್ವಿ ಯಾರಿಗೂ ಹೇಳ ಬೇಡಿ ‘ಆಫ್ ದಿ ರೆಕಾರ್ಡು’ ಅನ್ನುತ್ತಲೇ ಅದು ಯುವ ಉದ್ಯಮಿ, ಕುವೆಂಪು ಅಭಿಮಾನಿ ಸಿದ್ಧಾರ್ಥ ಹೆಗ್ಡೆಯವರ ಕೊಡುಗೆ ಅಂದರು.

ಕುಟುಂಬ ಸದಸ್ಯರ ಜೊತೆಗೆ ಗಂಗಯ್ಯ ಹೆಗ್ಡೆ

ನಾನು ಹುಡುಕಿದೆ. ಯಾವ ಕಲ್ಲು ಕಂಬಗಳಡಿಯಲ್ಲೂ ಸಿದ್ಧಾರ್ಥ ಅಥವಾ ಅವರ ತಂದೆ ಗಂಗಯ್ಯ ಹೆಗ್ಡೆಯವರ ಹೆಸರು ಇರಲಿಲ್ಲ. ಭಾರತೀಯ ಕಾಫಿಗೆ ಜಗತ್ತಿನಲ್ಲಿ ಮರ್ಯಾದೆ ತಂದುಕೊಟ್ಟ, ಬೆಳೆಗಾರರಲ್ಲಿ ಸ್ವಾಭಿಮಾನ ವೃದ್ಧಿಸಿದ, ಆದರೆ ಎಲ್ಲೂ ಯಾರಿಗೂ ಗೊತ್ತಾಗದಂತೆ ಸರಳವಾಗಿ ಬದುಕಿದ್ದ ಸಿದ್ಧಾರ್ಥರ ಸಂಸ್ಕಾರದ ಹಿಂದೆ ಹಿರಿಯ ಕೃಷಿಕ 94ರ ಹರೆಯದ ಗಂಗಯ್ಯ ಹೆಗ್ಡೆಯವರ ಪಾತ್ರವಿದೆ.

ಇಂದು ಭಾರತದ ಅತ್ಯಂತ ದೊಡ್ಡ ಉದ್ಯಮಿ ಎಂದೆಲ್ಲಾ ಗುರುತಿಸಲ್ಪಡುವ ಸಿದ್ಧಾರ್ಥರ ಮೂಲ ಕೃಷಿ ಆಧಾರ ಇರುವುದು ಮೂಡಿಗೆರೆ ಸಮೀಪದ ಚೇತನಹಳ್ಳಿಯಲ್ಲಿ. ಈ ತೋಟವನ್ನು ಮೂಲತ ಕಟ್ಟಿ ಬೆಳೆಸಿದವರು ಗಂಗಯ್ಯ ಹೆಗ್ಡೆಯವರೇ. ಆರಂಭದಲ್ಲಿ ಇದು ಬಹಳ ಸೀಮಿತ ವ್ಯಾಪ್ತಿ ಯಲ್ಲಿದ್ದು, ದಕ್ಷಿಣದ ಬಹುಪಾಲು ಕಾಫಿ ಪ್ಲಾಂಟರ್ ್ಸ ಗಳ ಭತ್ತದ, ತೆಂಗಿನ, ಅಡಿಕೆ, ರಬ್ಬರ್‌ನಂತಹ ಕೃಷಿಕರಿಗಿಂತ ಬೇರೆಯೇ ಆಗಿ ನಿಲ್ಲುವುದು ಬ್ರಿಟನ್ ಬಳುವಳಿಗಳಿಂದ ಮತ್ತು ಕಾಫಿ ಬುಡದಿಂದ ಬಹು ಎತ್ತರಕ್ಕೆ ಬೆಳೆದು ನಿಂತಿರುವ ದಟ್ಟ ಕಾಡುಗಳಿಂದ. ಬಹುಪಾಲು ಕಾಡೊಳಗಡೆಯೇ ಬಂಗಲೆ ಕಟ್ಟಿಕೊಂಡು ಬದುಕುವ ಇವೆರೆಲ್ಲಾ ಬಹಳಷ್ಟು ಸಂದರ್ಭಗಳಲ್ಲಿ ಅದೇ ತೋಟ ಬಂಗಲೆಯ ಪೂರ್ವ ಬ್ರಿಟಿಷ್ ಮರ್ಜಿಯನ್ನೇ ಬೆಳೆಸಿ ಕೊಂಡು ಹೊರ ಗಡೆಯ ನಾಗರಿಕ ಜಗತ್ತಿನಿಂದ ದೂರವೇ ಉಳಿಯುವುದು ಹೆಚ್ಚು. ಇದಕ್ಕೆ ಅಪವಾದ ಗಂಗಯ್ಯ ಹೆಗ್ಡೆೆ ಕುಟುಂಬ.

ಈ ದೇಶದಲ್ಲಿ ಕೃಷಿಕರು ದಾನಿಗಾಳಾಗುವುದು, ಸಮಾಜ ಸೇವೆಯಲ್ಲಿ ತೊಡಗುವುದು ತುಂಬಾ ಕಮ್ಮಿ. ಕಾರಣ ಸೀಮಿತ ಆರ್ಥಿಕತೆ ತಲೆಗಿಲ್ಲದ ಕಾಲಿಗಿಲ್ಲದ ಸ್ಥಿತಿಯಲ್ಲಿ ರೈತರು ಬೇರೆಯವರಿಗಿಂತ ತನ್ನನ್ನು, ತಮ್ಮವರನ್ನು ಘೋಷಿಸಲು ಏಗುವ ಸ್ಥಿತಿಯಿದೆ. ಇಂಥದರಲ್ಲಿ ಗಂಗಯ್ಯ ಹೆಗ್ಡೆ ಶಾಲೆ ಕಟ್ಟುವ ಬಡವರಿಗೆ ಮನೆಕಟ್ಟಿಕೊಡುವ, ಸಾಮೂಹಿಕ ಮದುವೆ ಮಾಡಿಸುವ, ರೋಟರಿ ಶಾಲೆ ಕಟ್ಟುವ, ಬಡವರಿಗೆ ಆರ್ಥಿಕವಾಗಿ ನೆರವಾಗುವ ಮೂಲಕ ಊರಿಗೆ ಆಪತ್ಭಾಂಧವರಾಗುತ್ತಾರೆ. ಯಾರೇ ಸೋತು ಬರಲಿ ಹೆಗ್ಡೆಯವರು ಇಲ್ಲ ಎಂದವರಲ್ಲ. ಹಾಗಂತ ಯಾವತ್ತೊ ದಾನ-ಸೇವೆಯನ್ನು ಬಹಿರಂಗಪಡಿಸಿದವರಲ್ಲ. ಇದೇ ಗುಣ ತಂದೆಯವರಿಂದ ಮಗುವಿಗೆ ದತ್ತುವಾಗಿತ್ತು

ಈ ಸುಂದರ ಕಾಫಿತೋಟ ಸುತ್ತಲಿನ ನಿಬಿಡ ಹಸಿರು ಆವಾರ. ತೀರಾ ನಾಗರಿಕ ಜಗತ್ತಿನಿಂದ ದೂರವಿರುವ ಈ ಚೇತನ ಹಳ್ಳಿ - ಇವೆಲ್ಲವನ್ನೂ ಕಳಚಿಕೊಂಡು ಹೆಗ್ಡೆ ಕುಟುಂಬಕ್ಕೆ ಯಾವತ್ತೋ ನಗರ ಸೇರಿ ಸುಲಭವಾಗಿ ಇರಬಹುದಿತ್ತು. ಕಾಫಿ ದುಡ್ಡಿನಿಂದಲೇ ನಗರದೊಳಗೆ ಬಂಗಲೆ ಕಟ್ಟಿ ಬದುಕಬಹುದಿತ್ತು. ತೊಂಬತ್ತು ದಾಟಿದ ಮೇಲೂ ನಿನ್ನೆ ಮೊನ್ನೆಯವರೆಗೆ ಕಾರು ಹತ್ತಿ ತೋಟ ಸುತ್ತುವ ಹೆಗ್ಡೆಯವರಿಗೆ ಕಾಡಿನೊಳಗಡೆಯ ಕಣಿವೆ, ಬೆಟ್ಟ, ಹೆಮ್ಮರಗಳು, ಕಿತ್ತಳೆ, ಏಲಕ್ಕಿ ಹೀಗೆ ಹಸಿರು ವಿನ್ಯಾಸ ಅವರ ತಲೆಯೊಳಗಡೆಯೇ ಇದೆ.

ಗಂಗಯ್ಯ ಹೆಗ್ಡೆಯ ಸಹೋದರ ಕೇಶವ ಹೆಗ್ಡೆ, ಅವರ ಮಗ ಸೇನಾನಿ ಹಾಗೂ ಗಂಗಯ್ಯ ಹೆಗ್ಡೆ ಪುತ್ರ ಸಿದ್ಧಾರ್ಥ ಹೆಗ್ಡೆ

ಗಂಗಯ್ಯ ಹೆಗ್ಡೆಯವರು ಸುಸಂಸ್ಕೃತ ಮನೆತನದ ತನೂಡಿಯವರು ಇವರ ಏಕೈಕ ಅಣ್ಣ ಡಾ. ಕೇಶವ ಹೆಗ್ಡೆ ಪ್ರಖರ ಮೇಧಾವಿ ಜಗತ್‌ಪ್ರಸಿದ್ಧ ಗಣಿತ ತಜ್ಞ. ಇವರು ಸ್ವಿಟ್ಝರ್‌ಲ್ಯಾಂಡ್‌ನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾಗ ಡಾ. ಶಿವರಾಮ ಕಾರಂತರು ಭೇಟಿಯಾಗುತ್ತಾರೆ. ಅಣ್ಣ ನ ಅಣತಿ ಯಂತೆ ಗಂಗಯ್ಯ ಹೆಗ್ಡೆ ಬಿಎಸ್ಸಿ ಮುಗಿಸಿ ಊರಿಗೆ ಹಿಂದಿರುಗಿ ಕೃಷಿ ಮುಂದುವರಿಸುತ್ತಾರೆ. ಕೇಶವ ಹೆಗ್ಡೆಯವರು ಅಲ್ಪಕಾಲದಲ್ಲೇ ದೈವಾದೀನರಾಗುತ್ತಾರೆ. ಇವರ ಕಡೆಯ ಮಗ ಸೇನಾನಿ (ಇವರ ಗೆಳಯ ಕೃಪಾಕರ) ಜಗತ್ ಪ್ರಸಿದ್ದ ಛಾಯಾಚಿತ್ರಗ್ರಾಹಕ, ಪ್ರಾಣಿತಜ್ಞ ರಾಷ್ಟ್ರಕವಿ ಕುವೆಂಪು ಅವರಿಗೆ ಹೆಗ್ಡೆ ಕುಟುಂಬ ದಾಯಾದಿ.

ಗಂಗಯ್ಯ ಹೆಗ್ಡೆಯವರು ಈಗಿರುವ ಚೇತನಹಳ್ಳಿ ಕಾಫಿ ತೋಟ ವನ್ನು ಖರೀದಿಸುವ ಮುನ್ನ ನೂರಾರು ತೋಟಗಳನ್ನು ನೋಡುತ್ತಾರೆ. ಅವುಗಳ ಆಯಪಾಯ, ಸಮೃದ್ಧಿ, ಸಾರ, ನೀರು-ನೀರಾವರಿ ಉತ್ಪನ್ನ ಸಂಪರ್ಕ ಅವರ ಮನಗೊಪ್ಪದೆ ಹುಡುಕಾಟದಲ್ಲೇ ತೊಡಗುತ್ತಾರೆ. ಒಂದು ಸಮೃದ್ಧ ಕಾಫಿ ತೋಟವನ್ನು ಖರೀದಿ ಸುವಷ್ಟು ಕೈಯಲ್ಲಿ ಕಾಸಿದ್ದಾಗ ಮತ್ತು ಕನಸಿದ್ದಾಗ ಆಯ್ಕೆ ಜಟಿಲ ವಾಗುವುದು ಸಹಜ. ಚೇತನಹಳ್ಳಿ ಕಾಫಿತೋಟ ಮೂಲತಃ ಬ್ರಿಟಿಷರದ್ದು. ಇದು ವೇಲ್ಸ್ ಬ್ರಾಟಿನ್ಸ್ ಬ್ರದರ್ಸ್‌ಗೆ ಸೇರಿದ್ದು. ಇದರ ಎರಡನೆಯ ಪೀಳಿಗೆ ಕೆನಡಾದಲ್ಲಿ ನೆಲೆಸಿದ್ದ ಕಾರಣ ಹರಾಜಿಗೆ ಬಿದ್ದ ಈ ತೋಟವನ್ನು ಮೊದಲಿಗೆ ಕನ್ನಡಿಗರೇ ಆದ ಗುಡಿಯಪ್ಪ ಎಂಬವರು ಖರೀದಿಸುತ್ತಾರೆ. ಅವರಿಂದ 1956ರಲ್ಲಿ ಹೆಗ್ಡೆಯವರು ಖರೀದಿಸುತ್ತಾರೆ.

 ಈ ತೋಟ ಖರೀದಿಸಿ 60 ವರ್ಷ ಕಳೆಯಿತು. ಇಂದು ಈ ಕುಟುಂಬದ ಕಾಫಿ ಸಾಮ್ರಾಜ್ಯವನ್ನು ಸಿದ್ಧಾರ್ಥ ಸಾವಿರಾರು ಎಕರೆ ವಿಸ್ತರಿಸಬಹುದು. ಆದರೆ ಎಲ್ಲದಕ್ಕೂ ‘ತಾಯಿನೆಲೆ’ ಈ ಚೇತನ ಹಳ್ಳಿಯೇ.

ಕೃಷಿ ಮತ್ತು ಕೃಷಿಕನ ಸಂಬಂಧ, ಆ ಮೂಲಕ ಮನುಷ್ಯ ಬಾಳ್ವಿಕೆಯ ಬಗ್ಗೆ ಹೆಗ್ಡೆಯವರದು ತುಂಬು ಅನುಭವ. ಅವರಿಗೆ ಕೈಯಾರೆ ಬಿತ್ತಿದ, ಬೆಳೆದ, ಕೊಯ್ದ ಅನುಭವವಿದೆ. ಅದು ಬರೀ ಕಾರ್ಮಿಕರನ್ನೇ ನಂಬಿ ಕಟ್ಟಿದ ಕೃಷಿಗಾಥೆಯಲ್ಲ. ಅವರು ಕೈಕಾಲಿಗೆ ಕೆಸರು ಮಣ್ಣು ತಾಗಿಸಿ ಪಡೆದ ಅನುಭವದ ಪಾಯದ ಮೇಲೆ ಅವರ ಹಸಿರು ಯಶಸ್ಸು ನಿಂತಿತ್ತು. ಅವರ ವ್ಯಕ್ತಿತ್ವ ಬಹುಬಗೆ ನೆಲ ಸಂಬಂಧದಿಂದ ನಿರಂತರ ವಿಕಸಿಸಿದೆ. ಐದಾರು ದಶಕದ ಹಿಂದೆ ಅವರು ಒಳ್ಳೆಯ ಫೋಟೊಗ್ರಾಫರ್. ಕುವೆಂಪು ಚಿತ್ರಗಳನ್ನು ಅವರೇ ಅನೇಕ ಬಾರಿ ತೆಗೆದಿದ್ದಾರೆ. ರಾಷ್ಟ್ರೀಯ ಪತ್ರಿಕೆಗೆ ಕಾಫಿ, ಏಲಕ್ಕಿಯ ಬಗ್ಗೆ ಲೇಖನ ಬರೆದಿದ್ದಾರೆ. ರೋಟರಿಯಲ್ಲಿ ಅಧ್ಯಕ್ಷಗಾದಿಗೆ ಏರಿದ್ದಾರೆ. ರಾಮಕೃಷ್ಣ-ಶಾರದಾ ಮಾತೆಯ ಪರಮ ಅನುಯಾಯಿ. ಚಿಕ್ಕಮಗಳೂರಲ್ಲಿ ಶಾರದಾ ಮಂದಿರ ಆಗಲು, ಬೆಳೆಯಲು ಈ ಕುಟುಂಬದ ಪಾತ್ರ ತುಂಬಾ ಇದೆ.

ಓದು, ಪ್ರವಾಸ ಹೆಗ್ಡೆಯವರ ಮತ್ತೊಂದು ಗೀಳು. ಶ್ರೀಮತಿ ವಸಂತಿ ಹೆಗ್ಡೆಯವರದು ಅಪಾರ ಓದಿನಿಂದ ದತ್ತವಾದ ಜ್ಞಾನ. ಸಾಹಿತ್ಯ, ಸಂಸ್ಕೃತಿಯ ಪ್ರೀತಿ ಕುವೆಂಪು ಮೂಡಿಸಿದ್ದು. ಗಂಗಯ್ಯ ಹೆಗ್ಡೆಯವರಿಗೆ ಕುವೆಂಪು ಬರೀ ಒಂದು ಕಡೆಯ ಸಂಬಂಧವಲ್ಲ. ಹೆಗ್ಡೆಯವರ ಭಾವ ರತ್ನಾಕರ ಕುವೆಂಪು ಅವರ ತಂಗಿಯನ್ನೇ ಮದುವೆಯಾದದು. ಹಾಗೆಯೇ ರತ್ನಾಕರರ ತಂಗಿಯನ್ನು ಕುವೆಂಪು ಅವರ ಹೆಂಡತಿ ತಮ್ಮನಿಗೆ: ಇನ್ನೊಬ್ಬ ತಂಗಿಯನ್ನು ಹೆಗ್ಡೆಯವರ ಅಣ್ಣ ಕೇಶವ ಹೆಗ್ಡೆಯವರಿಗೆ ತಂದಿತ್ತು. ಇವೆೆಲ್ಲಾ ಸಂಬಂಧ ಕುವೆಂಪು ಅವರನ್ನು ಹೆಗ್ಡೆ ಕುಟುಂಬದೊಂದಿಗೆ ಮತ್ತಷ್ಟು ಬಲವಾಗಿ ಬೆಸೆದಿತ್ತು.

ಪೂರ್ಣಚಂದ್ರ ತೇಜಸ್ವಿ ಆರಂಭದಲ್ಲಿ ಖರೀದಿಸಿದ ಜನ್ನಾಪುರದ ‘ಚಿತ್ರಕೂಟ’ ಕಾಫಿತೋಟದಲ್ಲಿ ಹೆಗ್ಡೆಯವರ ಚೇತನ ಹಳ್ಳಿಗೂ ಬಹಳ ದೂರವಿಲ್ಲ. ಚಿತ್ರಕೂಟವನ್ನು ಕೊಂಡ ಮೇಲೆ ತೇಜಸ್ವಿ -ಹೆಗ್ಡೆ ಭೇಟಿ ಆಗಾಗ ನಡೆಯುತ್ತಿತ್ತು. ಕಾಫಿ ಬೆಳೆಗೆ ಸಂಬಂಧಿಸಿದ ಸಂಘಟನೆ, ಹೋರಾಟ, ಕಾಫಿಗೆ ನ್ಯಾಯಯುತವಾದ ಬೆಲೆ, ಮಾರುಕಟ್ಟೆ ಸ್ಥಿರತೆಯನ್ನು ಹೇಗಾದರೂ ಮಾಡಿ ತರಬೇಕೆಂಬುದು ತೇಜಸ್ವಿ ಉದ್ದೇಶವಾಗಿತ್ತು. ಆವಾಗಲೇ ಕಾಫಿಯಲ್ಲಿ ದೀಘ ಕಾಲದ ಅನುಭವಿ ಕೃಷಿಕರಾಗಿದ್ದ ಹೆಗ್ಡೆಯವರ ಒಡನಾಟದಿಂದ ತಮ್ಮ ಉದ್ದೇಶಕ್ಕೆ ಇನ್ನೂ ಹೆಚ್ಚಿನ ಬಲ ಬರಬಹುದುದೆಂದು ಅವರನ್ನೇ ಪ್ಲಾಂಟರ್ಸ್‌ ಸಂಘಟನೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ತಮ್ಮ ಉದ್ದೇಶವನ್ನು ಸರಕಾರ, ಆಡಳಿತಾಂಗದ ಮುಂದಿಡುವ ಸಂದರ್ಭದಲ್ಲೆಲ್ಲಾ ತೇಜಸ್ವಿ ಹೆಗ್ಡೆ ಒಟ್ಟಾಗುತ್ತಿದ್ದರು. ಮುಂದೆ ತೇಜಸ್ವಿ ಯವರು ‘ಚಿತ್ರಕೂಟ’ವನ್ನು ಮಾರಿ ಮೂಡಿಗೆರೆಯಲ್ಲಿ ‘ನಿರುತ್ತರ’ ವನ್ನು ಕೊಂಡುಕೊಂಡ ಮೇಲೆ ಇವರ ಸಂಬಂಧ ನಡೆದೇ ಇತ್ತು.

ಒಬ್ಬ ಲೇಖಕನಾಗಿ ಅದಕ್ಕಿಂತ ಹೆಚ್ಚು ಕೃಷಿಕನಾಗಿ ನಾನು ಗಂಗಯ್ಯ ಹೆಗ್ಡೆ ಕುಟುಂಬದಿಂದ ಪ್ರಭಾವಿತವಾಗಿದ್ದೇನೆ. ಅನೇಕ ಬಾರಿ ಚೇತನಹಳ್ಳಿಯ ಮಹಾಮನೆಯಲ್ಲಿ ಉಳಿದಿದ್ದೇನೆ. ಉಂಡಿದ್ದೇನೆ. ಇವತ್ತು ನನ್ನ ದೇರ್ಲದ ತೋಟದಲ್ಲಿರುವ ಸಮೃದ್ಧ ಕಾಳುಮೆಣಸಿನ ಬಳ್ಳಿಗಳು ಗಂಗಯ್ಯ ಹೆಗ್ಡೆಯವರೇ ಕೊಟ್ಟವುಗಳು. ಅವರನ್ನು ಊರೆಲ್ಲಾ ಪ್ರೀತಿಯಿಂದ ಕರೆಯುವುದು ‘ಅಯ್ಯ’ಎಂದು. ಅಯ್ಯನಿಗೆ 90 ತುಂಬಿದಾಗ ಆ ಕುಟುಂಬದ ಒತ್ತಾಸೆಯಂತೆ ಓಡಾಡಿ, ಅವರೊಂದಿಗೆ ಗಂಟೆಗಟ್ಟಳೆ ಕೂತು ಬಗೆದು ಬರೆದ ಪುಸ್ತಕ ‘ಚೇತನ’. ನಾಲ್ಕು ವರ್ಷಗಳ ಹಿಂದೆ ಅದನ್ನು ಎಸ್.ಎಂ. ಕೃಷ್ಣ ಅವರೇ ಬಿಡುಗಡೆ ಮಾಡಿದ್ರು. ಕುಟುಂಬವೇ ಆ ಕೃತಿಯನ್ನು ಪ್ರಕಟಿಸಿ ಹಂಚಿತ್ತು. ಇಂದು ಮಗನ ಸಾವಿನ ಅರಿವಿಲ್ಲದ ಗಂಗಯ್ಯ ಹೆಗ್ಡೆ ಮೈಸೂರಿನ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಹೆಗ್ಡೆಯವರೆಂದರೆ ಬರೀ ಕೃಷಿಯೊಂದರ ಕಥೆಯಲ್ಲ. ಅದು ಇಡೀ ಮಲೆನಾಡಿನ, ಒಂದು ಮಹಾ ಕುಟುಂಬದ, ಒಬ್ಬ ಅಂತರ್‌ರಾಷ್ಟ್ರೀಯ ಉದ್ಯಮಿಯ ಆತ್ಮ ವೃತ್ತಾಂತ, ಈ ವೃತ್ತಾಂತದ ನಡುವೆ ಇರಿಯಾಗಿ ದಾರಿ ಮುಚ್ಚಿ ಹೋದ ನಿಖರ ಹಸಿರು ಇದೆ. ದೇಶಕ್ಕೆ ಕಾಫಿಯನ್ನು ಪರಿಚಯಿಸಿ ಎತ್ತರಕ್ಕೇರಿಸಿದ ಆಂಗ್ಲರಿದ್ದಾರೆ. 450 ವರ್ಷಗಳ ಸುದೀರ್ಘ ಇತಿಹಾಸವಿರುವ ತನೂಡಿಯ ಕಥೆಯಿದೆ. ದಟ್ಟಕಾಡು ನುಸುಳಿ ಬೇಟೆಯಾಡುವ ಸೇವಕರಿದ್ದಾರೆ. ಕುವೆಂಪು ಅವರ ವೈಚಾರಿಕತೆ, ಪರಮಹಂಸರ ಆಧ್ಯಾತ್ಮ, ಮಗ ಸಿದ್ಧಾರ್ಥ ಏರಿದ ಎತ್ತರ ಹೀಗೆ ಹೆಗ್ಡೆ ಕಥಾನಕ ಹತ್ತಾರು ನೆನೆಪುಗಳ ಒಂದು ಸಂಕಲನ. ಬೇಗನೆ ಹೆಗ್ಡೆ ಚೇತರಿಸಿಕೊಂಡು ಚೇತನಹಳ್ಳಿಗೆ ಬರಲೆಂದು ಆಶಿಸುವ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)