varthabharthi

ಅಂತಾರಾಷ್ಟ್ರೀಯ

ಹಜ್: ಅರಫಾ ಬೆಟ್ಟದಲ್ಲಿ ಲಕ್ಷಾಂತರ ಮುಸ್ಲಿಮರು

ವಾರ್ತಾ ಭಾರತಿ : 10 Aug, 2019

ಅರಫಾ (ಸೌದಿ ಅರೇಬಿಯ), ಆ. 10: ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ಸುಮಾರು 25 ಲಕ್ಷ ಮುಸ್ಲಿಮರು ಯಾತ್ರೆಯ ಎರಡನೇ ದಿನವಾದ ಶನಿವಾರ ಅರಫಾ ಬೆಟ್ಟಕ್ಕೆ ಆಗಮಿಸಿದ್ದಾರೆ.

ಪುರುಷ ಮತ್ತು ಮಹಿಳಾ ಯಾತ್ರಿಗಳು ದೇವರ ನಾಮ ಪಠಿಸುತ್ತಾ ಬೆಟ್ಟವನ್ನು ಹತ್ತಿದರು.

ಪ್ರವಾದಿ ಮುಹಮ್ಮದರು ತನ್ನ ಕೊನೆಯ ಪ್ರವಚನವನ್ನು ನೀಡಿದ ಬೆಟ್ಟಕ್ಕೆ ಹೆಚ್ಚಿನ ಯಾತ್ರಿಕರು ಶನಿವಾರ ಮುಂಜಾನೆಯೇ ನಡೆದುಕೊಂಡು ಹೋದರು.

ಭೂಮಿ ಮೇಲಿನ ಅತಿ ದೊಡ್ಡ ಧಾರ್ಮಿಕ ಸಮಾವೇಶಗಳ ಪೈಕಿ ಒಂದಾಗಿರುವ ಹಜ್ ಆಚರಣೆಯ ಎರಡನೇ ದಿನವು ಯಾತ್ರಿಗಳಿಗೆ ಅತ್ಯಂತ ಸ್ಮರಣೀಯವಾಗಿದೆ. ಶುಕ್ರವಾರ ರಾತ್ರಿ ಮಿನಾದಲ್ಲಿ ತಂಗಿದ ಯಾತ್ರಿಕರು ಶನಿವಾರ ಸೂರ್ಯೋದಯದ ಬಳಿಕ ಅರಫಾ ಬೆಟ್ಟದತ್ತ ಸಾಗಿದರು.

ರಸ್ತೆಗಳಲ್ಲಿ ಯಾತ್ರಿಕರ ಸಂಚಾರವನ್ನು ನಿಯಂತ್ರಿಸಿದ ಭದ್ರತಾ ಸಿಬ್ಬಂದಿ, ಅವರಿಗೆ ಮಾರ್ಗದರ್ಶನ ನೀಡಿದರು. ವಿವಿಧ ಸರಕಾರ ಸಂಸ್ಥೆಗಳು ಯಾತ್ರಿಗಳಿಗೆ ಆಹಾರ ಮತ್ತು ಔಷಧಗಳನ್ನು ಪೂರೈಸಿದರು.

► ಯಾತ್ರಿಕರ ಮೇಲೆ ಸುರಿದ ಜಡಿ ಮಳೆ

ಶನಿವಾರ ಅರಫಾ ಬೆಟ್ಟದಲ್ಲಿ ಹಜ್‌ನ ಎರಡನೇ ದಿನದ ವಿಧಿ ವಿಧಾನಗಳನ್ನು ಯಾತ್ರಿಕರು ಪೂರೈಸುತ್ತಿದ್ದಂತೆಯೇ, ಭಾರೀ ಮಳೆ ಸುರಿಯಿತು.

ಕೆಲವರು ಆಶ್ರಯಕ್ಕಾಗಿ ಓಡಿದರೆ, ಹಲವರು ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ರಸ್ತೆಗಳಿಗೆ ಓಡಿದರು.

ಮಳೆ ಸುರಿಯುತ್ತಿರುವಾಗ ಪ್ರಾರ್ಥನೆ ಸಲ್ಲಿಸಿದರೆ ಹೆಚ್ಚಿನ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇಸ್ಲಾಮ್‌ನಲ್ಲಿದೆ.

ಜಡಿ ಮಳೆ ಸುರಿದ ಕೆಲವೇ ನಿಮಿಷಗಳಲ್ಲಿ ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯಿತು. ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತಿತು ಹಾಗೂ ವಾತಾವರಣ ತಂಪಾಯಿತು.

ಈ ಸಂದರ್ಭದಲ್ಲಿ ಪ್ರವಾಹ ತಲೆದೋರುವ ಸಾಧ್ಯತೆಯಿರುವ ತಗ್ಗು ಪ್ರದೇಶಗಳಿಗೆ ಹೋಗದಂತೆ ಹಾಗೂ ಲೋಹದ ವಸ್ತುಗಳನ್ನು ಸ್ಪರ್ಶಿಸದಂತೆ ಅಧಿಕಾರಿಗಳು ಯಾತ್ರಿಗಳಿಗೆ ಎಚ್ಚರಿಕೆ ನೀಡಿದರು.

► ಮೂರನೇ ಘಟ್ಟದತ್ತ ಯಾತ್ರಿಕರು

ಶನಿವಾರ ಹಗಲು ಅರಫಾ ಬೆಟ್ಟದಲ್ಲಿ ಕಳೆದ ಬಳಿಕ, ರಾತ್ರಿ ಯಾತ್ರಿಕರು ಹಜ್‌ನ ಮೂರನೇ ಘಟ್ಟದತ್ತ ಸಾಗಿದ್ದಾರೆ.

ಸುಮಾರು 25 ಲಕ್ಷ ಯಾತ್ರಿಕರು ಶನಿವಾರ ರಾತ್ರಿ ಮುಝ್ದಲಿಫದಲ್ಲಿ ಕಳೆಯಲಿದ್ದಾರೆ. ಅವರು ಮಧ್ಯರಾತ್ರಿಯ ಬಳಿಕ, ‘ಸೈತಾನನಿಗೆ ಕಲ್ಲೆಸೆಯುವ’ ವಿಧಿಯಲ್ಲಿ ಪಾಲ್ಗೊಳ್ಳಲು ಮಿನಾಕ್ಕೆ ತೆರಳಲಿದ್ದಾರೆ.

ಮಿನಾದಲ್ಲಿ ಅವರು ಸೈತಾನನ್ನು ಸಂಕೇತಿಸುವ ಗೋಡೆಗೆ ಕಲ್ಲೆಸೆಯಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)