varthabharthi

ಬೆಂಗಳೂರು

10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿ: ಡಾ.ಜಿ.ಪರಮೇಶ್ವರ್ ಆಗ್ರಹ

ವಾರ್ತಾ ಭಾರತಿ : 10 Aug, 2019

ಬೆಂಗಳೂರು, ಆ.10: ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಬೇಕು ಹಾಗೂ 10 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.

ಶನಿವಾರ ಸದಾಶಿವನಗರದ ಬಿಡಿಎ ಕ್ವಾಟ್ರಸ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಎರಡೂವರೆ ಲಕ್ಷ ಜನ ಮನೆ ತೊರೆದಿದ್ದು, 33 ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜಾನುವಾರುಗಳು ಸತ್ತಿವೆ. ಕೊಡಗು, ಕರಾವಳಿಯಲ್ಲಿಯೂ ಅತಿವೃಷ್ಟಿಯಿಂದ ಹಾನಿಯಾಗಿದ್ದು, 9 ಜನರು ಮರಣ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಪ್ರವಾಹವನ್ನು ನಿಭಾಯಿಸಲು ಇಲ್ಲಿ ಪೂರ್ಣ ಪ್ರಮಾಣದ ಸರಕಾರವೇ ಇಲ್ಲದಂತಾಗಿದೆ ಎಂದರು.

ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರಕಾರವಿದ್ದಿದ್ದರೆ ಸಚಿವರು ಸ್ಥಳದಲ್ಲಿಯೇ ಇದ್ದು ಅಗತ್ಯ ಕೆಲಸಗಳನ್ನು ಮಾಡಿಸುತ್ತಿದ್ದರು. ಆದರೆ, ಇದುವರೆಗೂ ಸಂಪುಟ ಮಾಡಿಲ್ಲ ಎಂದ ಅವರು, ಮುಖ್ಯಮಂತ್ರಿ ಇಳಿ ವಯಸ್ಸಿನಲ್ಲಿಯೂ ಪ್ರವಾಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸರಿಯಾದ ಸಹಕಾರ ಸಿಗುತ್ತಿಲ್ಲ. ಹೀಗಾಗಿ, ಕೂಡಲೇ ಕೇಂದ್ರ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಧಾನಿ ಹಾಗೂ ಗೃಹ ಸಚಿವರು ರಾಜ್ಯದಲ್ಲಿನ ನೆರೆ ಪರಿಸ್ಥಿತಿಯನ್ನು ವೈಮಾನಿಕ ಸಮೀಕ್ಷೆ ಸೂಕ್ತ ಪರಿಹಾರವನ್ನು ನೀಡಲು ಮುಂದಾಗಬೇಕು ಎಂದು ಹೇಳಿದರು.

ಪ್ರವಾಹದಿಂದ ತತ್ತರಿಸಿರುವ ಜನರಿಗೆ ಶಾಸಕನಾಗಿ ನನ್ನ ಒಂದು ತಿಂಗಳ ಸಂಬಳ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ ರುಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇನೆ. ರಾಜ್ಯದಲ್ಲಿ ನೆರೆ ಪರಿಸ್ಥಿತಿ ವಿಪರೀತವಾಗಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಸಂಕಷ್ಟದಲ್ಲಿರುವವರಿಗೆ ಅಗತ್ಯ ತುರ್ತು ಪರಿಹಾರ ಕಲ್ಪಿಸಬೇಕಿದೆ. ಕಾಂಗ್ರೆಸ್‌ನ ಎಲ್ಲ ಶಾಸಕರು ನೆರೆ ಸಂತ್ರಸ್ತರಿಗೆ ನೀಡಬೇಕು ಎಂದು ಈ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ನಾಯಕರಲ್ಲಿ ವಿನಂತಿಸುವೆ. ಅದನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತೇವೆ. ಅಲ್ಲದೆ, ನಮ್ಮ ಮೆಡಿಕಲ್ ಕಾಲೇಜಿನಿಂದ ಚಿಕಿತ್ಸೆಗೆ ತಂಡ ಕಳುಹಿಸಲು ತಯಾರಿದ್ದೇವೆ ಎಂದು ಅವರು ಹೇಳಿದರು.

ಬಿಜೆಪಿಯವರಿಗೆ ಕಾಂಗ್ರೆಸ್, ಜೆಡಿಎಸ್ ಶಾಸಕರಿಂದ ರಾಜೀನಾಮೆ ಕೊಡಿಸಲು ಇದ್ದ ಆಸಕ್ತಿ, ಸರಕಾರ ಬೀಳಿಸಲು ಇದ್ದ ಆಸಕ್ತಿ ಸರಕಾರ ರಚಿಸಲು ಯಾಕೆ ಆ ಸಮಯ ನಿಗದಿ ಮಾಡುತ್ತಿಲ್ಲ. ರಾಜ್ಯಪಾಲರು ಕಣ್ಣು ಮುಚ್ಚಿ ಕುಳಿತಿದ್ದಾರಾ? ಎಂದು ಪ್ರಶ್ನಿಸಿದ ಅವರು, ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಕಾಯುತ್ತಿದ್ದರೆ ಅದನ್ನು ಬಹಿರಂಗ ಪಡಿಸಿ. ಅವರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದೀರಾ ಎಂದರು.

ಸರಕಾರ ಇಲ್ಲದೆ ಅಧಿಕಾರಿಗಳು ಆರಾಮಾಗಿ ಕುಳಿತಿದ್ದಾರೆ. ಯಾವ ನೋಡೆಲ್ ಅಧಿಕಾರಿಗಳು ಕ್ಯಾಂಪ್ ಮಾಡಿಲ್ಲ. ತಕ್ಷಣ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಯಾಕೆ ಮಾಡಿಲ್ಲ ಎಂಬ ಕಾರಣ ಬಹಿರಂಗ ಪಡಿಸಬೇಕು. ಈ ಸರಕಾರ ಹೇಗೆ ಕೆಲಸ ಮಾಡುತ್ತೆ ಎಂದು ಗಮನಿಸುತ್ತೇನೆ. ಕಾನೂನು ಬಾಹಿರವಾಗಿ ಏನೇ ತೀರ್ಮಾನ ಆದರೂ ಅದನ್ನು ಜನರ ಗಮನ್ಕಕೆ ತರುತ್ತೇವೆ ಎಂದು ಪರಮೇಶ್ವರ್ ಹೇಳಿದರು.

ನಮ್ಮ ಸರಕಾರ ಯಾವುದನ್ನೂ ಕಾನೂನು ಬಾಹಿರವಾಗಿ ಮಾಡಿಲ್ಲ. ಬಿಬಿಎಂಪಿಯ ಕೌನ್ಸಿಲ್‌ನಲ್ಲಿಯೂ ಬಿಜೆಪಿ ಸದಸ್ಯರು ಇದ್ದಾರೆ. ಅವರು ಒಪ್ಪಿಕಳುಹಿಸಿದ ಬಜೆಟ್ ಅನ್ನೇ ನಾವು ಒಪ್ಪಿದ್ದೇವೆ. ಆದರೆ ಯಾಕೆ ಅದನ್ನು ತಡೆದಿದ್ದಾರೆ ಗೊತ್ತಿಲ್ಲ. 13,500 ಸಾವಿರ ಕೋಟಿ ಇದ್ದ ಬಜೆಟ್ ಅನ್ನು ಕಡಿಮೆ ಮಾಡಿದ್ದೇವೆ. ಯಾಕೆ ತಡೆ ಹಿಡಿದಿದ್ದಾರೆ ಗೊತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)