varthabharthi

ಬೆಂಗಳೂರು

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉದ್ಘಾಟನಾ ಸಮಾರಂಭ

‘ನ್ಯಾ.ವಿಶ್ವನಾಥ್ ಶೆಟ್ಟಿ ಅಧಿಕಾರದಲ್ಲಿರುವುದು ನಾಚಿಕೆಗೇಡು’

ವಾರ್ತಾ ಭಾರತಿ : 10 Aug, 2019

ಬೆಂಗಳೂರು, ಆ.10: ಲೋಕಾಯುಕ್ತ ನ್ಯಾಯಮೂರ್ತಿ ಆಗಿ ಪಿ.ವಿಶ್ವನಾಥ ಶೆಟ್ಟಿ ಅಧಿಕಾರದಲ್ಲಿ ಮುಂದುವರೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ವಾಗ್ದಾಳಿ ನಡೆಸಿದರು.

ಶನಿವಾರ ಇಲ್ಲಿನ ಕಾಮಾಕ್ಷಿಪಾಳ್ಯದ ಧನಂಜಯ ಸಭಾಂಗಣದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆಯ ಘನತೆ ಮಣ್ಣು ಪಾಲಾಗಿದೆ. ಇಂತಹ ಸಂಸ್ಥೆಗೆ ದಕ್ಷ, ಪಾರದರ್ಶಕ, ನಿಷ್ಪಕ್ಷಪಾತ ವ್ಯಕ್ತಿಯನ್ನು ನೇಮಕ ಮಾಡಬೇಕು. ಆದರೆ, ವಿಶ್ವನಾಥ ಶೆಟ್ಟಿ ಅಧಿಕಾರದಲ್ಲಿರುವುದು ಸರಿಯಲ್ಲ. ಈ ಕೂಡಲೇ ರಾಜೀನಾಮೆ ನೀಡಿದರೆ ಒಳ್ಳೆಯದು ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ಹತ್ತು ವರ್ಷ ವಕೀಲರಾಗಿ ಸೇವೆ ಸಲ್ಲಿಸಿರುವ ವಿಶ್ವನಾಥ ಶೆಟ್ಟಿ ಅವರು, ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಡಿ.ಕೆ. ಶಿವಕುಮಾರ ಪರವಾಗಿ ಬೆನ್ನಿಗಾನಹಳ್ಳಿ 4 ಎಕರೆ 20 ಗುಂಟೆ ಜಮೀನು ಡಿನೋಟಿಫಿ ಕೇಶನ್ ಪ್ರಕರಣದ ಪರ ವಕಾಲತ್ತು ವಹಿಸಿದ್ದಾರೆ. ಇಂತಹ ವ್ಯಕ್ತಿಗಳನ್ನು ಲೋಕಾಯುಕ್ತಕ್ಕೆ ನೇಮಿಸಿ, ಆ ಸಂಸ್ಥೆಯ ಗೌರವವನ್ನು ಹಾಳು ಮಾಡಲಾಗಿದೆ ಎಂದು ಆರೋಪಿಸಿದರು.

ಇಂದು ಪ್ರಜಾಪ್ರಭುತ್ವವನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಾನು, ತನ್ನ ಮಕ್ಕಳು, ಮೊಮ್ಮಕ್ಕಳು ಮಾತ್ರ ಜನಪ್ರತಿನಿಧಿಗಳಾಗಬೇಕು ಎಂಬ ಆಶಯವನ್ನು ರಾಜಕಾರಣಿಗಳು ಬಹಿರಂಗವಾಗಿಯೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಕುಟುಕಿದ ಅವರು, ಕೆಲ ರಾಜಕೀಯ ಪಕ್ಷಗಳು ಸಹ ಹಣ, ಅಧಿಕಾರ ಮತ್ತು ಜಾತಿ ಬೆಂಬಲ ಇರುವವರಿಗೆ ಚುನಾವಣಾ ಟಿಕೆಟ್ ನೀಡುತ್ತಿವೆ. ಇದರಿಂದ ರಾಜಕೀಯ ಪಕ್ಷಗಳೆ ಪ್ರಜಾಪ್ರಭುತ್ವದ ನಾಶಕ್ಕೆ ಟೊಂಕಕಟ್ಟಿ ನಿಂತಿವೆ ಎಂದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಇಂದಿನ ದೇಶದ ಸ್ಥಿತಿ ಗಮನಿಸಿದಾಗ ಗಾಬರಿ ಆಗುತ್ತದೆ. ಬಡತನ, ನಿರುದ್ಯೋಗ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ, ಮೂಲ ಸಮಸ್ಯೆಗಳನ್ನು ಮರೆಮಾಚಿ, ಹಸಿ ಸುಳ್ಳುಗಳನ್ನು ನೇರವಾಗಿ ಹೇಳುತ್ತಿದ್ದಾರೆ ಎಂದು ದೂರಿದರು.

ಏಳು ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಇಂದು ನಾಯಕತ್ವದ ಅಭಾವ ಎದ್ದು ಕಾಣುತ್ತಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಸಮಿತಿಯೊಳಗೂ ಬಲವುಳ್ಳ ನಾಯಕರು ಇಲ್ಲ ಎಂದ ಅವರು, ಸಾಮಾಜಿಕ ಕಳಕಳಿಯುಳ್ಳ ಪಕ್ಷವೊಂದು ಜನರಿಗೆ ಅವಶ್ಯತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕಾರ್ಯ ನಿರ್ವಹಿಸಲಿ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಹಿರಿಯ ವಕೀಲ ಕೆ.ವಿ.ಧನಂಜಯ, ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್, ಖಜಾಂಚಿ ಕೆ.ಬಿ.ಅರವಿಂದ್, ಜಂಟಿ ಕಾರ್ಯದರ್ಶಿ ರಘುಪತಿ ಭಟ್ ಸೇರಿಂತೆ ಪ್ರಮುಖರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)