varthabharthi


ಕ್ರೀಡೆ

ಹೈದರಾಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸೌರಭ್, ಅಶ್ವಿನಿ-ಸಿಕ್ಕಿ ಫೈನಲ್‌ಗೆ

ವಾರ್ತಾ ಭಾರತಿ : 10 Aug, 2019

ಹೈದರಾಬಾದ್, ಆ.10: ಹೈದರಾಬಾದ್ ಓಪನ್ ಬಿಡಬ್ಲುಎಫ್ ಟೂರ್ ಸೂಪರ್100 ಟೂರ್ನಮೆಂಟ್‌ನಲ್ಲಿ ಶನಿವಾರ ಹಾಲಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದರು.

 ಮಧ್ಯಪ್ರದೇಶದ 26ರ ಹರೆಯದ ಆಟಗಾರ ಸೌರಭ್ ಮಲೇಶ್ಯಾದ ಇಸ್ಕಂದರ್ ಝುಲ್ಕರ್‌ನೈನ್‌ವಿರುದ್ದ ಶನಿವಾರ 48 ನಿಮಿಷಗಳ ಕಾಲ ನಡೆದ ಸೆಮಿ ಫೈನಲ್‌ನಲ್ಲಿ 23-21, 21-16 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದರು.

ರವಿವಾರ ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಸೌರಭ್ ಸಿಂಗಾಪುರದ ಲೊಹ್ ಕೀನ್ ಯಿವ್ ಅಥವಾ ಕೊರಿಯಾದ ಹಿಯೊ ಕ್ವಾಂಗ್ ಹೀ ಅವರನ್ನು ಎದುರಿಸಲಿದ್ದಾರೆ.

 ಸೌರಭ್ ಕಳೆದ ವರ್ಷ ಡಚ್ ಓಪನ್ ಸೂಪರ್ 100 ಹಾಗೂ ರಶ್ಯ ಓಪನ್ ಸೂಪರ್ 100 ಪ್ರಶಸ್ತಿಗಳನ್ನು ಜಯಿಸಿದ್ದರು. ಇದೇ ವೇಳೆ ಅಗ್ರ ಶ್ರೇಯಾಂಕದ ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಹಾಂಕಾಂಗ್‌ನ ಫಾನ್ ಕಾ ಯಾನ್ ಹಾಗೂ ವು ಯಿ ಟಿಂಗ್‌ರನ್ನು 21-12, 21-12 ನೇರ ಗೇಮ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಈ ಋತುವಿನಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಅಶ್ವಿನಿ ಹಾಗೂ ಸಿಕ್ಕಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಬೇಕ್ ಹಾ ನಾ ಹಾಗೂ ಜುಂಗ್ ಕಿಯುಂಗ್ ಯುನ್‌ರನ್ನು ಮುಖಾಮುಖಿ ಯಾಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)