varthabharthi

ಕ್ರೀಡೆ

ಟೊರಾಂಟೊ ಓಪನ್: ಒಸಾಕಾ ವಿರುದ್ಧ ಸೆರೆನಾಗೆ ಜಯ

ವಾರ್ತಾ ಭಾರತಿ : 10 Aug, 2019

ಟೊರಾಂಟೊ, ಆ.10: ವಿಶ್ವದ ನಂ.1 ಆಟಗಾರ್ತಿ ನವೊಮಿ ಒಸಾಕಾರನ್ನು ನೇರ ಸೆಟ್‌ಗಳಿಂದ ಸದೆಬಡಿದ ಸೆರೆನಾ ವಿಲಿಯಮ್ಸ್ ಟೊರಾಂಟೊ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾ ಜಪಾನ್‌ನ ಸ್ಟಾರ್ ಆಟಗಾರ್ತಿಯನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ಕಳೆದ ವರ್ಷ ಅಮೆರಿಕ ಓಪನ್ ಫೈನಲ್‌ನಲ್ಲಿನ ಸೋಲಿನ ಸೇಡನ್ನು ತೀರಿಸಿಕೊಂಡರು. ಒಸಾಕಾ ವಿರುದ್ಧದ ಮೂರನೇ ಮುಖಾಮುಖಿಯಲ್ಲಿ ಮೊದಲ ಬಾರಿ ಸೆರೆನಾ ಜಯ ದಾಖಲಿಸಿದರು.

ಈ ವಾರ ಒಂದೂ ಸೆಟನ್ನು ಕಳೆದುಕೊಳ್ಳದ ಸೆರೆನಾ ನಾಲ್ಕನೇ ಸಿಂಗಲ್ಸ್ ಪ್ರಶಸ್ತಿಯತ್ತ ಚಿತ್ತಹರಿಸಿದ್ದಾರೆ. ಈ ಹಿಂದೆ 2001, 2011 ಹಾಗೂ 2013ರಲ್ಲಿ ಪ್ರಶಸ್ತಿ ಜಯಿಸಿದ್ದರು.

 ಸೆರೆನಾ ಸೆಮಿ ಫೈನಲ್ ಹಣಾಹಣಿಯಲ್ಲಿ ಝೆಕ್‌ನ ಕ್ವಾಲಿಫೈಯರ್ ಮರಿ ಬೌಝ್‌ಕೋವಾರನ್ನು ಎದುರಿಸಲಿದ್ದಾರೆ. ಬೌಝ್‌ಕೋವಾ ಎದುರಾಳಿ ವಿಂಬಲ್ಡನ್ ಚಾಂಪಿಯನ್ ಸಿಮೊನಾ ಹಾಲೆಪ್ ಮೊದಲ ಸೆಟ್‌ನ್ನು 4-6ರಿಂದ ಸೋತ ಬಳಿಕ ಗಾಯಗೊಂಡು ನಿವೃತ್ತಿಯಾದರು.

‘‘ನನಗೆ ಸೆರೆನಾ ವಿರುದ್ಧ ಆಡಬೇಕೆಂಬ ಹೆಬ್ಬೆಯಕೆಯಿತ್ತು. ಆಕೆಯ ವಿರುದ್ಧ ಆಡುವುದು ನನ್ನ ಕನಸಾಗಿತ್ತು’’ ಎಂದು 21ರ ಹರೆಯದ ವಿಶ್ವದ ನಂ.91ನೇ ರ್ಯಾಂಕಿನ ಆಟಗಾರ್ತಿ ಬೌಝ್‌ಕೋವಾ ಹೇಳಿದ್ದಾರೆ.

 ಸೆರೆನಾ ವಿರುದ್ಧ ಸೋತ ಹೊರತಾಗಿಯೂ ಒಸಾಕಾ ಮುಂದಿನ ವಾರ ಬಿಡುಗಡೆಯಾಗಲಿರುವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಅಗ್ರ ರ್ಯಾಂಕಿನ ಆಸ್ಟ್ರೇಲಿಯದ ಅಶ್ಲೆಘ್ ಬಾರ್ಟಿ ಎರಡನೇ ಸುತ್ತಿನಲ್ಲಿ ಹಾಗೂ ಝೆಕ್‌ನ 3ನೇ ರ್ಯಾಂಕಿನ ಕರೊಲಿನಾ ಪ್ಲಿಸ್ಕೋವಾ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಕಾರಣ ಒಸಾಕಾ ಅವರ ಅಗ್ರ ಸ್ಥಾನ ಅಬಾಧಿತವಾಗಿದೆ.

2017ರ ನಂತರ ಮೊದಲ ಬಾರಿ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಝೆಕ್‌ನ ಪ್ಲಿಸ್ಕೋವಾ 6-0, 2-6, 6-4 ಸೆಟ್‌ಗಳ ಅಂತರದಿಂದ ಕೆನಡಾದ ಬಿಯಾಂಕಾ ಆ್ಯಂಡ್ರೀಸ್ಕೂ ವಿರುದ್ಧ ಸೋತಿದ್ದಾರೆ.

ಆ್ಯಂಡ್ರೀಸ್ಕೂ ಉಕ್ರೇನ್‌ನ 6ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾರನ್ನು 7-6(7/2), 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಸೆಮಿ ಫೈನಲ್‌ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ಅಮೆರಿಕದ ಸೊಫಿಯಾ ಕೆನಿನ್‌ರನ್ನು ಎದುರಿಸಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)