varthabharthi


ಸುಗ್ಗಿ

ಕಥಾಸಂಗಮ

ಬಿಚ್ಚು!

ವಾರ್ತಾ ಭಾರತಿ : 11 Aug, 2019
ಕನ್ನಡಕ್ಕೆ: ಕ್ಷಿತಿಜ್ ಬೀದರ್. ► ಮೂಲ: ಸಾದತ್ ಹಸನ್ ಮಂಟೊ

ವಿಶೇಷ ರೈಲು ಮಧ್ಯಾಹ್ನ 2 ಗಂಟೆಗೆ ಅಮೃತಸರದಿಂದ ಹೊರಟಿತ್ತು. 8 ಗಂಟೆಯ ನಂತರ ಮೊಗಲಪುರ ತಲುಪಿತು. ಪ್ರಯಾಣದಲ್ಲಿ ವಿಚಿತ್ರ ಗಲಾಟೆ ದೊಂಬಿ ನಡೆದಿತ್ತು. ಬಹಳಷ್ಟು ಜನ ಸತ್ತು ಹೋಗಿದ್ದರು.ಹಲವರು ಗಾಯಗೊಂಡಿದ್ದರು. ಭಯದಲ್ಲಿ ಕೆಲವರು ದಿಕ್ಕಾಪಾಲು ಓಡಿದರು.

ಬೆಳಗಿನ 10 ಗಂಟೆಯ ಸಮಯ. ಶೀತಲ ವಾತಾವರಣ.ಸಿರಾಜುದ್ದೀನ್ ತನ್ನ ಶಿಬಿರದಲ್ಲಿ ಎಚ್ಚರಗೊಂಡ. ಕಣ್ಣು ತೆರೆದು ನೋಡಿದ. ಸುತ್ತಲು ಜನರ ಓಡಾಟ...! ಅಸ್ತವ್ಯಸ್ತವಾಗಿ ಬಿದ್ದುಕೊಂಡಿರುವ ಮಕ್ಕಳು ಮರಿಗಳು...! ಅವನಲ್ಲಿ ಯೋಚನೆ ಮಾಡುವ ಶಕ್ತಿಯೇ ಕುಂದುಹೋಗಿತ್ತು. ಮಂಜು ಮುಸುಕಿದ ಆಕಾಶವನ್ನೇ ತನ್ನ ನಿಶಕ್ತ ಕಣ್ಣುಗಳಿಂದ ಬಹಳ ಹೊತ್ತಿನವರೆಗೆ ದಿಟ್ಟಿಸತೊಡಗಿದ. ಹಾಗೆ ನೋಡಿದರೆ ಶಿಬಿರದಲ್ಲಿ ವಿಪರೀತ ಗದ್ದಲವಿತ್ತು. ಆದರೆ ಸಿರಾಜುದ್ದೀನ್ ನಿಗೆ ಏನನ್ನೂ ಕೇಳಿಸದಂತೆ ಕಿವಿಗಳು ಮುಚ್ಚಿಕೊಂಡಿದ್ದವು. ಕಿವುಡನಂತಾಗಿದ್ದ. ಯಾರಾದರೂ ಅವನನ್ನು ಕಂಡರೆ ಗಾಢವಾದ ನಿದ್ರೆಯಲ್ಲಿದ್ದಾನೆ ಎಂದು ಹೇಳಬಹುದಿತ್ತು. ಅವನಿಗೆ ಹೊರ ಜಗತ್ತಿನ ಅರಿವೆಯೇ ಇರಲಿಲ್ಲ. ಆಕಾಶದ ಹೊಗೆಯ ವಾತಾವರಣವನ್ನೇ ಶೂನ್ಯ ಭಾವದಲ್ಲಿ ದಿಟ್ಟಿಸುತ್ತಿದ್ದ.ಆಕಾಶದ ಸೂರ್ಯನ ಮೇಲೆ ಅವನ ದೃಷ್ಟಿ ಕೇಂದ್ರೀಕೃತಗೊಂಡಿತು. ಅದರ ತೀಕ್ಷ್ಣ ಬೆಳಕಿನ ಕಿರಣಗಳು ಅವನ ನರನಾಡಿಗಳಲ್ಲಿ ಹರಿದವು. ಎಚ್ಚರ ಸ್ಥಿತಿಗೆ ಬಂದ. ‘ನಾನೆಲ್ಲಿದ್ದೇನೆ...?’ ಎಂದು ಪ್ರಜ್ಞೆಗಿಳಿದ.

ಬೆಂಕಿ ಜ್ವಾಲೆ....ಕೂಗು...ಜನರ ಓಡಾಟ...ಚೀರಾಟ... ... ರೈಲು.. ಕೂಲಿಗಳು ಮತ್ತು ಸಕೀನಾ ಎಲ್ಲವೂ ನೆನಪಿಗೆ ಬಂದವು.ಇದ್ದಕ್ಕಿದ್ದಂತೆ ಸಿರಾಜುದ್ದೀನ್ ಎದ್ದು ನಿಂತ.ಹುಚ್ಚನಂತೆ ಕೂಡಲೇ ಓಡತೊಡಗಿದ.ಆ ಕಡೆ ಈ ಕಡೆ ಕಣ್ಣೋಡಿಸುತ್ತಾ ಸುತ್ತಲೂ ಹುಡುಕಲಾರಂಭಿಸಿದ.

 ಸಕೀನಾ.... ಸಕೀನಾ... ಎಲ್ಲಿದ್ದಿಯಾ ಮಗಳೇ... ಸಕೀನಾ... ಎಂದು ಚೀರುತ್ತಾ ಓಡಾಡುತ್ತಾ ಶಿಬಿರದ ಮೂಲೆ ಮೂಲೆಯೂ ಹುಡುಕಾಡಿದ.

3 ಗಂಟೆಯೇ ಕಳೆಯಿತು.ಪ್ರಾಯದ ಒಂಟಿ ಮಗಳ ಪತ್ತೆಯಾಗಲಿಲ್ಲ. ‘... ಸಕೀನಾ...’ ಗಂಟಲಲ್ಲಿ ಒಂದೇ ಹೆಸರು.ಎಲ್ಲಾ ಕಡೆಯಲ್ಲಿಯೂ ಶಿಬಿರಗಳ ಗುಂಪುಗಳಲ್ಲಿ ಗಲಿಬಿಲಿ ಇತ್ತು.ಒಬ್ಬ ತನ್ನ ಮಗುವನ್ನು ಹುಡುಕುತ್ತಿದ್ದರೆ ಇನ್ನೊಬ್ಬ ತನ್ನ ತಾಯಿಯನ್ನು ಹುಡುಕುತ್ತಿದ್ದ. ಮತ್ತೊಬ್ಬ ಹೆಂಡತಿಯನ್ನು ಮಗದೊಬ್ಬ ಮಗಳನ್ನು ಹುಡುಕಾಡುತ್ತಿದ್ದ.

ಸಿರಾಜುದ್ದೀನ್ ಹುಡುಕಾಡಿ ಸೋತು ಸುಸ್ತಾಗಿ ಒಂದು ಮೂಲೆಯಲ್ಲಿ ಕುಳಿತುಕೊಂಡ. ಸಕೀನಾ ತನ್ನಿಂದ ಯಾವಾಗ ಎಲ್ಲಿ ಬೇರ್ಪಟ್ಟಳು ಎಂದು ಮೆದುಳಿಗೆ ಹೆಚ್ಚಿನ ಶಕ್ತಿ ನೀಡಿ ನೆನಪು ಮಾಡತೊಡಗಿದ. ಯೋಚಿಸುತ್ತಿದ್ದಂತೆ ಅವನ ನೆನಪು ಸಕೀನಾಳ ಅಮ್ಮನ ಶವದ ಮುಂದೆ ಹೋಗಿ ನಿಲ್ಲುತ್ತಿತ್ತು. ಶವದ ನಂತರ ಏನಾಯಿತು ಎನ್ನುವುದೇ ಅವನ ನೆನಪಿಗೆ ಬರುತ್ತಿರಲಿಲ್ಲ.

ಸಕೀನಾಳ ಅಮ್ಮ ಸತ್ತು ಹೋಗಿದ್ದಳು. ಸಿರಾಜುದ್ದೀನ್‌ನ ಕಣ್ಣು ಮುಂದೆಯೇ ಕೊನೆ ಉಸಿರನ್ನೆಳೆದಿದ್ದಳು. ಆಗ ಸಕೀನಾ ಎಲ್ಲಿದ್ದಳು...? ಸಕೀನಾಳ ಅಮ್ಮ ಹೇಳಿದ್ದೇನು...!?

 ಹೋಗಿ...ಬಿಟ್ಟು ಬಿಡಿ ನನ್ನ ...ಸಕೀನಾಳನ್ನು ಕರೆದುಕೊಂಡು ಹೋಗಿ ಬೇಗ...ಓಡಿ ಇಲ್ಲಿಂದ.... ಆಗ ಸಕೀನಾ ಜೊತೆಯಲ್ಲಿಯೇ ಇದ್ದಳಲ್ಲಾ...! ಇಬ್ಬರೂ ಬರಿಗಾಲಲ್ಲಿಯೇ ಅಲ್ಲಿಂದ ಓಡಿದ್ದರು.ಸಕೀನಾಳ ಮೇಲ್ಹೊದಿಕೆ ಜಾರಿ ಕೆಳಗೆ ಬಿದ್ದಿತ್ತು. .ಅದನ್ನು ಎತ್ತಿಕೊಳ್ಳಲು ಸಕೀನಾ ಬಯಸಿದಳು. ಬಿಡಿ ಅಪ್ಪಾ ನನ್ನನ್ನು ಎಂದು ಚೀರಿ .ಮೇಲ್ಹೊದಿಕೆ ಎತ್ತಿಕೊಂಡಳಲ್ಲಾ...ಆಮೇಲೆ ಏನಾಯಿತು...? ಹೀಗೆ ಯೋಚಿಸುತ್ತಾ ಸಿರಾಜುದ್ದೀನ್ ತನ್ನ ಕೋಟಿನ ಮೇಲ್ಭಾಗದ ಜೇಬು ನೋಡಿಕೊಂಡ.

ಅರೇ...! ಇದು ನನ್ನ ಸಕೀನಾಳ ಮೇಲ್ಹೊದಿಕೆ ಅಲ್ವಾ...!? ಜೇಬಿನಲ್ಲಿ ಯಾವಾಗ ಸೇರಿಸಿಕೊಂಡೆ..? ಕೊನೆಯ ಬಾರಿ ಅವಳನ್ನು ಎಲ್ಲಿ ನೋಡಿದೆ...? ದೇವರೇ ಇದೇನಾಯಿತು...ಎಲ್ಲಿರುವೆ ನನ್ನ ಮಗಳೇ...?’ ಎಂದು ನರಳುತ್ತಾ ಮತ್ತೆ ಯೋಚನೆಗಿಳಿದ.ತುಂಬಾ ಚಿಂತಿಸಿದ. ಅವನಿಗೆ ಯಾವುದೂ ಸ್ಪಷ್ಟವಾಗಲಿಲ್ಲ. ಏನೊಂದು ನಿರ್ಧರಿಸದವನಾದ. ಸಕೀನಾಳನ್ನು ರೈಲ್ವೆ ಸ್ಟೇಷನ್ ವರೆಗೆ ಕರೆ ತಂದೆನೇ...? ಅಥವಾ ಇನ್ನೊಂದು ರೈಲಿನಲ್ಲಿ ಪ್ರಯಾಣಿಸಿದಳೇ...? ಮಾರ್ಗಮಧ್ಯದಲ್ಲಿ ರೈಲು ನಿಂತಿದಾಗ ಗುಂಪು ಘರ್ಷಣೆಯಾಗಿ ಆಕ್ರಮಣಕಾರರು ರೈಲಿನಲ್ಲಿ ನುಗ್ಗಿ ಬಂದಾಗ ತಾನು ಮೂರ್ಛಿತನಾದೆನೇ..!? ಆಗಲೇ ಸಕೀನಾಳನ್ನು ಎತ್ತಿಕೊಂಡು ಹೋದರೇ...? ಸಿರಾಜುದ್ದೀನ್ ತಲೆಯಲ್ಲಿ ಬರೀ ಪ್ರಶ್ನೆಗಳೇ ತುಂಬಿದವು.ಒಂದಕ್ಕೂ ಉತ್ತರವಿರಲಿಲ್ಲ.ಅವನಿಗೆ ಸಹಾನುಭೂತಿಯ ಅಗತ್ಯವಿತ್ತು.ಹಾಗೆ ನೋಡಿದರೆ ಅಲ್ಲಿ ಸಿಕ್ಕಿಹಾಕಿಕೊಂಡಿರುವರೆಲ್ಲರಿಗೂ ದಯೆ ಸಹಾನುಭೂತಿಯ ಅವಶ್ಯಕತೆ ಇತ್ತು.ಸಿರಾಜುದ್ದೀನ್ ನಿಗೆ ಅಳಬೇಕೆನಿಸಿತು.ಅದರೆ ಕಣ್ಣಿನಲ್ಲಿ ನೀರೇ ಬರಲಿಲ್ಲ.ಕಣ್ಣೀರು ಎಲ್ಲಿ ಮಾಯವಾಗಿದ್ದವೋ...! 6 ದಿನಗಳ ನಂತರ ಸಿರಾಜುದ್ದೀನ್ ಗೆ ಬಾಹ್ಯ ಪ್ರಜ್ಞೆ ನಿಚ್ಚಳಗೊಂಡಿತು. ಸಹಾಯ ಮಾಡಲು ಸಿದ್ಧರಾಗಿದ್ದ ಸ್ವಯಂಸೇವಕರನ್ನು ಭೇಟಿ ಮಾಡಲು ಮುಂದಾದ.8 ಯುವಜನರು ಸಹಾಯಕ್ಕೆ ಬಂದರು. ಅವರ ಹತ್ತಿರ ಬಂದೂಕು ಕೋಲುಗಳಿದ್ದವು. ಸಿರಾಜುದ್ದೀನ್ ತನ್ನ ಸ್ಥಿತಿಯನ್ನು ವಿವರಿಸಿದ.ಮಗಳ ಮುಖಚರ್ಯೆ ವರ್ಣಿಸಿದ.

ತುಂಬಾ ಬೆಳ್ಳಗಿನ ಹುಡುಗಿ, ಸುಂದರವಾಗಿದ್ದಾಳೆ. ವಯಸ್ಸು ಹದಿನೇಳು, ಹದಿ ವಯಸ್ಸು, ದೊಡ್ಡ ದೊಡ್ಡ ಕಣ್ಣುಗಳು..., ಬಲ ಕೆನ್ನೆಯ ಮೇಲೆ ಒಂದು ಮಚ್ಚೆ ಇದೆ. ನನ್ನ ಒಬ್ಬಳೇ ಮಗಳು.... ಎಲ್ಲಿಯಾದರೂ ಹುಡುಕಿ ಕರೆದು ತನ್ನಿ. ದೇವರು ನಿಮಗೆ ಒಳ್ಳೆಯದು ಮಾಡಲಿ...ಎಂದು ಅವರಿಗೆ ಕೋಟಿ ನಮನಗಳನ್ನು ಸಲ್ಲಿಸಿ ಶುಭ ಹಾರೈಸಿದ. ನಿಮ್ಮ ಮಗಳು ಜೀವಂತವಾಗಿದ್ದರೆ ಖಂಡಿತ ಕೆಲವೇ ದಿನಗಳಲ್ಲಿ ನಿಮಗೆ ತಂದು ಒಪ್ಪಿಸುತ್ತೇವೆ. ಚಿಂತಿಸಬೇಡಿ. ಎಂದು ಆ ಯುವ ಪಡೆ ಸಿರಾಜುದ್ದೀನ್ ನಿಗೆ ಆಶ್ವಾಸನೆ ನೀಡಿತು. ‘ನನ್ನ ಮಗಳನ್ನು ಹುಡುಕಿ ನನ್ನ ಹತ್ತಿರಕ್ಕೆ ಕರೆತರುವ ಈ ಯುವ ಪಡೆಗೆ ಸಹಾಯ ಮಾಡು ದೇವರೇ...’ ಎಂದು ಪ್ರಾರ್ಥಿಸಿದ. 8 ನವಯುವಕರು ಜೀವದ ಹಂಗು ತೊರೆದು ಸಕೀನಾಳ ಹುಡುಕಾಟದಲ್ಲಿ ನಿರತರಾದರು. ಅಮೃತಸರಕ್ಕೆ ಹೋದರು. ಅಲ್ಲಿಯ ಬಹಳಷ್ಟು ಮಕ್ಕಳನ್ನು, ಮುದುಕರನ್ನು ಹುಡುಕಿ ತೆಗೆದು ಅವರನ್ನು ಸುರಕ್ಷಿತ ತಾಣಗಳಿಗೆ ತಲುಪಿಸಿದರು. ಹತ್ತು ದಿನಗಳೇ ಕಳೆದವು. ಆದರೆ ಸಕೀನಾಳ ಪತ್ತೆಯೇ ಆಗಲಿಲ್ಲ. ಒಂದು ದಿನ ಅವರು ಇಂಥ ಮಹತ್ಕಾರ್ಯಕ್ಕಾಗಿಯೇ ಲಾರಿಯಲ್ಲಿ ಅಮೃತಸರಕ್ಕೆ ಹೋಗುತ್ತಿದ್ದರು. ಮುಖ್ಯ ರಸ್ತೆಯ ಬದಿಯ ಅಂಚಿನಲ್ಲಿ ಒಂದು ಹುಡುಗಿ ನಿಂತಿರುವುದನ್ನು ಕಂಡರು. ಲಾರಿಯ ಸದ್ದು ಕೇಳಿಸಿಕೊಂಡ ಹುಡುಗಿ ಓಡಲು ಪ್ರಾರಂಭಿಸಿದಳು. ಯುವಕರು ಲಾರಿ ನಿಲ್ಲಿಸಿ ಕೆಳಗಿಳಿದು ಆ ಹುಡುಗಿಯ ಬೆನ್ನು ಹತ್ತಿದರು.ಒಂದು ಹೊಲದಲ್ಲಿ ಅವಳನ್ನು ಅಡ್ಡಗಟ್ಟಿ ಹಿಡಿದುಕೊಂಡರು. ತುಂಬಾ ಸುಂದರವಾಗಿದ್ದಳು. ಬಲ ಕೆನ್ನೆಯ ಮೇಲಿನ ಮಚ್ಚೆ ಅವರಿಗೆ ಎದ್ದು ಕಂಡಿತು. ಅವರಲ್ಲಿ ಒಬ್ಬ , ಹೆದರ್ಕೋಬೇಡ, ನಿನ್ನ ಹೆಸರು ಸಕೀನಾ ಅಲ್ವಾ...? ಎಂದ. ಹೆಸರು ಕೇಳಿದಂತೆ ಅವಳ ಮುಖ ಕಳಾಹೀನವಾಯಿತು. ಅವರ ಪ್ರಶ್ನೆಗೆ ಅವಳು ಉತ್ತರಿಸಲಿಲ್ಲ. ಉಳಿದ ಯುವಕರು ಅವಳಿಗೆ ಧೈರ್ಯ ಹೇಳಿದರು. ಸಮಾಧಾನಿಯಾಗಿ ಸಮಸ್ಥಿತಿಗೆ ಬಂದು, ’ ತಾನು ಸಿರಾಜುದ್ದೀನ್ ನ ಮಗಳು ಸಕೀನಾ ಎಂದು ಒಪ್ಪಿಕೊಂಡಳು. 8 ಯುವಕರು ಅವಳ ಬಗ್ಗೆ ಆತ್ಮೀಯತೆ ತೋರಿದರು. ಪ್ರೀತಿಯಲ್ಲಿ ಮಾತನಾಡಿಸಿದರು. ಭಯ ದೂರ ಹೋಗಲು ಅವಳಿಗೆ ಹಾಲು ಕುಡಿಸಿದರು. ಊಟ ಮಾಡಿಸಿದರು ಮತ್ತು ಲಾರಿಯಲ್ಲಿ ಕುಳ್ಳಿರಿಸಿಕೊಂಡರು. ಮೇಲ್ಹೊದಿಕೆ ಇಲ್ಲದ ಕಾರಣ ಸಕೀನಾ ಸಂಕೋಚಗೊಂಡಂತೆ ಆಗಾಗ ಎದೆಗೆ ಕೈಗಳನ್ನು ತಡೆ ಹಿಡಿದು ಕೊಳ್ಳುತ್ತಾ ಮುದುಡಿಕೊಳ್ಳುತ್ತಿದ್ದಳು. ಒಬ್ಬ ತನ್ನ ಕೋಟನ್ನು ಅವಳಿಗೆ ಧರಿಸಲು ಕೊಟ್ಟ.

 ದಿನಗಳು ಹೀಗೆ ಕಳೆದು ಹೋದವು. ಸಿರಾಜುದ್ದೀನ್‌ನಿಗೆ ತನ್ನ ಮಗಳು ಸಕೀನಾಳ ಯಾವ ಸಮಾಚಾರವು ಸಿಗಲಿಲ್ಲ. ಇಡೀ ದಿನ ಅವನು ಅಲ್ಲಲ್ಲಿ ಬೇರೆ ಬೇರೆ ಶಿಬಿರಗಳಿಗೆ ಹೋಗಿ ಭೇಟಿ ನೀಡುತ್ತಿದ್ದ. ಮಗಳಿಗಾಗಿ ಕಣ್ಣೋಡಿಸುತ್ತಿದ್ದ. ಎಲ್ಲಿಯೂ ಅವಳ ಪತ್ತೆಯೇ ಸಿಗಲಿಲ್ಲ. ರಾತ್ರಿ ಬಹಳ ಹೊತ್ತು ಜಾಗರಣೆಯಲ್ಲಿಯೇ ಕಳೆಯುತ್ತಿದ್ದ. ‘ಸಕೀನಾ ಜೀವಂತವಾಗಿದ್ದರೆ ಖಂಡಿತವಾಗಿಯೂ ಕೆಲ ದಿನಗಳಲ್ಲಿಯೇ ಕರೆತಂದು ಒಪ್ಪಿಸುವುದಾಗಿ ಹೇಳಿದ್ದರಲ್ಲಾ... ಹೇಗಾದರೂ ಹುಡುಕಿಕೊಂಡು ಬರುತ್ತಾರೆ ’ ಎಂಬ ಭರವಸೆಯಲ್ಲಿ ಆ ಯುವಕರ ಕಾರ್ಯ ಯಶಸ್ವಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದ.

ಒಂದು ದಿನ ಶಿಬಿರದಲ್ಲಿ ಸಿರಾಜುದ್ದೀನ್ ಆ ನವ ಯುವಕ ರನ್ನು ಲಾರಿಯಲ್ಲಿ ಕುಳಿತಿರುವುದನ್ನು ಕಂಡ. ಕೂಡಲೇ ಅವರ ಹತ್ತಿರಕ್ಕೆ ಓಡಿದ. ಲಾರಿ ಇನ್ನೇನು ಹೊರಡುವುದರಲ್ಲಿತ್ತು. ಹಿಂದಿ ನಿಂದಲೇ ಜೋರಾಗಿ ಕೂಗಿದ. ನನ್ನ ಸಕೀನಾಳ ಪತ್ತೆ ಏನಾದರೂ ಆಯಿತೇ ಮಗಾ...? ಎಂದ. ಎಲ್ಲರೂ ಅವನೆಡೆಗೆ ನೋಡಿದರು.

 ಸಿಗ್ತಾಳೆ...ಸಿಗ್ತಾಳೆ...ಖಂಡಿತ ಪತ್ತೆಯಾಗುತ್ತಾಳೆ ಬಿಡು... ಎಂದು ಎಲ್ಲರೂ ಒಕ್ಕೊರಲಿನಿಂದ ನುಡಿದರು.

‘ನನ್ನ ಮಗಳನ್ನು ಹುಡುಕಿ ನನ್ನ ಹತ್ತಿರಕ್ಕೆ ಕರೆತಂದು ಆದಷ್ಟು ಬೇಗ ಒಪ್ಪಿಸಲು ಈ ಯುವಕರಿಗೆ ಸಹಾಯ ಮಾಡು ದೇವಾ... ಬೇಗ ಕರೆತರಲಿ ದೇವಾ...’ ಎಂದು ಪ್ರಾರ್ಥಿಸಿದ.ಲಾರಿ ಅಲ್ಲಿಂದ ಮುಂದೆ ಸಾಗಿತು. ಸಿರಾಜುದ್ದೀನ್ ಮತ್ತೆ ಯುವಕರ ಯಶಸ್ವಿಗಾಗಿ ಪ್ರಾರ್ಥಿಸಿದ. ಹೃದಯ ಹಗುರವಾದಂತಾಯಿತು. ಸಾಯಂಕಾಲದ ಸಮಯ. ಸಿರಾಜುದ್ದೀನ್ ಒಬ್ಬನೇ ಚಿಂತಿಸುತ್ತಾ ಕುಳಿತಿದ್ದ. ಶಿಬಿರದ ಹತ್ತಿರದಲ್ಲಿಯೇ ಒಂದು ತರಹ ಗಡಿಬಿಡಿ ಕಂಡಿತು. ನಾಲ್ಕು ಜನ ಯಾರನ್ನೋ ಹೊತ್ತುಕೊಂಡು ಬರುತ್ತಿದ್ದರು. ಅದರ ಬಗ್ಗೆ ಅವರಿವರಲ್ಲಿ ವಿಚಾರಿಸಿದ. ರೈಲು ಹಳಿಯ ಪಕ್ಕ ಮೂರ್ಛಾವಸ್ಥೆಯಲ್ಲಿ ಬಿದ್ದಿದ್ದ ಒಂದು ಹುಡುಗಿಯನ್ನು ಕೆಲವರು ಹೊತ್ತುಕೊಂಡು ಬರುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಕುತೂಹಲಗೊಂಡು ತಾನು ಅವರ ಹಿಂದೆಯೇ ನಡೆದ. ಹೊತ್ತು ಕೊಂಡುತಂದ ಹುಡುಗಿಯನ್ನು ಆಸ್ಪತ್ರೆಯ ಸಿಬ್ಬಂದಿಗೆ ಒಪ್ಪಿಸಿ ಅವರು ಹೊರಟು ಹೋದರು. ಅನ್ಯಮನಸ್ಕನಾಗಿ ಯೋಚಿಸುತ್ತಾ ಆಸ್ಪತ್ರೆಯ ಗೋಡೆಗೆ ಕಂಬದಂತೆ ಒರಗಿ ನಿಂತ. ಸ್ವಲ್ಪ ಹೊತ್ತಿನ ನಂತರ ನಿಧಾನಕ್ಕೆ ಆಸ್ಪತ್ರೆಯ ಒಳಗೆ ಹೆಜ್ಜೆ ಹಾಕಿದ. ಕೋಣೆಯ ಬಾಗಿಲು ತೆರೆದು ನೋಡಿದ. ಜನ ಯಾರೂ ಕಾಣಲಿಲ್ಲ. ಅಲ್ಲಿ ಸ್ಟ್ರೆಚ್ಚರ್ ಮೇಲೆ ಹೆಣ ಮಲಗಿತ್ತು. ಹಿಂಜರಿಯುತ್ತಾ ಸಣ್ಣ ಸಣ್ಣ ಹೆಜ್ಜೆಗಳನ್ನಿಡುತ್ತಾ ಆ ಹೆಣದ ಹತ್ತಿರಕ್ಕೆ ಹೋದ. ಕೋಣೆಯಲ್ಲಿ ಕೂಡಲೇ ಬೆಳಕು ಮೂಡಿತು. ಹೆಣದ ಮುಖ ಸ್ಪಷ್ಟವಾಯಿತು. ಪೇಲವಗೊಂಡ ಮುಖದ ಬಲ ಕೆನ್ನೆಯ ಮೇಲಿನ ಮಚ್ಛೆ ಎದ್ದು ಕಂಡಿತು. ಮಚ್ಛೆ ಕಂಡವನೇ ಸಕೀನಾ... ಎಂದು ಜೋರಾಗಿ ಚೀರಿದ. ಕೋಣೆಯಲ್ಲಿ ವಿದ್ಯುತ್ ಬೆಳಕು ಹರಿಸಿದ ವೈದ್ಯರು ಅವನ ಕೂಗಿಗೆ ತಿರುಗಿ ನೋಡಿದರು. ಹತ್ತಿರ ಬಂದರು.

ಯಾರಪ್ಪ ನೀನು...? ಎಂದರು

ಸಿರಾಜುದ್ದೀನ್ ತಡವರಿಸುತ್ತಾ ಸಮ್ಮಿಶ್ರ ಭಾವದಲ್ಲಿ, ನಾನು ಇವಳ ಅಪ್ಪ ಎಂದ ಮೆಲುದನಿಯಲ್ಲಿ.

ವೈದ್ಯರು ಸ್ಟ್ರೆಚ್ಚರ್ ಮೇಲೆ ಮಲಗಿಸಿದ್ದ ಹೆಣದ ನಾಡಿ ಪರೀಕ್ಷಿಸಿದರು. ಸಿರಾಜುದ್ದೀನ್ ನೆಡೆಗೆ ನೋಡಿ, ಬಿಚ್ಚು ...ಬಿಚ್ಚು ... ಎಂದರು. ಏನನ್ನು ಬಿಚ್ಚುವುದು...? ವೈದ್ಯರನ್ನೇ ದಿಟ್ಟಿಸಿದ.

ಚಡ್ಡಿ ಬಿಚ್ಚು...

ಸಿರಾಜುದ್ದೀನ್ ಮಗಳ ಚಡ್ಡಿಯ ಲಾಡಿ ಬಿಚ್ಚಿದ.ಸಕೀನಾಳ ಶರೀರ ಮಿಸುಕಾಡಿತು.ಹೆಣದಲ್ಲಿ ಜೀವಕಳೆ ಬಂದಿತ್ತು. ಬಟ್ಟೆ ಕೆಳಗೆ ಸರಿಸಿದಂತೆ ಮುಪ್ಪಿನ ತಂದೆ ಸಿರಾಜುದ್ದೀನ್ ಖುಷಿಯಲ್ಲಿ ಒಮ್ಮೆಲೆ ಜೋರಾಗಿ ಕೂಗತೊಡಗಿದ.

ಜೀವ ಇದೆ....! ನನ್ನ ಮಗಳು ಸತ್ತಿಲ್ಲ.... ಜೀವಂತವಾಗಿದ್ದಾಳೆ... ದೇವರೇ ನನ್ನ ಮಗಳು ಜೀವಂತವಾಗಿದ್ದಾಳೆ.... ಅವನ ಖುಷಿಯ ಕೂಗಿಗೆ ವೈದ್ಯರು ಕಂಪಿಸಿ ತತ್ತರಿಸಿ ಹೋದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)