varthabharthi


ಸುಗ್ಗಿ

ಸಂಸಾರವೆಂಬ ಇಬ್ಬಾಯಿ ಖಡ್ಗ?

ವಾರ್ತಾ ಭಾರತಿ : 11 Aug, 2019
ಗಿರಿಜಾ ಶಾಸ್ತ್ರಿ, ಮುಂಬೈ

ಹೊಟ್ಟೇಲಿ ಹುಟ್ಟಿದ ಮಕ್ಕಳಾದರೂ ರೆಕ್ಕೆ ಪುಕ್ಕ ಬಲಿತು ದೊಡ್ಡೋರಾಗಿ ಸೆರಗು ಬಿಡಿಸಿ ಕೊಂಡು ಹಾರಿ ಹೋಗ್ತಾವೆ. ಆದ್ರೆ ಈ ಗಂಡ ಎನ್ನುವ ಕಟ್ಟಿಕೊಂಡ ಕೂಸು ಮಾತ್ರ ಎಂದಿಗೂ ದೊಡ್ಡದಾಗೋದೇ ಇಲ್ಲ. ಸದಾ ಬಗಲಲ್ಲಿ ಕಟ್ಟಿಕೊಂಡು ತಿರುಗಬೇಕು. ಅಕಸ್ಮಾತ್ ನನಗೇನಾದರೂ ಆಗಿ ಹೋದರೆ ಈ ಕೂಸನ್ನು ನೋಡಿಕೊಳ್ಳುವವರು ಯಾರು?

‘ಓದು, ಬರೀ, ಚಂಗಲು ಹೊಡೀಬೇಡ’ ಎಂದು ಹೇಳಿಸಿ ಕೊಳ್ಳುವುದನ್ನು ಬಿಟ್ಟು ಮಕ್ಕಳು ತಮ್ಮ ಪಾಡಿಗೆ ತಾವು ಓದಿಕೊಳ್ಳಲು ಹತ್ತಿದ ದಿನದಿಂದಲೇ ಈ ಭಯ ಶುರುವಾಗಿದೆ. ರಾತ್ರಿ ಒಂದು ವೇಳೆಯಲ್ಲಿ ಎಚ್ಚರವಾಗಿ ನಿದ್ದೆ ಬಾರದಿದ್ದರೆ ಅಮರಿಕೊಳ್ಳುವುದು ಈ ಭಯವೇ! ಒಮ್ಮೆ ‘‘ನೀನೇ ಮುಂಚೆ ಹೋಗಪ್ಪ ನಾನು ನಿನ್ನ ಹಿಂದೆ ಬರ್ತೀನಿ, ಒಂದು ಕೆಲಸನಾದ್ರೂ ನಿಂದು ನೀನು ಮಾಡ್ಕೋಳಲ್ಲ’’ ಎಂದು ಬೇಸತ್ತು ನುಡಿದೆ. ಆಗ ಅಲ್ಲೇ ಇದ್ದ ಗೆಳತಿ ಮಾಯ, ಎಲ್ಲರೂ ಮುತ್ತೈದೆ ಸಾವು ಬರಲಿ ಎಂದು ಬಯಸುತ್ತಾರೆ, ನೀವು ನೋಡಿದರೆ ನೀನು ಮುಂದೆ ಹೋಗು ನಾನು ಆಮೇಲೆ ಬರ್ತೀನಿ ಅಂತೀರಲ್ಲಾ?’’ ಎಂದು ನಕ್ಕಿದ್ದಳು.

ಈ ಮಾತಿಗೆ ಇಪ್ಪತ್ತು ವರುಷಗಳಾಗಿವೆ. ಭಯ ಮಾತ್ರ ಹೆಚ್ಚಾಗುತ್ತಲೇ ಇದೆ. ತಮ್ಮ ಕೆಲಸವನ್ನೆಲ್ಲ ತಾವೇ ಮಾಡಿಕೊಳ್ಳುವ ಅದೃಷ್ಟವಂತ ಗಂಡಸರು ಇರುತ್ತಾರೆ. ಆದರೆ ಕೆಲವು ಗಂಡಸರಿಗೆ ಮಾತ್ರ ಒಲೆ ಹಚ್ಚುವುದು ಇರಲಿ ತಮ್ಮ ಚಡ್ಡಿ ಬನಿಯನ್ನಿನ ಅಳತೆಯೂ ಗೊತ್ತಿರುವುದಿಲ್ಲ. ಔಷಧಿಯ ಹೆಸರುಗಳು ಗೊತ್ತಿರುವುದಿಲ್ಲ. ವೈದ್ಯರ ಹೆಸರಂತೂ ಮೊದಲೇ ಗೊತ್ತಿರುವುದಿಲ್ಲ. ಹೆಂಡತಿಯೆಂದರೆ ಅವರ ಪಾಲಿಗೆ ಒಬ್ಬ ಗವರ್ನೆಸ್. ಕಾರ್ಯೇಷು ಮಂತ್ರಿ..ಎನ್ನುವ ಅದೇನೋನೋ ಮಣ್ಣಾಂಗಟ್ಟಿ ಆರು ಗುಣಗಳನ್ನು ಆರೋಪಿಸಿಬಿಟ್ಟಿದ್ದಾರಲ್ಲಾ? ಅದನ್ನು ಮಾಡಿದವನು ಯಾರೋ ಒಬ್ಬ ಸೋಮಾರಿ ಗಂಡಸೇ ಇರಬೇಕು!

ಯಾರಾದರೂ ಕೇರ್ ಟೇಕರ್‌ನ್ನು ಈಗಲೇ ನೋಡಿಡಬೇಕು. ಇಲ್ಲದಿದ್ದರೆ ಮಕ್ಕಳು ಸೊಸೆಗೆ ಕಷ್ಟವಾಗಬಹುದು ಎಂದು ಕೊಳ್ಳುತ್ತಲೇ ಮಗನ ಮುಂದೆ ನನ್ನ ಭಯವನ್ನು ಹೇಳಿಕೊಳ್ಳುತ್ತಾ, ಗಂಡನನ್ನೇ ಮೊದಲು ಕಳಿಸಲು ತಯಾರಾಗಿರುವ, ಪಾತಿವ್ರತ್ಯದ ನಂಬಿಕೆಯನ್ನು ಬೀಸಿ ಬಿಸಾಡಿರುವ ನಾನೆಷ್ಟು ಆಧುನಿಕಳು ಎಂದು ಮಗನ ಎದುರಿಗೆ ಕೊಚ್ಚಿಕೊಂಡೆ. ‘ಎಲ್ಲಾ ನಾನ್ಸೆನ್ಸ್. ವಿಧವೆಯರ ಸ್ಥಿತಿ ಎಷ್ಟು ಹೀನಾಯವಾಗಿತ್ತು ಅಂತ ನೀನೇ ಹೇಳ್ತಿದ್ದೆಯಲ್ಲಾ? ಹಾಗೆ ಬದುಕೋದಕ್ಕಿಂತ ಸಾಯೋದೇ ವಾಸಿ ಎಂದು ಅವರಿಗೆ ಎನಿಸುತ್ತಿರಬಹದು. ಅದಕ್ಕೆ ಬಣ್ಣ ಬಳೀಬೇಕಲ್ಲಾ ಅದಕ್ಕೆ ‘ಮುತ್ತೈದೆ ಸಾವು’. ಹಿಪಾಕ್ರಸಿನೆಲ್ಲಾ ಗ್ಲೋರಿಫೈ ಮಾಡಬೇಡ’ ಎಂದ. ಈಗಷ್ಟೇ ಅವನ ಉಚ್ಚೆ ಬಟ್ಟೆ ಒಣಗಿದೆ. ಆಗಲೇ ಎಷ್ಟು ದೊಡ್ಡ ಮಾತನಾಡಿಬಿಟ್ಟ.

ದೂರದ ಸೋದರತ್ತೆ ಒಂದು ಮೊಳ ಹೂವಿಗೂ ಗಂಡನ ಕಡೆ ದೈನ್ಯವಾಗಿ ನೋಡುತ್ತಿದ್ದಳು. ಎಲ್ಲಿಂದೆಲ್ಲಿಗೂ ನಡೆಸಿಕೊಂಡೇ ಕರೆದುಕೊಂಡು ಹೋಗುತ್ತಿದ್ದ ಗಂಡ. ಹಾಗೆಂದು ಅವರಿಗೆ ಬಡತನವೇನೂ ಇರಲಿಲ್ಲ. ಸಾಕಷ್ಟು ಸ್ಥಿತಿವಂತರೇ. ಈಗ ಗಂಡ ಸತ್ತ ಮೇಲೆ ಸುಂದರಿ ಸೋದರತ್ತೆ ಪುಟ್ಟಗಂಟಿಗೆ ಮಲ್ಲಿಗೆ ಸಿಕ್ಕಿಸಿಕೊಂಡು ಸದಾ ಆಟೊ ಟ್ಯಾಕ್ಸಿಯಲ್ಲಿಯೇ ಓಡಾಡುತ್ತಾಳೆ.

 ಗಂಡ ಎಲ್ಲಾ ಜವಾಬ್ದಾರಿಯನ್ನು ಹೆಂಡತಿಯ ಮೇಲೆ ಹಾಕಿದರೂ ಕಷ್ಟವೇ. ಯಾವ ಜವಾಬ್ದಾರಿಯನ್ನು ಕೊಡದಿದ್ದರೂ ಕಷ್ಟವೇ. ಒಂದೆಡೆ ನಿಭಾಯಿಸಲು ಕಷ್ಟವಾದರೆ, ಇನ್ನೊಂದೆಡೆ ಉಸಿರೇ ನಿಂತು ಹೋಗುತ್ತದೆ. ಸಂಸಾರವೆಂಬುದು ಹೆಂಡತಿಗೆ ಇಬ್ಬಾಯಿಯ ಖಡ್ಗ. ಗೃಹಿಣಿಯರೂ ಈಗ ಮಧ್ಯಮ ಮಾರ್ಗವನ್ನು ಹುಡುಕಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)