varthabharthi

ಸುಗ್ಗಿ

ಡಾ. ಎ.ಆರ್. ಗೋವಿಂದಸ್ವಾಮಿ

ಕರ್ನಾಟಕದ ದಲಿತ ರಂಗಭೂಮಿ

ವಾರ್ತಾ ಭಾರತಿ : 11 Aug, 2019

ದಲಿತ/ಆದಿಮ/ದ್ರಾವಿಡ/ಪ್ರಾಗೃಪ ರಂಗಭೂಮಿಯ ಕುರುಹುಗಳನ್ನು ಮೊದಲಿಗೆ ಮಹಾರಾಷ್ಟ್ರದಲ್ಲಿ ಗುರುತಿಸುವ ಪ್ರಯತ್ನಗಳಾಗಿವೆ. ಆದರೆ ಕರ್ನಾಟಕದಲ್ಲಿ ಅಂತಹ ಪ್ರಯತ್ನಗಳಾಗಿಲ್ಲ. ಎಂದರೂ ಇತ್ತ ಸಣ್ಣ ಪ್ರಯತ್ನ ಸಾಗಿದೆ.

ಮಹಾ ಭಾರತದ ಏಕಲವ್ಯನನ್ನು ಕುರಿತಂತೆ ವಿಭಿನ್ನ ಧೋರಣೆಯ ಹಲವಾರು ನಾಟಕಗಳು ಕನ್ನಡದಲ್ಲಿ ರಚನೆಗೊಂಡಿವೆ. ಅವುಗಳಲ್ಲಿ ಟಿ.ಪಿ.ಕೈಲಾಸಂ ಅವರ ಏಕಲವ್ಯ (ಪರ್ಪಸ್), ಗೋವಿಂದ ಪೈಗಳ ಹೆಬ್ಬೆರಳು; ಕುವೆಂಪು ಅವರ ಬೆರಳ್‌ಗೆ ಕೊರಳ್; ಮೇಘಮಿತ್ರರ ಎಚ್ಚೆತ್ತ ಏಕಲವ್ಯ ಮತ್ತು ಡಾ.ಸಿದ್ದಲಿಂಗಯ್ಯನವರ ಏಕಲವ್ಯ-ನಾಟಕಗಳು ಪ್ರಮುಖವಾದವುಗಳು ಅಂಬೇಡ್ಕರ್ ವಿಚಾರಧಾರೆಯಿಂದ, ಮಾರ್ಕ್ಸ್‌ವಾದದ ಚಿಂತನೆಗಳಿಂದ ಮತ್ತು ಲೋಹಿಯವಾದದಿಂದ ಪ್ರಭಾವಗೊಂಡಿರುವ ಸಿದ್ದಲಿಂಗಯ್ಯನವರು ಜಾತಿ, ವರ್ಗಗಳ ಅರ್ಥಪೂರ್ಣ ಹಿನ್ನೆಲೆಯಲ್ಲಿ ಏಕಲವ್ಯ ಪಾತ್ರದ ವ್ಯಾಖ್ಯಾನಕ್ಕೆ ತೊಡಗಿದ್ದಾರೆ. ಏಕಲವ್ಯ ಕೆಳಜಾತಿಗೆ ಸೇರಿದವನೆಂಬ ಕಾರಣಕ್ಕಾಗಿಯೇ ಇಲ್ಲಿಯೂ ಅವನಿಗೆ ಬಿಲ್ಲು ವಿದ್ಯೆಯನ್ನು ನಿರಾಕರಿಸಲಾಗುತ್ತದೆ. ದ್ರೋಣ ಪ್ರತಿಮೆಯ ಮೂಲಕ ಬಿಲ್ಲು ವಿದ್ಯೆಯನ್ನು ಸಂಪಾದಿಸಿದ ಏಕಲವ್ಯನ ಬಲಗೈ ಹೆಬ್ಬೆರಳನ್ನು ದ್ರೋಣ, ವ್ಯವಸ್ಥೆಯ ಕುತಂತ್ರದ ಸಂಕೇತವೆಂಬಂತೆ ಪಡೆದು ಸಣ್ಣವನಾಗುತ್ತಾನೆ. ಆದರೆ ಕೆಳಜಾತಿ ವರ್ಗದ ನಿಷ್ಠೆ. ಶ್ರದ್ದೆಯ ಪ್ರತೀಕವಾದ ಏಕಲವ್ಯ ಎಡಗೈನಲ್ಲೇ ಸಾಧನೆ ಮಾಡಿ ತನ್ನ ಬಿಲ್ಲು ವಿದ್ಯೆಯಲ್ಲಿ ಮರಳಿ ಪರಿಣಿತಿ, ಪಾಂಡಿತ್ಯವನ್ನು ಸಂಪಾದಿಸಿಕೊಳ್ಳುತ್ತಾನೆ. ಅಧಿಕಾರಗಳಿಕೆಯ ಹವಣಿಕೆಯಲ್ಲಿರುವ ಕೌರವ-ಪಾಂಡವರ ವಿನಂತಿಗೆ ಬೆಲೆಕೊಡದೆ ತನ್ನದು ಜಗತ್ತಿನ ಮೇಲು ಕೀಳಿನ ವಿರುದ್ದ, ಇಲ್ಲದವರ ಪರವಾದ ಹೋರಾಟ ಎಂದು ತನ್ನ ನಿಲುವನ್ನು ತಿಳಿಸಿ ಆ ವಿನಂತಿಯನ್ನು ತಿರಸ್ಕರಿಸುತ್ತಾನೆ. ಆ ಮೂಲಕ ತನ್ನ ಶೋಷಿತ ಪರ ಧೋರಣೆಯನ್ನು ಪ್ರಕಟಪಡಿಸುತ್ತಾನೆ.

ಕೆಂಡದ ನಡುವೆ ಕವನ ಸಂಕಲನದಿಂದ ಗುರುತಿಸಿಕೊಂಡ ಮುನಿವೆಂಕಟಪ್ಪನವರು ದಲಿತ ಸಾಹಿತಿಯಾಗಿ ಗುರುತಿಸಿ ಕೊಂಡು ಬಾಲಕ ಅಂಬೇಡ್ಕರ್ ಎಂಬ ನಾಟಕ ರಚಿಸಿದ್ದಾರೆ. ನಾನೊಬ್ಬ ದಲಿತ ಬ್ರಾಹ್ಮಣ ಎಂದೇ ಹೇಳಿಕೊಳ್ಳುವ ಸಾಹಿತಿ ಅರವಿಂದ ಮಾಲಗತ್ತಿಯವರು ಸದಾ ದಲಿತರ ಪರನಿಂತು ಮಾತ ನಾಡುವವರು ಇವರು ‘ಮಸ್ತಾಭಿಷೇಕ’ ಎಂಬ ನಾಟಕ ರಚಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರು ಕೋಟೆ, ಮುಳ್ಳುಹಾದಿ, ಕಪ್ಪುಹಲಗೆಯಂತಹ ನಾಟಕಗಳನ್ನು ರಚಿಸಿದ್ದಾರೆ. ಎಲ್.ಹನುಮಂತಯ್ಯ ಅವರು ಕನ್ನಡ ಸಾಹಿತ್ಯ ಪುನರ್ ಮೌಲ್ಯೀಕರಣ ಮಾಲೆಯಲ್ಲಿ ಅಭಿಪ್ರಾಯ ಪಡುವಂತೆ ಬರಗೂರರ ಸಾಹಿತ್ಯ ದಂತೆಯೇ ಅವರ ನಾಟಕಗಳು ಕೂಡ ಜಮೀನ್ದಾರನ, ಪುರೋಹಿತ ಶಾಹಿಯ, ರಾಜಕಾರಣಿಗಳ ಸಂಯೋಗಗಳೊಂದಿಗೆ ಕೆಳ ಜಾತಿಗಳ ಮತ್ತು ಮಹಿಳೆಯರ ಮೇಲೆ ನಡೆಸುವ ಲೈಂಗಿಕ ಶೋಷಣೆಯನ್ನು ಸಮರ್ಥವಾಗಿ ರಂಗಕ್ಕೆ ತಂದವರು ದೇವ್ ನಾಗೇಶ್, ಈ ನಾಟಕದ ಅಸ್ಪಶ್ಯ ಪಾತ್ರಗಳು ಪ್ರೇಕ್ಷಕರ ಮನತಟ್ಟುತ್ತವೆ. ಕೆಳ ಜಾತಿಯ ಸ್ತ್ರೀ ಪ್ರಧಾನ ಪಾತ್ರ ಇವರ ನಾಟಕದ ವೈಶಿಷ್ಟವಾಗಿದೆ. ಹಾಗೆಯೇ ಮುಳ್ಳುಹಾದಿ ನಾಟಕದಲ್ಲಿ ಪ್ರೀತಿಸುವ ಗಂಡು ಹೆಣ್ಣು ವಿವಾಹವಾಗಲು ಬಯಸಿದಾಗ ಸಮಾಜದ ಪಟ್ಟಭದ್ರ ಶಕ್ತಿಗಳು ನಾನಾ ರೀತಿಯಲ್ಲಿ ಅಡೆತಡೆಯನ್ನುಂಟುಮಾಡುತ್ತವೆ. ಪ್ರೇಮಿಗಳು ಇಡುವ ಒಂದೊಂದು ಹೆಜ್ಜೆಯೂ ಮುಳ್ಳುಹಾದಿಯಲ್ಲಿ ನಡೆದ ಅನುಭವವನ್ನು ತಂದುಕೊಡುತ್ತದೆ.

ಭೂತದ ಆರಾಧನೆಯು ಇನ್ನೊಂದು ಅರ್ಥದಲ್ಲಿ ವೀರರ ಆರಾಧನೆ ಈ ದಲಿತ ವೀರರ ಕುರಿತು ಅಧ್ಯಯನ ಮಾಡಿದರೆ, ಮಾನವ ಹಕ್ಕಿಗಾಗಿ ಹೋರಾಡುವವರನ್ನು ಮೇಲು ಜಾತಿಯ ಭೂತಗಳು ಕೊಲೆ ಮಾಡಿವೆ ಎಂದು ಗೊತ್ತಾಗುತ್ತದೆ (ಅರವಿಂದ ಮಾಲಗತ್ತಿ: ಭೂತಾರಾಧನೆ-ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆ, 1992) ಇಲ್ಲಿ ಕೊಲೆ ಮಾಡಿದ ಮತ್ತು ಮಾಡಿಸಿಕೊಂಡ ಎರಡೂ ಶಕ್ತಿಗಳ ಆರಾಧನೆ ನಡೆಯುತ್ತದೆ ಎನ್ನುವುದು ಸೊಜಿಗದ ವಿಷಯ, ಈ ಆರಾಧನೆಯನ್ನು ತಳ ಸಮುದಾಯಗಳೆ ನಡೆಸುವುದು ಕಾಣಬಹುದು.

ಇದೇ ರೀತಿ ಬುಡಕಟ್ಟು ಸಮುದಾಯಗಳಲ್ಲಿ ನಾಗ ಬುಡಕಟ್ಟಿನ ಸಂಕೇತವಾಗಿ, ಕುಲದ ಆರಾಧ್ಯ ದೈವ ನಾಗನನ್ನು ನಾಗರ ಪಂಚಮಿ ಹಬ್ಬವಾಗಿ ಆಚರಿಸುವ ನಾಗಾರಾಧನೆಯ ಒಂದು ಸಂಪ್ರದಾಯ,

ಮಲೆಯ ಮಾದೇಶ್ವರನನ್ನು ಹಾಡುವವರು ಅಸ್ಪಶ್ಯರು ಅಥವಾ ಚರ್ಮಕಾರರು, ಇಂದು ಯಾರನ್ನು ತಳ ಸಮುದಾಯದ ಜನ ಅಥವಾ ಕೆಳವರ್ಗದವರು ಅಥವಾ ಶಾಲೆಯವರು ಎಂದು ಕರೆಯುತ್ತೇವೋ ಅವರುಗಳು, ಹಾಗೆಯೇ ಜುಂಜಪ್ಪನನ್ನು ಹಾಡುವವರು ಕಾಡುಗೊಲ್ಲರು, ಪಾಬೂಜಿ ಎಂಬ ರಾಜಸ್ಥಾನಿ ಮೌಖಿಕ ಮಹಾಕಾವ್ಯ ಹಾಡುವವರು ಆ ನೆಲದ ಅತ್ಯಂತ ಕೆಳ ವರ್ಗಕ್ಕೆ ಸೇರಿದ ಜನಾಂಗದವರು, ಹಾಗೆಯೇ ಪಾಲ್ನಾಟಿ ವೀರಕಥಾ ಅಂತ ಆಂದ್ರದಲ್ಲಿ ಒಂದು ಪ್ರಸಿದ್ದ ಮೌಖಿಕ ಜನ ಪದ ಮಹಾಕಾವ್ಯ ಇದೆ. ಅದನ್ನು ಹಾಡುವವರು ಮಾಲಾ ಅನ್ನುವಂತಹ ಅಸ್ಪಶ್ಯ ಜನಾಂಗ ಕಾಟಮರಾಜು, ಅನ್ನುವಂತಹ ಇನ್ನೊಂದು ಕಥೆಯನ್ನು ಹಾಡುವವರು ಮಾದಿಗ ಜನಾಂಗ; ಅಂದರೆ ಹಾಡುವವರೆಲ್ಲರೂ ಕೂಡ ಸಮಾಜದ ಕೆಳವರ್ಗಗಳಿಂದ ಬಂದಿರುವವರು. ಮತ್ತೊಂದು ಗಮನಾರ್ಹ ಅಂಶ ಎಂದರೆ ಈ ಕೃತಿಗಳ ನಾಯಕರೂ ಕೂಡ ಈ ಸಮಾಜದ ಕೆಳವರ್ಗಕ್ಕೆ ಸೇರಿದವರು ಎಂಬುದು ವಿಶೇಷ. ಹೀಗೆ ಜನಪದ ಮಹಾಕಾವ್ಯಗಳು ಈ ಮಣ್ಣಿನ ಸ್ಥಳೀಯ ಕಲ್ಪನೆಗಳಿಂದ ರೂಪುಗೊಂಡಂತಹ ವುಗಳು ಎಂಬುದು ಸ್ಪಷ್ಟ.

ಮಾದೇಶ್ವರ ಕಾವ್ಯ ಅತೀ ವಿಸ್ತಾರ ವಾದುದು ಮತ್ತು ಜಗತ್ತಿನ ಎರಡನೇ ಅತಿ ದೊಡ್ಡ ಕಾವ್ಯ ಸಹ ಆಗಿದೆ. ಹಾಗೆಯೇ ದಲಿತ (ಹೊಲೆಯರ ಜಾತಿ) ಮೂಲದ ಮಂಟೆಸ್ವಾಮಿಗಳ ಕುರಿತ ಕಾವ್ಯ ಮಂಟೇಸ್ವಾಮಿ ಯನ್ನು ಸಿದ್ದಪ್ಪಾಜಿಯವರ ವಚನ, ಧರೆಗೆ ದೊಡ್ಡವರ ವಚನ ಎಂದೂ ಸಹ ಕರೆಯಲಾಗುತ್ತದೆ. ಇದೇ ರೀತಿ ಮಾದಿಗ ಸಮುದಾಯದಲ್ಲಿ ಹುಟ್ಟಿದ ಮಾದಯ್ಯನ ಪವಾಡಗಳು ಇರುವುದು ವಿಶೇಷ. ಹಾಗೆ ಕಾಡುಗೊಲ್ಲರ ಜುಂಜಪ್ಪನ ಸಂಪ್ರದಾಯ, ಮೈಲಾರ ಲಿಂಗನ ಗೊರವಯ್ಯ ಸಂಪ್ರದಾಯ ದ್ರಾವಿಡ ಸಂಸ್ಕೃತಿಗೆ ಸಂವೇದನೆ ಗಳನ್ನು ನೀಡಿದ ಮೌಖಿಕ ಜನಪದ ಕಾವ್ಯಗಳಾಗಿವೆ. ಹಾಗೆ ಚೌಡಿಕೆ ಎಲ್ಲಮ್ಮನನ್ನು ಗಮನಿಸಬಹುದು.

ದಲಿತರ ಸಾಂಸ್ಕೃತಿಕ ಲೋಕದ ಕಥನವನ್ನು, ಜನಪದ ವಾಙ್ಮಯದಲ್ಲಿರುವ, ಜಾತಿ ಸಮುದಾಯದಲ್ಲಿರುವ ಮತ್ತು ಜನಪದ ಮತ್ತು ಸಾಂಸ್ಕೃತಿಕ ಆಚರಣೆಗಳ ಒಳಗೆ ಇರುವ ದಲಿತ ರಂಗ ಭೂಮಿಯನ್ನು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಶೋಧಿಸಿ ಹೇಳಿದವರೆಂದರೆ, ಕೋಟಗಾನ ಹಳ್ಳಿ ರಾಮಯ್ಯ, ಸಿ.ಜಿ.ಕೃಷ್ಣಸ್ವಾಮಿ, ಡಾ.ಸಿದ್ದಲಿಂಗಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪ, ಸಿ. ಬಸವ ಲಿಂಗಯ್ಯ, ತೊ.ನಂಜುಂಡಸ್ವಾಮಿ, ಪ್ರೊ.ಅರವಿಂದ ಮಾಲಗತ್ತಿ, ಗೋಪಾಲ ಕೃಷ್ಣನಾಯರಿ, ಮುನಿವೆಂಕಟಪ್ಪ, ಎಲ್.ಹನುಮಂತಯ್ಯ, ಬಿ.ಟಿ. ಮುನಿರಾಜಯ್ಯ, ಡಾ.ಎ.ಆರ್.ಗೋವಿಂದಸ್ವಾಮಿ, ಡಾ. ಬಾಲಗುರುಮೂರ್ತಿ, ಹಾಲ್ಕುರಿಕೆ ಶಿವಶಂಕರ್, ಡಾ. ಶಾಂತ ನಾಯಕ್, ಡಾ.ನಾಗೇಶ್, ಡಾ.ರಾಮಕೃಷ್ಣಯ್ಯ, ಲಕ್ಷ್ಮೀಪತಿ ಕೋಲಾರ, ಅರ್ಜುನ್‌ಗೊಳಸಂಗಿ, ಆರ್ಯದ್ರಾವಿಡ ನಾಟಕ ತಂಡದವರು, ದಲಿತ ಸಂಘರ್ಷ ಸಮಿತಿಯವರು (ಕೊರೆಗಾಂ ಪ್ರಯೋಗ) ಮುಂತಾದ ನಾಟಕಕಾರರು ಹಾಗೂ ನಿರ್ದೇಶಕರನ್ನು ಗುರುತಿಸಬಹುದು.

ಬಿ.ವಿ.ಕಾರಂತರು ತಮ್ಮ ನಾಟಕ ಒಂದಕ್ಕೆ ಬಿಳಿಗಿರಿ ರಂಗನ ಬೆಟ್ಟದ ಬುಡಕಟ್ಟು ಜನರ ಒಂದು ರಾಗ ಗೋರುಗೋರು ಕನಾ ಹಾಡನ್ನು ರಾಷ್ಟ್ರೀಯ ಅಥವಾ ಅಂತರ್‌ರಾಷ್ಟ್ರೀಯ ಮಟ್ಟದ ಧ್ವನಿಯಾಗಿಸಿದ್ದರು. ಅಂದರೆ ಪ್ರತಿ ಬುಡಕಟ್ಟು, ಅಲೆಮಾರಿ, ದಲಿತ ಸಮುದಾಯಗಳ ಒಂದೊಂದು ಕಲೆಗಳು, ಪ್ರಕಾರಗಳು ಸಹ ಇಂದು ನಮಗೆ ಭಾರತೀಯ ರಂಗಭೂಮಿಗಳಾಗಿವೆ. ಅದನ್ನು ಡಾ.ಶಿವರಾಮಕಾರಂತರು ಯಕ್ಷಗಾನವನ್ನು ಪರಿಷ್ಕರಿಸಿ ಭಾರತೀಯ ರಂಗಭೂಮಿ ಕಟ್ಟಿದಂತೆ ಸುಧಾರಿಸಿ ಕಟ್ಟಬೇಕು ಅಷ್ಟೆ.

ಬಂಜಾರರ ಶ್ರೇಷ್ಠ ಪರಂಪರಾ ರಂಗಭೂಮಿ

ಸಾಂಸ್ಕೃತಿಕವಾಗಿ ದೀರ್ಘ ಚರಿತ್ರೆ ಇರುವ ಎಲ್ಲಾ ಸಮುದಾಯಗಳಲ್ಲಿ ನಾಟಕ ಪರಂಪರೆ ಅಂತಸ್ತವಾಗಿದ್ದು, ವರ್ತಮಾನದ ನಾಟಕ ರೂಪದ ಚೌಕಟ್ಟಿಗೆ ಹೊಂದದಿರಬಹುದು. ಆದರೆ ನಾಟಕ ಇಲ್ಲ ಎನ್ನಲಾಗದು. ಆ ದೃಷ್ಟಿಯಲ್ಲಿ ನೋಡಿದಾಗ, ಬಂಜಾರ(ಲಂಬಾಣಿ)ರಲ್ಲಿ ಕಥನಾ ನಿರೂಪಣಾ ಪರಂಪರೆ ಇದೆ. ಮುಖ್ಯವಾಗಿ ಹೆಣ್ಣುಮಕ್ಕಳು ಕಥಾನಕ ಹೇಳುವುದು, ಕಟ್ಟುವುದು ಇದೆ. ಗೀತೆ, ಕಥನ ನೃತ್ಯ, ಪುರಾಣ, ಬಯಲಾಟ, ಲಾವಣಿಗಳು, ಕೋಲಾಟ, ಕಥನಗೀತೆಗಳು, ವೀರಪುರುಷರ ಹಾಡುಗಳು, ವೇಷಭೂಷಣಗಳು, ವಿಶೇಷ ಆಭರಣಗಳು, ಸಂಪ್ರದಾಯಗಳು, ನಂಬಿಕೆಗಳು, ಆಚರಣೆಗಳು, ಪೂಜಾವಿಧಿ, ಆಧುನಿಕ ನಾಟಕಗಳು, ಪ್ರದರ್ಶನ ಕಲೆಗೆ ಪೂರಕವಾಗಿ ಬೆಳೆದುಬಂದಿರುವ ಸಾಂಪ್ರದಾಯಿಕ ಆಚರಣೆಗಳು ಮದುವೆ- ಮುಂಜಿ ಶಾಸ್ತ್ರ, ಹಬ್ಬ- ಹರಿದಿನಗಳಲ್ಲಿ, ಮುಖ್ಯವಾಗಿ ದೀಪಾವಳಿ, ಸಂಕ್ರಾಂತಿ, ಹೋಳಿಯ ವಿಶಿಷ್ಟ ಪದ್ಧತಿಗಳು, ನ್ಯಾಯ ಪಂಚಾಯಿತಿ, ಶಿಕ್ಷೆವಿಧಾನಗಳು, ಪೂಜಾವಿಧಿ, ಧರ್ಮ, ಕಲೆೆ, ಗೀತೆ, ನೃತ್ಯ ವಾದ್ಯಗಳು (ವಾಜ), ಲಾವಣಿ, ಗಾದೆ, ಒಗಟು, ನುಡಿಗಟ್ಟು, ಗುಪ್ತ ಸಂಭಾಷಣೆಗಳು, ಜನನ ಶಾಸ್ತ್ರ, ನಂಬಿಕೆ, ಮಾಟ, ಕಣಿ, ತೀಜ್, ದಸರಾ, ಸಿತ್ಲಾ (ಬೇಟೆ), ಹೋಳಿ ಹಾಡು-ನೃತ್ಯ, ಪವಾಡಗಳು, ರಂಗೋಲಿ, ಕಸೂತಿಕಲೆ, ಕೋಲಾಟ, ಹಚ್ಚೆ, ಸವಾಲ್-ಜವಾಬ್ ನಂತಹ ಹಲವಾರು ಪ್ರಕಾರಗಳು ಪ್ರದರ್ಶನಕ್ಕೆ ಪೂರಕವಾದ ರಂಗಾಂಶಗಳನ್ನು ಒದಗಿಸುತ್ತವೆ. ಹಾಗೂ ಇವು ನಾಟಕಾನುಭವ ನೀಡುತ್ತವೆ. ಒಟ್ಟಾರೆ ಚತುರ್ವಿಧ ಅಭಿನಯವನ್ನು ಲಂಬಾಣಿಗರ ಈ ಕಲಾ ಪ್ರಕಾರಗಳು ಅಳವಡಿಸಿಕೊಂಡಿವೆ, ಅದು ಭರತನ ನಾಟ್ಯ ಶಾಸ್ತ್ರದಲ್ಲಿ ಹೇಳುವ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಅಭಿನಯಗಳನ್ನು ಈ ಪ್ರಕಾರಗಳು ರೂಢಿಸಿಕೊಂಡಿವೆ ಎಂದೇ ಹೇಳಬಹುದು.

ಬಂಜಾರ ಸಮುದಾಯದ ಪರಂಪರೆನೇ ದೊಡ್ಡ ರಂಗ ಭೂಮಿಯಾಗಿದೆ. ಇಂದು ಎಲ್ಲಾ ಸಮುದಾಯಗಳ ಅಸ್ಮಿತತೆ ಕಾಪಾಡುವುದೇ ದೊಡ್ಡ ಸವಾಲು. ಇಂದು ಬಂಜಾರರ ಬಗ್ಗೆ ಅಭ್ಯಾಸ ಮಾಡದೆ ರಂಗಭೂಮಿ ಜನ ಅವರ ಶ್ರೇಷ್ಠ ವಸ್ತ್ರಾಭರಣಗಳನ್ನು, ಸಂಸ್ಕೃತಿಯನ್ನು ರಂಗಭೂಮಿಯಲ್ಲಿ ಬಳಸುತ್ತಾರೆ. ಈ ಜನಕ್ಕೆ ಕೃತಜ್ಞತೆ ಇರುವುದಿಲ್ಲ. ಇಲ್ಲೂ ಕೃತಿ ಚೌರ್ಯ ಆಗುತ್ತಿದೆ. ಬಂಜಾರ ರಂಗಭೂಮಿ ಆಳಕ್ಕೆ ಇಳಿಯಬೇಕಾದ ಅಗತ್ಯ ಇದೆ. ಐಡೆಂಟಿಟಿ ಸಂಸ್ಕೃತಿಯ ಅಭಿವ್ಯಕ್ತಿ ಆಗಬೇಕು. ಅದನ್ನು ದಲಿತ ಸಂವೇದನೆ ಅನ್ನಬಹುದು. ಉದಾ: ಗೆ ಕೊರಗರ ಚೋಮ ದಲಿತ ಸಂವೇದನೆ, ಹಾಗೆ ಹೆಣ್ಣುಮಕ್ಕಳು ದಲಿತರಿಂದಲೂ ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ. ಇದು ಇಲ್ಲಿ ಅನಾವಶ್ಯಕ.

ದಲಿತ ಜಾತಿಗಳಲ್ಲಿ ಮುಖ್ಯವಾಗಿ ತೀರ ನಿರ್ಲಕ್ಷಕ್ಕೆ ಒಳಗಾದ ಹಲವಾರು ಅಲೆಮಾರಿ ಬುಡಕಟ್ಟು ಗಳಿವೆ. ಅವುಗಳಲ್ಲಿ ಗೊಂದಳಿ, ಹೇಳವ, ದೊಂಬಿದಾಸರು, ಬೈಲಪತ್ತಾರ, ಘಿಸಾಡಿ ,ಕಂಜಾರಬಾಟ, ಸಿಕ್ಕಲಿಗಾರ, ಸೋಲಿಗರು, ದರವೇಶಿ, ಪಿಂಜಾರ,ಮೊಂಡರು ,ಕರಡಿ ಖಲಂದರ್, ಮದಾರಿ (ಹಾವಾಡಿಗ), ದಕ್ಕಲಿಗರು, ರಾಜಗೊಂಡ, ಬುಡ್ಗಜಂಗಮ್, ಸುಡುಗಾಡು ಸಿದ,್ದ ಹಂದಿ ಜೋಗಿ, ಚೆನ್ನದಾಸರ್, ಶಿಳ್ಳೇಕ್ಯಾತ, ಕೊರಮ, ಗೋಸಂಗಿ, ಗಂಟಿಚೋರ್, ದೊಂಬರು, ಗೋಸಾಯಿ, ಹಕ್ಕಿ ಪಿಕ್ಕಿ, ಪಾರ್ದಿ , ಡುಂಗ್ರಿ ಘರಾಸಿಯ , ಸಿಂದೋಳ್ಳು, ಛಪ್ಪರ್ ಬಾಂದ್, ಮಾಂಗ್ ಗಾರುಡಿ, ಜೋಗಿ, ಇರುಳಿಗರು, ಕೋರಗರು, ಪರ್ವತ ಮಲ್ಲಯ್ಯ, ಭಟ್ಟರಾಜು, ಜಾತಿಗಾರ್, ಡೊಂಬಾರಿ, ಬಂಜಾರ. ಮುಂತಾದ ಸಮುದಾಯಗಳ ಪಟ್ಟಿ ಬೆಳೆಯುತ್ತದೆ.

ಪ್ರಮುಖ ಅಲೆಮಾರಿ ಬುಡಕಟ್ಟು ಕಲಾ ಪ್ರಕಾರಗಳೆಂದರೆ, ಬುರ್ರಕತೆ (ಬುಡ್ಗ ಜಂಗಮ), ಹಗಲು ವೇಷ (ಬುಡ್ಗ ಜಂಗಮ) ದರೋಜಿ ರಾಮು,ಸಿಂದಾಟ (ಸಿಂಧೋಳ್ಳು)/ಸಿಂಧೋಳ್ಳು ನೃತ್ಯ, ಗೊಂದಳಿಕಲೆ (ಬುಡು ಬುಡಿಕೆ) ಟ್ರೈಬಲ್/ಗೊಂದಳಿಗರ ಮೇಳ,ಮೋಡಿ ಆಟ (ಸುಡುಗಾಡು ಸಿದ್ದರು), ಚನ್ನದಾಸರ ಭಜನೆ/ಚನ್ನದಾಸರ ತತ್ತ್ವಪದ,ಕೊಂಡ ಮಾಮ (ಬುಡ್ಗ ಜಂಗಮ), ಬಾಲಸಂತ,ಸಿದ್ದರ ಕೈಚಳಕ (ಸುಡುಗಾಡು ಸಿದ್ದರು), ಪಾಂಡು ವಿಜಯ ಕಥೆ (ಹಂದಿಜೋಗಿ) (ಏಕನಾದ ಕಲೆ), ಕೊರಮರ ಕಣಿ,ಹೇಳವರ ಪರಂಪರ ಕಥೆ,ದಾಸರ ತತ್ತ್ವಪದ,ಸೋಲಿಗರ ನೃತ್ಯ (ಟ್ರೈಬಲ್), ದಕ್ಕೆಲಿಗರ ತಪ್ಪಡಿ, ಗೋಸಂಗಿ ಕಥೆ, ದೊಂಬರ ದೊಂಬರಾಟ, ಬಂಜಾರರ ನೃತ್ಯ, ಬಂಜಾರ ಗಾಯನ, ಬಂಜಾರರ ವಾಜ, ಮುಂತಾದವುಗಳನ್ನು ಉಲ್ಲೇಖಿಸಬಹುದು.

ದಲಿತರ ಅಸ್ಮಿತತೆಗೆ ಧರೆಗೆ ದೊಡ್ಡವರಾಗಿರು ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪ, ತಪ್ಪೇರುದ್ರ, ಚೌಡಿಕೆ ಎಲ್ಲಮ್ಮ, ಮೈಲಾರಲಿಂಗ ಜನಾಂಗದಲ್ಲೇ ಸಾಂಸ್ಕೃತಿಕ ನಾಯಕನನ್ನು ಹಾಡು ರಿಚ್ಯೂವಲ್‌ನಲ್ಲಿ ಕಟ್ಟಿಕೊಳ್ಳುತ್ತಲೆ ಕಲೆಯಲ್ಲಿ, ದಲಿತರಲ್ಲೇ ಅಂತರ ರಾಷ್ಟ್ರೀಯ ಮನ್ನಣೆ ಇದೆ.

ರಂಗಭೂಮಿಯಲ್ಲಿ ಮಿತ್‌ಗಳನ್ನು ಹೊಡೆದು ಕಟ್ಟಬೇಕು. ಹಾಗೆ ಬಂಜಾರರಲ್ಲೂ ಪುರಾಣ, ಬಯಲಾಟ, ಲಾವಣಿಗಳು, ಕೋಲಾಟ, ಕಥನಗೀತೆಗಳು, ವೀರಪುರುಷರ ಹಾಡುಗಳು, ವಸ್ತ್ರವಿನ್ಯಾಸಗಳು, ವಿಶೇಷ ಆಭರಣಗಳು, ಸಂಪ್ರದಾಯಗಳು, ನಂಬಿಕೆಗಳು, ಆಚರಣೆ ಗಳು, ಪೂಜಾವಿಧಿ, ಆಧುನಿಕ ನಾಟಕಗಳು ಮುಂತಾದ ಕಲಾ ಪ್ರಕಾರಗಳು ಸಹ ಇವೆ. ಹಾಗೆ ಬಂಜಾರ ಕಲಾವಿದರೂ ಇದ್ದಾರೆ.

ಒಟ್ಟಾರೆ ಬಂಜಾರರಂತಹ ದಲಿತ ಸಂಸ್ಕೃತಿಯನ್ನು ಮುಖ್ಯ ವಾಹಿನಿಗೆ ತರಬೇಕು. ಇಂತಹ ಮೌಖಿಕ ಪರಂಪರೆ, ಜನಪದ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ಅಭ್ಯಾಸ ಮಾಡಿ ಸಂಕಥನ ಕಟ್ಟಬೇಕು. ಈ ಸಮುದಾಯ ಸ್ಥಾವರವಾಗಿಲ್ಲ ಜಂಗಮವಾಗಿದೆ. ಚಲನೆಯಲ್ಲಿದೆ ಹೀಗಾಗಿ ಪ್ಯೂರ್ ಆಗಿದೆ. ತಳವರ್ಗಗಳ ಸಂಸ್ಕೃತಿ ಯಲ್ಲಿನ ನಾಟಕ ಸ್ವರೂಪ, ಲಕ್ಷಣ, ಅಸ್ತಿತ್ವ, ಪ್ರಯೋಗ ಜವಾಬ್ದಾರಿ ಉಳ್ಳದ್ದು ಎಂದು ನಾಟಕಕಾರ ಡಾ.ಕೆ.ವೈನಾರಾಯಣ ಸ್ವಾಮಿ ಮತ್ತು ರಂಗತಜ್ಞ ಡಾ.ಎ.ಆರ್.ಗೋವಿಂದಸ್ವಾಮಿ ಸಂದರ್ಶನ (ದಿ: 01.01.2017)ದಲ್ಲಿ ಸಮರ್ಥಿಸಿದ್ದಾರೆ.

ಅಲೆಮಾರಿಗಳಲ್ಲಿನ ರಂಗಾಂಶ:

ದಲಿತ ರಂಗಕ್ಕೆ ಪ್ರೇರಣೆ:

ಗೊಂಬೆ ಆಟ, ದೊಂಬರಾಟ, ಹಾವಾಡಿಗರ ಆಟ, ಮೋಡಿ ಆಟ, ತಮಾಷ ಕಲಾ ಪ್ರಕಾರ, 1850 ರಿಂದ 1900ರ ಅವಧಿವರೆಗೆ ತಮಾಷ ಕಲಾ ಪ್ರಕಾರದ ಮೂಲಕ ಮಹಾರ್, ಮಾಂಗ್, ಗೊಂದಳಿ, ಡೋಬಾರಿ ಸಮುದಾಯದವರು ಜನರನ್ನು ರಂಜಿಸುತ್ತಿದ್ದರು. ಇವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿ ಮನರಂಜನೆ ಮಾತ್ರ ಪಡೆಯಲಾಗುತ್ತಿತ್ತು. 1855ರಲ್ಲಿ ‘ತೃತೀಯ ರತ್ನ’ ನಾಟಕವನ್ನು ಮಹಾತ್ಮಪೂಲೆ ಬರೆದರು. ಈ ನಾಟಕವು ದಲಿತ ಬರಹಗಾರರಿಗೆ ಬಹಳ ಮುಖ್ಯ ತಿರುವು ಕೊಟ್ಟ ಕೃತಿ, ಇವರು ಸತ್ಯಶೋಧಕ್ ಸಮಾಜ್ ಹುಟ್ಟುಹಾಕಿ ದಲಿತರಿಗೆ ವಿದ್ಯಾಭ್ಯಾಸ ನೀಡಿದರು. 1886ರಲ್ಲಿ ವೀರ್‌ಚಂದ್ರಸೇನ್ ನಾಟಕ ಪ್ರದರ್ಶನವನ್ನು ಮುಂಬೈಯಲ್ಲಿ ಮಹಾರ್ ಮಂಡಳಿ ಪ್ರದರ್ಶಿಸಿತು. ಇದು ದಲಿತರ ಪ್ರಸ್ತುತದ ಪರಿಸ್ಥಿತಿಯ ಅನಾವರಣ ಮಾಡಿತು. ಇಲ್ಲಿಂದ ಮಹಾತ್ಮಪೂಲೆ ಅವರು ದಲಿತರನ್ನು ರಂಗಭೂಮಿಯಲ್ಲಿ ತೊಡಗುವಂತೆ ಶಿಕ್ಷಣ ನೀಡಿ ಪ್ರೇರಣೆಯಾದರು. ನಂತರ ಅಂಬೇಡ್ಕರಿ ಜಲ್ಸೆ ಮೂಲಕ ಭೀಮರಾವ್ ಕಾರ್ಡಕ್, 1943ರ ವರೆಗೆ ತಮ್ಮ ರಂಗ ಕೃತಿಗಳ ಮೂಲಕ ದಲಿತರು ತಮ್ಮ ಅಸ್ತಿತ್ವದ ಬಗ್ಗೆ ಎಚ್ಚರಗೊಳ್ಳುವಂತೆ ಮಾಡಿದರು. ಹೀಗೆ ದೇಶದಲ್ಲಿ ದಲಿತ ಪರ ರಂಗ ಚಳವಳಿ ಸಾಗಿ ಬಂದಿತು.

1956 ರಿಂದ 1960 ಅವಧಿಯಲ್ಲಿ ದಲಿತ ರಂಗ ಚಳವಳಿ ಆರಂಭವಾಯಿತು, 1981ರಲ್ಲಿ ಭಾಮನ್ ವಾಡ ಅವರು ಆಧಾರ ಸ್ತಂಭ, 1982ರಲ್ಲಿ ಸಾಕ್ಷಿಪುರಂ, 1990ರಲ್ಲಿ ಮಹಾತ್ಮ ಪೂಲೆ ನಾಟಕಗಳನ್ನು ರಚಿಸಿ ದಲಿತರು ಪ್ರತಿಷ್ಠೆಯ ಬಾಳು ನಡೆಸುವಂತೆ ಪ್ರೇರೇಪಿಸಿದರು. 1975ರಲ್ಲಿ ಎಂ.ಬಿ.ಸಿಂಧೆ ಅವರು ಸಂಗೀತ ಭಿಸುನಿ ವಾಸವದತ್ತ ರಚಿಸಿ ಪ್ರಯೋಗಿಸಿದರು (1978). ಹಾಗೆ ಕಲೋಖ್ಯಾಚಗಾರ್ಭತ್, ಆಯೋಗ್, ಪಾವಲಿ ನಾಟಕ ರಚಿಸಿ ದಲಿತರ ಸ್ವಾತಂತ್ರ ಕುರಿತು ಮಾತನಾಡಿದರು. (Mokashi124), 1980ರಲ್ಲಿ ಪ್ರಕಾಶ್ ತ್ರಿಭುವನ್ ಅವರು ತಾಂಬರಾಮರಾಯೇಟೆ, 1974ರಲ್ಲಿ ಕಮಲಾಕರ್ ದಾಹತ್ ಬಾಹಿಷ್ಕರ್ ಅವರು ಹತ್ಯಾಕಾಂಡ್ ರಚಿಸಿ ಮಹಿಳಾ ಮನ್ವಂತರ ಮತ್ತು ಅಂತರ ಜಾತಿ ವಿವಾಹ ಮತ್ತು ದಲಿತರು ಶಿಕ್ಷಣದ ಬಗ್ಗೆ ಚಿಂತಿಸುವಂತೆ ಮಾಡಿದರು. 1981ರಲ್ಲಿ ರಾಮ್‌ನಾಥ್ ಚೌಹಾನ್ ಅವರ ತೆಕ್ಷಾಸ್ ಗಾಯಕ್‌ವಾಡ್ ಮತ್ತು ಭಾಮನ್‌ವಾಡ (1981) ಮತ್ತು ದತ್ತಾಭಗತ್ ಅವರ ವ್ಹಾಟ-ಪಾಲ್‌ವ್ಹಾಟ ಮುಂತಾದ ಸಾಮಾಜಿಕ ಸಮಸ್ಯೆ ಕುರಿತ ಏಕಾಂಕ ಹಾಗೂ ಪೂರ್ಣ ಪ್ರಮಾಣದ ನಾಟಕ ಕೃತಿಗಳು ಮತ್ತು ಪ್ರದರ್ಶನಗಳು ಮೂಡಿಬಂದವು, ಇವರಿಂದ ಪ್ರೇರಿತರಾಗಿ ದಲಿತ ನಾಟಕಕಾರರು ಹಾಗೂ ನಿರ್ದೇಶಕರು ಹುಟ್ಟಿಕೊಂಡರು.

ಕುವೆಂಪು(1904): ಕುವೆಂಪು ಅವರು ಶೂದ್ರ ತಪಸ್ವಿ, ಬೆರಳ್‌ಗೆ ಕೊರಳ್, ಮೊದಲಾದ ನಾಟಕಗಳಲ್ಲಿ ಸಾಂಸ್ಕೃತಿಕ ಪುನರ್ವ್ಯಾಖ್ಯಾನಗಳಿಗೆ ಪ್ರಯತ್ನಿಸಿದ್ದಾರೆ.

ಶಿವರಾಮಕಾರಂತ (1902): ಶಿವರಾಮ ಕಾರಂತ ಅವರ ಚೂಮನದುಡಿ ಕೃತಿ ಸಹ ಮಹತ್ವವಾದುದು.

ಶೀರಂಗ (1904): ಉತ್ತರ ಕರ್ನಾಟಕದ ಮೊದಲ ನಾಟಕಕಾರ ಶ್ರೀರಂಗ (1904-86) ಸಾಮಾಜಿಕ ಚಲನಶೀಲತೆಯನ್ನು ತಂದ ನಾಟಕಕಾರರು. ಇವರು ವ್ಯಕ್ತಿಯ ಹಿಂದಿರುವ ಸಮಾಜ ಆ ಸಮಾಜದಲ್ಲಿ ಸಂಭವಿಸುವ ವಿಘಟನೆ ಹಾಗೂ ಅದರ ಮೇಲೆ ಬೀಸುತ್ತಿರುವ ಹೊಸಗಾಳಿ, ಇವು ಮೊದಲ ಘಟ್ಟದ ಶ್ರೀರಂಗರ ನಾಟಕಗಳಲ್ಲಿ ಪ್ರಮುಖ ಸ್ಥಾನ ಪಡೆದವು, ಉದಾಹರಣೆಗೆ 1932 ರಲ್ಲಿ ರಚಿಸಿದ ಶ್ರೀರಂಗರ ಹರಿಜನ್ವಾರ ಮತ್ತು ಪ್ರಪಂಚ ಪಾಣಿಪತ್ತು ನಾಟಕಗಳೆರಡೂ ಒಂದೊಂದು ಸಮಕಾಲೀನ ಕುಟುಂಬವನ್ನೇ ಎದುರಿಗಿಟ್ಟುಕೊಂಡರೂ. ಕೇಂದ್ರೀಕರಿಸುವುದು ಮಾತ್ರ ಅದರ ಹಿನ್ನೆಲೆಗಿರುವ ಸಮಾಜದ ಮೇಲೆ, ಸಾಮಾಜಿಕ ಬದಲಾವಣೆಗಳ ಜತೆಗೇ ಹುಟ್ಟುವ ಡಾಂಭಿಕತೆ ಬದಲಾವಣೆಗೆ ಪ್ರತಿಯಾಗಿ ಸೃಷ್ಟಿ ಯಾಗುವ ಸಾಂಪ್ರದಾಯಿಕತೆಗಳ ನಡುವೆ ಸಮಾಜವು ತನ್ನ ಚಲನ ಶೀಲತೆಯನ್ನು ಮುಂದುವರೆಸಿಕೊಳ್ಳುತ್ತಲೇ ಹೋಗುವುದನ್ನು ವಾಸ್ತವದ ವಸ್ತುನಿಷ್ಠತೆಯಲ್ಲಿ, ವ್ಯಂಗ್ಯದ ಮೊನಚಿನೊಂದಿಗೆ ತೋರಿ ಸುವುದು ಈ ನಾಟಕಗಳ ಮಾರ್ಗ. (ರಂಗಪ್ರಪಂಚ- 340). ಈ ನಾಟಕ ಮಾರ್ಗದಲ್ಲಿ

ಪಿ.ಲಂಕೇಶ್(1935): ಪಿ.ಲಂಕೇಶರು ತಮ್ಮ ಸಂಕ್ರಾಂತಿ ನಾಟಕವನ್ನು ರಂಗಭೂಮಿ ಹಾಗೂ ಬಿ.ವಿ.ಕಾರಂತರಂತಹವರ ಪ್ರೇರಣೆಯಿಂದ ರಚಿಸಿದ್ದರೂ ವಸ್ತುವಿನ ದೃಷ್ಟಿಯಿಂದ ವಿಷಾಲ ವ್ಯಾಪ್ತಿ ಸಾಧಿಸಿದ ನಾಟಕ. ಇಲ್ಲಿನ ಕಥೆ 19ನೇ ಶತಮಾನದ ಶರಣ ಚಳವಳಿಯಾದರೂ ಅದರ ಕೇಂದ್ರ ಕಾಳಜಿ ಇರುವುದು ಸಮಕಾಲೀನ ಜಾತಿ ವೈಷಮ್ಯಗಳನ್ನು ಪರಿಶೀಲಿಸುವ ಕಡೆಗೆ

 ಚಂದ್ರಶೇಖರ ಕಂಬಾರ(1938): ಕಂಬಾರರ ಜೋಕುಮಾರ ಸ್ವಾಮಿ ನಾಟಕ ಆಧುನಿಕ ಜಾನಪದವಾಗಿದೆ. ಇದು ಉಳುವವನೆ ಒಡೆಯ ಕಲ್ಪನೆ ಒಳಗೊಂಡಿದೆ.

ಎಚ್.ಎಸ್.ಶಿವಪ್ರಕಾಶ್(1954): ಎಚ್.ಎಸ್.ಶಿವಪ್ರಕಾಶ್ ಅವರು ತಮ್ಮ ಸಿಂಗೀರಾಜ ಕೃತಿಯ ಮೂಲಕ ಬಿಜ್ಜಳ ಹಾಗೂ ಸಾಮಾಜಿಕ ಹೋರಾಟಗಾರರ ನಡುವಿನ ವೈಷಮ್ಯವನ್ನು ಕಟ್ಟಿಕೊಡುತ್ತದೆ.

ಸಿಂಗೀರಾಜ ನಾಟಕ ಪ್ರಯೋಗದಲ್ಲಿ ಡಾ.ಎ.ಆರ್.ಗೋವಿಂದ ಸ್ವಾಮಿ ಮತ್ತು ಧನಂಜಯ್ಯ ಹೀಗೆ ತಳವರ್ಗಗಳ ಪರ, ದಲಿತ ಪರವಾದ ರಂಗ ಚಟುವಟಿಕೆಗಳು ಕರ್ನಾಟಕದಲ್ಲೂ ಸಾಗಿದೆ. ದಲಿತ ರಂಗಭೂಮಿ ಕಲ್ಪನೆ ಬಗ್ಗೆ ಇನ್ನಷ್ಟು ಚರ್ಚೆಗಳ ಅಗತ್ಯ ಇದೆ. ಅದಕ್ಕೆ ಈ ಲೇಖನ ವೇದಿಕೆಯಾಗಲಿ ಎಂಬುದು ಆಶಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)