varthabharthi

ಬೆಂಗಳೂರು

ಮಾಚಿದೇವ ಪ್ರಶಸ್ತಿ ಪ್ರದಾನ

ಮಡಿವಾಳ ಜನಾಂಗವನ್ನು ಪರಿಶಿಷ್ಟ ಪಟ್ಟಿಗೆ ಸೇರ್ಪಡೆಗೆ ಡಾ.ರವಿಕುಮಾರ್ ಆಗ್ರಹ

ವಾರ್ತಾ ಭಾರತಿ : 11 Aug, 2019

ಬೆಂಗಳೂರು, ಆ.11: ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಮಡಿವಾಳ ಜನಾಂಗ ಅತ್ಯಂತ ನಿಕೃಷ್ಠ ಸ್ಥಿತಿಯಲ್ಲಿದ್ದು, ಶೈಕ್ಷಣಿಕ, ಸಮಾಜಿಕವಾಗಿ ಹಿಂದುಳಿದಿದೆ. ಹೀಗಾಗಿ ಸರಕಾರ ಪರಿಶಿಷ್ಟರ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಕೆಪಿಎಸ್ಸಿ ಸದಸ್ಯ ಡಾ. ರವಿಕುಮಾರ್ ಆಗ್ರಹಪಡಿಸಿದ್ದಾರೆ.

ರವಿವಾರ ರಾಜಾಜಿನಗರದ ರಾಜ್‌ಕುಮಾರ್ ಕಲಾಕ್ಷೇತ್ರದಲ್ಲಿ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಹಿಂದಿನ ರಾಜ್ಯ ಸರಕಾರಗಳು ನಮ್ಮ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಅನ್ನಪೂರ್ಣಮ್ಮ ವರದಿ ಬಿಡುಗಡೆಗೊಳ್ಳುವವರೆಗೂ ನಮ್ಮ ಜನಾಂಗದ ಬಗ್ಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ, ಈ ವರದಿಯನ್ನು ಜಾರಿಗೆ ತರಲು ಕಳೆದ ಸಿದ್ದರಾಮಯ್ಯ ಸರಕಾರದಲ್ಲಿ ಪ್ರಯತ್ನ ನಡೆಸಲಾಗಿತ್ತು. ಆದರೆ ಕೆಲ ಕಾರಣಾಂತರಗಳಿಂದ ಇದು ಅನುಷ್ಠಾನಗೊಳ್ಳಲು ಸಾಧ್ಯವಾಗಲಿಲ್ಲ, ನಾವೆಲ್ಲರೂ ಸಂಘಟಿತರಾಗದೇ ನಮ್ಮ ಬೇಡಿಕೆಗಳು ಈಡೇರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಜನಾಂಗಕ್ಕೆ ಇರುವ ಅನೇಕ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದೇವೆ. ನಮ್ಮದು ವಂಚಿತ ಸಮುದಾಯವಾಗಿದೆ. ಸರಕಾರದ ವಿವಿಧ ಅವಕಾಶಗಳನ್ನು ಬಳಸಿಕೊಳ್ಳದೆ ಇದ್ದಾಗಲೇ ನಮಗೆ ನಾವು ಮೋಸ ಮಾಡಿ ಕೊಳ್ಳುತ್ತೇವೆ. ಈ ಸಮಾಜವನ್ನು ಎಸ್ಸಿ- ಎಸ್ಟಿಗೆ ಸೇರಿಸಬೇಕು ಎಂಬ ಕೂಗು ಹೋರಾಟ ಅನೇಕ ವರ್ಷಗಳಿಂದ ನಡೆಯುತ್ತಲೇ ಇದೆ. ಇದಕ್ಕಾಗಿಯೇ ಸಮತಿಯನ್ನು ರಚನೆಯನ್ನು ಮಾಡಿ, ವರದಿಯನ್ನು ಸರಕಾರಕ್ಕೆ ಹತ್ತು ವರುಷದ ಹಿಂದೆಯೇ ನೀಡಿದ್ದೇವೆ ಎಂದರು.

ಮಡಿವಾಳ ಜನಾಂಗ ಯಾರೋ ಉಟ್ಟು ಬಿಟ್ಟ, ಹೊಲಸು ಸೂತಕ ಬಟ್ಟೆಗಳನ್ನು ಯಾವುದೇ ಮೈಲಿಗೆಗೆ ಅಂಜದೇ ತಮ್ಮ ತೆಲೆಯ ಮೇಲೆ ಹೊತ್ತು ತಂದು ಕೆರೆ ಅಥವಾ ಬಾವಿಗಳಲ್ಲಿ ಸ್ವಚ್ಚಗೊಳಿಸುವ ಕಾಯಕವನ್ನು ಗ್ರಾಮೀಣ ಪ್ರದೇಶಗಲ್ಲಿ ಇಂದಿಗೂ ಕೂಡ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಂತಹ ಜನಾಂಗಕ್ಕೆ ಸರಕಾರದಿಂದ ಮೀಸಲಾತಿ, ಕೆಲವು ಸವಲತ್ತುಗಳ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಅನ್ನಪೂರ್ಣ ವರದಿಯ ಅಂಶದಂತೆ ಎಸ್ಸಿ- ಎಸ್ಟಿ ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು.

ಮಾಚಿದೇವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಬಾರಿ ಕೃಷಿಕರಿಗೆ ವರುಣ ದೇವ ಕರುಣಿಸಿದ್ದಾನೆ. ಎಲ್ಲರಿಗೂ ಸುಖ ಶಾಂತಿ ಸಿಗಲಿ ಎಂದು ಶುಭ ಹಾರೈಸಿದರು.

ಕ್ಷೇಮಾಭಿವೃದ್ಧಿ ಸಂಘದ ಅಧಕ್ಷ ಆರ್.ವೆಂಕಟರಮಣ ಮಾತನಾಡಿ, ನಮ್ಮ ಮಡಿವಾಳ ಸಂಘದ ವತಿಯಿಂದ ನೀಡಲಾಗುವ ಸವಲತ್ತು, ಸೌಲಭ್ಯಗಳನ್ನು ಜನಾಂಗವರು ಸದ್ಬಳಕೆ ಮಾಡಕೊಳ್ಳಬೇಕು. ಅಲ್ಲದೆ, ಮಾಚಿದೇವರ ಹೆಸರಿನಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಇನ್ನು ಮುಂದೆ ಸರಕಾರವೇ ಕೆಂಪೇಗೌಡ ಪ್ರಶಸ್ತಿಯನ್ನು ಕೊಡುವ ರೀತಿಯಲ್ಲಿ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.

ದೆವನಹಳ್ಳಿಯ ಸಮಾಜ ಸೇವಕ ಅಪ್ಪಣ್ಣ, ಕೆ.ಆರ್.ಪುರಂ ದೋಬಿಘಾಟ್ ಅಧ್ಯಕ್ಷ ಕೃಷ್ಣಪ್ಪ, ರಂಗಭೂಮಿ ಕಲಾವಿದ ಕೆ.ಪಿ.ಅಶ್ವಥ್ ನಾರಯಣ್, ಜಾನಪದ ಕಂಸಾಳೆ ಕಲಾವಿದ ಎಂ.ಲಿಂಗಯ್ಯ ಅವರಿಗೆ ಈ ವರ್ಷದ ಮಡಿವಾಳ ಮಾಚಿದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜನಾಂಗ ಹಾಗೂ ಕಾಂಗ್ರೆಸ್ ಮುಖಂಡ ಡಾ.ಎಂ.ರಾಜು ತಲ್ಲೂರು, ರಾಜ್ಯ ಮಡಿವಾಳ ಸಂಘದ ಕಾರ್ಯಾಧ್ಯಕ್ಷ ಬಿ.ರಂಗಸ್ವಾಮಯ್ಯ, ಬಿಜೆಪಿ ಸಹ ವಕ್ತಾರ ರಘ ಕೌಟಿಲ್ಯ, ಸಂಘದ ಪ್ರಧಾನ ಕಾರ್ಯದರ್ಶಿ ವಿ.ದೀಪಕ್ ಮತ್ತಿತರರು ಹಾಜರಿದ್ದರು.

ಮಡಿವಾಳ ಅಭಿವೃದ್ಧಿ ನಿಗಮವನ್ನು ಆಗಿರುವುದು ಸಂತಸದ ವಿಷಯ. ನಿಗಮಕ್ಕಾಗಿ ದಿಲ್ಲಿಯ ಒಂದು ಮುದ್ರೆಗಾಗಿ ಕಾಯಲಾಗುತ್ತಿದೆ. 25ಕೋಟಿ ರೂ.ಗಳನ್ನು ನಿಗಮಕ್ಕೆ ಮೀಸಲಿಡಲಾಗಿದೆ. ಇದು ಕೇವಲ ಜನಾಂಗದ ಅಭಿವೃದ್ಧಿಗೆ ಮಾತ್ರ ಮೀಸಲು. ಇದನ್ನು ಜನಾಂಗ ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕು.

- ಡಾ.ರವಿಕುಮಾರ್, ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)