varthabharthi


ಕ್ರೀಡೆ

ಡಬ್ಲ್ಯುಟಿಎ ಟೊರಾಂಟೊ ಓಪನ್: ಸೆರೆನಾ ಫೈನಲ್‌ಗೆ

ವಾರ್ತಾ ಭಾರತಿ : 11 Aug, 2019

ಟೊರಾಂಟೊ, ಆ.11: ಝೆಕ್ ಕ್ವಾಲಿಫೈಯರ್ ಮೇರಿ ಬೌಝ್‌ಕೊವಾರ ಸವಾಲು ಹಿಮ್ಮೆಟ್ಟಿಸಿದ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಡಬ್ಲ್ಯುಟಿಎ ಟೊರಾಂಟೊ ಓಪನ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಸೆಮಿ ಫೈನಲ್‌ನಲ್ಲಿ 8ನೇ ಶ್ರೇಯಾಂಕದ ಸೆರೆನಾ ಝೆಕ್ ಆಟಗಾರ್ತಿಯ ವಿರುದ್ಧ 1-6, 6-3, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಮೂರನೇ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸದಲ್ಲಿರುವ ಸೆರೆನಾ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಕೆನಡಾದ ಬಿಯಾಂಕಾ ಆಂಡ್ರೀಸ್ಕೂರನ್ನು ಎದುರಿಸಲಿದ್ದಾರೆ.

ಸೆರೆನಾ 2017ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ 23ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ ಬಳಿಕ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ಇದೇ ವೇಳೆ, 19ರ ಹರೆಯದ ಬಿಯಾಂಕಾ 50 ವರ್ಷಗಳಲ್ಲಿ ಮೊದಲ ಬಾರಿ ಟ್ರೋಫಿ ಜಯಿಸಿದ ಕೆನಡಾದ ಮೊದಲ ಆಟಗಾರ್ತಿಎಂಬ ಹಿರಿಮೆ ಪಾತ್ರರಾಗಲು ಎದುರು ನೋಡುತ್ತಿದ್ದಾರೆ.

ಸ್ಲೋಯಾನ್ ಸ್ಟೀಫನ್ಸ್, ಜೆಲೆನಾ ಒಸ್ಟಾಪೆಂಕೊ ಹಾಗೂ ಹಾಲಿ ವಿಂಬಲ್ಡನ್ ಚಾಂಪಿಯನ್ ಸಿಮೊನಾ ಹಾಲೆಪ್‌ರನ್ನು ಸೋಲಿಸಿ ಫೈನಲ್‌ಗೆ ತಲುಪಿದ್ದರು. ಹಾಲೆಪ್ ಶುಕ್ರವಾರ ರಾತ್ರಿ ಮೊದಲ ಸೆಟನ್ನು ಸೋತ ಬಳಿಕ ಗಾಯಗೊಂಡು ನಿವೃತ್ತಿಯಾಗಿದ್ದರು.

ಫ್ರೆಂಚ್ ಓಪನ್‌ನಲ್ಲಿ ಭುಜನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಆಂಡ್ರೀಸ್ಕೂ ಫೈನಲ್‌ಗೆ ತೇರ್ಗಡೆಯಾಗಿ ಗಮನ ಸೆಳೆದಿದ್ದಾರೆ.

ಸತತ ಐದು ದಿನಗಳ ಕಾಲ ಪಂದ್ಯಗಳನ್ನು ಆಡಿರುವ ಸೆರೆನಾ ಒಂದು ರೀತಿಯ ದೈಹಿಕ ಪರೀಕ್ಷೆಗೆ ಒಳಗಾದರು. ಸೆರೆನಾ 2016ರಲ್ಲಿ ಗ್ರಾನ್‌ಸ್ಲಾಮ್‌ಯೇತರ ಡಬ್ಲುಟಿಎ ಟೂರ್ನಿ ಇಟಾಲಿಯನ್ ಓಪನ್‌ನಲ್ಲಿ ಕೊನೆಯ ಬಾರಿ ಫೈನಲ್‌ಗೆ ತಲುಪಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)