varthabharthi


ಓ ಮೆಣಸೇ

ಓ ಮೆಣಸೇ…

ವಾರ್ತಾ ಭಾರತಿ : 12 Aug, 2019
ಪಿ.ಎ.ರೈ

  *ಜಮ್ಮು-ಕಾಶ್ಮೀರದಲ್ಲಿ ಒಂದು ಕಾಲದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಇನ್ನು ಮುಂದೆ ಶೂಟಿಂಗ್‌ಗಾಗಿ ವಿಶ್ವವೇ ಅಲ್ಲಿಗೆ ಬರಲಿದೆ
- ನರೇಂದ್ರ ಮೋದಿ, ಪ್ರಧಾನಿ
 ಶೂಟ್ ಮಾಡಲು ಬಳಸುವ ಸಾಧನಗಳ ಕುರಿತಂತೆ ಅಲ್ಲಿನ ಜನರಿಗೆ ಆತಂಕವಿದೆ.

---------------------
  ಆಡಳಿತದಲ್ಲಿರಲಿ, ಪ್ರತಿಪಕ್ಷದಲ್ಲಿರಲಿ ರಾಜ್ಯದ ಜನರು ಸಂಕಷ್ಟದಲ್ಲಿರುವ ಸಂದರ್ಭ ಮೊದಲು ನೆರವಿಗೆ ಧಾವಿಸುವುದು ಯಡಿಯೂರಪ್ಪ
- ರೇಣುಕಾಚಾರ್ಯ, ಶಾಸಕ
 ಸದ್ಯಕ್ಕೆ ಯಡಿಯೂರಪ್ಪ ಅವರೇ ನೆರೆಯ ಸಂಕಷ್ಟದಲ್ಲಿ ಕೊಚ್ಚಿ ಹೋಗುತ್ತಿದ್ದಾರೆ. ನೆರವಿಗೆ ನೀವು ತೆಪ್ಪ ಹಿಡಿದುಕೊಂಡು ಹೋಗುವುದು ಒಳ್ಳೆಯದು.

---------------------
  ಮಾಜಿ ಸಿಎಂ ಕುಮಾರಸ್ವಾಮಿಯಿಂದ ಬುದ್ಧ್ದಿ ಹೇಳಿಸಿಕೊಳ್ಳುವ ಗತಿ ಯಡಿಯೂರಪ್ಪರಿಗೆ ಬಂದಿಲ್ಲ
- ಶೋಭಾ ಕರಂದ್ಲಾಜೆ, ಸಂಸದೆ
ಯಾರಿಂದಲಾದರೂ ಸರಿ, ಅವರಿಗೆ ಬುದ್ಧಿ ಹೇಳಿಸಿ.

---------------------
  ವಾಜಪೇಯಿ ಹೇಳಿದಂತೆ ಗೆಳೆಯರನ್ನಾದರೂ ಬದಲಿಸ ಬಹುದು, ನೆರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ
- ರಾಜನಾಥ್‌ಸಿಂಗ್, ಕೇಂದ್ರಸಚಿವ
ನಾವು ಕೂಡ ಇನ್ನೊಂದು ದೇಶಕ್ಕೆ ನೆರೆಯವರು ಎನ್ನುವುದನ್ನು ಮರೆಯಬಾರದು.

---------------------
 
ಒಂದು ವೇಳೆ ಭಾರತ ಏನಾದರೂ ನಮ್ಮ ಮೇಲೆ ಯುದ್ಧ ಸಾರಿದರೆ, ಅದು ಕಡೆಯ ಯುದ್ಧವಾಗಲಿದೆ - ಶೇಕ್‌ರಷೀದ್ ಅಹ್ಮದ್, ಪಾಕ್‌ಸಚಿವ
  ಯಾರ ಪಾಲಿಗೆ?

---------------------
  ರಾಜ್ಯದಲ್ಲಿ ಸಚಿವರಿಲ್ಲದಿರುವುದು ನೆರೆಪರಿಹಾರ ಕಾರ್ಯಕ್ಕೆ ಹಿನ್ನಡೆಯಾಗಿದೆ
- ಕೆ.ಎಸ್. ಈಶ್ವರಪ್ಪ, ಶಾಸಕ
 ಮತ್ತು ಅಧಿಕಾರಾಕಾಂಕ್ಷೆಗೂ ಹಿನ್ನಡೆಯೇ ಆಗಿದೆ.

---------------------
  ಮೋಡ ಬಿತ್ತನೆ ಕಾರ್ಯ ಅವೈಜ್ಞಾನಿಕ
- ಜಗದೀಶ್ ಶೆಟ್ಟರ್, ಮಾಜಿಮುಖ್ಯಮಂತ್ರಿ
  ಆದು ಮೋಡ ಬಿತ್ತನೆಯಲ್ಲ, ಹಣ ಬಿತ್ತನೆ.
---------------------
  ಯಡಿಯೂರಪ್ಪ ಇಷ್ಟೊಂದು ಅವಸರ ಮಾಡಿ ಮುಖ್ಯಮಂತ್ರಿಯಾಗುವ ಅಗತ್ಯವಿರಲಿಲ್ಲ
- ಡಿ.ಕೆ. ಶಿವಕುಮಾರ್, ಮಾಜಿ ಸಚಿವ
  ನಿಮ್ಮ ಅಗತ್ಯ ನೋಡಿ ಅವರು ಮುಖ್ಯಮಂತ್ರಿಯಾಗುತ್ತಾರೆಯೇ?
---------------------
  ಸುಳ್ಳು ಹೇಳಿ ಓಡಿಹೋಗುವ ಮುಖ್ಯಮಂತ್ರಿ ನಾನಲ್ಲ
- ಯಡಿಯೂರಪ್ಪ, ಮುಖ್ಯಮಂತ್ರಿ
  ತಾವು ಸುಳ್ಳು ಹೇಳಿದರೂ ಓಡಿ ಹೋಗದ ಮುಖ್ಯಮಂತ್ರಿ ಎನ್ನುವುದು ಜನರ ಹೆಮ್ಮೆ.
---------------------
  ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಏದುರಿಸಲು ಸಜ್ಜಾಗುತ್ತಿದ್ದೇನೆ
- ದೇವೇಗೌಡ, ಮಾಜಿಪ್ರಧಾನಿ
  ಜನರೂ ಸಜ್ಜಾಗುತ್ತಿದ್ದಾರೆ.
---------------------
  ದೇಶ ಜನರಿಂದ ರಚನೆಯಾಗಿದೆಯೇ ಹೊರತು, ಭೂಭಾಗಗಳಿಂದ ಅಲ್ಲ
- ರಾಹುಲ್‌ಗಾಂಧಿ, ಕಾಂಗ್ರೆಸ್ ನಾಯಕ
ಸದ್ಯಕ್ಕೆ ಅದೇ ಜನರು ತಮ್ಮನ್ನು ಸೋಲಿಸಿದ್ದಾರೆ ಎನ್ನುವುದನ್ನು ಮರೆಯದಿರಿ.

---------------------
  ಯಡಿಯೂರಪ್ಪ ಸರಕಾರ ಪಾಪದ ಕೂಸು
- ಎಂ.ಬಿ. ಪಾಟೀಲ್, ಮಾಜಿ ಸಚಿವ
  ಅಯ್ಯೋ ಪಾಪ ಎನ್ನುತ್ತಿದ್ದಾರೆ ಅತೃಪ್ತರು.
---------------------
  ನಾನು ಹೆಸರಿಗೆ ಮಾತ್ರ ಜೆಡಿಎಸ್ ನಾಯಕನಾಗಿದ್ದೆ
- ಎಚ್.ವಿಶ್ವನಾಥ್, ಅನರ್ಹ ಶಾಸಕ
  ಅತೃಪ್ತ ಶಾಸಕರ ನಾಯಕರಾಗಿ ಗುರುತಿಸಿಕೊಂಡ ಮೇಲೆಯೇ ನೀವು ನಿಜವಾದ ನಾಯಕರಾದುದು ಅಂತೀರಾ?
---------------------
  370ನೇ ವಿಧಿ ರದ್ದತಿಯಂತಹ ನಿರ್ಧಾರದಿಂದ ಪ್ರಧಾನಿ ಮೋದಿ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಲಿದ್ದಾರೆ
- ಕೆ.ಎಸ್.ಭಗವಾನ್, ಸಾಹಿತಿ
 ಅಜರಾಮರ ಪದದಲ್ಲೂ ರಾಮನಿದ್ದಾನೆ ಎನ್ನುವುದನ್ನು ಮರೆಯದಿರಿ.

---------------------
  ಭಾರತೀಯ ಕ್ರಿಕೆಟನ್ನು ದೇವರೇ ಕಾಪಾಡಬೇಕು
- ಸೌರವ್ ಗಂಗೂಲಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ
ಕ್ರಿಕೆಟ್‌ನಿಂದ ಜನರನ್ನು ಕಾಪಾಡುವವರು ಯಾರು?
---------------------
  ‘ಯಡಿಯೂರಪ್ಪ ಎಲ್ಲಿದ್ದಿಯಪ್ಪಾ’ ಎಂಬ ಪ್ರಶ್ನೆ ಈಗ ಯಾಕೆ ಕೇಳಿ ಬರುತ್ತಿಲ್ಲ
- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅದರ ಮೇಲೆ ತಮ್ಮ ಕುಟುಂಬದ ಕಾಪಿರೈಟ್ ಇದೆಯಂತೆ.

---------------------
  ನಾಯಕತ್ವ ಇಲ್ಲದ ಕಾಂಗ್ರೆಸ್ ಈಗ ಮೆದುಳು ಇಲ್ಲದ ಪಕ್ಷವಾಗಿದೆ
- ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಮೆದುಳಿನ ಜಾಗದಲ್ಲಿ ಸೆಗಣಿ ಇರುವುದಕ್ಕಿಂತ ವಾಸಿ.

---------------------
  ಬಿಜೆಪಿಗೆ ಬಂದಿರುವ 18 ಮಂದಿ ಅಳಿಯಂದಿರನ್ನು ತೃಪ್ತಿ ಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ
- ಕೆ.ಎಸ್. ಈಶ್ವರಪ್ಪ, ಶಾಸಕ
ಮನೆ ಅಳಿಯ ಎಂಬ ಸ್ಥಾನಮಾನ ಬೇಕಂತೆ ಅವರಿಗೆ.

---------------------
  ಐಐಟಿ ಪದವೀಧರರು ಡಿಟರ್ಜೆಂಟ್ ಮಾರಾಟದ ಕೆಲಸ ಮಾಡಬಾರದು
- ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ
  ಆದರೆ ಡಿಟರ್ಜೆಂಟ್ ಮಾರಾಟಗಾರರು ದೇಶದ ಪ್ರಧಾನಿಯಾಗಬಹುದು.
---------------------

ನನ್ನ ಜೀವನದ ಪುಸ್ತಕ ಓಪನ್ ಮಾಡಿದರೆ ಅಲ್ಲಿ ರೊಮ್ಯಾನ್ಸ್, ಡ್ರಾಮಾ, ಸೋಲುಗಳು, ಸಕ್ಸೆಸ್, ಮೋಟಿವೇಷನ್, ಕಾಮಿಡಿಯೇ ತುಂಬಿರುತ್ತದೆ - ಅನುಪಮ್ ಖೇರ್, ನಟ
ಇತ್ತೀಚಿನ ದಿನಗಳಲ್ಲಿ ಅದರಲ್ಲಿ ಮೋದಿಯೇ ತುಂಬಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು