varthabharthi


ಪ್ರಚಲಿತ

ಮನುಷ್ಯ ನಿರ್ಮಿತ ಅನಾಹುತ, ಈ ಜಲ ಪ್ರಳಯ

ವಾರ್ತಾ ಭಾರತಿ : 12 Aug, 2019
ಸನತ್ ಕುಮಾರ್ ಬೆಳಗಲಿ

ತಾನು ಬದುಕುವುದಕ್ಕಾಗಿ ನಿಸರ್ಗದೊಂದಿಗೆ ಶತಮಾನಗಳಿಂದ ಸೆಣಸುತ್ತ ಬಂದ ಮನುಷ್ಯ, ಅನೇಕ ಬಾರಿ ಗೆದ್ದಿದ್ದಾನೆ. ಈ ಗೆಲುವಿಗೆ ಭಾರೀ ಬೆಲೆಯನ್ನೂ ತೆತ್ತಿದ್ದಾನೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಈಗ ಉಂಟಾಗಿರುವ ಜಲ ಪ್ರಳಯ ಇದಕ್ಕೆ ಒಂದು ಉದಾಹರಣೆ. ಪ್ರಕೃತಿಯ ಮೇಲೆ ನಡೆಸಿದ ದುರಾಕ್ರಮಣ ಈ ಸ್ಥಿತಿಗೆ ಕಾರಣ. ಇದಕ್ಕೆ ಲಾಭಕೋರ ಬಂಡವಾಳಶಾಹಿ ಆರ್ಥಿಕತೆಯ ಕೊಡುಗೆ ಸಾಕಷ್ಟಿದೆ.

ಮಳೆಗಾಲದಲ್ಲಿ ಮಳೆ ಬರುವುದು ನಿಸರ್ಗದ ಸಹಜ ನಿಯಮ. ಮಳೆಯ ನೀರು ಹರಿದು ಹೋಗಲು ಹಳ್ಳ, ಕೊಳ್ಳ, ನದಿಗಳಿವೆ. ಈ ನೀರು ಹರಿದು ಹೋಗುವ ಮಾರ್ಗದಲ್ಲೇ ಮರಳು ಗಣಿಗಾರಿಕೆ ನಡೆಸಿದರೆ ಹಳ್ಳ, ಕೆರಗಳನ್ನು ಮುಚ್ಚಿ ಬಡಾವಣೆ, ಮನೆಗಳನ್ನು ನಿರ್ಮಿಸಿಕೊಂಡರೆ ನೀರು ಹರಿದು ಎಲ್ಲಿ ಹೋಗಬೇಕು? ಅದು ಬೇಕೆಂದಲ್ಲಿ ಹರಿದು ಹೋಗಿ ಸಮುದ್ರ ಸೇರುತ್ತದೆ. ಆಗ ಮಳೆಯ ನೀರು ಮನೆಗೆ ಬಂತು, ಊರಿಗೆ ಬಂತು ಎಂದು ಬೊಬ್ಬೆ ಹಾಕುತ್ತೇವೆ. ಹೀಗಾಗಬಾರದೆಂದು ಹಿಂದಿನ ಆಡಳಿತಗಾರರು ರಾಜ ಕಾಲುವೆಗಳನ್ನು ನಿರ್ಮಿಸಿದ್ದರು. ಕೆರೆ, ಕೊಳ್ಳಗಳನ್ನು ನಿರ್ಮಿಸಿದ್ದರು. ಮಳೆಗಾಲದಲ್ಲಿ ಇವು ತುಂಬಿ ಬೇಸಿಗೆಯಲ್ಲಿ ಮಾತ್ರವಲ್ಲ ಎಲ್ಲ ಕಾಲದಲ್ಲೂ ಕುಡಿಯುವ ನೀರು, ಬೇಸಾಯಕ್ಕೆ ನೀರು ಲಭ್ಯವಾಗುತ್ತಿತ್ತು. ಆದರೆ ಜಾಗತೀಕರಣದ ಶಕೆ ಆರಂಭವಾದ ನಂತರ ಆ ಕೆರೆಗಳನ್ನು ಮುಚ್ಚಿ ಅಲ್ಲೂ ಬಡಾವಣೆಗಳು, ಬಹು ಅಂತಸ್ತಿನ ಕಟ್ಟಡಗಳು ನಿರ್ಮಾಣವಾಗಿವೆ. ಇದರ ಪರಿಣಾಮವಾಗಿ ಅಂತರ್ಜಲವೂ ಪಾತಾಳಕ್ಕೆ ಹೋಗಿದೆ.

ಜನಸಂಖ್ಯೆ ಹೆಚ್ಚಾದಂತೆ ಮನುಷ್ಯ ಆಸರೆಗೆ ಇಳೆಯ ಪ್ರತಿಯೊಂದು ಜಾಗವನ್ನೂ, ಅವಕಾಶಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂಬುದು ಎಷ್ಟು ನಿಜವೋ ಆತನ ದುರಾಸೆಯೂ ಇದಕ್ಕೆ ಅಷ್ಟೇ ಕಾರಣ. ಸಂಪತ್ತಿನ ಸಂಗ್ರಹದ ದುರಾಸೆ ಮುಂದಿನ ನೂರು ತಲೆಮಾರುಗಳಿಗೆ ತನ್ನ ಕುಟುಂಬವನ್ನು ಸುಖವಾಗಿ ಇಡಲು ಇಂಥ ಅನಾಹುತ ಮಾಡುತ್ತ ಬಂದ ಸಂಪತ್ತಿನ ಸಂಗ್ರಹವೇ ಬಂಡವಾಳವಾದ. ಅದೇ ಇಂದಿನ ಅನಾಹುತಕ್ಕೆ ಕಾರಣ. ಈಗಂತೂ ಎಲ್ಲರಿಗೂ ಆಸ್ತಿ ಮಾಡುವ ಹುಚ್ಚು. ಈ ಭೂಮಿ ಇಲ್ಲಿ ವಾಸಿಸುವ ಎಲ್ಲ ಮನುಷ್ಯರಿಗೆ ಮಾತ್ರವಲ್ಲ ಸಕಲ ಜೀವಿಗಳಿಗೂ ಸೇರಿದ್ದು ಎಂಬ ಅರಿವು ಮಾಯವಾಗಿದೆ. ಇಲ್ಲಿರುವುದೆಲ್ಲ ತನ್ನದೇ ಎಂಬ ದುರಾಸೆ ಇಂದು ಜಗತ್ತನ್ನು ಈ ಅವನತಿಗೆ ತಂದು ನಿಲ್ಲಿಸಿದೆ.

ಈಗ ಉಂಟಾಗಿರುವ ಜಲ ಪ್ರಳಯ ಅನಿರೀಕ್ಷಿತವಲ್ಲ. ಹಿಂದೆ 2005ರಲ್ಲಿ ಮತ್ತು 2009ರಲ್ಲಿ ಕೂಡ ಆಗಿತ್ತು. ಆದರೆ ಈಗ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಅಪ್ಪಳಿಸಿದೆ. ಇದೇನೇ ಇದ್ದರೂ ಜಗತ್ತು ಇಷ್ಟೆಲ್ಲ ವೈಜ್ಞಾನಿಕವಾಗಿ ಮುಂದುವರಿದಿರುವಾಗ ಇದನ್ನು ಸಮರ್ಥವಾಗಿ ನಿಭಾಯಿಸಲು ನಮ್ಮ ಸರಕಾರಗಳು ಯೋಜನೆ ರೂಪಿಸಬೇಕಾಗಿತ್ತು. ಸುಸಂಬದ್ಧ ಜಲ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಬೇಕಾಗಿತ್ತು. ಆದರೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದಿಷ್ಟವಾದ ಜಲ ನೀತಿ ಎಂಬುದೇ ಇಲ್ಲ. ಹೀಗೆ ಪ್ರವಾಹ ಉಂಟಾದಾಗ ಒಂದಿಷ್ಟು ಕೋಟಿ ಖರ್ಚು ಮಾಡಿ, ಸತ್ತವರಿಗೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತವೆ. ಈಗನ ಪ್ರವಾಹಕ್ಕೂ ನಿಜವಾದ ಕಾರಣ ಕೃಷ್ಣಾ ತೀರದ ನೀರಾವರಿ ಯೋಜನೆಗಳ ಜಲಾಶಯಗಳ ಅಸಮರ್ಪಕ ಮತ್ತು ಅವೈಜ್ಞಾನಿಕ ನಿರ್ವಹಣೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಕಾರಣ. ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ವಿವಾದ ಮಾತ್ರವಲ್ಲ ಕೇಂದ್ರದ ಹೊಣೆಗೇಡಿತನ ಇದಕ್ಕೆ ಕಾರಣ.

ಈಗ ಅದನ್ನೆಲ್ಲ ವಿಶ್ಲೇಷಣೆ ಮಾಡುವ ಸಂದರ್ಭವಲ್ಲ. ಸಾವಿರಾರು ಜನ ಮನೆ ಮಾರು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಅವರಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕು. ಆದರೆ ಇದನ್ನೆಲ್ಲ ಮಾಡಬೇಕಾದ ರಾಜ್ಯ ಸರಕಾರ ಏಕೋಪಾಧ್ಯಾಯ ಶಾಲೆಯಂತಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪರೊಬ್ಬರೆ ಎಲ್ಲೆಡೆ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದು 16 ದಿನಗಳಾದರೂ ಮಂತ್ರಿ ಮಂಡಲ ರಚನೆಯಾಗಿಲ್ಲ. ಇದೇ ಸಂದರ್ಭದಲ್ಲಿ ಒಮ್ಮೆಲೇ ಪ್ರವಾಹ ಬಂದು ಮತ್ತು ಅತಿವೃಷ್ಟಿಯಿಂದ 15 ಜಿಲ್ಲೆಗಳಲ್ಲಿ ಸಾವಿರಾರು ಜನ ಬೀದಿಗೆ ಬಿದ್ದಿದ್ದಾರೆ. ರಾಜ್ಯದ ಮುಖ್ಯಮಂತ್ರಿಗೆ ತನ್ನ ಸಚಿವ ಸಂಪುಟ ರಚನೆ ಮಾಡುವ ಸ್ವಾತಂತ್ರವಿಲ್ಲ. ದಿಲ್ಲಿಯ ದೊರೆಗಳು, ನಾಗಪುರದ ರಿಮೋಟ್ ರಾಜರು ಓಕೆ ಮಾಡಬೇಕು. ಈಗ ಅವರು ಅದಕ್ಕೆ ತಯಾರಿಲ್ಲ. ಹೀಗಾಗಿ ಯಡಿಯೂರಪ್ಪ ಅಡಕತ್ತರಿಯಲ್ಲಿ ಸಿಕ್ಕು ವಿಲ ವಿಲ ಒದ್ದಾಡುತ್ತಿದ್ದಾರೆ. ಅನ್ಯ ಮಾರ್ಗವಿಲ್ಲದೆ 78ನೇ ವಯಸ್ಸಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುತ್ತುತ್ತಿದ್ದಾರೆ. ದಣಿವಿಲ್ಲದೆ ಬೆಳಗ್ಗಿನಿಂದ ರಾತ್ರಿವರೆಗೆ ಓಡಾಡುತ್ತಿದ್ದಾರೆ. ಆದರೆ ಜೊತೆಗೆ ಮಂತ್ರಿಗಳಿಲ್ಲದೆ ಒಬ್ಬ ಮನುಷ್ಯ ಏನು ಮಾಡಲು ಸಾಧ್ಯ?

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಜನಸಾಮಾನ್ಯರ ಬದುಕು ಮೂರಾ ಬಟ್ಟೆಯಾಗಿದೆ. ರಾಜ್ಯದಲ್ಲಿ ಸರಕಾರವೇ ಇಲ್ಲದಂತಾಗಿದೆ. ಮಂತ್ರಿಗಳಾಗಬೇಕೆಂಬ ಬಿಜೆಪಿ ಆಕಾಂಕ್ಷಿಗಳಲ್ಲಿ ಅಸಮಾಧಾನ ಉಂಟಾಗಿದೆ. ಪ್ರವಾಹ ಪರಿಸ್ಥಿತಿ ಇದೆ ಎಂದು ಅವರೆಲ್ಲರೂ ಸುಮ್ಮನಿದ್ದಾರೆ. ಇದೇ ಅಸಮಾಧಾನದ ಕಾರಣದಿಂದಲೇ ಬಿಜೆಪಿ ಶಾಸಕರು ಪ್ರವಾಹ ಪರಿಹಾರ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿಲ್ಲ. ಸಿಎಂ ಆದವರು ಒಬ್ಬರೇ ಓಡಾಡಲಿ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾರೆ.

ಯಡಿಯೂರಪ್ಪನವರು ಹಠ ಹಿಡಿದು ಮುಖ್ಯಮಂತ್ರಿಯಾಗಿರುವ ಬಗ್ಗೆ ಬಿಜೆಪಿ ಶಾಸಕರ ಒಂದು ಗುಂಪಿನಲ್ಲಿ ಅದರಲ್ಲೂ ಸಂಘ ಪರಿವಾರದಲ್ಲಿ ಅಸಮಾಧಾನವಿದೆ. ಇದೇ ಸಂದರ್ಭ ಬಳಸಿಕೊಂಡು ‘ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರು ಅಸಮರ್ಥ ಎಂದು ಬಿಂಬಿಸಿ ಅವರ ಕುರ್ಚಿಯನ್ನು ಎಳೆದು ಕೆಳಗೆ ಬೀಳಿಸಿ ಹರ್ಯಾಣ, ಮಹಾರಾಷ್ಟ್ರದಂತೆ ಕಟ್ಟಾ ಆರೆಸ್ಸೆಸ್ ಯುವ ಸ್ವಯಂ ಸೇವಕನನ್ನು ಸಿಎಂ ಗಾದಿಯ ಮೇಲೆ ಕೂರಿಸುವ ಮಸಲತ್ತು ನಡೆದಿದೆ’ ಎಂದು ವದಂತಿ ಹರಡಿದೆ.
ಯಡಿಯೂರಪ್ಪನವರೇನು ಸಂಪನ್ನರಲ್ಲ, ಅವರಿಗೆ ಹಿಂದೆ ಜನ ಅಧಿಕಾರ ಕೊಟ್ಟಾಗ ಗಣಿ ಲೂಟಿಗೆ, ರಿಯಲ್ ಎಸ್ಟೇಟ್ ಮಾಫಿಯಾಗಳನ್ನು ಸಾಕಿ ಆಡಳಿತ ವ್ಯವಸ್ಥೆಯನ್ನು ಅಧ್ವಾನಗೊಳಿಸಿದರು. ಈ ಬಾರಿಯೂ ತಮ್ಮ ಸುತ್ತ ತಮಗೆ ಸಂಬಂಧಿಸಿದವರನ್ನು, ಕಡು ಭ್ರಷ್ಟರನ್ನು ಸೇರಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ಕೆಲವೇ ತಾಸುಗಳಲ್ಲಿ ತರಾತುರಿಯಲ್ಲಿ ಮನಬಂದಂತೆ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಪ್ರವಾಹ ಪರಿಹಾರ ಕಾರ್ಯ ಅಸ್ತವ್ಯಸ್ತಗೊಂಡಿದೆ.

ರಾಜಕಾರಣಿಗಳ ಅವಿವೇಕ, ದೂರದೃಷ್ಟಿಯ ಕೊರತೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟು ಅಧ್ವಾನವಾಗುತ್ತಿರಲಿಲ್ಲ. ಮಳೆ, ಪ್ರವಾಹ ಬರುವುದು ಸಹಜ. ಸರಕಾರ ಈ ಬಗ್ಗೆ ಮೊದಲೇ ಎಚ್ಚೆತ್ತು ಮಹಾರಾಷ್ಟ್ರದ ಮಾದರಿಯಂತೆ ಅಲ್ಲಲ್ಲಿ ಚೆಕ್ ಡ್ಯಾಮ್ ಗಳನ್ನು ನಿರ್ಮಿಸಿದ್ದರೆ ಪ್ರವಾಹ ತಡೆಗೆ ಮಳೆ ನೀರು ಸಂಗ್ರಹಕ್ಕೆ ಅನುಕೂಲವಾಗುತ್ತಿತ್ತು. ಅಲ್ಲಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿದ್ದರೆ ಹೀಗಾಗುತ್ತಿರಲಿಲ್ಲ. ಇದರಿಂದ ಭಾರೀ ಪ್ರವಾಹ ತಡೆಯಲು ಸಾಧ್ಯವಾಗದಿದ್ದರೂ ಆರಂಭದ ಹಂತದಲ್ಲಿ ಅದರ ರಭಸವನ್ನು ತಡೆಯಬಹುದಾಗಿತ್ತು. ಇದರಿಂದ ಅಂತರ್ಜಲ ಪ್ರಮಾಣವೂ ಹೆಚ್ಚಾಗುತ್ತದೆ. ಹರಿಯುವ ನೀರಿನ ಪ್ರಮಾಣವೂ ಕಡಿಮೆಯಾಗುತ್ತದೆ. ಕನಿಷ್ಠ ಮಳೆ ನೀರು ಸಂಗ್ರಹದ ವ್ಯವಸ್ಥೆ ಮಾಡಬೇಕಾಗಿತ್ತು. ಸರಕಾರ ಅದಾವುದನ್ನೂ ಮಾಡಲಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡಿದಂತೆ ಕಾಟಾಚಾರದ ಪರಿಹಾರ ಕ್ರಮಗಳಿಂದ ಆಗಾಗ ಮರುಕಳಿಸುವ ಈ ಸಮಸ್ಯೆಗೆ ಪರಿಹಾರವಿಲ್ಲ. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಇಂದಿನ ಆರ್ಥಿಕ ಹಾಗೂ ಅಭಿವೃದ್ಧಿ ನೀತಿ ಇದಕ್ಕೆ ಅವಕಾಶ ಕೊಡುವುದಿಲ್ಲ. ಅಪಾಯಕಾರಿ ಯೋಜನೆಗಳ ಬಗ್ಗೆ ಆಕ್ಷೇಪಿಸಿದರೆ ಅಭಿವೃದ್ಧಿ ವಿರೋಧಿಗಳೆಂದು ಹಣೆಪಟ್ಟಿ ಅಂಟಿಸಿಕೊಳ್ಳಬೇಕಾಗುತ್ತದೆ.

ಉತ್ತರ ಕರ್ನಾಟಕದಲ್ಲಿ ಮಲೆನಾಡಿನಂತೆ ಗುಡ್ಡುಗಾಡು ಪ್ರದೇಶ ಕಡಿಮೆ. ಅಲ್ಲಿ ಸಮತಟ್ಟಾದ ನೆಲವಿದೆ. ರೈತರು ತಮ್ಮ ಹೊಲಗಳಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಿದರೆ, ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಿದರೆ ಇಂಥ ಅನಾಹುತಗಳನ್ನು ತಡೆಯಬಹುದು. ಆದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಯೋಜನಾಬದ್ಧ ಆರ್ಥಿಕತೆ ಇರುವುದಿಲ್ಲ. ಹೀಗಾಗಿ ಈ ಬಗ್ಗೆ ಗಂಭೀರವಾಗಿ ಯೋಚಿಸುವುದಿಲ್ಲ.

ಆದರೆ ಈ ಬಗ್ಗೆ ಸರಕಾರಗಳು ಮಾತ್ರವಲ್ಲ ಜನರೂ ಪ್ರಾಮುಖ್ಯತೆ ಕೊಡುವುದಿಲ್ಲ. ಬೇಸಾಯಕ್ಕಾಗಲಿ, ಕುಡಿಯುವುದಕ್ಕಾಗಲಿ ನೀರು ಬೇಕೆಂದಾಗ ಕೊಳವೆ ಬಾವಿಗಳನ್ನು ಕೊರೆಸುವ ಸುಲಭ ಮಾರ್ಗಕ್ಕೆ ಜನ ಮೊರೆ ಹೋಗಿದ್ದಾರೆ. ಹೀಗಾಗಿ ಇಂಥ ಅನಾಹುತಗಳಾಗುತ್ತವೆ. ಇನ್ನಾದರೂ ನಮ್ಮ ಸರಕಾರಗಳು, ಜನರು ಎಚ್ಚೆತ್ತು, ಮಳೆ ನೀರು ಇಂಗಿಸುವ ಗುಂಡಿಗಳನ್ನು, ಅಲ್ಲಲ್ಲಿ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಬೇಕು. ಸರಕಾರ ಎಲ್ಲರ ಮನೆಗಳಲ್ಲಿ, ಹೊಲಗಳಲ್ಲಿ ಮಳೆ ನೀರು ಸಂಗ್ರಹದ ಇಂಗು ಗುಂಡಿಗಳನ್ನು ಕಡ್ಡಾಯ ಮಾಡಬೇಕು. ಆದರೆ ಆರ್ಥಿಕ, ಸಾಮಾಜಿಕ ಅಸಮಾನತೆ ದಿನದಿನಕ್ಕೆ ಹೆಚ್ಚುತ್ತಿರುವ ಈ ವ್ಯವಸ್ಥೆಯಲ್ಲಿ ಇದೆಲ್ಲ ಸಾಧ್ಯವೇ? ಸಾಧ್ಯ ಮಾಡಿಸಲು ಜನರು ದನಿಯೆತ್ತಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)