varthabharthi


ರಾಷ್ಟ್ರೀಯ

ಕಾಶ್ಮೀರ ಹಿಂದೂ ಬಾಹುಳ್ಯ ರಾಜ್ಯವಾಗಿದ್ದರೆ 370ನೇ ವಿಧಿಯನ್ನು ಬಿಜೆಪಿ ಮುಟ್ಟುತ್ತಲೇ ಇರುತ್ತಿರಲಿಲ್ಲ: ಚಿದಂಬರಂ

ವಾರ್ತಾ ಭಾರತಿ : 12 Aug, 2019

ಚೆನ್ನೈ, ಆ.12: ‘‘ಇತಿಹಾಸ ಗೊತ್ತಿಲ್ಲದವರು ತಮ್ಮ ತೋಳ್ಬಲ ಬಳಸಿ ಈ ರೀತಿ ಮಾಡಿದ್ದಾರೆ'' ಎಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ 370ನೇ ವಿಧಿಯನ್ನು ರದ್ದುಪಡಿಸಿರುವ ಬಿಜೆಪಿಯ ನಿರ್ಧಾರವನ್ನು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಖಂಡಿಸಿದ್ದಾರೆ.

   "ಒಂದು ವೇಳೆ ಜಮ್ಮು-ಕಾಶ್ಮೀರ ಹಿಂದೂ ಬಾಹುಳ್ಯದ ರಾಜ್ಯವಾಗಿರುತ್ತಿದ್ದರೆ ವಿಧಿ 370ನ್ನು ಬಿಜೆಪಿ ಸ್ಪರ್ಶಿಸಲು ಹೋಗುತ್ತಿರಲಿಲ್ಲ. ಮುಸ್ಲಿಂ ಬಾಹುಳ್ಯದ ರಾಜ್ಯವಾಗಿರುವ ಕಾರಣ ಬಿಜೆಪಿ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡಿದೆ. ಜಮ್ಮು-ಕಾಶ್ಮೀರ ಭಾರತದ ಭಾಗವಾಗಿದೆ.ಇದರಲ್ಲಿ ಸಂಶಯವೇ ಇಲ್ಲ. ಸಂಶಯವಿರುವುದು ಬಿಜೆಪಿಗೆ ಮಾತ್ರ. 72 ವರ್ಷಗಳ ಇತಿಹಾಸವನ್ನು ತಿಳಿಯದ ಜನರು ತೋಳ್ಬಲದಿಂದ 370ನೇ ವಿಧಿಯನ್ನು ರದ್ದುಪಡಿಸಿದ್ದಾರೆ. ಏಳು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಪ್ರಾದೇಶಿಕ ಪಕ್ಷಗಳು 370ನೇ ವಿಧಿ ರದ್ಧತಿಗೆ ಬೆಂಬಲ ನೀಡಿರುವ ನಿರ್ಧಾರ ನನಗೆ ನೋವುಂಟು ಮಾಡಿದೆ. ರಾಜ್ಯಸಭೆಯಲ್ಲಿ ಏಳು ಪಕ್ಷಗಳು ನಮಗೆ ಸಹಕಾರ ನೀಡಿದ್ದರೆ ಬಹುಮತ ನಮ್ಮದಾಗುತ್ತಿತ್ತು ಆದರೆ, ಹಾಗಾಗಲಿಲ್ಲ. ಇದು ನಿರಾಶೆಯ ವಿಚಾರ'' ಎಂದು ಚಿದಂಬರಂ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)