varthabharthi


ವಿಶೇಷ-ವರದಿಗಳು

ಹಜ್: ಸತ್ಯಾನುಭವದ ಸಂಭ್ರಮ

ವಾರ್ತಾ ಭಾರತಿ : 12 Aug, 2019
ಹವ್ವಾ ಶಹಾದತ್, ಪುತ್ತಿಗೆ

ಸತ್ಯದ ವಿಷಯದಲ್ಲಿ ಪೂರ್ವಜರ ಅಂಧಾನುಕರಣೆ ಮಾಡುವ ಬದಲು ಸದಾ ಸತ್ಯ ಶೋಧಕರಾಗಿರಬೇಕು. ಆತ್ಮ ಸಾಕ್ಷಿಯ ಧ್ವನಿಗೆ ಕಿವಿಗೊಡಬೇಕು. ಪ್ರಕೃತಿಯ ಜಡ ವೀಕ್ಷಕರಾಗಿ ಉಳಿಯದೆ ಸಂವೇದನಾಶೀಲರಾಗಿ ಪ್ರಕೃತಿಯನ್ನು ವೀಕ್ಷಿಸಬೇಕು. ಪ್ರಕೃತಿಯ ದೃಶ್ಯಗಳಿಂದ ಪಾಠ ಕಲಿಯಬೇಕು. ಅಸತ್ಯವನ್ನು ಒಪ್ಪುವುದಕ್ಕೆ ಎಷ್ಟು ಒತ್ತಡವಿದ್ದರೂ ರಾಜಿಗೆ ಇಳಿಯಬಾರದು. ಅಸತ್ಯದ ವಿರುದ್ಧ ಬಂಡಾಯ ಘೋಷಿಸಬೇಕು. ಸತ್ಯನಿಷ್ಠೆ ಎಂಬುದು ಬಂಧುಗಳು, ವಂಶ, ಸಮಾಜ, ಸರಕಾರ ಇತ್ಯಾದಿ ಎಲ್ಲವನ್ನೂ ಮೀರಿದ್ದು. ಒಂದು ವಿಷಯ ಸತ್ಯವೆಂದು ಮನವರಿಕೆಯಾದ ಬಳಿಕ ಯಾವ ಬೆಲೆ ತೆತ್ತಾದರೂ ಸತ್ಯನಿಷ್ಠೆಯನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಸರ್ವಸ್ವದ ತ್ಯಾಗಕ್ಕೂ ಸನ್ನದ್ಧರಾಗಿರಬೇಕು. ಇವು ಇಬ್ರಾಹೀಮರ ಬದುಕಿನ ಸಂದೇಶಗಳು.

 ಸೌದಿ ಅರೇಬಿಯದ ಐತಿಹಾಸಿಕ ಮಕ್ಕಾ ನಗರದಲ್ಲಿರುವ ಪವಿತ್ರ ಕಾಬಾ ಎಂಬ ಕಟ್ಟಡದ ಜೊತೆ ಜಗತ್ತಿನ ಎಲ್ಲ ಮುಸ್ಲಿಮರಿಗೆ ಒಂದು ವಿಶೇಷ ಭಾವನಾತ್ಮಕ ಸಂಬಂಧವಿದೆ. ಜಗತ್ತಿನ ಯಾವುದೇ ಭಾಗದಲ್ಲಿ ವಾಸಿಸುವ ಮುಸ್ಲಿಮರು ನಿತ್ಯ ಐದು ಹೊತ್ತು ‘ನಮಾಝ್’ ಎಂಬ ತಮ್ಮ ಆರಾಧನಾ ಕರ್ಮ ಮಾಡುವಾಗ ಆ ಕಟ್ಟಡದ ಕಡೆಗೆ ಮುಖ ಮಾಡಿ ನಿಲ್ಲುತ್ತಾರೆ. ಜಗತ್ತಿನ ಎಲ್ಲ ಮಸೀದಿಗಳನ್ನು ಕೂಡಾ ಕಾಬಾದ ದಿಕ್ಕಿಗೆ ಮುಖ ಮಾಡಿರುವಂತೆ ನಿರ್ಮಿಸಿರುತ್ತಾರೆ. ಮೂಲತಃ ಈ ಕಾಬಾ ಕಟ್ಟಡವನ್ನು ನಿರ್ಮಿಸಿದವರು, ಪ್ರವಾದಿ ಇಬ್ರಾಹೀಮ್ (ಅ). ನಿರಾಕಾರ, ಅಮೂರ್ತ, ಏಕದೇವನ ಆರಾಧನೆಗಾಗಿ ನಿರ್ಮಿಸಲಾದ ಆ ಕಟ್ಟಡವನ್ನು ಜಗತ್ತಿನ ಪ್ರಥಮ ಮಸೀದಿ ಎಂದು ಪರಿಗಣಿಸಲಾಗುತ್ತದೆ. ಇಬ್ರಾಹೀಮ್ (ಅ) ಇಂದಿಗಿಂತ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಅಂದರೆ ಏಸು ಅಥವಾ ಈಸಾ (ಅ) ಅವರಿಗಿಂತ ಸುಮಾರು 2 ಸಾವಿರ ವರ್ಷ ಹಿಂದೆ ಮತ್ತು ಪ್ರವಾದಿ ಮುಹಮ್ಮದ್ (ಸ) ರಿಗಿಂತ ಸುಮಾರು 2,600 ವರ್ಷ ಹಿಂದೆ ಇರಾಕ್‌ನಲ್ಲಿ ಜನಿಸಿ, ಮುಂದೆ ಮಕ್ಕಾದ ಕಡೆಗೆ ವಲಸೆ ಹೋಗಿದ್ದವರು. ಇಬ್ರಾಹೀಮ್ (ಅ) ರ ವಿಶೇಷತೆ ಏನೆಂದರೆ ಯಹೂದಿ, ಕ್ರೈಸ್ತ ಮತ್ತು ಮುಸ್ಲಿಮ್ ಎಂಬ ಜಗತ್ತಿನ ಮೂರು ಪ್ರಮುಖ ಸಮುದಾಯಗಳ ಜನರು ಅವರನ್ನು ಆದರಿಸುತ್ತಾರೆ. ಪ್ರಸ್ತುತ ಮೂರೂ ಸಮುದಾಯಗಳು ನಂಬುವ ಮತ್ತು ಗೌರವಿಸುವ ಹೆಚ್ಚಿನೆಲ್ಲ ಪ್ರವಾದಿಗಳು ಮತ್ತು ದೇವದೂತರು ಇಬ್ರಾಹೀಮರ ಸಂತತಿಗಳೆಂದು ನಂಬಲಾಗಿದೆ. ಸ್ವತಃ ಪ್ರವಾದಿ ಮುಹಮ್ಮದ್ (ಸ), ಇಬ್ರಾಹೀಮರ ವಂಶಸ್ಥರಾಗಿದ್ದರು. ಮುಸ್ಲಿಮರು ವರ್ಷದಲ್ಲಿ ಕೇವಲ ಎರಡು ಧಾರ್ಮಿಕ ಹಬ್ಬಗಳನ್ನು ಮಾತ್ರ ಆಚರಿಸುತ್ತಾರೆ. ರಮಝಾನ್ ತಿಂಗಳು ಮುಗಿದಾಗ ಆಚರಿಸುವ ಈದುಲ್ ಫಿತರ್ ಮತ್ತು ದುಲ್ ಹಜ್ ತಿಂಗಳ ಹತ್ತನೇ ದಿನ ಆಚರಿಸುವ ಈದುಲ್ ಅಝ್‌ಹಾ. ಇದು ನಿಜವಾಗಿ ಮಕ್ಕಾದಲ್ಲಿ ನಡೆಯುವ ಹಜ್ ಸಮಾವೇಶ ಮತ್ತು ಅದರ ಸಂದೇಶದ ಜಾಗತಿಕ ವಿಸ್ತರಣೆಯಾಗಿದೆ. ನೂರಕ್ಕೂ ಹೆಚ್ಚಿನ ದೇಶಗಳ ಲಕ್ಷಾಂತರ ಮುಸಲ್ಮಾನರು ಮಕ್ಕಾದಲ್ಲಿ ಸೇರಿ ಹಜ್ ನಡೆಸುವಾಗ ಜಗತ್ತಿನ ಇತರೆಲ್ಲ ಭಾಗಗಳಲ್ಲಿರುವ ಮುಸಲ್ಮಾನರು ಈದ್ (ಹಬ್ಬ) ಆಚರಿಸುವ ಮೂಲಕ ಅವರ ಜೊತೆಗಿನ ತಮ್ಮ ಭಾವೈಕ್ಯವನ್ನು ಪ್ರದರ್ಶಿಸುತ್ತಾರೆ. ಹಜ್‌ನಲ್ಲಿ ಆಚರಿಸಲಾಗುವ ಕರ್ಮಗಳ ಪೈಕಿ ಒಂದು ಕರ್ಮ ಪ್ರಾಣಿಬಲಿ. ಈದ್‌ನ ದಿನ ಈ ಒಂದು ಕರ್ಮವನ್ನು ಹಜ್‌ಗೆ ಹೋಗಿಲ್ಲದ ಮತ್ತು ಆರ್ಥಿಕ ಸಾಮರ್ಥ್ಯ ಇರುವ, ಜಗತ್ತಿನ ಎಲ್ಲ ಮುಸ್ಲಿಮರು ತಾವಿರುವ ಸ್ಥಳದಲ್ಲೇ ಆಚರಿಸುತ್ತಾರೆ. ಪ್ರವಾದಿ ಇಬ್ರಾಹೀಮರ ಬದುಕು ಮತ್ತು ಸಂದೇಶವನ್ನು ಸ್ಮರಿಸುತ್ತಾ ಪ್ರಾಣಿ ಬಲಿ ಅರ್ಪಿಸಿ ಅದರ ಮಾಂಸವನ್ನು ಬಂಧುಗಳಿಗೆ ಮತ್ತು ಬಡವರಿಗೆ ವಿತರಿಸುತ್ತಾರೆ. ಅಲ್ಲದೆ ಆ ದಿನ ಮಸೀದಿಗಳಲ್ಲಿ ವಿಶೇಷ ನಮಾಝನ್ನು ಸಲ್ಲಿಸಲಾಗುತ್ತದೆ.

ಉಮ್ರಾ

ಅಧಿಕೃತ ವರದಿಯ ಪ್ರಕಾರ ಪ್ರತಿ ವರ್ಷ ಜಗತ್ತಿನ ವಿವಿಧ ಭಾಗಗಳಿಂದ ಸುಮಾರು 2 ಕೋಟಿ ಮಂದಿ ‘ಉಮ್ರಾ’ ಯಾತ್ರಿಕರು ಪವಿತ್ರ ಕಾಬಾದ ಸಂದರ್ಶನಕ್ಕೆ ಬರುತ್ತಾರೆ. ಉಮ್ರಾ ಕೂಡ ಮಕ್ಕಾದಲ್ಲಿ ಕಾಬಾದ ಅಕ್ಕಪಕ್ಕದಲ್ಲೇ ನಡೆಯುತ್ತದೆ. ಆದರೆ ಹಜ್ ಕೆಲವರ ಮೇಲೆ ಕಡ್ಡಾಯವಾಗಿರುತ್ತದೆ, ಉಮ್ರಾ ಪ್ರಶಂಸಿತ ಕರ್ಮವೇ ಹೊರತು ಯಾರಮೇಲೂ ಕಡ್ಡಾಯವಲ್ಲ. ಹಜ್ ಅನ್ನು ವರ್ಷದ ನಿರ್ದಿಷ್ಟ ದಿನಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಆದರೆ ಉಮ್ರಾವನ್ನು ವರ್ಷದ ಯಾವುದೇ ದಿನ ನಡೆಸಬಹುದು. ಹಜ್ ಗೆ ಐದು ದಿನಗಳು ಬೇಕಾಗುತ್ತವೆ. ಉಮ್ರಾ ಕೆಲವೇ ಗಂಟೆಗಳಲ್ಲಿ ಮುಗಿದುಹೋಗುತ್ತದೆ. ತವಾಫ್, ಸಈ ಮತ್ತು ಇಹ್ರಾಮ್ ಇವಿಷ್ಟು ಉಮ್ರಾದ ಭಾಗಗಳಾಗಿದ್ದು, ಹಜ್‌ನ ಇತರ ಭಾಗಗಳು ಉಮ್ರಾದ ಭಾಗಗಳಲ್ಲ. ರಮಝಾನ್ ತಿಂಗಳೊಂದರಲ್ಲೇ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಹಲವೆಡೆಗಳಿಂದ ಕಾಬಾದ ದರ್ಶನಕ್ಕಾಗಿ ಮಕ್ಕಾ ನಗರಕ್ಕೆ ಬರುತ್ತಾರೆ. ಹಜ್ ಯಾತ್ರೆ ನಡೆಯುವ ದುಲ್ ಹಜ್ ತಿಂಗಳಲ್ಲಂತೂ ಇಲ್ಲಿ ಸಂದರ್ಶಕರ ಸಂಖ್ಯೆ 25 ಲಕ್ಷ ಮೀರುತ್ತದೆ. (2018ರಲ್ಲಿ ಅಧಿಕೃತ ಅಂಕಿ ಅಂಶಗಳ ಪ್ರಕಾರ ಸೌದಿ ಅರೇಬಿಯದೊಳಗಿಂದ ಬಂದ 6 ಲಕ್ಷ ಮಂದಿ ಸೇರಿ ಒಟ್ಟು 24 ಲಕ್ಷ ಮಂದಿ ಹಜ್‌ನಲ್ಲಿ ಪಾಲುಗೊಂಡಿದ್ದರು. (ಇವರಲ್ಲಿ 10.5 ಲಕ್ಷ ಮಹಿಳೆಯರಿದ್ದರು). ವಿದೇಶಗಳಿಂದ ಬರುವ ಒಟ್ಟು ಯಾತ್ರಿಕರ ಪೈಕಿ ಶೇ. 75 ಮಂದಿ ಇಂಡೋನೇಷಿಯಾ, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ, ಇರಾನ್, ನೈಜೀರಿಯಾ ಮತ್ತು ಟರ್ಕಿ ಎಂಬ 8 ದೇಶಗಳಿಗೆ ಸೇರಿದವರಾಗಿರುತ್ತಾರೆ. ಹಜ್ ಯಾತ್ರಿಕರು ತಂಗುವುದಕ್ಕಾಗಿ ಮಕ್ಕಾದ ಪೂರ್ವ ಭಾಗದಲ್ಲಿ, ನಗರದಿಂದ ಸುಮಾರು 6 ಕಿಲೋ ಮೀಟರ್ ದೂರ ಮಿನಾನಗರದಲ್ಲಿ ಬಹುತೇಕ ಒಂದು ಲಕ್ಷ ಶಿಬಿರಗಳನ್ನು ನಿರ್ಮಿಸಿಡಲಾಗಿದೆ. ಆ ಪ್ರದೇಶವನ್ನು ‘ಟೆಂಟ್ ಸಿಟಿ’ ಎಂದೇ ಜನರು ಕರೆಯುತ್ತಾರೆ. ಈ ಹವಾ ನಿಯಂತ್ರಿತ ಹಾಗೂ ಅಗ್ನಿ ನಿರೋಧಕ ಶಿಬಿರಗಳಲ್ಲಿ ಎಲ್ಲ ಬಗೆಯ ಸವಲತ್ತುಗಳಿದ್ದು ಸೆಖೆ ತುಂಬಾ ಹೆಚ್ಚಾದರೆ ತಣ್ಣೀರು ಸಿಂಪಡಿಸುವ ಏರ್ಪಾಡೂ ಇದೆ. ಈ ವರ್ಷವಂತೂ ಮಿನಾದ ಶಿಬಿರಗಳಿಗೆ ನಡೆದುಹೋಗುವ ದಾರಿಗಳನ್ನು ಕೂಡ ಉಷ್ಣ ನಿರೋಧಕ ಕವಚಗಳಿಂದ ಆವರಿಸಲಾಗಿದೆ. ಒಂದು ಸಂದರ್ಭದಲ್ಲಿ ಪ್ರವಾದಿ ಇಬ್ರಾಹೀಮರು ತಾವು ತಮ್ಮ ಪುತ್ರನನ್ನು ಬಲಿಕೊಡುತ್ತಿರುವುದಾಗಿ ಸ್ವಪ್ನದಲ್ಲಿ ಕಂಡು ಅದನ್ನೇ ದೇವರ ಆದೇಶವೆಂದು ಪರಿಗಣಿಸಿ ಪುತ್ರನನ್ನು ಬಲಿ ನೀಡಲು ಹೊರಟಿದ್ದರು. ಅವರ ಆ ತ್ಯಾಗ ಸನ್ನದ್ಧತೆಯ ಸ್ಮರಣಾರ್ಥ ಹಜ್ ಯಾತ್ರಿಕರು ಹಜ್‌ನ ವೇಳೆ ಪ್ರಾಣಿ ಬಳಿ ನೀಡುವ ಕ್ರಮವಿದೆ. ಹಜ್‌ನ ಸಂದರ್ಭದಲ್ಲಿ ಪ್ರಾಣಿ ಬಲಿಗಾಗಿಯೇ ಸಾವಿರಾರು ಪಶು ವೈದ್ಯ ತಜ್ಞರು, ಶುಚಿತ್ವ ಸಿಬ್ಬಂದಿ ಹಾಗೂ ಸ್ವಯಂಸೇವಕರು ಸೇರಿದಂತೆ 40,000ಕ್ಕೂ ಹೆಚ್ಚಿನ ಮಂದಿಯ ಮೇಲ್ವಿಚಾರಣೆಯಲ್ಲಿ, ಅತ್ಯಾಧುನಿಕವಾದ ತಾಂತ್ರಿಕ ಸವಲತ್ತುಗಳಿರುವ, ಸುಸಜ್ಜಿತ ಏರ್ಪಾಡು ಲಭ್ಯವಿದೆ. ಸುಮಾರು 10 ಲಕ್ಷ ಕುರಿಗಳನ್ನು ಬಲಿ ನೀಡಲಾಗುತ್ತದೆ ಮತ್ತು ಅವುಗಳ ಮಾಂಸವನ್ನು ಸಂಸ್ಕರಿಸಿ 25 ಕ್ಕೂ ಹೆಚ್ಚಿನ ರಾಷ್ಟ್ರಗಳ ಬಡವರಿಗೆ ತಲುಪಿಸಲಾಗುತ್ತದೆ. ಹಜ್‌ಗಾಗಿ ಮಕ್ಕಾಗೆ ಬರುವವರ ಪಾಲಿಗೆ ಈ ಸ್ಥಳದ ಮಹಿಮೆಗಿಂತ ಅದರ ಇತಿಹಾಸ ಮತ್ತು ಅಲ್ಲಿ ಸಿಗುವ ಸ್ಫೂರ್ತಿ ಹಾಗೂ ಪ್ರೇರಣೆ ತುಂಬಾ ಮುಖ್ಯವಾಗಿರುತ್ತದೆ. ಇಬ್ರಾಹೀಮರ ಬದುಕನ್ನು ನೆನಪಿಸುವ ಆ ನೆಲ, ಆ ಕಟ್ಟಡ ಮತ್ತು ಅಲ್ಲಿರುವ ಇತರ ಹಲವು ಕುರುಹುಗಳು ಹಾಗೂ ಸಂಕೇತಗಳು ಇಬ್ರಾಹೀಮರು ಮಾನವ ಸಮಾಜಕ್ಕೆ ಕಲಿಸಿಹೋದ ಹಲವು ಮಹತ್ವದ ಪಾಠಗಳನ್ನೂ ನೆನಪಿಸುತ್ತವೆ. ಸತ್ಯದ ವಿಷಯದಲ್ಲಿ ಪೂರ್ವಜರ ಅಂಧಾನುಕರಣೆ ಮಾಡುವ ಬದಲು ಸದಾ ಸತ್ಯ ಶೋಧಕರಾಗಿರಬೇಕು. ಆತ್ಮ ಸಾಕ್ಷಿಯ ಧ್ವನಿಗೆ ಕಿವಿಗೊಡಬೇಕು. ಪ್ರಕೃತಿಯ ಜಡ ವೀಕ್ಷಕರಾಗಿ ಉಳಿಯದೆ ಸಂವೇದನಾಶೀಲರಾಗಿ ಪ್ರಕೃತಿಯನ್ನು ವೀಕ್ಷಿಸಬೇಕು. ಪ್ರಕೃತಿಯ ದೃಶ್ಯಗಳಿಂದ ಪಾಠ ಕಲಿಯಬೇಕು. ಅಸತ್ಯವನ್ನು ಒಪ್ಪುವುದಕ್ಕೆ ಎಷ್ಟು ಒತ್ತಡವಿದ್ದರೂ ರಾಜಿಗೆ ಇಳಿಯಬಾರದು. ಅಸತ್ಯದ ವಿರುದ್ಧ ಬಂಡಾಯ ಘೋಷಿಸಬೇಕು. ಸತ್ಯನಿಷ್ಠೆ ಎಂಬುದು ಬಂಧುಗಳು, ವಂಶ, ಸಮಾಜ, ಸರಕಾರ ಇತ್ಯಾದಿ ಎಲ್ಲವನ್ನೂ ಮೀರಿದ್ದು. ಒಂದು ವಿಷಯ ಸತ್ಯವೆಂದು ಮನವರಿಕೆಯಾದ ಬಳಿಕ ಯಾವ ಬೆಲೆ ತೆತ್ತಾದರೂ ಸತ್ಯನಿಷ್ಠೆಯನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಸರ್ವಸ್ವದ ತ್ಯಾಗಕ್ಕೂ ಸನ್ನದ್ಧರಾಗಿರಬೇಕು. ಇವು ಇಬ್ರಾಹೀಮರ ಬದುಕಿನ ಸಂದೇಶಗಳು. ಅವರು ಕೇವಲ ಉಪದೇಶಕರಾಗಿರಲಿಲ್ಲ. ಅವರು ಸತ್ಯಕ್ಕಾಗಿ ನಾಡು ತೊರೆದವರು. ಸೃಷ್ಟಿಕರ್ತನಿಗೆ ಸಂಪೂರ್ಣ ಶರಣಾಗಿ ಬಿಡಬೇಕು ಎಂದು ನಂಬಿ ಸೃಷ್ಟಿಕರ್ತನ ಸೂಚನೆಯನ್ನೇ ಆದೇಶವಾಗಿ ಪರಿಗಣಿಸಿ ಪುತ್ರತ್ಯಾಗಕ್ಕೆ ಸಜ್ಜಾದವರು. ತಾನೇ ವಿಗ್ರಹಗಳನ್ನು ನಿರ್ಮಿಸಿ, ವಿಗ್ರಹ ವ್ಯವಹಾರ ನಡೆಸುತ್ತಿದ್ದ ಮತ್ತು ತಾನು ನಿರ್ಮಿಸಿದ ವಿಗ್ರಹಗಳನ್ನು ತಾನೇ ಪೂಜಿಸುತ್ತಿದ್ದ ತಮ್ಮ ಸಾಕ್ಷಾತ್ ತಂದೆಯೊಡನೆ ಆ ಕುರಿತು ಹಲವು ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದವರು. ತಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗದಿದ್ದಾಗ ತಂದೆಯ ವಿರುದ್ಧವೇ ಬಂಡಾಯವೆದ್ದವರು. ಆತನ ವಿಗ್ರಹಸಾಮ್ರಾಜ್ಯವನ್ನು ಧ್ವಂಸ ಮಾಡಿದವರು. ತಮ್ಮನ್ನು ಅಗ್ನಿಕುಂಡಕ್ಕೆ ಎಸೆದಾಗಲೂ ಸತ್ಯನಿಷ್ಠೆಯಿಂದ ಒಂದಂಗುಲ ದೂರ ಸರಿಯದೆ ಸ್ಥೈರ್ಯ ಮೊೆದವರು. ಅಸ್ತಮಿಸುವವರು ಪೂಜಾರ್ಹರಲ್ಲ ಎಂದು ಘೋಷಿಸಿದವರು. ತಮ್ಮ ಕಾಲದ ದೊರೆ ತಾನೇ ದೇವರೆಂದು ಘೋಷಿಸಿದಾಗ ಅವನ ವಿರುದ್ಧ ವಾದಿಸಿ ಗೆದ್ದವರು. ಇದು, ಹಜ್ ಅಥವಾ ಉಮ್ರಾಗೆ ಹೋಗುವವರಲ್ಲಿ ಚೈತನ್ಯ ತುಂಬುವ ಇತಿಹಾಸ. ಮೂಲತಃ ಪ್ರವಾದಿ ಇಬ್ರಾಹೀಮರು ನಿರ್ಜನ ಮರುಭೂಮಿಯಲ್ಲಿ ನಿರ್ಮಿಸಿದ್ದ ಈ ಭವನಕ್ಕೆ ಬೈತುಲ್ ಹರಾಮ್ (ಪವಿತ್ರ, ನಿರ್ಬಂಧಿತ ಭವನ), ಬೈತುಲ್ ಅತೀಖ್ (ಪ್ರಾಚೀನ, ಸ್ವತಂತ್ರ, ವಿಮೋಚನಾದಾಯಕ ಭವನ) ಮುಂತಾದ ಹೆಸರುಗಳಿವೆ. ಕಾಬಾ ಎಂಬ ಪದಕ್ಕೆ ಎತ್ತರದ ಸ್ಥಳ, ಪ್ರತಿಷ್ಠೆಯ ಸ್ಥಾನ ಎಂಬಿತ್ಯಾದಿ ಅರ್ಥಗಳಿವೆ. ಪವಿತ್ರ ಕಾಬಾ ಕಟ್ಟಡವು ಘನಾಕೃತಿಯಲ್ಲಿದೆ. (ಕಾಬಾ ಎಂಬ ಅರಬಿ ಪದವೇ ಘನಾಕೃತಿಯನ್ನು ಸೂಚಿಸುತ್ತದೆ. ಈ ಪದಕ್ಕೂ ಆಂಗ್ಲ ಭಾಷೆಯಲ್ಲಿ ಘನಾಕೃತಿಗೆ ಬಳಸಲಾಗುವ CUBE ಪದಕ್ಕೂ ಸಾಮೀಪ್ಯವಿದೆ). ಕಾಬಾದ ಒಟ್ಟು ವಿಸ್ತೀರ್ಣ 627 ಚದರ ಅಡಿ. ಎತ್ತರ 39 ಅಡಿ, 6 ಇಂಚು. ಅದರ ಒಳಭಾಗವು 13ಮೀಟರ್ ಉದ್ದ ಹಾಗೂ 9 ಮೀಟರ್ ಅಗಲವಿದೆ. ಅದರ ಗೋಡೆಗಳು ಸುಮಾರು ಒಂದು ಮೀಟರ್ ನಷ್ಟು ದಪ್ಪಗಿವೆ. ಅದರ ಒಳಗಿನ ನೆಲಭಾಗವು, ಹೊರಗೆ ಜನರು ತವಾಫ್ (ಪ್ರದಕ್ಷಿಣೆ) ಮಾಡುವ ಸ್ಥಳದ ನೆಲಮಟ್ಟಕ್ಕೆ ಹೋಲಿಸಿದರೆ 2.2 ಮೀಟರ್ ಎತ್ತರದಲ್ಲಿದೆ. ಅದರ ಚಪ್ಪರವನ್ನು ತೇಗದಮರದ ಎರಡು ಪದರಗಳಲ್ಲಿ ನಿರ್ಮಿಸಲಾಗಿದ್ದು ಅದನ್ನು ಉಕ್ಕಿನ ಪದರದಿಂದ ಆವರಿಸಲಾಗಿದೆ. ಕಾಬಾದ ಹೊರಗಾಗಲಿ ಒಳಗಾಗಲಿ ಯಾವುದೇ ವಿಗ್ರಹವಿಲ್ಲ. ಯಾವುದೇ ಪ್ರವಾದಿಯ ಅಥವಾ ಇತರ ಮಹಾನುಭಾವರ ಚಿತ್ರವಿಲ್ಲ. ಕಾಬಾ ಕಟ್ಟಡವು ಮಸ್ಜಿದುಲ್ ಹರಾಮ್ ಎಂದು ಕರೆಯಲಾಗುವ, ಮಕ್ಕಾದ ಪಾವನ ಮಸೀದಿಯ ಮಧ್ಯಭಾಗದಲ್ಲಿದೆ. ಮಸ್ಜಿದುಲ್ ಹರಾಮ್‌ನ ವಿಸ್ತೀರ್ಣ 4 ಲಕ್ಷ ಚದರ ಮೀಟರ್‌ಗಿಂತ ಅಧಿಕವಿದೆ. ಒಳಾಂಗಣ ಮತ್ತು ಹೊರಾಂಗಣ ಸೇರಿದಂತೆ ಇದರಲ್ಲಿ ಏಕಕಾಲದಲ್ಲಿ ಸುಮಾರು 40 ಲಕ್ಷ ಜನರು ಪ್ರಾರ್ಥನೆ ಸಲ್ಲಿಸುವುದಕ್ಕೆ ಬೇಕಾದಷ್ಟು ಸ್ಥಳಾವಕಾಶವಿದೆ. ಜೀವನಾವಧಿಯಲ್ಲಿ ಒಮ್ಮೆ ಹಜ್ ಯಾತ್ರೆ ಮಾಡಬೇಕಾದುದು ಆರ್ಥಿಕ ಮತ್ತು ಆರೋಗ್ಯದ ದೃಷ್ಟಿಯಿಂದ, ಪ್ರಯಾಣದ ಸಾಮರ್ಥ್ಯ ಉಳ್ಳ ಮುಸ್ಲಿಮರ ಪಾಲಿಗೆ ಒಂದು ಧಾರ್ಮಿಕ ಕಡ್ಡಾಯ ಕರ್ಮವಾಗಿದೆ. 5 ದಿನಗಳ ಹಜ್ ಕರ್ಮವು ಪ್ರತಿವರ್ಷ ಇಸ್ಲಾಮಿಕ್ ಚಂದ್ರಮಾನ ಕ್ಯಾಲೆಂಡರ್‌ನ ಕೊನೆಯ ಮಾಸವಾಗಿರುವ ದುಲ್ ಹಜ್ ತಿಂಗಳಲ್ಲಿ 8 ರಿಂದ 12ನೇ ತಾರೀಕಿನ ತನಕ ನಡೆಯುತ್ತದೆ. ಜಗತ್ತಿನ ಸುಮಾರು 170 ದೇಶಗಳಿಂದ ಬರುವ, ನೂರಾರು ವಿಭಿನ್ನ ಭಾಷೆಗಳ, ಬಣ್ಣ, ಸಂಸ್ಕೃತಿ ಇತ್ಯಾದಿಗಳೆಲ್ಲಾ ಭಿನ್ನವಾಗಿರುವ ಲಕ್ಷಾಂತರ ಮಾನವರು ಒಂದೇ ರೀತಿಯ ಸರಳ ಸಮವಸ್ತ್ರ ಧರಿಸಿ, ಎಲ್ಲರನ್ನೂ ಸೃಷ್ಟಿಸಿದ ಅಲ್ಲಾಹನಿಗೆ ತಮ್ಮ ನಿಷ್ಠೆಯನ್ನು ಪ್ರಕಟಿಸುತ್ತಾರೆ. ಎಲ್ಲರೂ ಒಕ್ಕೊರಲಿನಿಂದ ’ತಲಬಿಯ್ಯ’ ಎಂಬ ಘೋಷ ವಾಕ್ಯವನ್ನು ಪದೇ ಪದೇ ಉಚ್ಚರಿಸುತ್ತಾ ದೇವರ ಏಕತ್ವ ಮತ್ತು ಮಾನವೀಯ ಏಕತ್ವದ ಸ್ಫೂರ್ತಿಯನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.

ಝಮ್ ಝಮ್ ನೀರು

 ‘‘ಮರಳಿ ಬರುವಾಗ ನಮಗಾಗಿ ಸ್ವಲ್ಪಝಮ್ ಝಮ್ ನೀರು ತನ್ನಿ’’ ಇದು ಸಾಮಾನ್ಯವಾಗಿ, ಹಜ್ ಅಥವಾ ಉಮ್ರಾಗೆ ಹೋಗುವ ಪ್ರತಿಯೊಬ್ಬರ ಬಳಿ ಅವರ ಬಂಧು ಮಿತ್ರರು ಮಾಡುವ ಮನವಿ. ಝಮ್ ಝಮ್ ನೀರಿನ ಇತಿಹಾಸ ಮತ್ತು ವರ್ತಮಾನ ಎರಡೂ ವಿಸ್ಮಯಕಾರಿಯಾಗಿದೆ. ನಾಲ್ಕು ಸಾವಿರ ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಮರು ತಮ್ಮ ಪತ್ನಿ ಹಾಜಿರಾ ಮತ್ತು ಆಗ ಎಳೆಗೂಸಾಗಿದ್ದ ಅವರ ಪುತ್ರ ಇಸ್ಮಾಈಲ್‌ರನ್ನು ನಿರ್ಜನ ಹಾಗೂ ನಿರ್ಜಲವಾಗಿದ್ದ ಮಕ್ಕಾದ ಕಣಿವೆಯಲ್ಲಿ ಬಿಟ್ಟು ಹೋಗಿದ್ದರು. ಅಲ್ಲಿ ಅವರಿಬ್ಬರೂ ನೀರಿಗಾಗಿ ಪರದಾಡುತ್ತಿದ್ದಾಗ ಚಿಲುಮೆಯಾಗಿ ಚಿಮ್ಮಿದ ನೀರು ‘ಝಮ್ ಝಮ್’. ಝಮ್ ಝಮ್ ಎಂದರೆ ನಿಲ್ಲು ನಿಲ್ಲು ಎಂದರ್ಥ. ಮರುಭೂಮಿಯಲ್ಲಿ ಹಠಾತ್ತನೆ ಹೊಮ್ಮಿದ ಚಿಲುಮೆಯಿಂದ ರಭಸವಾಗಿ ನೀರು ಚಿಮ್ಮಲಾರಂಭಿಸಿದಾಗ, ಅದೆಲ್ಲಿ ಪ್ರವಾಹದ ರೂಪ ತಾಳುವುದೋ ಎಂಬ ಆತಂಕದಿಂದ ಹಾಜಿರಾ ಹೇಳಿದ ‘ನಿಲ್ಲು ನಿಲ್ಲು’ ಎಂಬ ಆ ಮಾತೇ ಆ ನೀರಿನ ಹೆಸರಾಗಿ ಬಿಟ್ಟಿತು. ಝಮ್ ಝಮ್ ಬಾವಿಯು ಕಾಬಾದಿಂದ ಸುಮಾರು 20 ಮೀಟರ್ ದೂರದಲ್ಲಿದೆ. ಇಂದು ಅದು ಸುಮಾರು ನೂರು ಅಡಿ ಆಳ ಮತ್ತು ಎರಡೂವರೆ ಮೀಟರ್ ಅಗಲದ ಬಾವಿಯ ರೂಪದಲ್ಲಿದೆ. ಪ್ರತಿವರ್ಷ ಮಕ್ಕಾ ನಗರಕ್ಕೆ ಭೇಟಿ ನೀಡುವ ಸುಮಾರು ಎರಡು ಕೋಟಿ ಮಂದಿ ಈ ನೀರನ್ನು ಬಳಸುವುದು ಮಾತ್ರವಲ್ಲ ಹೆಚ್ಚಿನವರು ಹಲವು ಲೀಟರ್ ನೀರನ್ನು ತಮ್ಮ ಜೊತೆ ಕೊಂಡೊಯ್ಯುತ್ತಾರೆ. ಈ ಬಾವಿಯಿಂದ ಪ್ರತಿನಿಮಿಷಕ್ಕೆ ಸುಮಾರು 1,200 ಲೀಟರ್ ನೀರನ್ನು ಹೊರತೆಗೆಯಲಾಗುತ್ತದೆ.

ಮದೀನಾ

ಪ್ರವಾದಿ ಮುಹಮ್ಮದ್ (ಸ), ತಮ್ಮ ಹುಟ್ಟೂರಾದ ಮಕ್ಕಾದಲ್ಲಿ ಸತ್ಯ ಪ್ರಚಾರ ಆರಂಭಿಸಿದರು. ಅಲ್ಲಿ ಅವರ ಸಂದೇಶದ ವಿರುದ್ಧ ಭಾರೀ ಪ್ರತಿರೋಧ ಪ್ರಕಟವಾಯಿತು. ಸತತ 13 ವರ್ಷ ಪ್ರವಾದಿವರ್ಯರು ಅಲ್ಲಿಯ ಜನರಿಗೆ ಸತ್ಯವನ್ನು ಮನವರಿಕೆ ಮಾಡಿಸಲು ಶ್ರಮಿಸಿದರು. ಆದರೆ ಹೆಚ್ಚಿನವರು ಅವರನ್ನು ವಿರೋಧಿಸಿದರು. ಕ್ರಮೇಣ ವಿರೋಧವು ಹಿಂಸೆಯ ರೂಪ ತಾಳಿತು. ಪ್ರವಾದಿವರ್ಯರ ಹತ್ಯೆಗೂ ಸಂಚುಗಳು ನಡೆದವು. ಆಗ ಅನಿವಾರ್ಯವಾಗಿ ಅವರು ಮದೀನಾ ನಗರಕ್ಕೆ ವಲಸೆ ಹೋಗಬೇಕಾಯಿತು. ಅವರು ತಮ್ಮ ಬದುಕಿನ ಕೊನೆಯ 10 ವರ್ಷಗಳನ್ನು ಅಲ್ಲೇ ಕಳೆದರು. ಮದೀನಾ ನಗರವು ಮಕ್ಕಾದಿಂದ ಸುಮಾರು 500 ಕಿ.ಮೀ. ದೂರವಿದೆ. ನಿಯಮಾನುಸಾರ, ಮದೀನಾ ನಗರಕ್ಕೆ ಭೇಟಿ ನೀಡಬೇಕೆಂಬುದು, ಹಜ್ ಅಥವಾ ಉಮ್ರಾದ ಭಾಗವೇನಲ್ಲ. ಆದರೂ ಹೆಚ್ಚಿನೆಲ್ಲಾ ಹಜ್ ಮತ್ತು ಉಮ್ರಾ ಯಾತ್ರಿಕರು ಹಜ್ ಅಥವಾ ಉಮ್ರಾಗೆ ಮುನ್ನ ಅಥವಾ ಅದರ ಬಳಿಕ ಬಹಳ ಉತ್ಸಾಹದಿಂದ ಮದೀನಾ ನಗರಕ್ಕೆ ಭೇಟಿ ನೀಡುತ್ತಾರೆ. ಏಕೆಂದರೆ ಅದು ಪ್ರವಾದಿವರ್ಯರಿಗೆ ಆಶ್ರಯ ನೀಡಿದ ನಗರವಾಗಿತ್ತು. ಪ್ರವಾದಿವರ್ಯರಿಗೆ ಸಂಬಂಧಿಸಿದ ಇತಿಹಾಸದ ಅತ್ಯಂತ ಪ್ರಮುಖ ಪರ್ವಕ್ಕೆ ಮದೀನಾ ವೇದಿಕೆಯಾಗಿತ್ತು. ಆ ನೆಲದ ಕಣಕಣವೂ ಪ್ರವಾದಿಯ ಚರಿತ್ರೆಯನ್ನು ನೆನಪಿಸುತ್ತದೆ. ಆದ್ದರಿಂದಲೇ ಪ್ರವಾದಿಯ ಅಭಿಮಾನಿಗಳಿಗೆಲ್ಲಾ ಆ ನಗರದ ಜೊತೆ ಬಹಳ ಭಾವನಾತ್ಮಕ ಸಂಬಂಧವಿದೆ. ಮೂಲತಃ ಆ ನಗರದ ಹೆಸರು ಯಸ್ರಿಬ್ ಎಂದಿತ್ತು. ಆ ನಗರದ ಜೊತೆ ಪ್ರವಾದಿ (ಸ) ಬೆಳೆಸಿಕೊಂಡ ವಿಶೇಷ ನಂಟಿನ ಕಾರಣ ಅದಕ್ಕೆ ‘ಮದೀನತುನ್ನಬಿ’ (ಪ್ರವಾದಿಯ ನಗರ) ಎಂಬ ಹೆಸರು ಬಂತು. ಜಗತ್ತಿನ ಅತಿದೊಡ್ಡ ಮಸೀದಿಗಳಲ್ಲೊಂದಾದ, ಏಕ ಕಾಲದಲ್ಲಿ ಸುಮಾರು 20 ಲಕ್ಷ ಮಂದಿ ಆರಾಧನೆ ಸಲ್ಲಿಸಬಹುದಾದ ’ಮಸ್ಜಿದುನ್ನಬವಿ’ (ಪ್ರವಾದಿಯ ಮಸೀದಿ) ಮದೀನದಲ್ಲಿದೆ. ಪ್ರವಾದಿವರ್ಯರ ಸಮಾಧಿಯೂ ಅದೇ ಮಸೀದಿಯಲ್ಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)