varthabharthi


ವಿಶೇಷ-ವರದಿಗಳು

ಇಂದು ಹಾಜಿ ಅಬ್ದುಲ್ಲಾ ಸಾಹೇಬರ ನಿಧನ ದಿನ

ಶಾಂತಿ ತತ್ವ - ಐಕ್ಯ ತತ್ವದ ಹರಿಕಾರ ಹಾಜಿ ಅಬ್ದುಲ್ಲಾ ಸಾಹೇಬರು

ವಾರ್ತಾ ಭಾರತಿ : 12 Aug, 2019
ಕು.ಶಿ. ಹರಿದಾಸ ಭಟ್

ಮಹಾತ್ಮಾಗಾಂಧಿಯವರು ಸ್ವಾತಂತ್ರ ಹೋರಾಟ ನಡೆಸಿದ ಸಂದಿನಲ್ಲೇ ತಮ್ಮ ವ್ಯಕ್ತಿತ್ವದಿಂದ, ತ್ಯಾಗ ಜೀವನದಿಂದ ನಾಡಿನ ಆತ್ಮಾನುಸಂಧಾನದ ಆದರ್ಶವನ್ನು ಸ್ಥಾಪಿಸಿದ ಅನೇಕ ಹಿರಿಯ ಜೀವಗಳು ರಾಜಕೀಯದಲ್ಲೂ ಇತರೇ ಸಾಮಾಜಿಕ ರಂಗದಲ್ಲೂ ಆಗಿ ಹೋದರು. ಅಂಥವರಲ್ಲಿ ಇಂದು ರಚನಾತ್ಮಕ, ಸಾಮಾಜಿಕ ಕರ್ತವ್ಯಗಳೆಂದು ನಾವು ಪಟ್ಟಿ ಮಾಡುವ ಹಲವಾರು ಕೆಲಸಗಳನ್ನು ವೈಯಕ್ತಿಕ ನೆಲೆಯಲ್ಲಿ ಮಾಡಿ ಜನರ ನಾಲಗೆಯಲ್ಲಿ ತಮ್ಮ ಚಿರಂತನ ಸ್ಮಾರಕವನ್ನೇ ಕಟ್ಟಿ ಅಳಿದು ಹೋದ ಹಾಜಿ ಅಬ್ದುಲ್ಲಾ ಸಾಹೇಬರ ನೆನಪು ಉಡುಪಿಯ ಮಟ್ಟಿಗೆ ವುರೆಯಬಾರದ ಒಂದು ನೆನಪೇ ಆಗಿದೆ.

ತನ್ನ ಜೀವಮಾನ ಕಾಲದಲ್ಲೇ ದಂತಕಥೆಯಾಗಿ ಔದಾರ್ಯಕ್ಕೂ ದಾನಶೂರತೆಗೂ ಜೀವ ಕಾರುಣ್ಯಕ್ಕೂ ಹೆಸರು ಮಾಡಿ ಅಳಿದ ಹಾಜಿ ಅಬ್ದುಲ್ಲಾ ಸಾಹೇಬರು ತೀರಿಕೊಂಡು ಹಲವು ದಶಕಗಳು ಕಳೆದುಹೋಗಿವೆ. 1935ರ ಆಗಸ್ಟ್ 12ರಂದು ಉಡುಪಿಯಲ್ಲಿ ಇನ್ನೊಂದು ಪರ್ಯಾಯ ಮೆರವಣಿಗೆಯೇ ಹೊರಟಿತ್ತು. ಒಬ್ಬ ಮುಸ್ಲಿಮನ ಶವ ಯಾತ್ರೆಗೆ ಊರಿಗೆ ಊರೇ ಕಣ್ಣೀರು ಹಾಕಿದ ನಿದರ್ಶನ ದೇಶದಲ್ಲೇ ವಿರಳ. ನಾ ಮುಂದೆ ತಾ ಮುಂದೆ ಎಂದು ಹಿಂದೂಗಳೂ ಹೆಗಲುಕೊಟ್ಟು ಖಬರಸ್ಥಾನದವರೆಗೆ ಅವರನ್ನು ದುಃಖದಿಂದ ಬಿಟ್ಟು ಬಂದರು. ಎಲ್ಲರ ಹೃದಯ ಉಮ್ಮಳಿಸಿದ್ದ ಈ ಮನುಷ್ಯನು ತಮ್ಮ ಮೇಲೆ ಏಕ ರೀತಿಯಾಗಿ ಎರೆದ ಪ್ರೀತಿ, ವಾತ್ಸಲ್ಯ, ಕರುಣೆಗಳಿಗಾಗಿ - ಅಂಥ ಶ್ರೀಮಂತ, ಹೃದಯ ಶ್ರೀಮಂತನು ಕೂಡ ಉಡುಪಿಯ ಇತಿಹಾಸದಲ್ಲಿ ಹಿಂದೆ ಇರಲಿಲ್ಲ. ಮುಂದೆ ಬರಲಿಲ್ಲ. ಎಂತಲೇ ಉಡುಪಿ ಎರಡು ದಿನ ಹರತಾಳ ಆಚರಿಸಿ ಈ ಮನುಷ್ಯನಿಗೆ ತನ್ನ ಶ್ರದ್ಧಾಂಜಲಿ ಅರ್ಪಿಸಿತು.

53 ವರ್ಷ ಬಾಳಿದ ಹಾಜಿ ಅಬ್ದುಲ್ಲಾ ಸಾಹೇಬರು ಎರಡು ಮೂರು ತಲೆಮಾರಿನಿಂದಲೂ ಅಗರ್ಭ ಶ್ರೀಮಂತರೆನಿಸಿದ ವರ್ತಕ ಮನೆತನಕ್ಕೆ ಸೇರಿದವರು. ಹಿರಿಯರು ಮಾಡುತ್ತಿದ್ದ ಗಂಧದೆಣ್ಣೆ, ಅಕ್ಕಿ, ಒಣಮೀನು ಇತ್ಯಾದಿ ವ್ಯಾಪಾರವನ್ನು ಅವರೂ ಮುಂದುವರಿಸಿದರು. ಒಂದು ಸಾವಿರಕ್ಕೆ ಲಕ್ಷದ ಬೆಲೆ ಇರುತ್ತಿದ್ದ ಈ ಶತಮಾನದ ಮೂರು ನಾಲ್ಕು ದಶಕಗಳಲ್ಲಿ ವ್ಯವಹಾರ ನಡೆಸಿದ ಹಾಜಿ ಅಬ್ದುಲ್ಲಾರ ಶ್ರೀಮಂತಿಕೆ ಇಡೀ ಜಿಲ್ಲೆಯಲ್ಲೇ ಮನೆ ಮಾತು. ಈ ಶ್ರೀಮಂತಿಕೆಯನ್ನು ಅವರು ತನ್ನ ಪರಿಸರದ ಬಡಜನರೊಂದಿಗೆ ಹಂಚಿಕೊಂಡ ಬಗೆ ಅವರನ್ನು ಉಡುಪಿಯ ಒಬ್ಬ ವಿಲಕ್ಷಣ ಪುರುಷನನ್ನಾಗಿ ಮಾಡಿತು. ದಾನಶೂರ ಕರ್ಣನೆಂಬ ಬಿರುದು ಸಾಮಾನ್ಯ ಜನರಿಂದ ಅವರಿಗೆ ಸಂದಿತು.

ಅವರು ಓದಿದ್ದು ಥರ್ಡ್ ಫಾರಂವರೆಗಿನ ವಿದ್ಯೆ ಮಾತ್ರ. ಆದರೆ ಓದಿಕೊಂಡದ್ದು ಬೇಕಷ್ಟು. ಮನೆಯಲ್ಲಿ ಇಂಗ್ಲಿಷ್ ಹಾಗೂ ಉರ್ದು ಪುಸ್ತಕಗಳ ಗ್ರಂಥ ಭಂಡಾರವೇ ಇರುತ್ತಿತ್ತು. ಉಡುಪಿಯ ಅನೇಕ ಸರ್ವಪ್ರಥಮಗಳಿಗೆ ಹಾಜಿ ಅಬ್ದುಲ್ಲಾರೇ ಕಾರಣ. ಮೊದಲಾಗಿ ಉಡುಪಿಯ ರಸ್ತೆಗಳಲ್ಲಿ ಓಡಿದ ಕಾರು ಅವರದು. ‘ಸೋಲ್ ಏಜೆನ್ಸಿ’ಗಳ ಯುಗ ತೊಡಗಿದಾಗ ವಿಮ್ಕಿ ಕಂಪೆನಿಗೆ ಇಡೀ ಸಂಯುಕ್ತ ಮದರಾಸ್ ರಾಜ್ಯದಲ್ಲಿ ಸೋಲೇಜಂಟರಾಗಿ ಕರ್ತವ್ಯ ಮಾಡಿದ್ದು ಉಡುಪಿಯ ಅಬ್ದುಲ್ಲಾ ಸಾಹೇಬರು. ಜಿಲ್ಲೆಯ ಅತಿದೊಡ್ಡ ಕಾಲೇಜು ಬಹುಮಾನ ಇದ್ದದ್ದು-ಅಲ್ಲೂ ಮೊತ್ತದಲ್ಲಿ, ಗಾತ್ರದಲ್ಲಿ ಸರ್ವಪ್ರಥಮವೇ ಆಗಿ ಬಹುಕಾಲ ಉಳಿದದ್ದು - ಮಂಗಳೂರಿನ ಸರಕಾರಿ ಕಾಲೇಜಿನ ಹಾಜಿ ಅಬ್ದುಲ್ಲಾ ಬಹುಮಾನ. ಪುಸ್ತಕ ರೂಪದಲ್ಲಿರುತ್ತಿದ್ದ ಈ ಬಹುಮಾನವನ್ನು ಎರಡು ಕೈಗಳಿಂದಲೂ ಬಾಚುವಂತಿಲ್ಲ; ಅಷ್ಟೊಂದು ಪುಸ್ತಕಗಳು! ಜಿ.ಕೆ. ಚೆಟ್ಟೂರ್ ಅವರು ಆ ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ ಅಬ್ದುಲ್ಲಾ ಸಾಹೇಬರ ಮೊಮ್ಮಗನನ್ನೇ ಬಹುಮಾನ ವಿತರಣೆ ಮಾಡಲು ಕರೆದರೆಂಬ ಒಂದು ಐತಿಹ್ಯವೇ ಇದೆ. ಅಂದರೆ ಚೆಟ್ಟೂರ್ ಅವರು ಈ ದಾನಶೂರನನ್ನು ಮರೆಯಲಿಲ್ಲ. ದೂರದ ಮಂಗಳೂರಿನಲ್ಲಿ ಪರರಾಷ್ಟ್ರದಿಂದ ಬಂದ ಪ್ರಿನ್ಸಿಪಾಲ್ ಚೆಟ್ಟೂರ್ ಕೂಡ ಮರೆಯದ ಒಬ್ಬ ದಾನಶೂರನನ್ನು ಬಹುಮಾನಕ್ಕಿಂತ ಸಾಸಿರ್ಮಡಿಯಾಗಿ ಪಡೆದ ಉಡುಪಿ ಖಾಸಗಿ ನೆಲೆಯಲ್ಲಿ ನೆನಪಿಟ್ಟುಕೊಂಡರೂ ಸಾರ್ವಜನಿಕ ಜೀವನದಲ್ಲಿ ಮರೆತೇ ಬಿಟ್ಟದ್ದೊಂದು ಅಚ್ಚರಿಯೇ ಸರಿ.

ಹಾಗೆ ನೋಡಿದರೆ ಹಾಜಿ ಅಬ್ದುಲ್ಲಾ ಸಾಹೇಬರಿಗೆ ಯಾರೂ ಸ್ಮಾರಕ ರಚಿಸುವ ಅಗತ್ಯವೇ ಇಲ್ಲ. ಉಡುಪಿಯ ಹಾಗೆಂದು ಹೆಸರಿಸುವ ತಾಲೂಕಿನ ಜನರ ಹೃದಯ ಸಂಪುಟದಲ್ಲಿ ಅವರು ಇನ್ನೂ ಭದ್ರ ಸ್ಥಾನ ಗಳಿಸಿಯೇ ಇದ್ದಾರೆ. ಉಡುಪಿಯ ಒಂದು ಮುಖ್ಯ ಬೀದಿ. ಇಂದಿಗೂ ಇರುವಂತಹ ಒಂದೇ ಒಂದು ಮುಖ್ಯ ಬೀದಿಯಲ್ಲಿ ‘ಹಾಜಿ ಬುಡಾನ್ ಲಾಯಿಂಗ್ ಇನ್ - ಹಾಸ್ಪಿಟಲ್’ನ್ನು (ಶುಶ್ರೂಷಾಲಯ) ತನ್ನ ಆಯುಷ್ಕಾಲದಲ್ಲೇ ಸ್ಥಾಪಿಸಿದ್ದಾರೆ. (ಇತ್ತೀಚೆಗೆ ಈ ಆಸ್ಪತ್ರೆ ಸ್ಥಳಾಂತರಗೊಂಡಿದೆ) ಶ್ರೀ ಕೃಷ್ಣ ಮಠದಲ್ಲೆಂತೋ ಹಾಗೆ ಸಾರ್ವಜನಿಕ ಜೀವನದಲ್ಲೂ ಕೇವಲ ನಿತ್ಯ ನೈಮಿತ್ತಿಕಗಳಿಗೆ ಮಾತ್ರವೇ ಒಲಿಯುತ್ತಿದ್ದ ಉಡುಪಿಗೆ ಆಧುನಿಕತೆಯ ಸೌಕರ್ಯಗಳನ್ನು - ಅದರಲ್ಲೂ ಆಸ್ಪತ್ರೆಯಂಥ ಜೀವರಕ್ಷಕ ಹಂದರವನ್ನು ಒದಗಿಸಿಕೊಟ್ಟವರು ಅಬ್ದುಲ್ಲಾ ಸಾಹೇಬರು. ಇಂದು ಬಸ್‌ಸ್ಟಾಂಡಿಂದ ಹಿಡಿದು ಅವರ ಸಮಾಧಿಸ್ಥಾನದವರೆಗೂ ದಾರಿಯ ಇಕ್ಕೆಲಗಳಲ್ಲಿರುವ ಭೂಮಿಯಲ್ಲಿ ಹೆಚ್ಚಿನ ಭಾಗ ಹಾಜಿ ಅಬ್ದುಲ್ಲಾರ ಒಡೆತನದಲ್ಲಿತ್ತು. ಅದರೊಳಗಿನ ಒಂದು ಉತ್ತಮ ಸ್ಥಳವನ್ನು ಅವರು ಆಸ್ಪತ್ರೆಯ ಸಲುವಾಗಿ ಆಯ್ದು ದಾನ ಮಾಡಿದ್ದರು. ಆಸ್ಪತ್ರೆ ಅಂದರೆ ಮನುಷ್ಯ ಜೀವನದ ಕೊನೆಯ ನಿಲುಮನೆಯೆಂದು ಜನರು ಅಂಜುತ್ತಿದ್ದ 80ರ ದಶಕದಲ್ಲಿಯೇ ಹಾಜಿ ಅಬ್ದುಲ್ಲಾರು ಉಡುಪಿಯಂತಹ ಪುಟ್ಟ ಪೇಟೆಗೆ ಜನಸಂಖ್ಯೆ 15-20 ಸಾವಿರ ಇರಬಹುದೇನೋ ಆಗ ಒಂದು ಶುಶ್ರೂಷಾಲಯವನ್ನು ನಿರ್ಮಿಸಿಕೊಟ್ಟರು. ಉಡುಪಿಯ ಮಸೀದಿ ಅಂಜುಮಾನ್ ಕಟ್ಟಡ ಅವರ ಹಿರಿಯರು ಕಟ್ಟಿಸಿದ್ದು. ಇದು ಮತೀಯ ನಿಷ್ಠೆಗೆ ಸಮನಾದ ದಾನ. ಆದರೆ ಅಬ್ದಲ್ಲಾ ಸಾಹೇಬರ ಚೇತನದಲ್ಲಿ ಅಸಾಮಾನ್ಯವೆನಿಸಿದ ಒಂದು ತತ್ವ ಗೂಡುಕಟ್ಟಿತ್ತು. ತನ್ನ ಸಹಮತೀಯರಂತೆ ಊರಲ್ಲಿ ಬಡತನದಲ್ಲಿ ಬಾಳುತ್ತಾ ಸಕಲರೂ ತನ್ನವರೇ ಎಂಬ ಸೋದರ ಭಾವ, ಹಿಂದೂ ಮುಸ್ಲಿಮ್ ಭಿನ್ನತೆಯ ಬದಲು ಏಕರಾಷ್ಟ್ರದಲ್ಲಿ ಪ್ರೀತಿ ವಿಶ್ವಾಸಗಳಿಂದ ಐಕ್ಯಮತದಿಂದ ಈ ಎರಡು ಧಾರ್ಮಿಕರೂ ಬಾಳಬೇಕಾದ ಅಗತ್ಯ ಇದನ್ನು ಮಹಾತ್ಮಾ ಗಾಂಧಿಯವರು ಒಂದು ರಾಜಕೀಯ ತತ್ವವಾಗಿ, ರಾಷ್ಟ್ರೋದ್ಧಾರದ ಮಾರ್ಗವಾಗಿ ಬೆಂಬಲಿಸುವುದಕ್ಕೆ ಪೂರ್ವದಲ್ಲೇ, ಅಬ್ದುಲ್ಲಾ ಸಾಹೇಬರು ಮನಗಂಡಿದ್ದರೆನ್ನುವುದು ಚರಿತ್ರೆಗೆ ಸಂದ ವಿಷಯವಾಗಬೇಕು.

ಹಾಜಿ ಅಬ್ದುಲ್ಲಾ ಸಾಹೇಬರು ಶ್ರೀಮಂತ ಜೀವನ ನಡೆಸಿದರು. ಶ್ರೀಮಂತಿಕೆಯಲ್ಲೇ ಬಾಳಿದರು. ಅವರ ಜೀವನ ಶೈಲಿಯನ್ನು ಜನ ಕೊಂಡಾಡುತ್ತಿದ್ದರು. ಮುಂಜಾನೆ ಎದ್ದವರು ಗಾಳಿ ಸವಾರಿಗೆ ಹೋಗುವ ದಾರಿ ಬಡಗುಪೇಟೆ, ರಥಬೀದಿ, ಕೊಳದ ಪೇಟೆಗಾಗಿ ಮರಳಿ ಮುಖ್ಯ ದಾರಿಯಿಂದ ಮರಳಿಕೆ. ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನಕ್ಕಾಗಿ ತಡೆದು ನಿಂತು ವಂದಿಸುವುದನ್ನು ನೋಡಿದವರಿದ್ದಾರೆ. ದೇವನೊಬ್ಬನೇ ಎಂಬ ಧರ್ಮಕ್ಕೆ ಸೇರಿದವರಾದರೂ ದೈವಿಕ ತತ್ವಕ್ಕೆ ಸತ್ವಕ್ಕೆ ನಾನಾ ರೂಪಗಳಿರಬಹುದು ಎಂಬುದನ್ನು ಸಾಂಕೇತಿಕವಾಗಿಯೂ ಬದುಕಿನ ವಾಸ್ತವತೆಯಾಗಿಯೂ ಹಾಜಿ ಅಬ್ದುಲ್ಲಾ ಅವರು ಸ್ವೀಕರಿಸಿದ್ದರು. ತನ್ನ ಮತ ಧರ್ಮದ ಕಟ್ಟುನಿಟ್ಟು, ಶಿಸ್ತುಗಳನ್ನು ಪಾಲಿಸುವಾಗಲೇ ಬಹು ಸಂಖ್ಯಾಕರ ಹಿಂದೂ ಧರ್ಮದ ಬಗ್ಗೆಯೂ ಅವರಿಗೆ ಪ್ರೇಮ. ಅದನ್ನು ಅವರು ವಿಸ್ತರಿಸಿದ ಶೈಲಿಯೂ ಅವರದೇ. ‘ದಯವೇ ಧರ್ಮದ ಮೂಲವಯ್ಯ’ ಎಂಬ ಮಾತನ್ನು ಅಕ್ಷರಶಃ ಪಾಲಿಸಿ ದಯದಾಕ್ಷಿಣ್ಯಗಳಿಗೆ, ಅತಿಶಯವಾದ ದಾನ ಪ್ರೇರಣೆಗೆ ತನ್ನನ್ನು ತಾನೇ ಸಮರ್ಪಿಸಿಕೊಂಡ ಒಂದು ಅಪೂರ್ವ ಜೀವ ಹಾಜಿ ಅಬ್ದುಲ್ಲರು. ಇದನ್ನು ಉಡುಪಿಯ ಅಷ್ಟ ಮಠಗಳವರೂ ಮನ್ನಿಸಿ ಹಾಜಿ ಅಬ್ದುಲ್ಲಾರಿಗೆ ವಿಶೇಷ ಗೌರವ ಕೊಡುತ್ತಿದ್ದರಂತೆ. ಪರ್ಯಾಯಕ್ಕೆ ಆಮಂತ್ರಣ ನೀಡುವಾಗ ಅಷ್ಟ ಮಠಗಳಿಗೆ ಹೇಗೋ ಹಾಗೆಯೇ ಪರ್ಯಾಯ ಸ್ವಾಮಿಗಳು ಅಬ್ದುಲ್ಲಾ ಸಾಹೇಬರಿಗೂ ಆಮಂತ್ರಣ ಗೌರವ ಸಲ್ಲಿಸುತ್ತಿದ್ದರಂತೆ. ಪ್ರತಿದಿನವೂ 5 ಮುಡಿ ಅಕ್ಕಿಯನ್ನು (ಸುಮಾರು 200 ಕೆ.ಜಿ.) ಬಡಬಗ್ಗರಿಗೆ ದಾನ ಮಾಡುವ, ಆಪತ್ಕಾಲದಲ್ಲಿ ಯಾರಿಗೂ ನೆರವು ನೀಡುವ, ಇಡೀ ಊರಿನ ಬಗ್ಗೆ ತನ್ನ ಮನಮಿಡಿಯುವ, ಈ ಚೇತನ ಸಮಾಜಕ್ಕೆ ಸೇರಿದ್ದು. ‘ಮನುಜಮತ’ಕ್ಕೆ ಸೇರಿದ ಒಂದು ಅಮೂಲ್ಯ ಆಸ್ತಿ ಇದು ಎಂಬ ಎಚ್ಚರ ತನ್ನಂತೆ ಪುಟಿಯುತ್ತಿತ್ತು. 1918ರ ಸಂದಿನಲ್ಲಿ ಅಕ್ಕಿಯ ಬೆಲೆ ವಿಪರೀತವಾಗಿ ಏರಿದಾಗ ಹಾಜಿ ಅಬ್ದುಲ್ಲಾ ಸಾಹೇಬರು ರಂಗೂನ್‌ನಿಂದ ಅಕ್ಕಿ ತರಿಸಿ ನ್ಯಾಯಬೆಲೆಗೆ ವಿತರಣೆ ಮಾಡಿದ್ದು ಈಗ ನಿಜಕ್ಕೂ ಇಂದಿನ ನ್ಯಾಯಬೆಲೆ ಅಂಗಡಿಗಳ ವಿದ್ಯಮಾನಗಳ ನಡುವೆ ಆಶ್ಚರ್ಯವುಂಟು ಮಾಡುತ್ತಿದೆ. ಅಪದ್ಬಾಂಧವನಂತೆ ಅಬ್ದುಲ್ಲಾ ಸಾಹೇಬರು ಪ್ರತಿವರ್ತಿಸಿದ ಉದಾಹರಣೆಗಳು ನೂರಾರು. ಬಹಿರಂಗ ದಾನಗಳೆಷ್ಟೋ ಅಪ್ರಚಾರಿತ ಗುಪ್ತದಾನಗಳು ಅದಕ್ಕೂ ಮಿಗಿಲು. ದಾನಬುದ್ಧಿ ಅಬ್ದುಲ್ಲಾ ಸಾಹೇಬರ ಪತ್ನಿಗೂ ವಿಸ್ತರಿಸಿದಕ್ಕೆ ನನ್ನ ಮಿತ್ರರಾದ ಪಾಡಿಗಾರು ಶೀನ ಶೆಟ್ಟರೊಂದು ಅನುಭವ ಹೇಳುವುದುಂಟು. ಅವರು ಹತ್ತು ವರ್ಷದ ಬಾಲಕನಾಗಿರುವಾಗ ಅವರ ತಾಯಿಯ ಜೊತೆ ಹೋಗಿ ಅಬ್ದುಲ್ಲಾ ಸಾಹೇಬರ ಗೋಶಾಲೆಯಿಂದ ಒಂದು ದನ ಕೊಂಡರಂತೆ. ದನದ ಬೆಲೆ 16 ರೂಪಾಯಿ. ಬೆಲೆ ತೆತ್ತ ಮೇಲೆ ಶ್ರೀಮತಿ ಅಬ್ದುಲ್ಲಾ ಬಾಲಕನನ್ನು ಕಂಡು ‘‘ಅಮ್ಮ, ಇವನಿಗೇನಾದರೂ ತೆಗೆಸಿಕೊಡಿ’’ ಎಂದು ನಾಲ್ಕು ರೂಪಾಯಿ ಹಿಂದೆ ಕೊಟ್ಟರಂತೆ! ಇದು ವ್ಯಾಪಾರವೇ? ಅಬ್ದುಲ್ಲಾ ಸಾಹೇಬರ ವ್ಯಾಪಾರ ಎಂದರೆ ಅದರಲ್ಲಿ ಧರ್ಮ ಪ್ರೇರಣೆಯೇ ಹೆಚ್ಚು. ತಾನು ಎಸೆಸೆಲ್ಸಿ ಪಾಸ್ ಮಾಡಿದ ವೇಳೆಗೆ ಅಬ್ದುಲ್ಲಾ ಸಾಹೇಬರು ದಾರಿಯಲ್ಲಿ ನಿಲ್ಲಿಸಿ ‘‘ಏನು ಮಾಡುತ್ತಿದ್ದೀ? ಮನೆಗೆ ಬಾ. ಅಲ್ಲಿ ಟೈಪ್‌ರೈಟರ್ ಇದೆ. ಸ್ವಲ್ಪ ಹೊತ್ತು ಕಲಿ’’ ಎಂದು ಯಾರೆಂದು ಅರಿಯದ ತನಗೆ ಆಹ್ವಾನವಿತ್ತುದ್ದನ್ನೂ ಶ್ರೀ ಶೆಟ್ಟರು ಸ್ಮರಿಸಿಕೊಳ್ಳುತ್ತಾರೆ. ಸ್ವತಃ ಮಕ್ಕಳಿಲ್ಲದ ಅಬ್ದುಲ್ಲಾ ಸಾಹೇಬರಿಗೆ ಮಕ್ಕಳೆಂದರೆ ಬಲು ಪ್ರೇಮ. ಪಶು ಪಕ್ಷಿಗಳೆಂದರೆ ಬಲು ಪ್ರೇಮ. ಒಳ್ಳೊಳ್ಳೆ ಜಾತಿಯ ದನಗಳನ್ನು ಉಡುಪಿ ಕಂಡದ್ದು ಅಬ್ದುಲ್ಲಾ ಸಾಹೇಬರ ಗೋಶಾಲೆಯಲ್ಲಿ. ನವಿಲು, ತುರ್ಕಿ ಗಿಳಿ ಇತ್ಯಾದಿ ಹಕ್ಕಿಗಳೂ ಅಬ್ದುಲ್ಲಾ ಸಾಹೇಬರ ಬಂಗಲೆಯ ಗೌರವಾನ್ವಿತ ನಿವಾಸಿಗಳು. ಬಂದ ಮಕ್ಕಳು ಇವನ್ನು ನೋಡಿ ನಲಿಯಲಿ ಎಂಬ ಉದ್ದೇಶ. ‘‘ನಂಬಿಕೆಟ್ಟವರಿಲ್ಲವೋ’’ ಎಂದು ಭಗವಂತನ ಬಗ್ಗೆ ಹೇಳಬಹುದೇ ವಿನಾ ಮನುಷ್ಯನ ಬಗ್ಗೆ ಹೇಳುವಂತಿಲ್ಲ ಎಂಬುದನ್ನು ಅಬ್ದುಲ್ಲಾ ಸಾಹೇಬರ ಜೀವನದ ದಿನಗಳು ಸಾರುತ್ತವೆ. ಅದರಲ್ಲೂ ವ್ಯವಹಾರದಲ್ಲಿರುವ ಮನುಷ್ಯ ಇಷ್ಟೊಂದು ನಿರ್ಬೋಧನಾಗಬಾರದು ಎಂತಲೂ ಅವರ ಜೀವನದ ಪಾಠ ಹೇಳುತ್ತದೆ. ನಿರ್ಬೋಧತೆಯಂಥ ಬಾಲಸ್ವಭಾವ ದೈವತ್ವಕ್ಕೆ ತೀರ ಸಮೀಪ ಎನ್ನುತ್ತಾರೆ. ಆದರೆ ಪ್ರಪಂಚ ಒಂದು ನಿಷ್ಠುರವಾದ ಸತ್ಯ; ಅಲ್ಲಿ ಪ್ರತಿಯೊಂದು ವ್ಯವಸಾಯಕ್ಕೂ ಅದರದರ ವ್ಯವಹಾರಿಕ ಧರ್ಮಕರ್ಮಗಳುಂಟು. ಶ್ರೀಮಂತಿಕೆಯನ್ನು ಬಹಳ ಲಘುವಾಗಿ ಧರಿಸಿಕೊಂಡ ಅಬ್ದುಲ್ಲಾ ಸಾಹೇಬರು ಎಲ್ಲರೂ ಒಳ್ಳೆಯವರೆಂಬ ತತ್ವದ ಮೇಲೆ ವ್ಯವಹಾರ ನಡೆಸುತ್ತಿದ್ದರು. ಹಾಗೆ ಎಷ್ಟೋ ವರ್ಷ ನಡೆದೂ ನಡೆಯಿತು. ಅವರ ಸುಮಕೋಮಲ ವ್ಯಕ್ತಿತ್ವ, ಪ್ರಿಯ ಭಾಷೆ ಮಾರ್ದವಗಳು ಜನಜನಿತವಷ್ಟೆ. ಒಮ್ಮೆ ಅವರ ದನಗಳನ್ನು ಹಟ್ಟಿಗೆ ಅಟ್ಟುವ ಆಳು ಯಾವುದೋ ಒಂದು ದನಕ್ಕೆ ಕೋಲಿಂದ ತಿವಿದನಂತೆ. ಇದನ್ನು ಮಹಡಿಯಯಿಂದ ನೋಡಿದ ಅಬ್ದುಲ್ಲಾ ಸಾಹೇಬರು ಆತನನ್ನು ಒಳಗೆ ಕರೆದು ಗದರಿಸಲಿಲ್ಲ. ನೋಡು ಅದು ಪಾಪದ ಪ್ರಾಣಿ. ಅದಕ್ಕೆ ಬಾಯಿ ಬರುತ್ತದೆಯೇ? ಹೊಡೆದರೆ ತಿಳಿಯುತ್ತದೆಯೇ? ಸ್ವಲ್ಪ ಸಹನೆ, ಕರುಣೆ ಇರಬೇಕು ಎಂದು ಮೃದು ಭಾಷೆಯಲ್ಲೇ ಹೇಳಿದರಂತೆ. ಆದ್ದರಿಂದ ಇಂತಹ ಕರುಣಾ ಹೃದಯ ವ್ಯಾಪಾರದ ಪಟ್ಟಿನಲ್ಲಿ ಅದಾವುದೋ ದುರ್ಮುಹೂರ್ತದಲ್ಲಿ ಕಷ್ಟನಷ್ಟಗಳಿಗೀಡಾದದ್ದು ಸ್ವಾಭಾವಿಕ. ನೂರಾರು ಮಂದಿಗೆ ಸಪಾತ್ರ ಅಪಾತ್ರ ಭೇದವಿಲ್ಲದೆ ದಾನ ನೀಡಿದ ಕೊಡುಗೈ ಬರಿದಾಗಿ ತಾನೇ ಹುಟ್ಟು ಹಾಕಿದ ಬ್ಯಾಂಕಿನ ಕಂತಿನ ದೇಣಿಗೆಗೆ ಅಡಿಗೈ ಆಗುವ ದುರ್ದಿನವೂ ಒದಗಿತು. ಸಹಿಸಿ ಸಹಿಸಿ ಜೀವ ಬೇಸತ್ತಾಗ ಬದುಕಿನಿಂದಲೇ ವಿಮುಖವಾಯಿತು. ತಾನು ಯಾವುದನ್ನು ಪುರುಷಾರ್ಥ ಸಾಧನೆಯೆಂದು ಮಾಡಿದೆನೋ ಆ ಮಾರ್ಗದಲ್ಲಿ ಯಃಕಶ್ವಿತ್ ವಾಣಿಜ್ಯ ವ್ಯಾಪಾರ ಪತ್ರಗಳೇ ಗೆಲ್ಲುವುದಾದರೆ ತಾನು ಸೋಲುವುದು ವಿಶೇಷವಲ್ಲ. ಆದರೆ ಈ ಸೋಲೇ ಬದುಕಿನ ನಿಜವಾದ ಗೆಲುವೆಂದು ಕೊನೆಗಳಿಗೆಯ ತನಕವೂ ಸಾಧಿಸಿ-ಬಹುಶಃ ಯಾವ ಪಶ್ಚಾತ್ತಾಪವೂ ಇಲ್ಲದೆ- ತನ್ನ ಕೈಯಿಂದಲೇ ಅಸು ನೀಗಿದ ಮನುಷ್ಯ ಹಾಜಿ ಅಬ್ದುಲ್ಲಾ. ಊರಿನ ಸಮಸ್ತರಿಗೂ ಒಳ್ಳಿತನ್ನೇ ಹಾರೈಸಿ ದಾನಶೂರತ್ವವನ್ನು ಮರೆದು ಶ್ರೀಮಂತ ಜೀವನ ನಡೆಸಿದ ಇಂತಹ ಉದಾರ ಚರಿತರು ಬಹಳ ಮಂದಿ ಇನ್ನು ಮುಂದೆ ಬರಲಾರರು. ಮಹಾತ್ಮಾಗಾಂಧಿಯವರು ಸ್ವಾತಂತ್ರ ಹೋರಾಟ ನಡೆಸಿದ ಸಂದಿನಲ್ಲೇ ತಮ್ಮ ವ್ಯಕ್ತಿತ್ವದಿಂದ, ತ್ಯಾಗ ಜೀವನದಿಂದ ನಾಡಿನ ಆತ್ಮಾನುಸಂಧಾನದ ಆದರ್ಶವನ್ನು ಸ್ಥಾಪಿಸಿದ ಅನೇಕ ಹಿರಿಯ ಜೀವಗಳು ರಾಜಕೀಯದಲ್ಲೂ ಇತರೇ ಸಾಮಾಜಿಕ ರಂಗದಲ್ಲೂ ಆಗಿ ಹೋದರು. ಅಂಥವರಲ್ಲಿ ಇಂದು ರಚನಾತ್ಮಕ, ಸಾಮಾಜಿಕ ಕರ್ತವ್ಯಗಳೆಂದು ನಾವು ಪಟ್ಟಿ ಮಾಡುವ ಹಲವಾರು ಕೆಲಸಗಳನ್ನು ವೈಯಕ್ತಿಕ ನೆಲೆಯಲ್ಲಿ ಮಾಡಿ ಜನರ ನಾಲಗೆಯಲ್ಲಿ ತಮ್ಮ ಚಿರಂತನ ಸ್ಮಾರಕವನ್ನೇ ಕಟ್ಟಿ ಅಳಿದು ಹೋದ ಹಾಜಿ ಅಬ್ದುಲ್ಲಾ ಸಾಹೇಬರ ನೆನಪು ಉಡುಪಿಯ ಮಟ್ಟಿಗೆ ಮರೆಯಬಾರದ ಒಂದು ನೆನಪೇ ಆಗಿದೆ. ಇದು ಕೇವಲ ಒಂದು ಶ್ರದ್ಧಾಂಜಲಿ ಅರ್ಪಣೆ ಮಾತ್ರ, ಅವರನ್ನು ಬಲ್ಲ ಮಂದಿ ಬದುಕಿರುವಾಗಲೇ ಅವರ ಜೀವನ ಚರಿತ್ರೆ ಒಂದು ರಚಿತವಾಗಬೇಕಾದ್ದು ಅಗತ್ಯ. ಅವರ ಜೀವನದ ಪುಟಗಳಲ್ಲಿ ಅಡಕಗೊಂಡಿರುವ ಧರ್ಮತತ್ವ ಶಾಂತಿ ತತ್ವ ಐಕ್ಯ ತತ್ವ ದಾನಬುದ್ಧಿ ಒಂದಿಷ್ಟಾದರೂ ಇಂದಿನ ಧುರೀಣರನ್ನು ಸ್ಪರ್ಶಿಸಬೇಕು. ‘He that loses his life shall find it ’ ತೇನ ತ್ಯಕ್ತೇನ ಭುಂಜೀಥಾ ಇವು ಬರಿಯ ಮಾತುಗಳಲ್ಲ ಎಂದು ಬಾಳಿದವರು ಉಡುಪಿಯ ಅಕ್ಬರ ಹಾಜಿ ಅಬ್ದುಲ್ಲಾ ಸಾಹೇಬರು.

(ಮುರಳೀಧರ ಉಪಾಧ್ಯ ಹಿರಿಯಡಕ ಮತ್ತು ಡುಂಡಿರಾಜ್ ಸಂಪಾದಿಸಿದ ‘ಹಾಜಿ ಅಬ್ದುಲ್ಲಾ ಸಾಹೇಬ್’ ಗ್ರಂಥದಿಂದ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)