varthabharthi

ವಿಶೇಷ-ವರದಿಗಳು

ಜಾಗತಿಕ ಖ್ಯಾತಿಯ ಯುವ ಕಾನೂನು ತಜ್ಞ ಶಮ್ನಾಡ್ ಬಶೀರ್ ದುರಂತ ಅಂತ್ಯ

ಸುದ್ದಿಯಾಗದ ಸುದ್ದಿ: ಆಧಾರ್ 'ಮಾಹಿತಿ ಸೋರಿಕೆ' ವಿರುದ್ಧದ ಕಾನೂನು ಹೋರಾಟಗಾರನ ನಿಗೂಢ ಸಾವು

ವಾರ್ತಾ ಭಾರತಿ : 12 Aug, 2019

ಶಮ್ನಾಡ್ ಬಶೀರ್

ದೇಶದ ಅತ್ಯಂತ ಪ್ರಖರ ಕಾನೂನು ತಜ್ಞರಲ್ಲೊಬ್ಬರಾದ ಶಮ್ನಾಡ್ ಬಶೀರ್ ಅವರು ಇತ್ತೀಚಿಗೆ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದು ಹೆಚ್ಚಿನ ಸುದ್ದಿಯಾಗಲೇ ಇಲ್ಲ. ಆಗಸ್ಟ್ 5 ರಂದು ಏಕಾಂತವಾಗಿ ಸುತ್ತಾಡಲು ಹೋಗುತ್ತೇನೆ ಎಂದು ಹೇಳಿ ಹೋದ ಶಮ್ನಾಡ್ ಬಶೀರ್ ಅವರು ಆಗಸ್ಟ್ 8 ರಂದು ಬಾಬಾಬುಡನ್ ಗಿರಿಯಲ್ಲಿ ತಮ್ಮ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದರು. 

ಇನ್ನೂ 43 ವರ್ಷ ದಾಟದ ಶಮ್ನಾಡ್ ಬಶೀರ್  Intellectual Property Law ( ಬೌದ್ಧಿಕ ಆಸ್ತಿ ಕಾನೂನು ) ಕ್ಷೇತ್ರದಲ್ಲಿ ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿ ಭಾರೀ ಹೆಸರು ಮಾಡಿದವರು. ಜೊತೆಗೆ ಹಲವಾರು ಮಹತ್ವದ ವಿಷಯಗಳಲ್ಲಿ ಜನಪರವಾಗಿ ಕಾನೂನು ಹೋರಾಟ ನಡೆಸಿ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದ ಸಾಮಾಜಿಕ, ಮಾನವ ಹಕ್ಕುಗಳ ಹೋರಾಟಗಾರರೂ ಆಗಿದ್ದರು. 

ಕೋಲ್ಕತ್ತಾದ National University of Juridical Sciences (NUJS) ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಬೌದ್ಧಿಕ ಆಸ್ತಿ ಕಾನೂನು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ  ಶಮ್ನಾಡ್ ಬಶೀರ್, ಅಮೇರಿಕಾದ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ ಲಾ ಸ್ಕೂಲ್ ನಲ್ಲಿ ಸಹ ಪ್ರಾಧ್ಯಾಪಕರಾಗಿ, ಪ್ರತಿಷ್ಠಿತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಪ್ರತಿಭಾವಂತ. ಇವರು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಹಾಗು ಆಕ್ಸ್ ಫರ್ಡ್ ವಿವಿಯ ಹಳೆ ವಿದ್ಯಾರ್ಥಿ. Oxford Commonwealth Law Journal (OUCLJ) ನ ಸಂಪಾದಕರಾಗಿಯೂ ಶಮ್ನಾಡ್ ಬಶೀರ್  ಸೇವೆ ಸಲ್ಲಿಸಿದ್ದಾರೆ. 

ವಿದ್ಯಾರ್ಥಿ ದೆಸೆಯಿಂದಲೇ ಬೌದ್ಧಿಕ ಆಸ್ತಿ ಕಾನೂನು ( ಪೇಟೆಂಟ್ ಹಾಗು ಕಾಪಿ ರೈಟ್ ಇತ್ಯಾದಿ ವಿಷಯಗಳು) ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಂಡ ಶಮ್ನಾಡ್ ಬಶೀರ್ ಆ ಕ್ಷೇತ್ರದಲ್ಲಿ ಅದೆಷ್ಟು ಆಳವಾಗಿ ಅಧ್ಯಯನ ಮಾಡಿದರೆಂದರೆ ಇಂದು ವಿಶ್ವದ ಅಗ್ರಗಣ್ಯ ಬೌದ್ಧಿಕ ಆಸ್ತಿ ಕಾನೂನು ತಜ್ಞರಲ್ಲಿ ಅವರೂ ಒಬ್ಬರು ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಕಾನೂನು ಕ್ಷೇತ್ರದಲ್ಲಿ ಅಗಾಧ ಅಧ್ಯಯನ ಹಾಗು ಸಂಶೋಧನೆ ನಡೆಸಿದ್ದ ಬಶೀರ್ ಅವರು ಅದನ್ನು ಸಾಮಾಜಿಕ ಹೋರಾಟಕ್ಕೂ ಅಸ್ತ್ರವಾಗಿ ಪರಿಣಾಮಕಾರಿಯಾಗಿ ಬಳಸಿದ್ದು ಅವರ ಹೆಗ್ಗಳಿಕೆ. ಕಾನೂನು ಕ್ಷೇತ್ರದಲ್ಲಿ ದುರ್ಬಲ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಮತ್ತು ಮಹತ್ವದ ವಿಷಯಗಳಲ್ಲಿ ಅವರಿಗೆ ಸರಿಯಾಗಿ ನ್ಯಾಯ ಸಿಗುವಂತೆ ಮಾಡಲು ನಿಸ್ವಾರ್ಥವಾಗಿ ದುಡಿದವರು ಶಮ್ನಾಡ್ ಬಶೀರ್. ಇಂಟರ್ನೆಟ್ ಸಮಾನತೆ, ಬೌದ್ಧಿಕ ಆಸ್ತಿ ವಿಷಯದಲ್ಲಿ ನ್ಯಾಯ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು, ಅಂಗವಿಕಲರು ಹಾಗು ಅಂಧರ ಹಕ್ಕುಗಳು ಇತ್ಯಾದಿ ವಿಷಯಗಳಲ್ಲಿ ಕಾನೂನು ಹೋರಾಟ ಮಾಡಿ ನ್ಯಾಯ ದೊರಕಿಸಲು ಶಮ್ನಾಡ್ ಬಶೀರ್ ನಿರಂತರ ಪ್ರಯತ್ನದಲ್ಲಿದ್ದರು. 

ಆಧಾರ್ ವಿರುದ್ಧ ಹೋರಾಟ 

ಆಧಾರ್ ಕಾರ್ಡ್ ಗಾಗಿ ಸಲ್ಲಿಸುವ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪ ಕುರಿತು ವಿವಿಧ ತಜ್ಞರ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಯಬೇಕು, ಸೋರಿಕೆಯಾಗಿದ್ದರೆ ಅದಕ್ಕೆ ಸರಕಾರ ಜವಾಬ್ದಾರಿ ಹೊರಬೇಕು ಹಾಗು ಅದಕ್ಕೆ ಜನರಿಗೆ ಪರಿಹಾರ ನೀಡಬೇಕು ಎಂದು ಬಶೀರ್ ದಿಲ್ಲಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅತ್ಯಂತ ವಿವರವಾಗಿ ಆಧಾರ್ ನಲ್ಲಿ ಏನಾಗುತ್ತಿದೆ ಎಂದು ವಿವರಿಸಿದ್ದ ಅವರ ಅರ್ಜಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಆಧಾರ್ ನಲ್ಲಿ ಅತ್ಯಂತ ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದು ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಆಧಾರ್ ಪ್ರಾಧಿಕಾರ ವಾದಿಸಿತ್ತು. ಬಶೀರ್ ಅವರ ಅರ್ಜಿ ವಿಚಾರಣೆ ತಾರ್ಕಿಕ ಅಂತ್ಯ ಕಂಡರೆ ಆಧಾರ್ ಬುಡಕ್ಕೆ ಬರುತ್ತಿತ್ತು ಎಂದು ಹಲವು ಕಾನೂನು ತಜ್ಞರು ಹಾಗು ಸಾಮಾಜಿಕ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೀಗ ಸ್ವತಃ ಬಷೀರ್ ಅವರೇ ದುರಂತ ಅಂತ್ಯ ಕಂಡಿದ್ದಾರೆ. 

ನೊವಾರ್ಟಿಸ್ ವಿರುದ್ಧ ಯಶಸ್ವಿ ಹೋರಾಟ 
ಕ್ಯಾನ್ಸರ್ ಔಷಧಿ Gleeve ಗೆ ತನಗೆ ಪೇಟೆಂಟ್ ನೀಡಬೇಕು ಎಂದು ಸ್ವಿಸ್ ಔಷಧ ತಯಾರಕ ಕಂಪೆನಿ ನೊವಾರ್ಟಿಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಔಷಧಿಯನ್ನು ದೇಶದ ಜನರಿಕ್ ಔಷಧ ತಯಾರಕರು ಅತ್ಯಂತ ಕಡಿಮೆ ಬೆಲೆಗೆ ಮಾರುತ್ತಿದ್ದರು. ಪೇಟೆಂಟ್ ಪಡೆದ ಮೇಲೆ ಅದನ್ನು ಇಪ್ಪತ್ತು ಪಟ್ಟು ಹೆಚ್ಚು ಬೆಲೆಗೆ ಮಾರುವುದು ನೊವಾರ್ಟಿಸ್ ಉದ್ದೇಶವಾಗಿತ್ತು. ಆದರೆ ಈ ಅರ್ಜಿಯ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ ಬಷೀರ್ ನೊವಾರ್ಟಿಸ್ ಗೆ ಪೇಟೆಂಟ್ ಸಿಗದಂತೆ ಮಾಡುವಲ್ಲಿ ಯಶಸ್ವಿಯಾದರು. ಆ ಮೂಲಕ ಕ್ಯಾನ್ಸರ್ ವಿರುದ್ಧದ ಜೀವ ರಕ್ಷಕ ಔಷಧಿಯೊಂದು ಕಡಿಮೆ ಬೆಲೆಗೆ ಎಲ್ಲರಿಗೂ ಸಿಗುವಂತೆ ಮಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ. 

ಅರ್ಹ ಪ್ರತಿಭಾವಂತರಿಗೆ ಪೂರ್ಣ ಪ್ರೋತ್ಸಾಹ 
Increasing Access to Legal Education (IDIA) ಎಂಬ ಸಂಸ್ಥೆ ಸ್ಥಾಪಿಸಿದ್ದ ಬಶೀರ್ ಅದರ ಮೂಲಕ ದೇಶದ ಉದ್ದಗಲಗಳಲ್ಲಿರುವ ಅರ್ಹ ಬಡ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಅವರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುತ್ತಿದ್ದರು. 

ಪ್ರಶಸ್ತಿ, ಗೌರವಗಳ ಸರಮಾಲೆ 
ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ, ಬಳಿಕ ಅಷ್ಟೇ ತಜ್ಞ ಕಾನೂನು ಪಂಡಿತರಾದ ಬಶೀರ್ ತಮ್ಮ ಶೈಕ್ಷಣಿಕ ಹಾಗು ವೃತ್ತಿ ಸಾಧನೆಗಳಿಗಾಗಿ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇನ್ಫೋಸಿಸ್ ಸೈನ್ಸ್ ಪ್ರಶಸ್ತಿ, ಆಕ್ಸ್ ಫರ್ಡ್ ವಿವಿ ಪ್ರಶಸ್ತಿ ಸಹಿತ ದೇಶವಿದೇಶಗಳ ಹಲವಾರು ಸಮ್ಮಾನಗಳು ಅವರನ್ನು ಅರಸಿಕೊಂಡು ಬಂದಿದ್ದವು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)