varthabharthi


ಕರಾವಳಿ

ಎಸಿ ನೇತೃತ್ವದಲ್ಲಿ ಸಮಿತಿಯ ರಚನೆ

ದೇವಲ್ಕುಂದ ಅನಿಲ ಸೋರಿಕೆ: ಸಮಗ್ರ ತನಿಖೆಗೆ ಡಿಸಿ ಆದೇಶ

ವಾರ್ತಾ ಭಾರತಿ : 12 Aug, 2019

ಉಡುಪಿ, ಆ.12: ಸೋಮವಾರ ಬೆಳಗ್ಗೆ 6:30ರ ಸುಮಾರಿಗೆ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದಲ್ಲಿರುವ ಮಲ್ಪೆ ಫ್ರಶ್ ಮರೈನ್ ಎಕ್ಸ್‌ಫೋರ್ಟ್ ಮೀನು ಸಂಸ್ಕರಣ ಘಟಕದ ಕೆಲವು ಸಿಲಿಂಡರ್‌ಗಳಲ್ಲಿ ಅಮೋನಿಯ ಅನಿಲ ಸೋರಿಕೆಯಿಂದ ಅಲ್ಲಿ 75 ಮಂದಿ ಕಾರ್ಮಿಕರು ಅಸ್ವಸ್ಥ ಗೊಂಡ ಘಟನೆಯ ಕುರಿತಂತೆ ಸಮಗ್ರ ತನಿಖೆ ನಡೆಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶಿಸಿದ್ದಾರೆ.

ಅನಿಲ ಸೋರಿಕೆ ಘಟನೆಯಿಂದ 68ನ ಮಹಿಳಾ ಹಾಗೂ ಏಳು ಮಂದಿ ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಇವರೆಲ್ಲರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಓರ್ವ ಕಾರ್ಮಿಕ ಮಹಿಳೆ ತೀವ್ರ ನಿಗಾ ಘಟಕದಲ್ಲಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರೊಂದಿಗೆ ಇಂದು ಘಟನೆ ಸಂಭವಿಸಿದ ಫಿಶ್‌ಮಿಲ್ ಹಾಗೂ ಕಾರ್ಮಿಕರು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ ಅವರು ಪರಿಸ್ಥಿತಿಯನ್ನು ಅವಲೋಕಿಸಿ ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ತನಿಖೆಗಾಗಿ ಕುಂದಾಪುರದ ಸಹಾಯಕ ಕಮಿಷನರ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸಹ ಅವರು ನೇಮಿಸಿದ್ದಾರೆ. ಸಮಿತಿಯಲ್ಲಿ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು, ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಉಡುಪಿ ಜಿಲ್ಲೆ ಪರಿಸರ ಮಾಲಿನ್ಯ ನಿಯಂತ್ರಮ ಮಂಡಳಿಯ ಪರಿಸರ ಅಧಿಕಾರಿ, ಜಿಲ್ಲಾ ಆರೋಗ್ಯ ಇಲಾಖೆಯ ಡಿಎಚ್‌ಓ ಅವರು ಸದಸ್ಯರಾಗಿ ರುವರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಗ್ನಿಶಾಮಕ ಇಲಾಖೆಯಿಂದ ಅನಿಲ ಸೋರಿಕೆ ತಡೆಯಲು ಕ್ರಮ ಕೈಗೊಳ್ಳ ಲಾಗಿದ್ದು, ಅಗ್ನಿ ಶಾಮಕ ಇಲಾಖೆಯ ಅಧಿಕಾರಿಯಾದ ವಸಂತಕುಮಾರ್ ಅವರು ಅಪಾಯವನ್ನು ಲೆಕ್ಕಿಸದೇ ಪೈಪ್‌ಲೈನ್‌ಗಳ ವಾಲ್ವ್‌ಗಳನ್ನು ಮುಚ್ಚಿದ್ದು, ಈ ಮೂಲಕ ಸ್ಪೋಟ ಉಂಟಾಗುವುದನ್ನು ತಪ್ಪಿಸಿದ್ದಾರೆ ಎಂದವರು ಹೇಳಿದ್ದಾರೆ.

ಎಸ್ಪಿ ಪತ್ರಿಕಾ ಹೇಳಿಕೆ: ದೇವಲ್ಕುಂದದಲ್ಲಿ ಮೀನುಗಳನ್ನು ದಾಸ್ತಾನು ಮಾಡಿ ವಿದೇಶಕ್ಕೆ ರಫ್ತು ಮಾಡುವ ಮಲ್ಪೆ ಫ್ರಶ್ ಮರೈನ್ ಎಕ್ಸ್‌ಫೋರ್ಟ್ ಪ್ರೈವೆಟ್ ಲಿ. ಎಂಬ ಹೆಸರಿನ ಮೀನು ಸಂಸ್ಕರಣ ಕಾರ್ಖಾನೆ 2017ರ ಆಗಸ್ಟ್ ತಿಂಗಳಲ್ಲಿ ಪ್ರಾರಂಭಗೊಂಡಿದ್ದು, ಇದರಲ್ಲಿ ಆಡಳಿತ ವರ್ಗದ 91 ಜನ ಸೇರಿ ಸುಮಾರು 401 ನೌಕರರಿದ್ದಾರೆ.

ಸೋಮವಾರ ಆ.12ರಂದು ಬೆಳಗ್ಗೆ ಸುಮಾರು 06:15 ಗಂಟೆಗೆ ಈ ಫ್ಯಾಕ್ಟರಿ ಯಲ್ಲಿ ನೀರಿನ ಶೀತಲಿಕರಣಕ್ಕೆ ಉಪಯೋಗಿಸುವ ಅಮೋನಿಯ ಅನಿಲದ ಸೋರಿಕೆಯಾಗಿ ಸುಮಾರು 300 ಮೀ. ಸುತ್ತ ಪ್ರದೇಶಕ್ಕೆ ಹರಡಿತ್ತು. ಗಾಳಿಯಲ್ಲಿ ಸೇರಿದ ಈ ಅನಿಲವನ್ನು ಕಾರ್ಖಾನೆಯ ಅವರಣದೊಳಗಿನ ಕಟ್ಟಡಗಳಲ್ಲಿ ವಾಸ ಮಾಡಿಕೊಂಡಿದ್ದ ನೌಕರರು ಸೇವಿಸಿ, ಇವರಲ್ಲಿ ಸುಮಾರು 75 ಮಂದಿ ಅಸ್ವಸ್ಥ ರಾಗಿ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿದ್ದು ಯಾವುದೇ ಜೀವಹಾನಿ ಆಗಿಲ್ಲ.

ಅಸ್ವಸ್ಥರಾದವರ ಪೈಕಿ 7 ಮಂದಿ ಪುರುಷರು ಹಾಗೂ 68 ಮಹಿಳೆಯರಿದ್ದಾರೆ. ಈ ಪೈಕಿ ಓರ್ವ ಮಹಿಳೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಉಳಿದವರಿಗೆ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥಗೊಂಡ ಕಾರ್ಮಿಕರ ಪೈಕಿ ಐವರು ಕಾರ್ಮಿಕರು ನೇಪಾಲದವರೂ ಸೇರಿ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತ ಭಾಗದವರಾಗಿದ್ದು ಫ್ಯಾಕ್ಟರಿಯ ಅವರಣದೊಳಗಿನ ಕಟ್ಟಡಗಳಲ್ಲಿ ವಾಸವಿದ್ದಾರೆ.

ಪ್ರಸ್ತುತ ಮೀನಿನ ಸರಬರಾಜು ಇಲ್ಲದ ಹಿನ್ನೆಲೆಯಲ್ಲಿ ಈಗ 3 ದಿನದಿಂದ ಫ್ಯಾಕ್ಟರಿಯನ್ನು ಮುಚ್ಚಿದ್ದು ಈಗಾಗಲೇ ಫ್ಯಾಕ್ಟರಿಯಲ್ಲಿ ದಾಸ್ತಾನು ಇದ್ದ ಮೀನಿನ ಸಂರಕ್ಷಣೆಯ ಬಗ್ಗೆ ಫಾಕ್ಟರಿಯ ಶೀತಲೀಕರಣ ವ್ಯವಸ್ಥೆಯು ಕಾರ್ಯಾಚರಣೆ ಯಲ್ಲಿ ಇದ್ದಿರುವುದಾಗಿ ತಿಳಿದುಬಂದಿದೆ. ಘಟನೆಯ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬೆಳಗ್ಗೆ ಸುಮಾರು 07:00 ಘಂಟೆಗೆ ಸಾರ್ವಜನಿಕರೋರ್ವರು ದೂರವಾಣಿ ಕರೆ ಮಾಡಿ ಪ್ರಥಮ ಮಾಹಿತಿ ನೀಡಿದ್ದಾರೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಕುಂದಾಪುರ ಡಿವೈಎಸ್ಪಿ ಹಾಗೂ ಸಮೀಪದ ಪೊಲೀಸ್ ಅಧಿಕಾರಿಯವರಿಗೆ ಕೂಡಲೇ ಸ್ಥಳಕ್ಕೆ ತೆರಳಿ ತುರ್ತು ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಿದ್ದರು. ಇದರಂತೆ ಸ್ಥಳೀಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಘಟನಾಸ್ಥಳಕ್ಕೆ ಭೇಟಿ ನೀಡಿ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಕುಂದಾಪುರ ಅಗ್ನಿಶಾಮಕ ದಳದ ಅಧಿಕಾರಿಗಳೂ ಮಾಹಿತಿ ತಿಳಿದ ತಕ್ಷಣ 7:00ಕ್ಕೆ ಸ್ಥಳಕ್ಕೆ ಆಗಮಿಸಿ, ಅಮೋನಿಯಂ ಅನಿಲ ಸೋರಿಕೆ ಯಾಗದಂತೆ ಸೂಕ್ತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಕಂದಾಯ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಆಗಮಿಸಿದ್ದರು.

ಈ ಘಟನೆಯ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳದಲ್ಲಿ ಶಾಂತ ಪರಿಸ್ಥಿತಿ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದೂ ಎಸ್ಪಿಯವರ ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)