varthabharthi


ರಾಷ್ಟ್ರೀಯ

ಕಾಶ್ಮೀರ ನಿಭಾಯಿಸುತ್ತಿರುವ ಈ ಇಬ್ಬರು ಮಹಿಳಾ ಅಧಿಕಾರಿಗಳ ಬಗ್ಗೆ ಗೊತ್ತೇ?

ವಾರ್ತಾ ಭಾರತಿ : 13 Aug, 2019

ಹೊಸದಿಲ್ಲಿ, ಆ.13: ಪುನರ್ ವಿಂಗಡಣೆಯ ಸೂಕ್ಷ್ಮ ಸನ್ನಿವೇಶದಲ್ಲಿ ಕಾಶ್ಮೀರವನ್ನು ಸಮರ್ಪಕವಾಗಿ ನಿರ್ವಹಿಸುವ ಹೊಣೆ ಹೊತ್ತಿರುವುದು ಇಬ್ಬರು ಮಹಿಳಾ ಅಧಿಕಾರಿಗಳು ಎಂದರೆ ನಿಮಗೆ ಅಚ್ಚರಿಯಾಗಬಹುದು. ಅವರೇ 2013ನೇ ಬ್ಯಾಚ್ ಐಎಎಸ್ ಅಧಿಕಾರಿ ಡಾ.ಸೈಯದ್ ಸೆಹ್ರಿಶ್ ಅಸ್ಗರ್ ಹಾಗೂ 2016ನೇ ಬ್ಯಾಚ್ ಐಪಿಎಸ್ ಅಧಿಕಾರಿ ಪಿ.ಕೆ.ನಿತ್ಯಾ!

ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವ ನಾಲ್ಕು ದಿನಗಳ ಮುನ್ನ ಮಾಹಿತಿ ಇಲಾಖೆಯ ನಿರ್ದೇಶಕರಾಗಿ ಡಾ.ಸೆಹ್ರಿಶ್ ನಿಯುಕ್ತರಾದರು. ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳ ಬಗ್ಗೆ ಪ್ರಚಾರ ಮಾಡುವ ಈ ಇಲಾಖೆ ಕಳೆದ ಎಂಟು ದಿನಗಳಿಂದ ಮಾಡುತ್ತಿರುವ ಕಾರ್ಯ, ಪ್ರಚಾರವಲ್ಲ; ಸಂಕಷ್ಟ ಪರಿಸ್ಥಿತಿ ನಿರ್ವಹಣೆ. ಅವರ ಪಾತ್ರ ಈಗ ಜನರ ಅಹವಾಲುಗಳನ್ನು ಇತ್ಯರ್ಥಪಡಿಸುವುದು.

ಪಿ.ಕೆ.ನಿತ್ಯಾ ಅವರದ್ದು ರಾಮ್ ಮುನ್ಷಿಬಾಗ್‌ನಿಂದ ಹರ್ವನ್ ದಗ್ಚಿ ಗ್ರಾಮದವರೆಗಿನ ಸುವ್ಯವಸ್ಥೆ ಕಾಪಾಡುವ ಹೊಣೆ. 40 ಕಿಲೋಮೀಟರ್ ವ್ಯಾಪ್ತಿಯ ಈ ಪ್ರದೇಶ ದಾಲ್ ಲೇಕ್, ರಾಜ್ಯಪಾಲರ ನಿವಾಸ ಹಾಗೂ ಅತಿಗಣ್ಯರನ್ನು ಗೃಹಬಂಧನದಲ್ಲಿ ಇರಿಸಿರುವ ಪ್ರದೇಶವನ್ನು ಒಳಗೊಳ್ಳುತ್ತದೆ.

ಸೆಹ್ರಿಶ್ ಹಾಗೂ ನಿತ್ಯಾ ಈ ಕಣಿವೆ ಪ್ರದೇಶದಲ್ಲಿ ನಿಯುಕ್ತರಾಗಿರುವ ಕೇವಲ ಇಬ್ಬರು ಮಹಿಳಾ ಅಧಿಕಾರಿಗಳು. ಇತರ ಎಲ್ಲ ಮಹಿಳಾ ಅಧಿಕಾರಿಗಳನ್ನು ಜಮ್ಮು ಅಥವಾ ಲಡಾಖ್ ಪ್ರದೇಶದಲ್ಲಿ ನಿಯೋಜಿಸಲಾಗಿದೆ.

ಎಂಟು ವರ್ಷದ ಮಗ ಇರುವ ಸೆಹ್ರಿಶ್ ವೃತ್ತಿಯಿಂದ ವೈದ್ಯೆ. ವೈದ್ಯವೃತ್ತಿ ತೊರೆದು ಯುಪಿಎಸ್ಸಿ ಪರೀಕ್ಷೆಗೆ ಸಜ್ಜಾದರು. "ವೈದ್ಯೆಯಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೆ. ಆದರೆ ಇಂದು ಕಣಿವೆಯಲ್ಲಿ ಸವಾಲುಗಳು ಭಿನ್ನ, ಇದಕ್ಕೆ ಕಠಿಣತೆಯ ಜತೆಗೆ ಭಾವನಾತ್ಮಕ ಬೆಂಬಲವೂ ಬೇಕು" ಎಂದು ಅವರು ಹೇಳುತ್ತಾರೆ. ಇವರ ಪತಿ ಇದೀಗ ಪುಲ್ವಾಮಾ ಜಿಲ್ಲೆಯ ಆಯುಕ್ತರು. "ಒಬ್ಬಾಕೆ ಮಹಿಳೆ ಸಮಾಜವನ್ನು ಬದಲಾಯಿಸಬಲ್ಲಳು ಎಂದರೆ ಅದಕ್ಕೆ ಹೆಮ್ಮೆಪಡುತ್ತೇನೆ" ಎಂದು ಅವರು ಹೇಳುತ್ತಾರೆ.

ಛತ್ತೀಸ್‌ಗಢದಲ್ಲಿ ಕೆಲಸ ಮಾಡುತ್ತಿದ್ದ ನಿತ್ಯಾ(28) ಸಿಮೆಂಟ್ ಕಂಪೆನಿಯ ವ್ಯವಸ್ಥಾಪಕರಾಗಿದ್ದವರು. ಇದೀಗ ಅವರ ಕಾರ್ಯ ಮತ್ತಷ್ಟು ಸವಾಲಿನದು. "ಜನರಿಗೆ ಭದ್ರತೆ ಒದಗಿಸುವ ಜತೆಗೆ ವಿವಿಐಪಿಗಳ ಭದ್ರತೆಯನ್ನೂ ನೋಡಿಕೊಳ್ಳಬೇಕು. ಇದು ನನ್ನ ಛತ್ತೀಸ್‌ಗಢ ಕೆಲಸಕ್ಕಿಂತ ಸಂಪೂರ್ಣ ಭಿನ್ನ" ಎಂದು ನೆಹರೂ ಪಾರ್ಕ್ ಉಪವಿಭಾಗದ ಪೊಲೀಸ್ ಅಧಿಕಾರಿಯಾಗಿರುವ ಅವರು ಹೇಳುತ್ತಾರೆ. ಸಣ್ಣ ವ್ಯಾಪಾರಿಗಳಿಂದ ಹಿಡಿದು ಶಾಲಾ ಶಿಕ್ಷಕರ ವರೆಗೆ ಪ್ರತಿಭಟನಾನಿರತ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ.

"ನಾನು ಛತ್ತೀಸ್‌ಗಢದ ದುರ್ಗ್ ಪ್ರದೇಶದವಳು. ಇದು ಸದಾ ಶಾಂತಿಯುತ ಪ್ರದೇಶ. ಆದರೆ ನಾನು ಸವಾಲುಗಳನ್ನು ಇಷ್ಟಪಡುತ್ತೇನೆ" ಎಂದು ಹೇಳುತ್ತಾರೆ. ಕೆಮಿಕಲ್ ಎಂಜಿನಿಯರಿಂಗ್ ಪದವೀಧರೆಯಾದ ಇವರು ಮಾತೃಭಾಷೆ ತೆಲುಗಿನ ಜತೆಗೆ ಕಾಶ್ಮೀರಿ ಹಾಗೂ ಹಿಂದಿ ಭಾಷೆಯನ್ನು ಸರಾಗವಾಗಿ ಮಾತನಾಡಬಲ್ಲರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)