varthabharthi


ಕರಾವಳಿ

ಅಮಂಗಲ ನಿವಾರಿಸುವ ಯಕ್ಷಗಾನ: ಅರ್ಚಕ ಆಸ್ರಣ್ಣ

ವಾರ್ತಾ ಭಾರತಿ : 13 Aug, 2019

ಮಂಗಳೂರು, ಆ.13: ಸೇವಾ ರೂಪದಲ್ಲಿ ಆಡಿಸುವ ಯಕ್ಷಗಾನ ಆರಾಧನಾ ಕಲೆ. ಯಕ್ಷಗಾನ ಅಮಂಗಲವನ್ನು ನಿವಾರಿಸುತ್ತದೆ. ಕಲೆಯ ಆರಾಧನೆ ಜತೆಗೆ ಯಕ್ಷಗಾನ ಬೆಳವಣಿಗೆಗೆ ಶ್ರಮಿಸುತ್ತಿರುವ ಉರ್ವ ಯಕ್ಷಾರಾಧನಾ ಕಲಾಕೇಂದ್ರದ ಕಾರ್ಯ ಸ್ತುತ್ಯರ್ಹ ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದ್ದಾರೆ.

ನಗರದ ಪುರಭವನದಲ್ಲಿ ನಡೆದ ಉರ್ವ ಯಕ್ಷಾರಾಧನಾ ಕಲಾ ಕೇಂದ್ರ ಸಂಸ್ಥೆಯ ದಶಮಾನೋತ್ಸವ ಸಂಭ್ರಮ ಸಮಾರೋಪ- ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸಂಸ್ಥೆಯ ದಶಮಾನೋತ್ಸವ ಅಂಗವಾಗಿ ಯೋಗ್ಯತಾವಂತರಿಗೆ ಪ್ರಶಸ್ತಿ, ಸನ್ಮಾನ ನೀಡಲಾಗಿದೆ. ಮುಂದಕ್ಕೂ ಸಂಸ್ಥೆಯಿಂದ ಉತ್ಕೃಷ್ಟ ಮಟ್ಟದ ಕಲೆಯ ಪ್ರದರ್ಶನ ನಡೆಯಲಿ ಎಂದು ಆಶಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಉದ್ಯಮಿ ಕೆ. ಶ್ರೀಪತಿ ಭಟ್ ಮೂಡುಬಿದಿರೆ, ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗದ ಮುಖ್ಯ ವ್ಯವಸ್ಥಾಪಕ ವೀಣಾ ಟಿ. ಶೆಟ್ಟಿ ಶುಭ ಹಾರೈಸಿದರು. ಸಂಸ್ಥೆಯ ಟ್ರಸ್ಟಿ ರತ್ನಾಕರ ರಾವ್ ಬಿ. ಉಪಸ್ಥಿತರಿದ್ದರು.

ಯಕ್ಷಾರಾಧನಾ ಕಲಾ ಕೇಂದ್ರ ಅಧ್ಯಕ್ಷೆ ವಿದುಷಿ ಸುಮಂಗಲಾ ರತ್ನಾಕರ್ ಸ್ವಾಗತಿಸಿದರು. ಸದಸ್ಯೆ ಸುಮಾಡ್ಕರ್ ವಂದಿಸಿದರು. ಕಲಾವಿದ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೇಂದ್ರದ ಸದಸ್ಯರು ಮತ್ತು ಅತಿಥಿ ಕಲಾವಿದ ಕೂಡುವಿಕೆಯಲ್ಲಿ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.

ಪ್ರಶಸ್ತಿ ಪ್ರದಾನ: ಸಂಸ್ಥೆಯ ದಶಮಾನೋತ್ಸವ ಅಂಗವಾಗಿ ಹಿರಿಯ ಮದ್ದಳೆಗಾರ ಪೆರುವಾಯಿ ನಾರಾಯಣ ಭಟ್ ಅವರಿಗೆ ‘ಯಕ್ಷಕಲಾರಾಧಕ ಪ್ರಶಸ್ತಿ’, ಕಲಾವಿದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಅವರಿಗೆ ‘ಯುವ ಯಕ್ಷಕಲಾರಾಧಕ’ ಪ್ರಶಸ್ತಿ, ಭಾಗವತ ಸತೀಶ್ ಶೆಟ್ಟಿ ಬೋಂದೆಲ್, ತಾಳಮದ್ದಳೆ ಅರ್ಥಧಾರಿ ಹರೀಶ ಬೊಳಂತಿಮೊಗರು ಅವರಿಗೆ ‘ಯಕ್ಷರಾಧನಾ ಕಲಾ ಗೌರವ’ ಪ್ರದಾನ ಮಾಡಲಾಯಿತು.

ಕಲಾವಿದ ವಾದಿರಾಜ ಕಲ್ಲೂರಾಯ ಅಭಿನಂದನಾ ಭಾಷಣ ಮಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)