varthabharthi


ರಾಷ್ಟ್ರೀಯ

►46ಕ್ಕೂ ಅಧಿಕ ಜನರು ಕಣ್ಮರೆ -ಮಲಪ್ಪುರಂ,ಕೋಝಿಕೋಡ್‌ನಲ್ಲಿ ರೆಡ್ ಅಲರ್ಟ್► ಮಹಾರಾಷ್ಟ್ರದಲ್ಲಿ 43 ಮಂದಿ ಸಾವು

ಕೇರಳದಲ್ಲಿ ಮೃತಪಟ್ಟವರ ಸಂಖ್ಯೆ 91ಕ್ಕೆ ಏರಿಕೆ

ವಾರ್ತಾ ಭಾರತಿ : 13 Aug, 2019

ಹೊಸದಿಲ್ಲಿ, ಆ. 14: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮಂಗಳವಾರ ಕೂಡ ಮುಂದುವರಿದಿದ್ದು, ಮಳೆ ಸಂಬಂಧಿ ದುರ್ಘಟನೆಗಳಿಂದ ಕೇರಳದಲ್ಲಿ 91 ಮಂದಿ ಸೇರಿದಂತೆ ದೇಶದಾದ್ಯಂತ ಒಟ್ಟು 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಮಳೆ ಮುಂದುವರಿದಿದೆ. ಈ ರಾಜ್ಯಗಳಲ್ಲಿ ಮಳೆ ಸಂಬಂಧಿ ಘಟನೆಗಳಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ 91, ಕರ್ನಾಟಕ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟಾಗಿ 116 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ದತ್ತಾಂಶ ತಿಳಿಸಿದೆ.

ಇದಲ್ಲದೆ, ನೆರೆ ಸಂತ್ರಸ್ತ ಈ ನಾಲ್ಕು ಜಿಲ್ಲೆಗಳಲ್ಲಿ 12 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ 46ಕ್ಕೂ ಅಧಿಕ ಜನರು ಕಣ್ಮರೆಯಾಗಿದ್ದಾರೆ. ಇದರಿಂದ ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತದ 1,332 ಪರಿಹಾರ ಕೇಂದ್ರಗಳಲ್ಲಿ 2.52 ಲಕ್ಷ ಜನರು ಆಶ್ರಯ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತ ಸಂಭವಿಸಿದ ಮಲಪ್ಪುರದ ಕವಳಪ್ಪಾರದಲ್ಲಿ 20 ಮೃತದೇಹಗಳು ಪತ್ತೆಯಾಗಿವೆ. 39 ಮಂದಿ ಕಣ್ಮರೆಯಾಗಿದ್ದಾರೆ. ವಯನಾಡ್‌ನ ಪುದುಮಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 7 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರೆಯಿಂದ ಅತಿಯಾಗಿ ಸಂತ್ರಸ್ತವಾಗಿರುವ ಮಲಪ್ಪುರಂ ಹಾಗೂ ವಯನಾಡ್ ಜಿಲ್ಲೆಗಳಿಗೆ ಮಂಗಳವಾರ ಭೇಟಿ ನೀಡಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇಲಾಖೆ ಇಡುಕ್ಕಿ, ಆಲಪ್ಪುಳ ಹಾಗೂ ಎರ್ನಾಕುಳಂ ಜಿಲ್ಲೆಗಳಲ್ಲಿ ಮಂಗಳವಾರ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಮಲಪ್ಪುರಂ ಹಾಗೂ ಕೋಝಿಕೋಡ್ ಜಿಲ್ಲೆಗಳಲ್ಲಿ ಬುಧವಾರ ರೆಡ್ ಅಲರ್ಟ್ ಘೋಷಿಸಿದೆ.

ಮಲಪ್ಪುರ, ತ್ರಿಶೂರ್, ವಯನಾಡ್, ಎರ್ನಾಕುಳಂ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ವೃತ್ತಿಪರ ಕಾಲೇಜು ಸಹಿತ ಎಲ್ಲ ಕಾಲೇಜು ಹಾಗೂ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿ ಘಟನೆಗಳಿಂದ 43 ಮಂದಿ ಮೃತಪಟ್ಟಿದ್ದಾರೆ ಹಾಗೂ 4 ಲಕ್ಷ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ದೋಣಿ ಮಗುಚಿ ಸಂಭವಿಸಿದ ದುರಂತದಲ್ಲಿ ಮತ್ತೆ ಮೂವರ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಗುಜರಾತ್‌ನಲ್ಲಿ ಮಳೆ ಸಂಬಂಧಿ ಘಟನೆಗಳಿಂದ 36 ಮಂದಿ ಮೃತಪಟ್ಟಿದ್ದಾರೆ.

ಗುಜರಾತ್: ದೋಣಿ ಮಗುಚಿ ಕನಿಷ್ಠ 15 ಸಾವು

ಅಹ್ಮದಾಬಾದ್: ಗುಜರಾತ್‌ನ ದ್ವಾರಕಾ ಹಾಗೂ ಪೋರ್‌ಬಂದರ್ ಕರಾವಳಿಯ ಸಮುದ್ರದಲ್ಲಿ ದೋಣಿ ಮಗುಚಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ನಾಪತ್ತೆಯಾಗಿದ್ದ್ಜಾರೆ. ಎರಡು ತಿಂಗಳು ಮೀನುಗಾರಿಕೆಗೆ ನಿಷೇಧವಿದ್ದರೂ 24 ಮೀನುಗಾರರನ್ನು ಒಳಗೊಂಡ 6 ದೋಣಿಗಳು ರೂಪೇನ್ ಬಂದರಿನಿಂದ ತೆರಳಿತ್ತು. ಈ ದೋಣಿ ಕಳೆದ ವಾರಾಂತ್ಯದಲ್ಲಿ ಮಗುಚಿರುವ ಸಾಧ್ಯತೆ ಇದೆ. ಕೆಲವು ಮೀನುಗಾರರ ಮೃತದೇಹಗಳು ಕಡಲ ದಂಡೆಯಲ್ಲಿ ಸೋಮವಾರ ಪತ್ತೆಯಾಗಿದೆ. ಕೆಲವರು ಈಜಿ ದಡ ಸೇರುವಲ್ಲಿ ಸಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)