varthabharthi


ಕರಾವಳಿ

ನೆರೆ ಸಂತ್ರಸ್ತರಿಗೆ ಕೊಡವ ಮಾದರಿಯ ಪ್ಯಾಕೇಜ್ ನೀಡಲು ಐವನ್ ಡಿಸೋಜ ಆಗ್ರಹ

ವಾರ್ತಾ ಭಾರತಿ : 13 Aug, 2019

ಮಂಗಳೂರು, ಆ.13: ರಾಜ್ಯದ ನೆರೆ ಸಂತ್ರಸ್ತರಿಗೆ ಕಳೆದ ವರ್ಷ ಮೈತ್ರಿ ಸರಕಾರ ನೀಡಿದಂತೆ ಕೊಡವ ಮಾದರಿಯ ಪ್ಯಾಕೇಜ್ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ಮಂಗಳವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ರಾಜ್ಯಾದ್ಯಂತ ಭಾರೀ ಮಳೆಯಿಂದ 1 ಲಕ್ಷ ಕೋಟಿ ರೂ. ಗೂ ಅಧಿಕ ನಷ್ಟವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಸಂತ್ರಸ್ತರ ಭೇಟಿ ಮಾಡುತ್ತಿದ್ದರೂ ಅದು ಏಕಚಕ್ರಾಧಿಪತ್ಯ ಎಂಬಂತಾಗಿದೆ. ಎಲ್ಲವನ್ನೂ ಒಬ್ಬನೇ ನಿಭಾಯಿಸಬೇಕಾದ ಕಾರಣ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರು.

ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುವವರಿಗೆ ತುರ್ತಾಗಿ 10 ಸಾವಿರ ರೂ. ನೀಡಲು ಸೋಮವಾರ ದ.ಕ.ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಈವರೆಗೆ ನಯಾ ಪೈಸೆಯನ್ನು ನೀಡಿಲ್ಲ. ಅಲ್ಲದೆ ಎನ್‌ಡಿಆರ್‌ಎಫ್ ಮಾದರಿಯಲ್ಲಿ ಕೇವಲ 3,800 ರೂ.ನ ಚೆಕ್ ಸಿದ್ಧಪಡಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ದ.ಕ.ಜಿಲ್ಲಾಡಳಿತ ನೆರೆ ಹಾವಳಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರೂ ಕೂಡ ಮುಖ್ಯಮಂತ್ರಿಯ ಮಾತು ಭರವಸೆಯಾಗಿಯೇ ಉಳಿದಿದೆ. ಅದು ಅಧಿಕೃತ ಆದೇಶದ ರೂಪದಲ್ಲಿ ಬರುವವರೆಗೆ ಅಧಿಕಾರಿಗಳಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುಖ್ಯಮಂತ್ರಿ ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಧನಕ್ಕೆ ಸಂಬಂಧಿಸಿ ಅಧಿಕೃತ ಆದೇಶ ಹೊರಡಿಸಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದರು.

ಭಾಗಶಃ ಮನೆ ಹಾನಿಗೊಳಗಾದವರಿಗೆ 1 ಲಕ್ಷ ರೂ., ಸಂಪೂರ್ಣ ಮನೆ ಹಾನಿಗೊಳಗಾದವರಿಗೆ 5 ಲಕ್ಷ ರೂ. ಹಾಗೂ ಹೊಸ ಮನೆ ಕಟ್ಟುವವರೆಗೆ ಮನೆ ಬಾಡಿಗೆ ನೀಡಲು 10 ತಿಂಗಳ ಕಾಲ ಮಾಸಿಕ 5 ಸಾವಿರ ರೂ. ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಈ ಮಧ್ಯೆ ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ಮನೆ ಹಾನಿಗೊಳಗಾದವರಿಗೆ 92,100 ರೂ. ನೀಡಲಾಗುವುದು ಎಂದಿದ್ದಾರೆ. ಇದು ಎನ್‌ಡಿಆರ್‌ಎಫ್ ನಿಯಮಾವಳಿಯಡಿ ರೂಪಿಸಲಾದ ನೀತಿಯಾಗಿದೆ. ಮೈತ್ರಿ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಎನ್‌ಡಿಆರ್‌ಎಫ್ ನಿಯಮದ ಬದಲು ಪಿಡಬ್ಲುಡಿ ನಿಯಮಾವಳಿಯಡಿ ಪರಿಹಾರ ನೀಡಲು ಆದೇಶಿಸಿದ್ದಾರೆ. ಆದರೆ, ಅಧಿಕಾರಿಗಳಿನ್ನೂ ಅದನ್ನು ಜಾರಿಗೊಳಿಸಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದರು.

ದ.ಕ.ಜಿಲ್ಲೆಯ 31 ಗಂಜಿ ಕೇಂದ್ರದಲ್ಲಿ 1,019 ಮಂದಿ ಆಶ್ರಯ ಪಡೆದಿದ್ದಾರೆ. ಮೂವರು ಪ್ರಾಣ ಕಳಕೊಂಡಿದ್ದಾರೆ. 6937.99 ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದೆ.ಸುಮಾರು 274.64 ಕೋ.ರೂ. ನಷ್ಟವಾಗಿದೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿ ಹಣ ಬಿಡುಗಡೆಗೆ ಒತ್ತಾಯಿಸಲಾಗಿದೆ. ಆದರೆ ಇನ್ನೂ ಕಾರ್ಯಕರ್ತಗೊಂಡಿಲ್ಲ ಎಂದು ಐವನ್ ನುಡಿದರು.

ಈಗಾಗಲೆ ಕೇಂದ್ರದ ಇಬ್ಬರು ಸಚಿವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯೂ ಈ ಬಗ್ಗೆ ಮೌನವಾಗಿದ್ದಾರೆ. 2009ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮಳೆ ಹಾನಿ ಸಂದರ್ಭ ವೈಮಾನಿಕ ಸಮೀಕ್ಷೆ ನಡೆಸಿ 2 ಸಾವಿರ ಕೋ.ರೂ. ಘೋಷಿಸಿದ್ದರು. ಆದರೆ ಕೇಂದ್ರ ಸರಕಾರ ಇನ್ನೂ ಪರಿಹಾರ ಧನ ಘೋಷಿಸಿಲ್ಲ. ಇದು ರಾಜ್ಯದ ಬಿಜೆಪಿ ಶಾಸಕರ ಅಥವಾ ಸಂಸದರ ವೈಫಲ್ಯವೋ ಎಂಬುದು ಗೊತ್ತಾಗುತ್ತಿಲ್ಲ. ಕೇಂದ್ರ ಸರಕಾರವು ಇನ್ನೂ ಅಧ್ಯಯನಕ್ಕೆ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿಲ್ಲ ಎಂದ ಐವನ್, ಪಕ್ಷದ ಹೈಕಮಾಂಡ್‌ನ ನಿರ್ದೇಶನದಂತೆ ರಾಜ್ಯಾದ್ಯಂತ ಕಾಂಗ್ರೆಸ್‌ನ ಅಧ್ಯಯನ ತಂಡವು ಪ್ರವಾಸಗೊಳ್ಳಲಿದೆ. ಶೀಘ್ರದಲ್ಲೇ ದ.ಕ.ಜಿಲ್ಲೆಗೆ ಈ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ನಾಗೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)