ಅಮೆರಿಕ: ಭಾರತ ಮೂಲದ ವ್ಯಕ್ತಿಯಿಂದ ತಂದೆಯ ಹತ್ಯೆ
ನ್ಯೂಯಾರ್ಕ್, ಆ. 13: ಅಮೆರಿಕದ ಫಿಲಡೆಲ್ಫಿಯ ರಾಜ್ಯದಲ್ಲಿ 31 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಗುಂಡು ಹಾರಿಸಿ ಕೊಂದಿದ್ದಾನೆ. ಬಳಿಕ ಅವನನ್ನು ಹಾರ್ವರ್ಡ್ ವಿಶ್ವವಿದ್ಯಾನಿಲಯ ಹೊರಡಿಸಿದ ತುರ್ತು ಎಚ್ಚರಿಕೆಯ ಹಿನ್ನೆಲೆಯಲ್ಲಿ, ಮ್ಯಾಸಚೂಸಿಟ್ಸ್ನಲ್ಲಿ ಅವನನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಸ್ಕೀರೊಫ್ರೀನಿಯ (ಒಂದು ರೀತಿಯ ಮಾನಸಿಕ ರೋಗ)ದಿಂದ ಬಳಲುತ್ತಿರುವ ಸೋಹನ್ ಪಂಜ್ರೋಲಿಯ ತನ್ನ 60 ವರ್ಷದ ತಂದೆ ಮಹೇಂದ್ರ ಪಂಜ್ರೋಲಿಯರನ್ನು ಈ ತಿಂಗಳ ಆದಿ ಭಾಗದಲ್ಲಿ ಅವರ ಕುಟುಂಬದ ಮನೆಯಲ್ಲಿ ಗುಂಡು ಹಾರಿಸಿ ಕೊಂದನು ಎಂದು ‘ಫಿಲಡೆಲ್ಫಿಯ ಇನ್ಕ್ವಯರರ್’ ವರದಿ ಮಾಡಿದೆ.
ಬಳಿಕ ಅವನು ಬಂದೂಕಿನೊಂದಿಗೆ ಕಾರಿನಲ್ಲಿ ಪರಾರಿಯಾದನು.
ಸೋಹನ್ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಎಕ್ಸ್ಟೆನ್ಶನ್ ಸ್ಕೂಲ್ನಲ್ಲಿ 2013ರಲ್ಲಿ ಪದವಿ ಪಡೆದಿದ್ದು, ಪೊಲೀಸರು ವಿಶ್ವವಿದ್ಯಾಲಯದಲ್ಲಿ ಶೋಧ ಕಾರ್ಯ ನಡೆಸಿದರು. ಈ ಹಿನ್ನೆಲೆಯಲ್ಲಿ, ಎಚ್ಚರದಿಂದ ಇರುವಂತೆ ವಿಶ್ವವಿದ್ಯಾನಿಲಯವು ತನ್ನ ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ಹೊರಡಿಸಿತ್ತು.