varthabharthi


ನಿಮ್ಮ ಅಂಕಣ

ಕನ್ಹಯ್ಯಕುಮಾರ್ ಭಾರತದ ಭವಿಷ್ಯದ ಭರವಸೆಯಾಗುವರೇ?

ವಾರ್ತಾ ಭಾರತಿ : 14 Aug, 2019
-ಕೆ. ಎಸ್., ಮಂಗಳೂರು

ಮಾನ್ಯರೇ

ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ಯುವನಾಯಕ ಡಾ. ಕನ್ಹಯ್ಯಾಕುಮಾರ್ ಇತ್ತೀಚೆಗೆ ಮಂಗಳೂರಿಗೆ ಬಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದು ಮಂಗಳೂರಿನ ಇತಿಹಾಸದಲ್ಲಿ ದಾಖಲಿಸಬೇಕಾದ ಒಂದು ವಿಷಯ. ಜಾಲತಾಣವಾದ ಯುಟ್ಯೂಬ್‌ಗಳಲ್ಲಿ ಕನ್ಹಯ್ಯಾಕುಮಾರ್‌ರ ಭಾಷಣಗಳನ್ನು-ಮಾತುಗಳನ್ನು ಕೇಳಿದಾಗ, ಭವಿಷ್ಯದ ಭಾರತಕ್ಕೆ ಒಂದು ಒಳ್ಳೆಯ ನಾಯಕತ್ವ ದೊರೆಯುವ ಭರವಸೆ ಇದೆ ಎಂದು ಭಾಸವಾಗುತ್ತಿದೆ. ಎಷ್ಟೋ ಸಂವಾದ ಸಭೆಗಳಲ್ಲಿ ಅವರ ಧೃತಿಗೆಡಿಸಲು ಕೆಲವರು ಅಡ್ಡಾದಿಡ್ಡಿ ಪ್ರಶ್ನೆಗಳನ್ನು ಕೇಳಿದಾಗಲೂ, ಅವರು ಬಹಳ ತಾಳ್ಮೆಯಿಂದ ಉತ್ತರಿಸುವುದೂ, ತಮ್ಮ ಉತ್ತರದಲ್ಲಿ ಸಾಕಷ್ಟು ವೈಚಾರಿಕವೂ, ಸುಸಂಬದ್ಧವೂ ಆದ ಅಂಶಗಳನ್ನು ಪೋಣಿಸುವುದೂ, ಅವರು ಹೊಂದಿರುವ ಒಂದು ಅದ್ಭುತ ಪ್ರತಿಭೆಗೆ ಸಾಕ್ಷಿ. ಮಂಗಳೂರಿನ ಅವರ ಕಾರ್ಯಕ್ರಮದಲ್ಲಿ ಅದರ ಪ್ರತ್ಯಕ್ಷ ಅನುಭವವೂ ಆಯಿತು.

‘ಕವಲುದಾರಿಯಲ್ಲಿ ಭಾರತದ ಯುವಕರು’ ಎಂಬ ವಿಷಯದ ಮೇಲೆ ಅವರು ಒಂದು ಗಂಟೆಗೂ ಮೀರಿ ನೀಡಿದ ಉಪನ್ಯಾಸದಲ್ಲಿ, ಭಾರತದ ಯುವಜನರ ಹೊಣೆಗಾರಿಕೆಯ ಬಗ್ಗೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೊಟ್ಟ ಸಂದೇಶ ಮನಮುಟ್ಟುವಂತಿತ್ತು. ‘‘ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ ಹತಾಶರಾಗಬೇಕಾಗಿಲ್ಲ, ಭವಿಷ್ಯದ ಬಗ್ಗೆ ಭರವಸೆ ಖಂಡಿತ ಇಡಬಹುದು’’ ಎಂಬ ಅವರ ಮಾತಿಗೆ ಪೂರಕವಾಗಿ ಕೊಡುತ್ತಿದ್ದ ಉದಾಹರಣೆಗಳು, ಅವರು ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಎಷ್ಟರ ಮಟ್ಟಿಗೆ ಅರಗಿಸಿಕೊಂಡಿದ್ದಾರೆ ಎಂಬ ಅಂಶವನ್ನು ನಮಗೆ ಮನದಟ್ಟು ಮಾಡಿಕೊಡುತ್ತಿತ್ತು. ಕನ್ಹಯ್ಯಿಕುಮಾರ್‌ರಂಥವರು ದೇಶದ ರಾಜಕೀಯ ಚುಕ್ಕಾಣಿಯನ್ನು ಹಿಡಿಯುವುದು ತೀರಾ ಅಗತ್ಯ ಎಂಬುದರಲ್ಲಿ ಅನುಮಾನವೇ ಇಲ್ಲ.

ಕನ್ಹಯ್ಯಕುಮಾರ್‌ರ ಈ ಶಕ್ತಿಯನ್ನು ಸರಿಯಾಗಿಯೇ ತಿಳಿದುಕೊಂಡಿರುವ ಕೆಲವು ವರ್ಗದವರು ಅವರನ್ನು ದ್ವೇಷಿಸುವುದು ಸಹಜವೇ. ಹಾಗಾಗಿಯೇ ಅವರ ಕಾರ್ಯಕ್ರಮಗಳಿಗೆ ಅಡ್ಡಿಯನ್ನುಂಟುಮಾಡುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಕನ್ಹಯ್ಯಿಕುಮಾರರ ಉಪನ್ಯಾಸ ಮುಗಿದೊಡನೆ ಪ್ರಶ್ನೋತ್ತರ ಆರಂಭವಾಗಿತ್ತು. ಆಗ ಹೆಣ್ಣುಮಗಳೊಬ್ಬಳು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ಕನ್ಹಯ್ಯೆಕುಮಾರ್‌ರ ಮಾತುಗಳು ಯುಟ್ಯೂಬ್‌ನಲ್ಲಿ ಇದೀಗ ವೈರಲ್ ಆಗಿವೆ. ಒಂದಿಷ್ಟ್ಟೂ ಉದ್ವೇಗಗೊಳ್ಳದೆ ಸಂಯಮದಿಂದ, ಪ್ರೀತಿಯಿಂದ ಉತ್ತರಿಸಿದ ಕನ್ಹಯ್ಯೆಕುಮಾರ್‌ರ ಉತ್ತರ ಅನೇಕ ಚಿಂತನೀಯ ಅಂಶಗಳನ್ನು ಒಳಗೊಂಡಿತ್ತು. ಕನ್ಹಯ್ಯೆಕುಮಾರ್ ಹೊಂದಿರುವ ಜ್ಞಾನ, ತಿಳುವಳಿಕೆ, ಅವರ ವೈಚಾರಿಕತೆ ಮತ್ತು ಭವಿಷ್ಯದ ಭಾರತದ ಬಗ್ಗೆ ಅವರು ಹೊಂದಿರುವ ಕನಸುಗಳ ಸ್ಪಷ್ಟ ಚಿತ್ರಣ ಅದರಿಂದ ದೊರೆಯಿತು. ನಿಜವಾಗಿ ಆ ಹೆಣ್ಣುಮಗಳು ಪ್ರಶ್ನೆ ಕೇಳದಿರುತ್ತಿದ್ದರೆ ಕನ್ಹಯ್ಯಿ ಕುಮಾರ್‌ರ ಅದ್ಭುತ ವ್ಯಕ್ತಿತ್ವ, ಅಷ್ಟರ ಮಟ್ಟಿಗೆ ಪ್ರಕಟವಾಗದೇ ಉಳಿಯುತ್ತಿತ್ತು. ಅವರ ಉತ್ತರ ವೈರಲ್ ಆಗಿ ಇದೀಗ ಅದು ಲಕ್ಷಾಂತರ ಜನರ ಗಮನಕ್ಕೂ ಬರುವ ಹಾಗಾಯಿತು. ಕನ್ಹಯ್ಯಕುಮಾರ್‌ರ ರಾಜಕೀಯ ಪ್ರಬುದ್ಧತೆ, ತಾಳ್ಮೆ, ತಿಳುವಳಿಕೆ, ಜ್ಞಾನ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅವರ ಸರಳತೆ ಹಾಗೂ ದೇಸೀಯ ಮಾತಿನ ಶೈಲಿ - ಅವರೊಬ್ಬ ಭಾರತದ ಭವಿಷ್ಯದ ನಾಯಕನಾಗುವ ಅರ್ಹತೆಯನ್ನಂತೂ ಸ್ಪಷ್ಟವಾಗಿ ಪ್ರತಿಪಾದಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)