varthabharthi


ನಿಮ್ಮ ಅಂಕಣ

ಪ್ರಜಾಪ್ರಭುತ್ವದ ಪುನರುಜ್ಜೀವನ: ದಾರಿ ಯಾವುದಯ್ಯ?

ವಾರ್ತಾ ಭಾರತಿ : 14 Aug, 2019
ಬಿ. ಶ್ರೀಪಾದ ಭಟ್

ಸುಳ್ಳುಗಳಿಗೆ ಸತ್ಯವೇ ಪ್ರತಿಕ್ರಿಯೆ ಮತ್ತು ದ್ವೇಷಕ್ಕೆ ಒಳಗೊಳ್ಳುವಿಕೆ ಪ್ರತ್ಯುತ್ತರ ಎನ್ನುವ ಬದುಕಿನ ಸರಳ ಪಾಠಗಳನ್ನು ಮರೆತಂತಿರುವ ಭಾರತೀಯರು ಸುಳ್ಳು ಮತ್ತು ದ್ವೇಷವನ್ನು ಬಿತ್ತುವ ನಿರಂಕುಶ ಪ್ರಭುತ್ವವನ್ನೇ ಓಲೈಸುತ್ತಿದ್ದಾರೆ. ಇದು ಕೇವಲ ಮಾನಸಿಕ ಸ್ಥಿತಿಯಲ್ಲ, ಇದು ನಿರಂತರವಾಗಿ ಬೆಳೆಸಿಕೊಂಡು ಬಂದ ಗುಣಲಕ್ಷಣಗಳೂ ಹೌದು. ನಾವು ಇದನ್ನು ಅರಿಯಲು ಸೋತಿದ್ದೇವೆ.


‘‘ರಾಜಕಾರಣವು ಸಂಭವನೀಯತೆಗಳ ಕಲೆ’’ ಎಂಬುದು ಹಳೆಯ ನಾಣ್ಣುಡಿ. ಇದನ್ನು ನಾವು ಸಾಕಷ್ಟು ಬಾರಿ ಬಳಸಿ ಇಂದು ಅದು ಕ್ಲೀಶೆಯಾಗಿದೆ. ಸಕಾರಾತ್ಮಕ ನಡೆಗಳು, ನಿರ್ಣಯಗಳಿಗೆ ಒಂದು ಅರ್ಥ ಕೊಡುವ ಈ ಸಂಭವನೀಯತೆಗಳ ಕಲೆ ನಕಾರಾತ್ಮಕ ವರ್ತನೆಗಳಿಗೆ ಮತ್ತೊಂದು ಅರ್ಥ ಕೊಡುತ್ತದೆ. ಕಳೆದ ಐದು ವರ್ಷಗಳಿಂದ ಮೋದಿ-ಆರೆಸ್ಸೆಸ್-ಶಾ ಜೋಡಿಯ ನಿರಂಕುಶ ಆಡಳಿತದಿಂದ ಈ ದೇಶಕ್ಕಾದ ಹಾನಿ, ನಾಶವಾಗುತ್ತಿರುವ ಬಹುತ್ವ, ಕಳೆದುಕೊಂಡ ಸೆಕ್ಯುಲರಿಸಂ, ಧ್ವಂಸಗೊಂಡ ಪ್ರಜಾಪ್ರಭುತ್ವ, ತಾಂಡವವಾಡುತ್ತಿರುವ ಮತಾಂಧತೆ ಎಲ್ಲವೂ ಇಂದು ವರ್ತಮಾನವೂ ಹೌದು ಮತ್ತು ಭವಿಷ್ಯ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ಇದರ ಕುರಿತು ಮಾತನಾಡುವಾಗ ಬಹುತೇಕ ಪತ್ರಕರ್ತರು ಮತ್ತು ಬಹುಸಂಖ್ಯಾತ ಜನತೆ ಇದನ್ನು ಮೋದಿ-ಶಾ ಜೋಡಿಯ ಜಾಣ್ಮೆ ಮತ್ತು ಬಲಪ್ರದರ್ಶನ, ಪ್ರತಿ ಚುನಾವಣೆಯಲ್ಲಿ ಗೆಲ್ಲುವುದು ಈ ಜೋಡಿಯ ಸಂಭವನೀಯತೆ ಎಂದು ಕೊಂಡಾಡುತ್ತಾರೆ.

ಜನತೆಯ ಮೆದುಳು ಮತ್ತು ಮನಸ್ಸಿಗೆ ಬೀಗ ಜಡಿದಿರುವ ಮೋದಿ-ಶಾ ಜೋಡಿ ತಮ್ಮ ಈ ಸಂಭವನೀಯತೆಗಳ ಕಲೆಯ ಕಾರಣಕ್ಕೆ ಇಂದು ಭಾರತದಲ್ಲಿ ಜನಪ್ರಿಯ ಮತ್ತು ಪ್ರಭಾವಶಾಲಿ ರಾಜಕಾರಣಿಗಳು. ನೀವು ಇಂದು ಭಾರತದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆಯಲ್ಲ ಎಂದು ಮಾಧ್ಯಮದವರನ್ನು, ಬಹುಸಂಖ್ಯಾತರನ್ನು ಕೇಳಿ ನೋಡಿ, ‘‘ಅದು ಜಾಗತಿಕ ವಿದ್ಯಮಾನ, ಭಾರತ ಹೇಗೆ ಇದರಿಂದ ಹೊರತಾಗುತ್ತದೆ’’ ಎಂದು ರಾಗವೆಳೆಯುತ್ತಾರೆ. ಮೋದಿ-ಶಾ ಜೋಡಿಯ ಪ್ರತಿಯೊಂದು ನಿರ್ಧಾರವೂ ಪ್ರಶಂಸೆಗೆ ಒಳಪಡುತ್ತಿರುವ ಕಾರಣ ನೀವು ‘‘ಇಲ್ಲಿನ ಆಡಳಿತ ಪಕ್ಷಕ್ಕೆ ಜವಾಬ್ದಾರಿ, ಉತ್ತರದಾಯಿತ್ವ ಇಲ್ಲವೇ?’’ ಎಂದು ಮರುಪ್ರಶ್ನೆ ಮಾಡಲು ಧೈರ್ಯ ಮಾಡುವುದಿಲ್ಲ. ಭಾರತದಲ್ಲಿ ಮೋದಿ-ಆರೆಸ್ಸೆಸ್ ಜೋಡಿಯ ನಿರಂಕುಶ ಪ್ರಭುತ್ವವು ಹಿಂದೂ ರಾಷ್ಟ್ರೀಯತೆ, ಧರ್ಮ ಎನ್ನುವ ಛದ್ಮವೇಶ ಧರಿಸಿ ದೇಶಾದ್ಯಂತ ಬಹುಸಂಖ್ಯಾತ ಹಿಂದೂಗಳಿಗೆ ಎರಚಿರುವ ಮಂಕುಬೂದಿಯ ಫಲವಾಗಿ ಇಂದು ದೇಶವು ಫ್ಯಾಶಿಸಂನ ಎಲ್ಲಾ ಬಗೆಯ ದಾಳಿಗಳನ್ನು ಸಂಭ್ರಮಿಸುತ್ತಿದೆ.

ಇಲ್ಲಿ ಮುಸ್ಲಿಂ ಮತ್ತು ದಲಿತರು ದಾಳಿಗೊಳಗಾಗುತ್ತಿರುವುದರಿಂದ ಬಹುಸಂಖ್ಯಾತ ಹಿಂದೂಗಳ ಈ ವಿಜಯೋತ್ಸವ ಹಿಂಸೆಯ ರೂಪ ತಾಳುತ್ತಿದೆ. ಕಳೆದ ಐದು ವಷರ್ಗಳಲ್ಲಿ ಮೋದಿ ಸರಕಾರದ ಆಡಳಿತಾತ್ಮಕ-ರಾಜಕೀಯ-ಸಾಮಾಜಿಕ ನಿರ್ಧಾರ, ನೀತಿಗಳ ದಮನಕಾರಿ, ಹಿಂಸಾತ್ಮಕ ಪ್ರವೃತ್ತಿ, ಅವುಗಳ ವೈಫಲ್ಯಗಳ ಪಟ್ಟಿಯೆ ಇದೆ. ಇದರ ಮುಂದುವರಿದ ಭಾಗವಾಗಿ ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ವಾಯತ್ತತೆಯನ್ನು ಕಸಿದುಕೊಂಡು ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಸೂದೆ ತರಲಾಗಿದೆ, ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಮು 370ನ್ನು ರದ್ದುಪಡಿಸಲಾಗಿದೆ. ತಮ್ಮ ರಾಜ್ಯಗಳಿಗೆ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಬೇಕೆಂದು ಹೋರಾಟ ಮಾಡುವ ಪ್ರಾದೇಶಿಕ ಪಕ್ಷಗಳು (ಡಿಎಂಕೆ, ಟಿಎಂಸಿ ಹೊರತುಪಡಿಸಿ) ರಾಜ್ಯಗಳ ಸ್ವಾಯತ್ತತೆ, ಅಧಿಕಾರ ಮೊಟಕುಗೊಳಿಸುವ, ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ಮೋದಿ-ಶಾ ಜೋಡಿಯ ಈ ನಿರಂಕುಶ ವರ್ತನೆಗೆ ಬಹಿರಂಗವಾಗಿ ಬೆಂಬಲಿಸಿದ್ದಾರೆ. ರಾಜಕಾರಣ ಅನೇಕ ಸಂಭವನೀಯತೆಗಳ ಕಲೆ ಅಲ್ಲವೆಂದು ಯಾರು ಹೇಳುತ್ತಾರೆ?

ಬಹುತೇಕ ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ಮೋದಿ ಸರಕಾರದ ಈ ನಿರ್ಧಾರವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವುದರ ಬದಲು ‘‘ಭಾರತಕ್ಕೆ ಎರಡನೇ ಸ್ವಾತಂತ್ರ್ಯ ದೊರಕಿತು’’ ಎಂದು ಏಕೆ ಸಂಭ್ರಮಿಸುತ್ತಿವೆ? ಈ ನಿರಂಕುಶ ಪ್ರಭುತ್ವಕ್ಕೆ ಭಾರತಾದ್ಯಂತ ಪ್ರಶಂಸೆ ದೊರಕುತ್ತಿರುವುದು ಏನನ್ನು ಸೂಚಿಸುತ್ತಿದೆ? ಮುಕ್ತವಾಗಿ, ಸ್ವತಂತ್ರವಾಗಿ ಚಿಂತಿಸದೆ, ಚರ್ಚಿಸದೆ ಏಕೆ ಬಹುಸಂಖ್ಯಾತ ಭಾರತೀಯರೂ ‘ನಿರಂಕುಶ ಪ್ರಭುತ್ವ’ದ ಪರವಾಗಿ ಕೋರಸ್‌ನಲ್ಲಿ ಒಲವು ವ್ಯಕ್ತಪಡಿಸುತ್ತಾರೆ? 

16ನೇ ಶತಮಾನದ ಫ್ರೆಂಚ್ ನ್ಯಾಯಾಧೀಶ, ಲೇಖಕ ಡಿ. ಲಾ ಬೊಯೆಟಿ ಒಂದೆಡೆ ‘‘ನಿರಂಕುಶ ಪ್ರಭುತ್ವವೆಂದರೆ ನಿನ್ನನ್ನು ನಾಶ ಮಾಡಲು ಆತನಿಗೆ ಅಧಿಕಾರವನ್ನು ಕೊಡುವುದು’’ ಎಂದು ಹೇಳುತ್ತಾನೆ. ಬೊಯೆಟಿಗೆ ಈ ನಿರಂಕುಶ ಪ್ರಭುತ್ವದ ಹುಟ್ಟಿನ ಮೂಲದ ಕುರಿತು ಆಸಕ್ತಿ ಇಲ್ಲ. ಆತನಿಗೆ ಜನರ ದಾಸ್ಯ ಮನೋಭಾವವನ್ನು ನಿರ್ಮೂಲನೆ ಮಾಡುವುದು ಹೇಗೆ ಎನ್ನುವುದರಲ್ಲಿ ಹೆಚ್ಚಿನ ಆಸಕ್ತಿ. ಆದರೆ ಜನತೆ ಸ್ವಯಂಪ್ರೇರಿತರಾಗಿ ತಮ್ಮ ತಪ್ಪುಗಳನ್ನು ಅರಿತು ಈ ನಿರಂಕುಶ ಪ್ರಭುತ್ವವನ್ನು ಕೊನೆಗಾಣಿಸಬೇಕು ಎನ್ನುವ ಬೊಯೆಟಿಯ ಮಾತುಗಳು ಇಂದು ಪೇಲವವಾಗಿ ಕಾಣುತ್ತದೆ. ಏಕೆಂದರೆ ತಮಗೆ ಗಾಯವನ್ನುಂಟು ಮಾಡುವ ಶೋಷಿತನನ್ನೇ ಆಯ್ಕೆ ಮಾಡಿಕೊಳ್ಳುವ ಬಹುಸಂಖ್ಯಾತರು ಯಾಕೆ ಆ ರೀತಿ ಸ್ವಯಂಪ್ರೇರಿತರಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸದ್ಯಕ್ಕಂತೂ ಇಲ್ಲ. ಭಾರತ ಈ ಕತ್ತಲ ಹಾದಿಯನ್ನು ಆಯ್ಕೆ ಮಾಡಿಕೊಂಡು ದಶಕಗಳು ಕಳೆದಿವೆ.

ಆದರೆ ಅದರ ಸ್ಪಷ್ಟ ರೂಪ ಅರಿವಾಗಲು ಆರೆಸ್ಸೆಸ್ ಅಧಿಕಾರಕ್ಕೆ ಬರಬೇಕಾಯಿತು. ನಾಝಿ ಜರ್ಮನಿಯ ಸರ್ವಾಧಿಕಾರವು ಯಹೂದಿಗಳನ್ನು ಕೊಲ್ಲಲು ತನ್ನ ಗ್ಯಾಸ್ ಚೇಂಬರ್ ಜೊತೆಗೆ ದಿಢೀರನೆ ಉದ್ಭವಿಸಲಿಲ್ಲ, ಅದಕ್ಕೂ ಮೊದಲು ರಾಜಕಾರಣಿಗಳು ಕ್ರಿಶ್ಚಿಯನ್ ಬಹುಸಂಖ್ಯಾತವಾದವನ್ನು ಜರ್ಮನ್ನರಲ್ಲಿ ಬಿತ್ತತೊಡಗಿದ್ದರು. ನಾವು ಮತ್ತು ಅವರು ಎನ್ನುವ ಸಂದೇಶಗಳು ಜರ್ಮನಿಯಲ್ಲಿ ಪ್ರಾರಂಭವಾಯಿತು. ಅಸಹಿಷ್ಣುತೆ ಮತ್ತು ದ್ವೇಷದ ಭಾಷಣಗಳೊಂದಿಗೆ ಪ್ರಾರಂಭವಾಯಿತು. ಸಾಮಾನ್ಯ ಜನರು ತಮ್ಮ ನೆರೆಹೊರೆಯವರ ಕಷ್ಟ್ಟಕೋಟಲೆಗಳಿಗೆ ಸ್ಪಂದಿಸದೆ ನಿರ್ಲಕ್ಷಿಸುವುದರ ಮೂಲಕ ನಾಝಿವಾದ ಶುರುವಾಯಿತು. ಭಾರತದಲ್ಲಿಯೂ ಈ ಮತಾಂಧತೆಯ ಚಹರೆಗಳು ದಶಕಗಳ ಹಿಂದೆ ಮೊಳಕೆಯೊಡೆಯತೊಡಗಿದವು. ಆದರೆ ರಾಜಕೀಯವಾಗಿ ಕಾಂಗ್ರೆಸ್ ವಿರೋಧಿ ಮನಸ್ಥಿತಿಯಲ್ಲಿದ್ದ ಅರವತ್ತು, ಎಪ್ಪತ್ತರ ದಶಕದ ಸಮಾಜವಾದಿಗಳು ಮತ್ತು ಮಧ್ಯಮಮಾರ್ಗಿಗಳು ಈ ನಿರಂಕುಶ ಪ್ರಭುತ್ವದ ಮಾತೃಪಕ್ಷವಾದ ಜನಸಂಘವನ್ನು ತಮ್ಮ ಮಡಿಲೊಳಗೆ ಎಳೆದುಕೊಂಡು ಪೋಷಿಸಿದರು.

ಕಾಂಗ್ರೆಸ್ ಪಕ್ಷ ಅತ್ತ ಎಡವೂ ಅಲ್ಲದ, ಬಲವೂ ಅಲ್ಲದ ಸಾಮಾಜಿಕ-ಆರ್ಥಿಕ-ರಾಜಕೀಯ ಹರಾಕಿರಿಗಳಿಂದಾಗಿ, ಸೈದ್ಧಾಂತಿಕ ಎಡಬಿಡಂಗಿತನದಿಂದಾಗಿ ಬಿಜೆಪಿ ಹುಲುಸಾಗಿ ಬೆಳೆಯಲು ಫಲವತ್ತಾದ ಭೂಮಿಯನ್ನೇ ಹದಮಾಡಿಕೊಟ್ಟಿತು. ಆನಂತರ ನಡೆದದ್ದು ಎಲ್ಲವೂ ಇತಿಹಾಸ. 2014ರಲ್ಲಿ ಅಧಿಕಾರಕ್ಕೆ ಬಂದ ಆರೆಸ್ಸೆಸ್-ಮೋದಿ ಆಡಳಿತ ತನ್ನ ಫ್ಯಾಶಿಸಂ ನೀತಿಗಳನ್ನು ನಿರ್ಧಯವಾಗಿ ಹೇರತೊಡಗಿದಾಗ ಮತ್ತು ಅದಕ್ಕೆ ಬಹುಸಂಖ್ಯಾತ ಹಿಂದೂಗಳ ಬೆಂಬಲ, ಮನ್ನಣೆ ದೊರೆಯತೊಡಗಿದಾಗ ಎಚ್ಚೆತ್ತುಕೊಂಡವರಂತೆ ತಡಬಡಾಯಿಸುತ್ತಿರುವ ಇಲ್ಲಿನ ಪ್ರಜ್ಞಾವಂತರು ಈ ಸಿಕ್ಕುಗಳನ್ನು ಬಿಡಿಸಿಕೊಳ್ಳಲು ಮಹಾತ್ಮನ ಅಂತಃಶಕ್ತಿಯ ಹುಡುಕಾಟದಲ್ಲಿರುವುದು ಆಶಾವಾದದ ಸೂಚನೆಯೋ ಅಥವಾ ಯಾಜಮಾನ್ಯತೆಯನ್ನು ನಿರಾಕರಿಸುವ ನಾಟಕವೋ? ಇಂಡಿಯಾದ ಪ್ರಜಾಪ್ರಭುತ್ವವು ಶಿಥಿಲ ತಳಹದಿಯ ಮೇಲೆ ಕಟ್ಟಲ್ಪಟ್ಟಿದೆಯೋ ಅಥವಾ ಸದೃಢ ಪ್ರಜಾಪ್ರಭುತ್ವ ಶಿಥಿಲಗೊಳ್ಳುತ್ತಿದೆಯೋ ಎನ್ನುವುದನ್ನು ಅರಿತುಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಎಲ್ಲವೂ ಛಿದ್ರಗೊಂಡ ಸ್ಥಿತಿಯಲ್ಲಿರುವ ಇಂದಿನ ಭಾರತೀಯ ಸಮಾಜದಲ್ಲಿ ನಮ್ಮ ಹೆಳವಂಡಗಳು ಪ್ರತಿಫಲನಗೊಳ್ಳುತ್ತಿವೆ. ರಾಜಕೀಯಶಾಸ್ತ್ರಜ್ಞ ಅರೆಂಟ್ ‘‘ಸರ್ವಾಧಿಕಾರವೆಂದರೆ ಶಕ್ತಿಶಾಲಿಯಾದ ಪ್ರಭುತ್ವವಲ್ಲ, ಬದಲಿಗೆ ಸಾರ್ವಜನಿಕ ಮತ್ತು ಖಾಸಗಿ ಬದುಕಿನ ನಡುವಿನ ವ್ಯತ್ಯಾಸದ ಗೆರೆ ಅಳಿಸಿ ಹೋಗುವುದು ಸರ್ವಾಧಿಕಾರದ ಮುನ್ಸೂಚನೆ’’ ಎಂದು ಹೇಳುತ್ತಾನೆ.

ಇದನ್ನೇ ಅರ್ವೆಲ್ 1984 ಕಾದಂಬರಿಯಲ್ಲಿ ‘‘ದೊಡ್ಡಣ್ಣ ಎಲ್ಲವನ್ನೂ ಗಮನಿಸುತ್ತಿದ್ದಾನೆ’’ ಎಂದು ಹೇಳುತ್ತಾನೆ. ಭಾರತೀಯರು ಇಂದು ನಿರಂಕುಶ ಪ್ರಭುತ್ವವನ್ನು ಸಂಭ್ರಮಿಸುತ್ತಿರುವುದನ್ನು ಕಂಡರೆ ಬಹುಶಃ ಅವರು ಕಳೆದ ಅರವತ್ತು ವರ್ಷಗಳಲ್ಲಿ ಪ್ರಜಾಪ್ರಭುತ್ವವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದಂತೆ ಕಂಡುಬರುವುದಿಲ್ಲ. ಇದನ್ನು ಅರಾಜಕತೆ ಎಂದೂ ಕರೆಯಲು ಸಾಧ್ಯವಿಲ್ಲ. ಸಂವಿಧಾನದ ಆಶಯಗಳಾದ ‘ಸಮಾಜವಾದಿ ಮತ್ತು ಸೆಕ್ಯುಲರಿಸಂ’ ಅನ್ನು ಇಲ್ಲಿನ ಬಹುಸಂಖ್ಯಾತರು ಮೊಳೆ ಹೊಡೆದು ಗೋರಿ ಕಟ್ಟಿ ದಶಕಗಳೇ ಸಂದಿವೆ. ಪ್ರಜ್ಞಾವಂತರು ಇದನ್ನು ಗುರುತಿಸುವಲ್ಲಿ ಸೋತಿದ್ದಾರೆ ಅಷ್ಟೆ. ಏಕೆಂದರೆ ಸ್ವಾತಂತ್ರಪೂರ್ವದ ಚಳವಳಿಗಳನ್ನು ಸಮಾಜವಾದದ, ಸಮತಾವಾದದ ಹೋರಾಟ ಎಂದು ಪರಿಭಾವಿಸುವುದೇ ದೊಡ್ಡ ತಪ್ಪು. ಅದು ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟವಾಗಿತ್ತು. ವಿದೇಶಿಯರ ಆಡಳಿತದ ವಿರುದ್ಧ ದಂಗೆ ಏಳುವ ಜನತೆ ತಮ್ಮದೇ ಸರಕಾರದ ಸರ್ವಾಧಿಕಾರದ ವಿರುದ್ಧ ಬಂಡಾಯ ಹೂಡುತ್ತಾರೆ, ಪ್ರತಿಭಟಿಸುತ್ತಾರೆ ಎನ್ನುವುದು ಸಹಜವಾಗಿತ್ತು. ಆದರೆ ಇಂದು ಜನತೆ ವ್ಯವಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಂತೆ ವರ್ತಿಸುತ್ತಿದ್ದಾರೆ. ಹಿಂದಿನ ದಶಕಗಳಲ್ಲಿ ಸದಾ ಪ್ರಜ್ವಲಿಸುತ್ತಿದ್ದ ಪ್ರತಿರೋಧದ ಕಿಚ್ಚು ಈಗ ತಣ್ಣಗಾಗಿದೆ ಯಾಕೆ?

 ಏಕೆಂದರೆ ಸುಳ್ಳುಗಳಿಗೆ ಸತ್ಯವೇ ಪ್ರತಿಕ್ರಿಯೆ ಮತ್ತು ದ್ವೇಷಕ್ಕೆ ಒಳಗೊಳ್ಳುವಿಕೆ ಪ್ರತ್ಯುತ್ತರ ಎನ್ನುವ ಬದುಕಿನ ಸರಳ ಪಾಠಗಳನ್ನು ಮರೆತಂತಿರುವ ಭಾರತೀಯರು ಸುಳ್ಳು ಮತ್ತು ದ್ವೇಷವನ್ನು ಬಿತ್ತುವ ನಿರಂಕುಶ ಪ್ರಭುತ್ವವನ್ನೇ ಓಲೈಸುತ್ತಿದ್ದಾರೆ. ಇದು ಕೇವಲ ಮಾನಸಿಕ ಸ್ಥಿತಿಯಲ್ಲ, ಇದು ನಿರಂತರವಾಗಿ ಬೆಳೆಸಿಕೊಂಡು ಬಂದ ಗುಣಲಕ್ಷಣಗಳೂ ಹೌದು. ನಾವು ಇದನ್ನು ಅರಿಯಲು ಸೋತಿದ್ದೇವೆ. ಕಳೆದ ಅರವತ್ತು ವರ್ಷಗಳಲ್ಲಿ ಪ್ರತಿಯೊಂದು ಸಾರ್ವಜನಿಕ, ಖಾಸಗಿ ಸಂಸ್ಥೆಗಳು (ಶಿಕ್ಷಣ, ಆರೋಗ್ಯ, ಮಾಧ್ಯಮ, ಉದ್ಯಮ, ಪರಿಸರ, ಧಾರ್ಮಿಕ, ನ್ಯಾಯಂಗ, ಕಾರ್ಯಾಂಗ ಇತ್ಯಾದಿ) ವ್ಯವಸ್ಥೆಗಳಾಗಿ ಬದಲಾದವು. ಸಾರ್ವಜನಿಕ ಹಿತಾಸಕ್ತಿ ಕಣ್ಮರೆಯಾಗಿ ಸ್ವಹಿತಾಸಕ್ತಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಮೇಲುಗೈ ಸಾಧಿಸಿದವು ಮತ್ತು ಸಾಂಸ್ಥಿಕ ಸ್ವರೂಪ ಪಡೆದುಕೊಂಡವು. ನ್ಯಾಯಾಂಗ ಭ್ರಷ್ಟಗೊಂಡಾಗ, ಮಾಧ್ಯಮಗಳು ಸುಳ್ಳುಗಳನ್ನು ಬಿತ್ತರಿಸತೊಡಗಿದಾಗ ವ್ಯವಸ್ಥೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ಕಣ್ಮರೆಯಾಗುತ್ತದೆ. ಭ್ರಷ್ಟತೆಯ ಈ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಾ ಬಂದಿದೆ. ಪ್ರತಿ ಹಂತದಲ್ಲಿಯೂ ಈ ಬದಲಾವಣೆಗಳನ್ನು ಅದರ ಯಥಾಸ್ಥಿತಿಯಲ್ಲಿ ಒಪ್ಪಿಕೊಂಡಿದ್ದಾರೆ, ಅನೇಕ ಸಂದರ್ಭಗಳಲ್ಲಿ ಬೆಂಬಲಿಸಿದ್ದಾರೆ. ಈ ಕಾರಣಕ್ಕಾಗಿಯೆ ಬಹುಸಂಖ್ಯಾತ ಹಿಂದೂಗಳು ಪ್ರಜಾಪ್ರಭುತ್ವವನ್ನು ಅದರ ನಿಜದ ರೂಪದಲ್ಲಿ ಸ್ವೀಕರಿಸಿಲ್ಲ. ಈ ಕುರಿತು ಬಹುಶಃ ಗೊಂದಲಗಳೂ ಇದ್ದಂತಿಲ್ಲ. ಭಾರತ ಒಂದು ದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನುವ ಭ್ರಮೆ ಕಳಚಿ ಬೀಳುತ್ತಿದೆ. ಚಳವಳಿ, ಹೋರಾಟಗಳಿಗೆ ಮೇಲೆ ಕಂಡುಬಂದಂತಹ ಪ್ರಜಾಪ್ರಭುತ್ವ ವರ್ಸಸ್ ನಿರಂಕುಶ ಪ್ರಭುತ್ವದ ಜಿಜ್ಞಾಸೆ ಮತ್ತು ಸಂಕೀರ್ಣತೆಗಳನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ.

ಪ್ರಜಾಪ್ರಭುತ್ವದ ಅಡಿಪಾಯ ಶಿಥಿಲಗೊಳ್ಳುತ್ತಿರುವ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನಿರಂಕುಶ ಪ್ರಭುತ್ವ ಪ್ರವೇಶ ಪಡೆಯುತ್ತದೆ. ಇದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡಿರುತ್ತದೆ. 80 ವರ್ಷಗಳ ಕಾಲ ಪೂರ್ವ ತಯಾರಿ ಮಾಡಿಕೊಂಡಿದ್ದ ಆರೆಸ್ಸೆಸ್ ಈ ದಿನಗಳಿಗಾಗಿ ಕಾದು ಕುಳಿತಿತ್ತು. ಮೋದಿಯ ನಾಯಕತ್ವದಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಕಾರ್ಯಯೋಜನೆಗಳನ್ನು ರೂಪಿಸಲಾಯಿತು. ಇಟಲಿಯ ಸರ್ವಾಧಿಕಾರಿ ಮುಸ್ಸೋಲಿನಿ ಕೋಳಿಯ ಒಂದೊಂದೆ ಪುಕ್ಕವನ್ನು ಕೀಳುವ ವಿಧಾನದಂತೆ ಅಧಿಕಾರವನ್ನು ತನ್ನ ಬಳಿ ಕೇಂದ್ರೀಕರಿಸಿಕೊಂಡು ಕಬ್ಜಾ ಮಾಡಿಕೊಳ್ಳಲು ಬಯಸುತ್ತಿದ್ದ. 2014ರ ನಂತರ ಮೋದಿ ಅನುಸರಿಸಿದ್ದು ಕೋಳಿಯ ಪುಕ್ಕ ಕೀಳುವ ಇದೇ ಮಾದರಿಯನ್ನು. ಮೊದಲು ತನ್ನದೇ ಬಿಜೆಪಿಯ ಸ್ವಾತಂತ್ರ್ಯ, ಮಾಧ್ಯಮಗಳ ಸ್ವಾತಂತ್ರ್ಯ, ನಂತರ ಸಾರ್ವಜನಿಕ ಸಂಸ್ಥೆಗಳಾದ ಸಿಬಿಐ, ಆರ್‌ಟಿಐ, ಆದಾಯ ತೆರಿಗೆ ಇಲಾಖೆ, ಇತ್ಯಾದಿಗಳ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾತಂತ್ರ್ಯಗಳನ್ನು ಕಿತ್ತುಕೊಂಡು ಸಂಪೂರ್ಣ ಶಕ್ತಿಹೀನಗೊಳಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಇಲ್ಲಿನ ಬಹುಸಂಖ್ಯಾತರು ನಿರಂಕುಶ ಪ್ರಭುತ್ವದ ರಾಜ್ಯಭಾರಕ್ಕೆ ಬೆಂಬಲಿಸಲು ತುದಿಗಾಲಲ್ಲಿ ಕಾಯುತ್ತಿದ್ದರು. ಎಲ್ಲವೂ ಏಕಕಾಲಕ್ಕೆ ಸಂಭವಿಸಿದ್ದು ಮೋದಿ-ಆರೆಸ್ಸೆಸ್ ಜೋಡಿಗೆ ಮುಂದಿನ ಹಾದಿ ಸುಲಭವಾಗಿದ್ದು ಇಂದಿನ ವರ್ತಮಾನ. ರಾಜಕಾರಣ ಅನೇಕ ಸಂಭವನೀಯತೆಗಳ ಕಲೆ ಎಂಬುದೂ ಸಹ ಇಂದಿನ ವಿದ್ಯಮಾನ

ಆದರೆ ಮಹಾದುರಂತಗಳ ವರ್ತಮಾನಕ್ಕೆ ಸಾಕ್ಷಿಯಾಗಿದ್ದೇವೆ ಮಾತ್ರವಲ್ಲ ಕಾರಣಕರ್ತರೂ ಆಗಿದ್ದೇವೆ ಎಂಬುದು ಬಹುಸಂಖ್ಯಾತ ಭಾರತೀಯರಿಗೆ ಮನಗಾಣಿಸುವ ಸವಾಲು ಇಲ್ಲಿನ ಪ್ರಜ್ಞಾವಂತರ ಮೇಲಿದೆ. ನಂತರವಷ್ಟೇ ಈ ನಿರಂಕುಶ ಪ್ರಭುತ್ವದೊಂದಿಗೆ ಮುಖಾಮುಖಿಯಾಗುವ ನೆಲೆಗಳ, ಹಾದಿಗಳ ಹುಡುಕಾಟವನ್ನು ಪುನರೂಪಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)