varthabharthi


ರಾಷ್ಟ್ರೀಯ

ಅತ್ಯಾಚಾರ ಆರೋಪಿ ಬಿಜೆಪಿ ಶಾಸಕನ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ವಾರ್ತಾ ಭಾರತಿ : 14 Aug, 2019

ಹೊಸದಿಲ್ಲಿ:  ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಸಂತ್ರಸ್ತೆ ಬಾಲಕಿಯ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಕೊಲೆಗೆ ಸಂಚು ರೂಪಿಸಿದ ಸಂಬಂಧ ಕೊಲೆ ಪ್ರಕರಣವನ್ನು ಹೆಚ್ಚುವರಿಯಾಗಿ ದಾಖಲಿಸಲಾಗಿದೆ.

ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು ಎರಡೂ ಪ್ರಕರಣಗಳನ್ನು ಜತೆಗೂಡಿಸಿದ್ದು, ಒಂದು ಪ್ರಕರಣದಲ್ಲಿ ಸಂತ್ರಸ್ತೆಯ ತಂದೆಯನ್ನು ಕೊಲೆ ಮಾಡಿದ ಆರೋಪ ಹೊರಿಸಿದ್ದರೆ ಇನ್ನೊಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಬಗ್ಗೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ ಆರೋಪವಿದೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 302 (ಕೊಲೆ), 506 (ಅಪರಾಧ ಉದ್ದೇಶ), 341 (ಅಕ್ರಮವಾಗಿ ಕೂಡಿ ಹಾಕಿದ್ದು) 120ಬಿ (ಅಪರಾಧ ಪಿತೂರಿ) ಮತ್ತು 193 (ಸುಳ್ಳು ಪುರಾವೆ) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಅನ್ವಯ ಸೆಂಗಾರ್ ಹಾಗೂ ಇತರ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಏತನ್ಮಧ್ಯೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಮಖಿ ಠಾಣೆಯ ಮೂವರು ಪೊಲೀಸ್ ಅಧಿಕಾರಿಗಳಾದ ಅಶೋಕ್ ಸಿಂಗ್ ಬಡೂರಿಯಾ, ಕುಮತಾ ಪ್ರಸಾದ್ ಹಾಗೂ ಅಮೀರ್ ಖಾನ್ ಅವರ ಜಾಮೀನು ಅರ್ಜಿಗಳನ್ನು ರದ್ದುಪಡಿಸಿದ ನ್ಯಾಯಾಲಯ, ಅವರ ವಿರುದ್ಧ ಕೊಲೆ ಆರೋಪ ಹೊರಿಸಿ ನ್ಯಾಯಾಂಗ ಬಂಧನ ವಿಧಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)