varthabharthi

ರಾಷ್ಟ್ರೀಯ

"ನನ್ನದೇನು ಷರತ್ತು ಇಲ್ಲ, ಕಾಶ್ಮೀರಕ್ಕೆ ಯಾವಾಗ ಬರಲಿ?": ರಾಜ್ಯಪಾಲರಿಗೆ ರಾಹುಲ್ ಪ್ರಶ್ನೆ

ವಾರ್ತಾ ಭಾರತಿ : 14 Aug, 2019

ಹೊಸದಿಲ್ಲಿ, ಆ.14: ನನ್ನದೇನು ಷರತ್ತು ಇಲ್ಲ. ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಎಂಬ ನಿಮ್ಮ ಮನವಿಯನ್ನು ನಾನು ಸ್ವೀಕರಿಸಿದ್ದೇನೆ. ಕಾಶ್ಮೀರಕ್ಕೆ ಯಾವಾಗ ಬರಲಿ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಲ್ಲಿ ಕೇಳಿದ್ದಾರೆ.

ಕಾಶ್ಮೀರಕ್ಕೆ ಭೇಟಿ ನೀಡಲು ರಾಹುಲ್ ಗಾಂಧಿ ಷರತ್ತು ಹಾಕುತ್ತಿದ್ದಾರೆ. ಅಲ್ಲದೆ ವಿರೋಧಪಕ್ಷದ ನಾಯಕರ ನಿಯೋಗ ಕರೆತಂದು ಕಾಶ್ಮೀರದಲ್ಲಿ ಅನಿಶ್ಚಿತತೆ ಉಂಟುಮಾಡಲು ಯತ್ನಿಸುತ್ತಿದ್ದಾರೆ ಎಂದು ನಿನ್ನೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, "ನನ್ನದೇನು ಷರತ್ತು ಇಲ್ಲ, ಕಾಶ್ಮೀರಕ್ಕೆ ಯಾವಾಗ ಬರಲಿ" ಎಂದು ಪ್ರಶ್ನಿಸಿದ್ದಾರೆ.

ಕಾಶ್ಮೀರದ ಈಗಿನ ಪರಿಸ್ಥಿತಿಯನ್ನು ಅರಿಯಲು ರಾಹುಲ್ ಗಾಂಧಿ ಕಾಶ್ಮೀರಕ್ಕೆ ಬರುವುದಿದ್ದರೆ  ನಾನು ಅವರಿಗೆ  ವಿಮಾನದ ವ್ಯವಸ್ಥೆ ಮಾಡುತ್ತೇನೆ ಎಂದು ಈ ಮೊದಲು ರಾಜ್ಯಪಾಲರು ಹೇಳಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಉತ್ತರಿಸಿದ್ದ ರಾಹುಲ್ ಗಾಂಧಿ ನನಗೆ ವಿಮಾನ ಬೇಡ. ಆದರೆ ಜನರನ್ನು,ಮುಖ್ಯವಾಹಿನಿಯಲ್ಲಿರುವ ನಾಯಕರನ್ನು ಮತ್ತು ಸೈನಿಕರನ್ನು ಭೇಟಿಯಾಗುವುದಕ್ಕೆ ರಾಜ್ಯದಲ್ಲಿ ಮುಕ್ತವಾಗಿ ಸಂಚರಿಸಲು ಅವಕಾಶ ನೀಡುವಂತೆ ವಿನಂತಿಸಿದ್ದರು.

ರಾಹುಲ್ ಗಾಂಧಿ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ರಾಜ್ಯಪಾಲ ಮಲಿಕ್ ಅವರು ರಾಹುಲ್ ಗಾಂಧಿ ಅವರು ಬಂಧನದಲ್ಲಿರುವ ನಾಯಕರನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ಹೇಳುತ್ತಾ ಅಶಾಂತಿಯ ವಾತಾವರಣ ಸೃಷ್ಠಿಸುತ್ತಿದ್ದಾರೆ. ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಇಲ್ಲಿಗೆ ಆಗಮಿಸಿ ಪರಿಸ್ಥಿತಿಯನ್ನು ನೋಡಬೇಕೆಂದಿದ್ದರೆ ನಾನು ವಿಶೇಷ ವಿಮಾನ ಕಳಿಹಿಸುತ್ತೇನೆ ಎಂದು ಸವಾಲು ಹಾಕಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)