varthabharthi

ರಾಷ್ಟ್ರೀಯ

ಹಲ್ಲೆ, ಬೆದರಿಕೆ ಆರೋಪ: ಪ್ರಿಯಾಂಕ ಗಾಂಧಿ ಆಪ್ತ ಕಾರ್ಯದರ್ಶಿ ವಿರುದ್ಧ ಪತ್ರಕರ್ತನ ದೂರು

ವಾರ್ತಾ ಭಾರತಿ : 14 Aug, 2019

ಸೋನಭದ್ರ: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರ ಆಪ್ತ ಕಾರ್ಯದರ್ಶಿ ಸಂದೀಪ್ ಸಿಂಗ್ ಎಂಬವರು ತಮಗೆ ಬೆದರಿಕೆಯೊಡ್ಡಿ ಹಲ್ಲೆ  ನಡೆಸಿದ್ದಾರೆಂದು ಆರೋಪಿಸಿ ವಾರಣಾಸಿ ನಿವಾಸಿ ಪತ್ರಕರ್ತ ನಿತೀಶ್ ಕುಮಾರ್ ಪಾಂಡೆ ಪೊಲೀಸ್ ದೂರು ನೀಡಿದ್ದಾರೆ.

ಮಂಗಳವಾರ ಉಂಭಾ ಗ್ರಾಮಕ್ಕೆ ಪ್ರಿಯಾಂಕ ಭೇಟಿ ನೀಡಿದಾಗ ವರದಿ ಮಾಡಲು ತಾನು ಅಲ್ಲಿಗೆ ತೆರಳಿದ್ದ ಸಂದರ್ಭ ಸಂದೀಪ್ ಸಿಂಗ್ ತಮ್ಮ ಕ್ಯಾಮರಾ ಕೂಡ ಮುಟ್ಟಿದ್ದರೆಂದು ಪಾಂಡೆ ತಮ್ಮ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ. ಪತ್ರಕರ್ತನ ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಘೊರಾವಲ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪತ್ರಕರ್ತನ ಜತೆ ಪ್ರಿಯಾಂಕ ಗಾಂಧಿ ಅವರ ಸಹಾಯಕ ಅನುಚಿತವಾಗಿ ವರ್ತಿಸುತ್ತಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪತ್ರಕರ್ತ ಪ್ರಿಯಾಂಕ ಅವರಲ್ಲಿ 370ನೇ ವಿಧಿ ರದ್ದತಿ ಕುರಿತಂತೆ ಪ್ರಶ್ನಿಸಿದಾಗ ಆಕೆಯ ಸಹಾಯಕ ಪತ್ರಕರ್ತನ್ನು ಹಿಂದಕ್ಕೆ ದೂಡಿದಾಗ ವಾಗ್ವಾದ ಆರಂಭವಾಗಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.  ಪ್ರಿಯಾಂಕ ಅವರ ಆಪ್ತ ಕಾರ್ಯದರ್ಶಿ ಪತ್ರಕರ್ತನನ್ನು ಬಿಜೆಪಿ ಪರ ಎಂದು ಆರೋಪಿಸಿ ಹಣ ಪಡೆದು ಕೇಸರಿ ಪಕ್ಷದ ಅಣತಿಯಂತೆ ಪ್ರಶ್ನೆ ಕೇಳುತ್ತಿದ್ದಾರೆಂದೂ ದೂರುವುದು ಕೇಳಿಸುತ್ತದೆ.

ಈ ವೀಡಿಯೋವನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಮೃತ್ಯುಂಜಯ್ ಕುಮಾರ್ "ಪ್ರಿಯಾಂಕ ಗಾಂಧೀಜಿ, ಬಡವರ ಕಣ್ಣೀರೊರೆಸುವ ನಾಟಕವನ್ನು ದಯವಿಟ್ಟು ನಿಲ್ಲಿಸಿ,'' ಎಂದು  ಬರೆದಿದ್ದಾರೆ.

ಕಳೆದ ತಿಂಗಳು ಭೂವಿವಾದದ ಹಿನ್ನೆಲೆಯಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯಲ್ಪಟ್ಟ ಹತ್ತು ಮಂದಿ ಆದಿವಾಸಿಗಳ ಕುಟುಂಬಗಳನ್ನು ಭೇಟಿಯಾಗಲು ಪ್ರಿಯಾಂಕ ತೆರಳಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)