varthabharthi

ವಿಶೇಷ-ವರದಿಗಳು

ಆರ್ಥಿಕ, ಮಾನಸಿಕವಾಗಿ ಕುಗ್ಗಿಸಿದ ಪ್ರವಾಹ: ಸಂತ್ರಸ್ತರ ಸಂಕಟ!

ಬಂಟ್ವಾಳ: ಜನತೆಗೆ ಬರೆ ಎಳೆದ ನೆರೆ

ವಾರ್ತಾ ಭಾರತಿ : 14 Aug, 2019
ಅಬ್ದುಲ್ ರಹಿಮಾನ್ ತಲಪಾಡಿ

ನೆರೆ ಬರುವುದಕ್ಕಿಂತ ಮುಂಚಿತವಾಗಿಯೇ ಸಾಧ್ಯವಾದಷ್ಟು ಮನೆಯಲ್ಲಿದ್ದ ಸಾಮಗ್ರಿಗಳನ್ನು ಕಟ್ಟಿ ಸುರಕ್ಷಿತ ಸ್ಥಳಗಳಲ್ಲಿ ಇಟ್ಟಿದ್ದೇವೆ. ನೆರೆಯಿಂದ ಮನೆ ಮುಳುಗಡೆಯಾಗಿ ಹೆಂಚು ಮಾತ್ರ ಕಾಣುತ್ತಿತ್ತು. ನಾಳೆ ಹಬ್ಬ ಬೇರೆ ಇದೆ. ನೆರೆ ಇಳಿದ ಬಳಿಕ ಏನಾಗಿದೆಂಬುವುದನ್ನು ನೋಡಬೇಕು.-ಬಂಟ್ವಾಳ ಐಬಿ, ಪರಿಹಾರ ಕೇಂದ್ರದಲ್ಲಿದ್ದ ಸಂತ್ರಸ್ತೆ

ಆ. 11: ಸುಮಾರು 4 ದಶಕಗಳ ಬಳಿಕ ಬಂಟ್ವಾಳಕ್ಕೆ ಈ ತರಹದ ಪ್ರವಾಹ ಬಂದು ಜನರ ಜೀವನ ಅಕ್ಷರಶಃ ನರಕವಾಗಿದೆ. ಸತತ 7 ದಿನಗಳಿಂದ ಬಂದ ಮಳೆಯಿಂದ ನೆನೆದ ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಮನೆಯಲ್ಲಿನ ಸಾಮಗ್ರಿ-ಸರಂಜಾಮುಗಳು ಹಾಳಾಗಿವೆ. ದಿನಬಳಕೆಯ ವಸ್ತುಗಳು ತೇಲಿ ಹೋಗಿವೆ. ನೇತ್ರಾವತಿ ಹಾಗೂ ಕುಮಾರಧಾರಾ ನದಿಯು ನೆರೆಯ ಮೂಲಕ ಅವಳಿ ತಾಲೂಕಿನ ಜನರ ಬದುಕಿಗೆ ಬರೆ ಎಳೆದಿದೆ. ಪಶ್ಚಿಮಘಟ್ಟ, ಜಲನಯನ ಪ್ರದೇಶ ಹಾಗೂ ಕರಾವಳಿಯಾದ್ಯಂತ ಭಾರೀ ಮಳೆಯಾಗಿದ್ದು, ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಪ್ರವಾಹಕ್ಕೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು, ಆಲಡ್ಕ, ತಲಪಾಡಿ, ಬೋಗೋಡಿ, ನಂದರಬೆಟ್ಟು, ನಾವೂರು, ಸಜೀಪನಡು, ನಂದಾವರ, ಅಜಿಲಮೊಗರು, ಬರಿಮಾರು, ಜೈನರ ಪೇಟೆ, ಸುಣ್ಣದ ಗೂಡು ಸಹಿತ 300ಕ್ಕೂ ಹೆಚ್ಚು ಮನೆಗಳು ರಾತ್ರೋ ರಾತ್ರಿ ಜಲಾವೃತಗೊಂಡ ಪರಿಣಾಮ ಜನರು ಅಕ್ಷರಶಃ ಕಂಗಾಲಾಗಿದ್ದಾರೆ.

ಮನೆಗಳತ್ತ ಧಾವಿಸಿದ ಸಂತ್ರಸ್ತರು: ಮಳೆಯಿಂದಾಗಿ ಬಂಟ್ವಾಳ ಪೇಟೆಯ ಚಟುವಟಿಕೆ ಸ್ತಬ್ಧಗೊಂಡಿದ್ದರೆ, ಸುಮಾರು 1 ಸಾವಿರಕ್ಕಿಂತಲೂ ಅಧಿಕ ಜನರು ಬಾಧಿತರಾಗಿದ್ದಾರೆ. 600 ಮಂದಿಯನ್ನು ರಕ್ಷಿಸಲಾಗಿದೆ. ಇದೀಗ ಮಳೆ ಹಾಗೂ ಪ್ರವಾಹ ಕಡಿಮೆಯಾಗಿ ತಾಲೂಕು ಸಹಜ ಸ್ಥಿತಿಯತ್ತ ಮರಳುತ್ತಿದೆ. ವಿವಿಧ ಪರಿಹಾರ ಕೇಂದ್ರಗಳಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿದ್ದ ಸಂತ್ರಸ್ತರು ತಂಡೋಪತಂಡವಾಗಿ ತಮ್ಮ, ತಮ್ಮ ಮನೆಗಳತ್ತ ಧಾವಿಸುತ್ತಿದ್ದಾರೆ.

ಮನೆಯಲ್ಲಿನ ಟೈಲ್ಸ್‌ಗಳೆಲ್ಲ ಕಪ್ಪಾಗಿವೆ. ಮನೆಯ ತುಂಬೆಲ್ಲ ಗಲೀಜು, ರಾಡಿ ತುಂಬಿಕೊಂಡಿದೆ. ಮನೆಯಲ್ಲಿನ ವಸ್ತುಗಳನ್ನೆಲ್ಲ ಹೊರಗೆ ಹಾಕಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ಸಾವಿರಾರು ಎಕರೆ ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ನದಿಪಾತ್ರದಲ್ಲಿರುವ ಕುಟುಂಬಗಳು ಆಶ್ರಯ ಕೇಂದ್ರಗಳಲ್ಲಿಯೇ ತಂಗಿದ್ದು. ಊಟ-ಉಪಾಹಾರ ಹಾಗೂ ವೈದ್ಯಕೀಯ ಸೇವೆ ಅಲ್ಲಿ ಕಲ್ಪಿಸಲಾಗಿದೆ.

1974ರ ಪ್ರವಾಹದ ಬಳಿಕ ಸಾಕಷ್ಟು ಬಾರಿ ಪ್ರವಾಹ ಬಂದಿತ್ತಾದರೂ, 1983ರಲ್ಲಿ ಬಂದಿದ್ದ ಪ್ರವಾಹ ಇದೇ ರೀತಿಯಾಗಿ ಬಂದಿರುವ ಬಗ್ಗೆ ಹಿರಿಯರು ಮಾಹಿತಿ ನೀಡಿದ್ದಾರೆ. ಆಗ ಬಂಟ್ವಾಳ ನಗರ ದ್ವೀಪವಾಗಿ ಕಾಣಿಸಿಕೊಂಡಿತ್ತು. ಆ ಬಳಿಕ ಆಗಿನ ದಾಖಲೆಯನ್ನು ಮೀರಿ 11.7 ಮೀ.ನಷ್ಟು ಪ್ರಮಾಣದಲ್ಲಿ ನೇತ್ರಾವತಿ ಉಕ್ಕಿ ಹರಿದಿದ್ದು, ಮತ್ತೊಮ್ಮೆ ಪ್ರವಾಹದಿಂದ ಬಂಟ್ವಾಳ ದ್ವೀಪವಾಗಿದೆ.

ಸಂತ್ರಸ್ತರ ಸಂಕಟ: ಪ್ರವಾಹದ ಸೆಳೆತಕ್ಕೆ ಬೆಲೆಬಾಳುವ ವಸ್ತುಗಳು, ಕೃಷಿ, ತೋಟಗಳು ನೀರುಪಾಗಿದೆ. ಗಾಳಿ, ಮಳೆ, ಪ್ರವಾಹದ ಹಿನ್ನ್ನೆಲೆಯಲ್ಲಿ ಬಂಟ್ವಾಳದ ಕೆಲವೆಡೆ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ ಹಾಗೂ ಕೆಲವು ಟ್ರಾನ್ಸ್‌ಫಾರ್ಮರ್‌ಗಳು ಮುಳುಗಡೆಯಾಗಿತ್ತು. ರವಿವಾರ ಬೆಳಗ್ಗೆ ಪ್ರವಾಹ ತಗ್ಗಿದ ನಂತರ ತಮ್ಮ ತಮ್ಮ ಮನೆಗಳಿಗೆ ವಾಪಸಾಗುತ್ತಿರುವ ಸಂತ್ರಸ್ತರು ಪ್ರವಾಹಕ್ಕೆ ಯಾವ ವಸ್ತುಗಳು ಕಾಣೆಯಾಗಿವೆ. ಯಾವ ವಸ್ತುಗಳು ಉಳಿದುಕೊಂಡಿವೆ ಎಂಬುದನ್ನು ಪರಿಶೀಲಿಸುತ್ತ ಕಣ್ಣೀರು ಹಾಕುತ್ತಿದ್ದಾರೆ. ಕೊಳಚೆ, ಮುಳ್ಳು-ಕಂಟಿಗಳನ್ನು ಹೊರಗೆ ಹಾಕಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರವಾಹ ನಮ್ಮನ್ನು ಆರ್ಥಿಕವಾಗಿ, ಮಾನಸಿಕವಾಗಿ ಕುಗ್ಗಿಸಿದೆ ಎಂದು ಸಂಕಟ ಪಡುತ್ತಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ಗಳು, ಸೈಕಲ್‌ಗಳು, ಬೀಜ-ರಸಗೊಬ್ಬರ, ಕಟ್ಟಿಗೆಗಳು, ಹೋಟೆಲ್ ಸಾಮಗ್ರಿಗಳು ನೀರಿನಲ್ಲಿ ಮುಳುಗಿದೆ. ನೀರಿನ ಸೆಳೆತಕ್ಕೆ ಸಿಲುಕಿದ ಅವಶೇಷಗಳು ಒಳ ರಸ್ತೆಗಳಲ್ಲಿ ಬಿದ್ದಿದ್ದು, ಗಬ್ಬೆದ್ದು ನಾರುತ್ತಿದೆ.

ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿದ ತಾಲೂಕಾಡಳಿತ, ಸಂಘ-ಸಂಸ್ಥೆಗಳು

ಕಳೆದ ಏಳು ದಿನಗಳಿಂದ ಹಗಲೂ ರಾತ್ರಿ ತಾಲೂಕಾಡಳಿತ, ತಹಶೀಲ್ದಾರ್ ರಶ್ಮಿ ಎಸ್. ಆರ್. ನೇತೃತ್ವದಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರವಾಹದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಳೆಯಿಂದ ಸಂಭಾವ್ಯ ಅನಾಹುತಗಳಾಗುವ ಸ್ಥಳಗಳನ್ನು ಗುರುತಿಸಿ ಅವರಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಮಳೆ ತೀವ್ರಗೊಂಡ ಸಂದರ್ಭ ಖುದ್ದು ತಹಶೀಲ್ದಾರ್ ಹಗಲು, ರಾತ್ರಿ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಸುರಕ್ಷತೆಯ ಕುರಿತು ಕಾಳಜಿ ವಹಿಸಿದ್ದರು. ತಹಶೀಲ್ದಾರ್ ಜತೆಗೆ ರಶ್ಮಿ ಜತೆಗೆ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಹಾಗೂ ಸಿಬ್ಬಂದಿ ಆಶ್ರಯಕೇಂದ್ರಗಳ ಉಸ್ತುವಾರಿಯನ್ನೂ ನೋಡಿಕೊಂಡಿದ್ದರು. ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮತ್ತು ಸಹಾಯಕ ಕಮಿಷನರ್ ರವಿಚಂದ್ರ ನಾಯಕ್, ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಂಡರು. ಶಾಸಕ ರಾಜೇಶ್ ನಾಯ್ಕೆ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಂತ್ರಸ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಸುರಿಯುವ ಮಳೆಗೂ ಎನ್‌ಡಿಆರ್‌ಎಫ್‌ನ 13 ಮಂದಿಯ ಒಂದು ತಂಡ, ಕೋಸ್ಟ್ ಗಾರ್ಡ್‌ನ ಒಂದು ತಂಡ, ಹೋಂ ಗಾರ್ಡ್‌ನ ಒಂದು ತಂಡ, ಅಗ್ನಿಶಾಮಕ ದಳ ಜಾತಿಭೇದ ಮರೆತು ವಿವಿಧ ಸಂಘಗಳು ನಡೆಸಿದ ಪರಿಹಾರ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)