varthabharthi

ಅನುಗಾಲ

ಬಹುತ್ವ ಭಾರತದಲ್ಲಿ ಸ್ವಾತಂತ್ರ್ಯ

ವಾರ್ತಾ ಭಾರತಿ : 15 Aug, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

 ಸ್ವಾತಂತ್ರ್ಯವೆಂದರೆ ಬದುಕುವ ಮತ್ತು ಬದುಕಗೊಡುವ ಮಾನವೀಯತೆ. ಪ್ರೀತಿ ಮತ್ತು ಸೌಜನ್ಯದಿಂದಲೇ ಸಮಾಜವನ್ನು ಉಳಿಸುವ ಪುಣ್ಯ ಕಾಯಕ. ಸ್ವಾತಂತ್ರ್ಯದ ಸಂದರ್ಭವೆಂದರೆ ಸ್ವಾತಂತ್ರ್ಯದ ನೆಲೆ-ಬೆಲೆಗಳನ್ನು ನಿರ್ಧರಿಸಲು ಇರುವ ಘಳಿಗೆ. ದೇಶಕ್ಕೆ, ಸಮಾಜಕ್ಕೆ, ಮನುಷ್ಯ, ಪಶು-ಪಕ್ಷಿಗಳಿಗೆ, ಸಸ್ಯಸಂಕುಲಗಳಿಗೆ ಹಾಗೂ ನಾವಳಿದರೂ ಈ ಭೂಮಿಯಲ್ಲಿ ಮುಂದುವರಿಯುವ ಎಲ್ಲ ತಳಿಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಷ್ಟೇ ಉಳಿದಿದೆ.


ಈ ಬಾರಿಯ ಸ್ವಾತಂತ್ರ್ಯ ವಿಶಿಷ್ಟವಾದದ್ದು. ರಾಜಕೀಯ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳ ಆನಂತರ ನಮಗೆಷ್ಟು ನಾಗರಿಕ ಸ್ವಾತಂತ್ರ್ಯವಿದೆಯೆಂದು ಗೊತ್ತಾಗಬೇಕಾದರೆ ಜಮ್ಮು ಮತ್ತು ಕಾಶ್ಮೀರದ ಪ್ರಸಕ್ತ ಸ್ಥಿತಿಗಿಂತ ಒಳ್ಳೆಯ ಉದಾಹರಣೆ ಸಿಗದು. ಈ ಬಾರಿ ಕೇಂದ್ರ ಸರಕಾರವು ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ಅಮಾನತ್ತುಪಡಿಸಲು ನಡೆಸಿದ ವಿದ್ಯಮಾನದಲ್ಲಿ ಸಂವಿಧಾನದ ಶೀತಲ ಹತ್ಯೆಯಾಯಿತು. ಯಾವುದು ದೇಶಾದ್ಯಂತ ಮತ್ತು ಸಂಸತ್ತಿನ ಎರಡೂ ಸದನಗಳಲ್ಲೂ ರಾಜ್ಯಗಳ ಶಾಸನಸಭೆ/ಪರಿಷತ್ತುಗಳಲ್ಲೂ ಚರ್ಚೆಯಾಗಬೇಕಾಗಿತ್ತೋ ಅಂತಹ ಒಂದು ಮಸೂದೆಯು ಘನೋದ್ದೇಶದ ಹೆಸರಿನಲ್ಲಿ ತಣ್ಣಗೆ ಅಂಗೀಕೃತವಾಯಿತು. ಸಂವಿಧಾನದ ವಿಧಿಗಳು ಇಷ್ಟು ಸರಳವಾಗಿ ನಿರಸನಗೊಂಡದ್ದು ಇದೇ ಮೊದಲು. ಈ ನಿರ್ಣಯವನ್ನು ರಾಜಕೀಯವಾಗಿ ಮತ್ತು ಭಾವನಾತ್ಮಕವಾಗಿ ಬೆಂಬಲಿಸಿದವರೇ ಹೆಚ್ಚು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯವನ್ನು ಕಾನೂನಿನ ಮಿತಿಯೊಳಗೆ ಬಹಿರಂಗವಾಗಿ ಹೇಳಲು ಮೂಲಭೂತಹಕ್ಕಿದೆಯೆಂಬುದನ್ನೇ ನಮ್ಮ ಬಹುತೇಕ ಪ್ರಜೆಗಳು- ವಿದ್ಯಾವಂತರೂ ಬುದ್ಧಿವಂತರೂ ಸೇರಿದಂತೆ- ಮರೆತಿದ್ದಾರೆ. ರಾಜಧರ್ಮಕ್ಕಿಂತ ಮತಧರ್ಮವೇ ಇಂದು ದೇಶವನ್ನಾಳುತ್ತಿದೆ. ಅಯೋಧ್ಯೆ, ಕಾಶ್ಮೀರ, ಶಬರಿಮಲೆ, ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಅಳೆಯಲಾಗುತ್ತಿದೆ. ವೈಚಾರಿಕವಾಗಿ ಶೋಧಿಸಿದವರನ್ನು ದೇಶದ್ರೋಹಿಗಳೆಂಬ ಹಣೆಪಟ್ಟಿ ಹಚ್ಚಿ ಅಲಕ್ಷಿಸಲಾಗುತ್ತಿದೆ. ದೇಶದ 125 ಕೋಟಿ ಜನರು ಒಕ್ಕೊರಲಿನಿಂದ ಬೆಂಬಲಿಸಿದರೆಂಬ ಅಧಿಕೃತ ಪ್ರಚಾರ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಕಾಂಗ್ರೆಸ್-ಅದರಲ್ಲೂ ನೆಹರೂ- ಮಾಡಿದ ಅನ್ಯಾಯವನ್ನು ತಾವು ಸರಿಪಡಿಸುತ್ತಿದ್ದೇವೆಂದು ಕೇಂದ್ರದ ಮೋದಿ-ಶಾ ಸರಕಾರ ಹೇಳಿಕೊಳ್ಳುತ್ತಿದೆ. ಇದನ್ನು ಪ್ರತಿಭಟಿಸುವ ಸಂಘಟಿತ ಹೋರಾಟದ ಮುತ್ಸದ್ಧಿತನ ಪ್ರತಿಪಕ್ಷಗಳಲ್ಲಿಲ್ಲ. ಅವೇನಿದ್ದರೂ ಅಧಿಕಾರವನ್ನು ಹೇಗೆ ಪಡೆಯಬಹುದೆಂಬ ಚಿಲ್ಲರೆ ಲೆಕ್ಕಾಚಾರದಲ್ಲೇ ಕೊಳೆಯುತ್ತಿವೆ.
  
ಪ್ರಕೃತಿದತ್ತವಾಗಿಯೇ ಕಾಶ್ಮೀರ ತಣ್ಣಗಿರುವ ನೆಲ-ನೆಲೆ. ಅದೀಗ ಹೆಪ್ಪುಗಟ್ಟಿದೆ. ಸ್ತಬ್ಧವಾಗಿದೆ. ಕಾಶ್ಮೀರದಲ್ಲಿ ಏನು ನಡೆಯುತ್ತಿದೆಯೆಂಬುದು ಹೊರ ಜಗತ್ತಿಗೆ ಗೊತ್ತಾಗದಂತೆ ಸೇನೆ-ಅರೆಸೇನಾಪಡೆಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಶಾಲೆ-ಕಾಲೇಜುಗಳನ್ನು ಮುಚ್ಚಿದ್ದು ಮಾತ್ರವಲ್ಲ, ಅಲ್ಲಿ ಧಾರ್ಮಿಕ ಮತ್ತಿತರ ಕಾರಣಗಳಿಗಾಗಿ ಪ್ರವಾಸ ಬಂದವರನ್ನು ಹೊರಕ್ಕೆ ಕಳಿಸಲಾಗಿದೆ. ಅಂತರ್ಜಾಲ (ಇಂಟರ್‌ನೆಟ್) ಮತ್ತು ಮೊಬೈಲ್ (ಸರಕಾರಿ ಸಂಪರ್ಕ ಜಾಲ ಸಂಸ್ಥೆ ಬಿಎಸ್‌ಎನ್‌ಎಲ್‌ನ ಸ್ಥಿರ ದೂರವಾಣಿಗಳು ಸಮರ್ಪಕವಾಗಿ ಕೆಲಸಮಾಡುವುದು ನಿಲ್ಲಿಸಿ ಬಹಳ ಕಾಲ ಕಳೆದಿದೆ!) ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಈ ಮಾಜಿ ಮುಖ್ಯ ಮಂತ್ರಿಗಳ ಸಹಿತ ನೂರಾರು ರಾಜಕೀಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. (ಈ ಮೂವರೂ ಭಾರತೀಯ ಜನತಾ ಪಕ್ಷದೊಂದಿಗೆ ವಿವಿಧ ಸಂದರ್ಭಗಳಲ್ಲಿ ಅಧಿಕಾರ ಅನುಭವಿಸಿದವರು ಇಲ್ಲವೇ ಹಂಚಿಕೊಂಡವರು!) ಕೆಲವರನ್ನು ಗೃಹ ಬಂಧನದಲ್ಲಿಟ್ಟರೆ ಉಳಿದವರನ್ನು ರಾಜ್ಯದ (ಈಗ ಕೇಂದ್ರಾಡಳಿತ ಪ್ರದೇಶದ) ಎಲ್ಲ ಜೈಲುಗಳಿಗೆ ತಳ್ಳಲಾಗಿದೆ. ಸ್ಥಳೀಯ ಜೈಲುಗಳಲ್ಲಿ ಜಾಗ ಸಾಲದೆ ರಾಜಸ್ಥಾನವೇ ಮುಂತಾದ ನೆರೆ ರಾಜ್ಯಗಳ ಜೈಲುಗಳಿಗೂ ಕಳಿಸಲಾಗಿದೆ. ಕೇಂದ್ರದ ಈ ಶಾಸನವನ್ನು ಪ್ರತಿಭಟಿಸಿದ ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷರೂ ಈ ಬಂಧಿತರಲ್ಲಿ ಒಬ್ಬರು! ಕಾಶ್ಮೀರ ಕೊಳ್ಳದಲ್ಲಿ ಈಗ ಕರ್ಫ್ಯೂ ಇಲ್ಲವೇ ನಿಷೇಧಾಜ್ಞೆ. ಎಲ್ಲ ಅಂಗಡಿ ಮುಂಗಟ್ಟುಗಳು ಬಂದಾಗಿವೆ. ಜನರಿಗೆ ಕನಿಷ್ಠ ಅಗತ್ಯಗಳನ್ನು ಪೂರೈಸುವ ಸವಲತ್ತೂ ಇಲ್ಲವಾಗಿದೆ. ಈದ್‌ನಂತಹ ಸಂಭ್ರಮದ ಆಚರಣೆಯೂ ನೇತಾಡುವ ಕತ್ತಿಯ ಅಡಿಯಲ್ಲೇ ನಿಶ್ಶಬ್ದವಾಗಿ ನಡೆದಿದೆ. ಜ್ವಾಲಾಮುಖಿಯ ಮೊದಲಿನ ಮೌನ ವ್ಯಾಪಿಸಿದೆ.

ಇಷ್ಟಾದರೂ ಕೇಂದ್ರ ಸರಕಾರವು ಎಲ್ಲವೂ ಸರಿಯಿದೆ; ಶಾಂತಿಯುತವಾಗಿದೆ; ವ್ಯವಸ್ಥಿತವಾಗಿದೆ; ಎಂದೇ ಹೇಳಿಕೊಳ್ಳುತ್ತಿದೆ. ಸರಕಾರಿ ಪ್ರಣೀತ ಸಡಗರಗಳನ್ನು ಪ್ರಸಾರಿಸಲಾಗುತ್ತಿದೆ. ನಮ್ಮ ವಂದಿಮಾಗಧ ಮಾಧ್ಯಮಗಳು ಸರಕಾರದ ಪೀಕದಾನಿಯಂತೆ ಅವರೇನು ಉಗುಳಿದರೋ ಅದನ್ನು ಎಲ್ಲೆಡೆ ಎರಚುತ್ತಿದ್ದಾರೆ. ಮಕರಂದವನ್ನು ಹೀರಿ ಜೇನನ್ನು ಸಂಪಾದಿಸಬೇಕಾದ ಜೇನ್ನೊಣಗಳು ಅಳಿದು ಎಲ್ಲೆಂದರಲ್ಲಿ ಕುಳಿತು ಅದರ ಸುವಾಸನೆ/ದುರ್ವಾಸನೆಗಳನ್ನು ಒಯ್ಯುವ ನೊಣಗಳೇ ಹೆಚ್ಚಾಗಿವೆ. ಕುಳಿತಲ್ಲೇ ಸಂತೋಷದ ಸುದ್ದಿ ಸಿಗಬೇಕಾದರೆ ಕಷ್ಟಪಟ್ಟು ಸಂಕಟದ ಸತ್ಯವನ್ನು ಪತ್ತೆಹಚ್ಚುವ ಗೋಳು ಯಾರಿಗೆ ಬೇಕು? 1975ರಲ್ಲಿ ತುರ್ತುಸ್ಥಿತಿ ಘೋಷಣೆಯಾದಾಗ, ಪ್ರತಿಪಕ್ಷಗಳ ರಾಜಕಾರಣಿಗಳು ಬಂಧಿತರಾದಾಗ ಅವೆಲ್ಲವನ್ನೂ ಮೊದಲಿಗೆ ವರದಿಸಿದ್ದು ವಿದೇಶೀ ಮಾಧ್ಯಮಗಳೇ! ಆನಂತರ ದೇಶದ ಮಾಧ್ಯಮಗಳು ಪ್ರತಿಭಟಿಸಿದವಾದರೂ ಬಹುತೇಕ ಮಾಧ್ಯಮಗಳು ಸೆನ್ಸಾರ್‌ಗೊಂಡವು. ತಮ್ಮನ್ನು ತಾವು ಸರ್ವಾಧಿಕಾರದ ಪಾದಾರವಿಂದಗಳಲ್ಲಿ ಸಮರ್ಪಿಸಿಕೊಂಡವು. ಇಂತಹ ಕಟು ಅನುಭವವನ್ನು ಪಡೆದೂ ಅವು ಬುದ್ಧಿ ಕಲಿಯುವುದೇ ಇಲ್ಲ. ಬಾಗಲು ಹೇಳಿದರೆ ತೆವಳುವವರಿಗೆ ಔಷಧಿಯಿಲ್ಲ.

‘ದಿ ಹಿಂದೂ’ ಪತ್ರಿಕೆಯ ಸಾಮಾಜಿಕ ವ್ಯವಹಾರಗಳ ಸಂಪಾದಕ ಜಿ.ಸಂಪತ್ ಈಚೆಗೆ ಬರೆದ ಲಘುಲಹರಿಯ ಲೇಖನವೊಂದರಲ್ಲಿ ಈ ಪ್ರಸಂಗ ಬರುತ್ತದೆ: ಪತ್ರಕರ್ತನೊಬ್ಬ ಬೆನ್ನುನೋವಿಗೆ ಚಿಕಿತ್ಸೆಗಾಗಿ (ಪತ್ರಕರ್ತರಿಗೆ ವಿಶೇಷ ರಿಯಾಯಿತಿ ಶುಲ್ಕವನ್ನು ವಿಧಿಸುವ!) ಒಬ್ಬ ಮೂಳೆತಜ್ಞರ ಬಳಿಗೆ ಹೋಗುತ್ತಾನೆ. ಆ ವೈದ್ಯರು ಆತನನ್ನು ಪರೀಕ್ಷಿಸಿ ನೀವು ಪತ್ರಕರ್ತರಲ್ಲವೆನ್ನುತ್ತಾರೆ. ಆತ ತನ್ನ ದಾಖಲೆಗಳನ್ನು ತೋರಿಸಿದರೆ ಅವು ಫೋಟೋಶಾಪ್‌ಗೊಳಿಸಿದ್ದು ಎನ್ನುತ್ತಾರೆ. ಕೊನೆಗೆ ಆತ ಕೇಂದ್ರ ಸಚಿವರೊಬ್ಬರ ಪತ್ರವನ್ನು ತರಿಸುತ್ತಾನೆ. ಆದರೂ ಅವರು ನಂಬುವುದಿಲ್ಲ. ಆತನ ಎಕ್ಸ್‌ರೇಯನ್ನು ತೋರಿಸಿ ಅದರಲ್ಲಿ ಬೆನ್ನುಮೂಳೆಯ ಕುರುಹನ್ನು ತೋರಿಸಿ ನೀನು ಪತ್ರಕರ್ತನಲ್ಲ; ಪತ್ರಕರ್ತರಿಗೆ ಬೆನ್ನುಮೂಳೆ ಇರುವುದಿಲ.್ಲ ನೀನೀಗ ಪ್ರಾಯಃ ಪತ್ರಕರ್ತನಾಗಿ ಅನೇಕ ವರ್ಷಗಳ ಸೇವೆಯಲ್ಲಿ ತೆವಳುವುದನ್ನೇ ಅಭ್ಯಾಸಮಾಡಿಕೊಂಡಿರುವುದರಿಂದ ನಿನ್ನ ಬೆನ್ನುಮೂಳೆ ಬಳಕೆಯಾಗದೆ ನಿಧಾನವಾಗಿ ನಶಿಸಿದೆೆ; ಆದರೂ ಈ ಅನುಭವವು ನಿನಗೆ ಹಣಕಾಸಿನ ಮತ್ತಿತರ ಸಚಿವಾಲಯಗಳಿಗೆ ಪ್ರವೇಶ ಗಿಟ್ಟಿಸಲು ಯಶಸ್ವೀ ಸಾಧನವಾಗಬಹುದು ಎನ್ನುತ್ತಾರೆ; ಜೊತೆಗೇ ಇದನ್ನು ಮತ್ತಷ್ಟು ರೂಢಿಗೊಳಿಸಲು ಕೆಲವು ಟಿವಿ ಛಾನೆಲ್‌ಗಳ ಪ್ರೈಮ್‌ಟೈಮ್ ಕಾರ್ಯಕ್ರಮಗಳನ್ನು ವೀಕ್ಷಿಸಿ ಎಂದು ಸಲಹೆ ನೀಡುತ್ತಾರೆ!
ಇದು ಕ್ರೂರ ವ್ಯಂಗ್ಯ ಮಾತ್ರವಲ್ಲ, ಪಥ್ಯವಾಗದ ಸತ್ಯವೂ ಹೌದು.

ಪಾಕಿಸ್ತಾನ ಬಿಡಿ; ಅದರ ಸ್ವಹಿತಾಸಕ್ತಿನುಗುಣವಾಗಿ ಭಾರತದ ವಿರುದ್ಧ ಪ್ರಚಾರ ಮಾಡುತ್ತಿದೆ. ಆದ್ದರಿಂದ ಅದನ್ನು ನಂಬುವುದು ಬೇಡ. ಆದರೆ ಇತರ ವಿದೇಶಗಳ ಮಾಧ್ಯಮಗಳು ಹೇಳುವ ಸತ್ಯವನ್ನು ಹೇಗೆ ಜೀರ್ಣಿಸಿಕೊಳ್ಳಲಿ? ಅವೀಗ ಕಾಶ್ಮೀರದಲ್ಲಿ ಆಗುತ್ತಿರುವ ದಮನೀಯ ಕ್ರಮಗಳನ್ನು ವರದಿಮಾಡಿವೆ; ಖಂಡಿಸಿವೆ. ವಿದ್ಯುನ್ಮಾನ ಸೌಕರ್ಯಗಳಿರುವುದರಿಂದ ಇವನ್ನು ಸೃಷ್ಟನೆಯೆಂದು ಅಲ್ಲಗಳೆಯಲು ಸಾಧ್ಯವಿಲ್ಲ. ಕೇಂದ್ರ ಸರಕಾರವು ತನ್ನ ವಿರುದ್ಧ ಪ್ರತಿಪಕ್ಷಗಳ ಸಹಿತ ಯಾರೇ ಎತ್ತಿದ ಆಕ್ಷೇಪಗಳನ್ನೂ ದೇಶದ್ರೋಹವೆಂದು ಆಪಾದಿಸಿ ಸಾರಾಸಗಟು ತಿರಸ್ಕರಿಸುವ ಅಭ್ಯಾಸಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಅನಿವಾರ್ಯವಾಗಿ ಬಿಚ್ಚಿಕೊಳ್ಳಲಿದೆ. ಪ್ರಕೃತಿ ಮತ್ತು ಕಾಲದ ವಿರುದ್ಧ ಯಾರ ಆಟ ಮತ್ತು ನಟನೆ ನಿಲ್ಲಲಾರದು ಎಂಬುದೇ ತೃಪ್ತಿ ತರುವ ವಿಚಾರ. ಶಾಸಕಾಂಗವು ಬಹುಮತದ ಹೆಸರಿನಲ್ಲಿ ಅನೈತಿಕವಾಗಿ ವರ್ತಿಸಿದಾಗ ಕಾರ್ಯಾಂಗ ತನ್ನ ಮಿತಿಯಲ್ಲಿ ಸಹಕರಿಸುತ್ತದೆಯೆನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇವೆರಡೂ ಪರಸ್ಪರ ಅನುಕೂಲ ಬಾಂಧವ್ಯವನ್ನು ಹೊಂದಿದಾಗ ನ್ಯಾಯಾಂಗ ತೀರ ತಡವಾಗಿ (ಅಂದರೆ ನಮ್ಮ ಮಸಾಲೆ ಚಲನಚಿತ್ರಗಳಲ್ಲಿ ಎಲ್ಲವೂ ಮುಗಿದ ಮೇಲೆ ಬರುವ ಪೊಲೀಸರಂತೆ!) ಕರ್ತವ್ಯಕ್ಕೆ ಹಾಜರಾಗುತ್ತದೆ. ತನಗೆ ಯಾರೂ ದೂರು ಸಲ್ಲಿಸಲಿಲ್ಲ, ಅವನ್ನು ಆದ್ಯತೆಯ ಮೇಲೆ ವಿಚಾರಣೆ ಮಾಡುವಂತಿಲ್ಲ ಮುಂತಾದ ಕಾನೂನುಬದ್ಧ ಸಬೂಬುಗಳು ನಮ್ಮ ನ್ಯಾಯಾಂಗಕ್ಕೆ ಮೊದಲಿನಿಂದಲೂ ಇವೆ. ಹೀಗಿದ್ದರೂ ಕೊನೆಗೂ ಅವೇ ಎಲ್ಲ ಗೊಂದಲಗಳಿಗೂ ಇತಿಶ್ರೀ ಹಾಡುತ್ತವೆಯೆಂಬುದೇ ಸಮಾಧಾನದ ಅಂಶ.

ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ದೇಶದೆಲ್ಲೆಡೆ ಸ್ಥಾಪನೆಯಾಗುವ ದಿನಗಳು ದೂರವಿಲ್ಲ. ಬಹುತ್ವದ ಭಾರತದಲ್ಲಿ, ಬಹುಮುಖೀ ಸಂಸ್ಕೃತಿಯ ಬೇರುಗಳನ್ನು ಸಡಿಲಿಸುವ ಪ್ರಯತ್ನ ಹಿಂದೆಂದೂ ನಡೆಯದ ವೇಗ ಮತ್ತು ಶಕ್ತಿಯಲ್ಲಿ ನಡೆಯುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗುವ ಇವು ಸರಕಾರಕ್ಕೆ ವಿರೋಧವಲ್ಲವೆಂಬುದರಿಂದಾಗಿ ವರದಿಯಾಗುತ್ತವೆಂದೇ ನಂಬಬೇಕು! ಪಾರ್ಸೆಲ್ ತಂದ ವ್ಯಕ್ತಿ ಹಿಂದೂ ಅಲ್ಲವೆಂಬ ಕಾರಣಕ್ಕೆ ರೊಮಾಟೋ ಕಂಪೆನಿಯು ಕಳಿಸಿದ ಆಹಾರ ಪದಾರ್ಥವನ್ನು ಗ್ರಾಹಕನೊಬ್ಬ ತಿರಸ್ಕರಿಸಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಗೋಮಾಂಸ ಮತ್ತು ಹಂದಿಮಾಂಸಗಳನ್ನು ಕೊಂಡೊಯ್ಯುವುದಿಲ್ಲವೆಂದು ಇದೇ ಕಂಪೆನಿಯ ಉದ್ಯೋಗಿಗಳು ಪ್ರತಿಭಟಿಸಿದ್ದಾರೆ. ಮತಾಂಧತೆ ತೀವ್ರವಾಗಿ ಮತ್ತು ರಾಕ್ಷಸೀಯವಾಗಿ ವ್ಯಾಪಿಸುತ್ತಿದೆ. ಅತ್ಯಾಚಾರದಲ್ಲೂ ಜಾತಿ-ಮತಗಳು ವಿಜೃಂಭಿಸುತ್ತಿವೆ. ಕಣ್ಣಿನ ಪೊರೆ ಕುರುಡಾಗಿಸುವುದಿದೆ; ಅದಕ್ಕೂ ಹೆಚ್ಚಾಗಿ ರಾಜಕಾರಣ ಮತ್ತು ಮತಧರ್ಮಗಳು ಜನರನ್ನು ಕುರುಡಾಗಿಸುತ್ತಿವೆ. ಹಿಂದೆಲ್ಲ ವ್ಯಕ್ತಿಗತ ಗೌರವಗಳು ರಾಜಕೀಯಕ್ಕೆ ಬಲಿಯಾಗುತ್ತಿರಲಿಲ್ಲ. ಈಗ ಚರಿತ್ರೆಯನ್ನು ವಿರೂಪಗೊಳಿಸುವ ಯತ್ನಗಳು ಹಾಡಹಗಲೇ ಮೆರವಣಿಗೆಯಲ್ಲಿ ನಡೆಯುತ್ತಿವೆ. ಉದಾಹರಣೆಗೆ ದೇಶದ ಮೊದಲ ಪ್ರಧಾನಿ ನೆಹರೂ ಕುರಿತಂತೆ ಹೊಣೆರಹಿತರೆಲ್ಲ ನೆಹರೂ ದೇಶದ ಅತೀ ದೀರ್ಘಾವಧಿಯ ಪ್ರಧಾನಿಯೆಂಬುದನ್ನೂ ಮರೆತು ಮಾತನಾಡುತ್ತಿದ್ದರೆ ಅದನ್ನು ಸರಕಾರ ಮತ್ತು ವಿವೇಕದ ಪ್ರತೀಕವಾಗಿರಬೇಕಾದ ಪ್ರಧಾನಿ ಮೌನವಾಗಿ ಆನಂದಿಸುತ್ತಿದ್ದಾರೆ. ಈ ಸಾಲಿಗೆ ಈಗ ಮಧ್ಯಪ್ರದೇಶದ ಮಾಜಿ ಮುಖ್ಯ ಮಂತ್ರಿ ಮತ್ತು ಸ್ವಲ್ಪಮಟ್ಟಿನ ವಿವೇಕಿಯೆನಿಸಿಕೊಂಡಿದ್ದ ಶಿವರಾಜ್ ಸಿಂಗ್ ಚವಾಣರೂ ಸೇರಿದ್ದಾರೆ. ಇದ್ದಕ್ಕಿದ್ದಂತೆ ನೆಹರೂವಿನ ಕುರಿತ ತಾತ್ಸಾರ, ದ್ವೇಷ ಮೊಳೆಯಲು ಸಕಾರಣಗಳೇ ಇಲ್ಲ. ನೆಹರೂ ಪರಿಪೂರ್ಣರೆಂದೇನೂ ಅಲ್ಲ; ಆದರೆ ಅವರು ಆ ಸಂದರ್ಭದ ವಿವಾದಾತೀತ ನಾಯಕ. ಅವರನ್ನು ಗೌರವಿಸುವುದೆಂದರೆ ದೇಶದ ಪ್ರಧಾನಿಯನ್ನು ಗೌರವಿಸುವುದು. ಪ್ರಾಯಃ ಇವರೆಲ್ಲರ ಉದ್ದೇಶ ನೆಹರೂರವರನ್ನು ಹಳಿಯುವುದಕ್ಕಿಂತ ಹೆಚ್ಚಾಗಿ ತಮ್ಮ ಸರ್ವೋಚ್ಚ ನಾಯಕರನ್ನು ಸಂಪ್ರೀತಗೊಳಿಸುವುದೇ ಆಗಿರಬೇಕು. ರಾಜಕೀಯದ ಗುಣವೆಂದರೆ ಅಧಿಕಾರದ ಮತ್ತು ಬಹುಮತದ ಅಹಂಕಾರವೇ ರಾಜಕಾರಣಿಗಳ ನಾಲಗೆಗೆ ಗೊಬ್ಬರವನ್ನು ನೀಡುತ್ತದೆ. ಅವರು ಯಾರನ್ನೂ ಮತ್ತು ವಿಶೇಷವಾಗಿ ಪ್ರತಿಪಕ್ಷಗಳನ್ನು, ಟೀಕಿಸುವವರನ್ನು ಲೆಕ್ಕಿಸುವುದಿಲ್ಲ.

ಆದರೆ ಇದೂ ಶಾಶ್ವತವಲ್ಲ. ಯಾವ ಸರಕಾರವು ಸಂವಿಧಾನ ಮತ್ತು ಕಾನೂನನ್ನು ಗೌರವಿಸದೆ ಅಥವಾ ಅದನ್ನು ಎಲ್ಲರ ಕೈಗೆಟಕುವಂತೆ ಮಾಡುವುದಿಲ್ಲವೋ ಮತ್ತು ತಲೆಹೋಕ ಮಾತು ಮತ್ತು ಸಂಕೇತಾಕ್ಷರಗಳಿಂದ ಜನರನ್ನು ರೊಚ್ಚಿಗೆಬ್ಬಿಸಿ, ಪ್ರೇರಣೆಗಿಂತ ಹೆಚ್ಚಾಗಿ ಪ್ರೇರೇಪಣೆಯನ್ನು ಮಾಡಿ ಅವರು ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತದೆಯೋ ಆಗ ದೇಶ ಹೊಸ ಬದಲಾವಣೆಗೆ ಬೇಕಾದ ಸಾಧನಗಳನ್ನು ತನ್ನ ಬಸಿರೊಳಗಿನಿಂದಲೇ ತಯಾರಿಸುತ್ತದೆ. ಎಲ್ಲೋ ಒಬ್ಬ ದಧೀಚಿ ಕೆಡುಕನ್ನು ನಿವಾರಿಸಲು ಆಯುಧಕ್ಕಾಗಿ ತನ್ನ ಎಲುಬುಗಳನ್ನು ದಾನಮಾಡುತ್ತಾನೆ. ಇದು ಪೌರಾಣಿಕ ಸತ್ಯ; ಚಾರಿತ್ರಿಕ ಸತ್ಯ; ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಸತ್ಯ. ಬೆಳಗಾಗುವುದನ್ನು ಯಾರೂ ತಡೆಯಲಾರರು. ಅದಿಲ್ಲವಾದರೆ ಲೋಕದಲ್ಲಿ ಶಾಶ್ವತ ತಮಂಧವೇ ಇರುತ್ತಿತ್ತು.

 ದೇಶ ಮುಖ್ಯವಾಗಬೇಕೇ ಹೊರತು ದ್ವೇಷವಲ್ಲ. ಸ್ವಪ್ರತಿಷ್ಠೆಯು ದೂರಗಾಮಿತ್ವವನ್ನು ಬಲಿತೆಗೆದುಕೊಳ್ಳಬಾರದು. ಅಧಿಕಾರ ಮತ್ತು ಸೋಲು-ಗೆಲುವುಗಳು, ಬಡತನ-ಸಿರಿತನಗಳು ರಾಜಕೀಯದಲ್ಲಿ ಮಾತ್ರವಲ್ಲ, ಬದುಕಿನಲ್ಲೂ ಶಾಶ್ವತವಲ್ಲ. ಪ್ರಾಯಃ ಸಾವು ಮಾತ್ರ ಶಾಶ್ವತ. ಸ್ವಾತಂತ್ರ್ಯವೆಂದರೆ ಬದುಕುವ ಮತ್ತು ಬದುಕಗೊಡುವ ಮಾನವೀಯತೆ. ಪ್ರೀತಿ ಮತ್ತು ಸೌಜನ್ಯದಿಂದಲೇ ಸಮಾಜವನ್ನು ಉಳಿಸುವ ಪುಣ್ಯ ಕಾಯಕ. ಸ್ವಾತಂತ್ರ್ಯದ ಸಂದರ್ಭವೆಂದರೆ ಸ್ವಾತಂತ್ರ್ಯದ ನೆಲೆ-ಬೆಲೆಗಳನ್ನು ನಿರ್ಧರಿಸಲು ಇರುವ ಘಳಿಗೆ. ದೇಶಕ್ಕೆ, ಸಮಾಜಕ್ಕೆ, ಮನುಷ್ಯ, ಪಶು-ಪಕ್ಷಿಗಳಿಗೆ, ಸಸ್ಯಸಂಕುಲಗಳಿಗೆ ಹಾಗೂ ನಾವಳಿದರೂ ಈ ಭೂಮಿಯಲ್ಲಿ ಮುಂದುವರಿ ಯುವ ಎಲ್ಲ ತಳಿಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಷ್ಟೇ ಉಳಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)