varthabharthi

ವಿಶೇಷ-ವರದಿಗಳು

ಸ್ವತಂತ್ರ ಭಾರತವೂ ಸ್ವಾತಂತ್ರ್ಯದ ಕಲ್ಪನೆಯೂ

ವಾರ್ತಾ ಭಾರತಿ : 15 Aug, 2019
ನಾ. ದಿವಾಕರ

ಒಂದು ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಜನತೆಯ ನರನಾಡಿಗಳಲ್ಲಿ ಸ್ವಾತಂತ್ರ್ಯದ ಚಿಲುಮೆ ಉಕ್ಕಿ ಹರಿಯುವಂತೆ ಮಾಡಬೇಕೆಂದರೆ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಪರಿಪೂರ್ಣವಾಗಿರಬೇಕು. ‘‘ನಿಮಗೆ ಸ್ವಾತಂತ್ರ್ಯ ಇದೆ ಆದರೆ ಅದು ನಾವು ಹಾಕುವ ಲಕ್ಷ್ಮಣರೇಖೆಯನ್ನು ದಾಟುವಂತಿಲ್ಲ’’ ಎನ್ನುವ ಧೋರಣೆ ಇದ್ದಲ್ಲಿ ಮಾನವ ಹಕ್ಕುಗಳು ಸಾಪೇಕ್ಷತೆ ಪಡೆದುಕೊಂಡುಬಿಡುತ್ತದೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಪ್ರಾತಿನಿಧಿಕ ಗುಂಪುಗಳು ತಮ್ಮ ಇಚ್ಛೆಯಂತೆ ಈ ಲಕ್ಷ್ಮಣರೇಖೆಯನ್ನು ಬದಲಾಯಿಸುತ್ತಾ ಹೋಗುತ್ತವೆ. ಆಗ ಬಹುಜನರ ಪಾಲಿಗೆ ಸ್ವಾತಂತ್ರ್ಯ ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ.

ನಾವು ಭಾರತೀಯರು, ಸಂಕೇತ, ಪ್ರತಿಮೆ ಮತ್ತು ರೂಪಕಗಳಿಗೆ ಎಷ್ಟರ ಮಟ್ಟಿಗೆ ಆಕರ್ಷಿತರಾಗಿಬಿಟ್ಟಿದ್ದೇವೆ ಎಂದರೆ ನಾವು ನಿಂತ ನೆಲ ಕುಸಿಯುತ್ತಿದ್ದರೂ ಅಲ್ಲೆಲ್ಲೋ ದೂರದಲ್ಲಿರುವ ಒಂದು ಪ್ರತಿಮೆಯನ್ನು ಕಂಡು ವಿಜೃಂಭಿಸುತ್ತೇವೆ, ಒಂದು ಸಂಕೇತಕ್ಕಾಗಿ ಹಾತೊರೆಯುತ್ತೇವೆ, ಒಂದು ರೂಪಕದಿಂದ ಆಕರ್ಷಿತರಾಗಿಬಿಡುತ್ತೇವೆ. ನಾವು ಸ್ವತಂತ್ರರು ಎಂದು ಬಿಂಬಿಸಲು ಕೆನ್ನೆ, ಹಣೆಯ ಮೇಲೆ ತ್ರಿವರ್ಣ, ಅಂಗಿಯ ಮೇಲೊಂದು ಲೋಹದ ಧ್ವಜ, ಮಕ್ಕಳ ಕೈಗಳಲ್ಲಿ ಪ್ಲಾಸ್ಟಿಕ್ ಧ್ವಜ, ಬಟ್ಟೆಯಂಗಡಿಗಳಲ್ಲಿ ತ್ರಿವರ್ಣ ಧ್ವಜ ತೊಟ್ಟ ನಿಲುವುಗೊಂಬೆಗಳು. ಶಾಲಾ ಮಕ್ಕಳೆಲ್ಲಾ ಕೇಸರಿ ಬಿಳಿ ಹಸಿರು ತೊಟ್ಟ ಸಂಭ್ರಮ. ರಸ್ತೆಗಳಲ್ಲಿ ತ್ರಿವರ್ಣ ರಂಗೋಲಿ. ಇನ್ನು ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯದಿನದ ಸಂಭ್ರಮದಲ್ಲೇ ಎಲ್ಲವೂ ರಿಯಾಯಿತಿ ದರದಲ್ಲಿ ಮಾರಾಟ. ತಕ್ಷಣದ ಪಾವತಿ ಇಲ್ಲದೆಯೇ, ಬಡ್ಡಿ ಇಲ್ಲದೆಯೇ, ಸುಲಭ ಮಾಸಿಕ ಕಂತುಗಳ ಸೌಲಭ್ಯ. ಇಷ್ಟರ ನಡುವೆ ಸ್ಥಳೀಯ ನಾಯಕರ ಭಾಷಣಗಳ ರಸದೌತಣ. ಝಾನ್ಸಿ ರಾಣಿಯಿಂದ ಗಾಂಧೀಜಿಯವರೆಗೆ ಪರಾಕುಗಳು. ಈ ವರ್ಷ ಮತ್ತೊಂದು ಹೊಸ ಆಕರ್ಷಣೆ ಭಾರತದ ಭೂಪಟದಲ್ಲಿ ಆಗಿರುವ ಮಾರ್ಪಾಡು. ಮುಕುಟ ಕೊಂಚ ಬದಲಾಗಿದೆ. ಒಂದು ಎರಡಾಗಿದ್ದರೂ ಸುಂದರವಾಗಿಯೇ ಕಾಣುತ್ತದೆ. ಏಕೆಂದರೆ ವಿರೂಪಗೊಂಡಿಲ್ಲ. ಭೂಮಿ ಬಿರಿದರೇನಂತೆ ಭೂಪಟ ಎಷ್ಟು ಸುಂದರ ಎಂದು ಬೀಗುತ್ತಾ ನಡೆಯುತ್ತೇವೆ, ಜೈಕಾರಗಳೊಡನೆ.
ಇಷ್ಟರ ನಡುವೆಯೇ ಎಲ್ಲೋ ಒಂದೆಡೆ ‘‘ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು’’ ಎಂಬ ಬಾಲಗಂಗಾಧರ ತಿಲಕರ ಘೋಷಣೆ ನೆನಪಾಗುತ್ತದೆ. ಅವರ ಕೂಗು ಕೇವಲ ಬ್ರಿಟಿಷರ ವಿರುದ್ಧ ಎಂದು ಇತಿಹಾಸ ಓದುವ ಸಂದರ್ಭದಲ್ಲಿ ಭಾಸವಾಗಬಹುದು. ಆದರೆ ಅದು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಘೋಷಣೆ. ಸ್ವಾತಂತ್ರ್ಯ ಮನುಕುಲದ ಜನ್ಮಸಿದ್ಧ ಹಕ್ಕು. ನಿಜ, ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ. ಹಾಗೆಯೇ ಸ್ವಾತಂತ್ರ್ಯ ಆಳುವವರ ಕಣ್ಗಾವಲಿನಲ್ಲಿ ಕಂಡುಕೊಳ್ಳಬೇಕಾದ ವಿದ್ಯಮಾನವೂ ಅಲ್ಲ. ಬ್ರಿಟಿಷರಿಂದ ನಾವು ಸ್ವಾತಂತ್ರ್ಯ ಪಡೆದದ್ದು ನಮ್ಮದೇ ಆದ ಒಂದು ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಉದ್ದೇಶದಿಂದ. ಮಾನವ ಮೂಲತಃ ಸ್ವತಂತ್ರ ಜೀವಿ ಮತ್ತು ಸ್ವಾತಂತ್ರ್ಯ ಬಯಸುವ ಜೀವಿ. ರಾಜಪ್ರಭುತ್ವದ ಕಾಲದಲ್ಲೂ ಮನುಕುಲ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟ ನಡೆಸಿರುವುದನ್ನು ಕಂಡಿದ್ದೇವೆ. ಸರ್ವಾಧಿಕಾರಿ ಆಡಳಿತ ಎಷ್ಟೇ ಬಿಗಿಯಾಗಿದ್ದರೂ ಸ್ವಾತಂತ್ರ್ಯದ ಚಿಲುಮೆಗಳು ಉಗಮಿಸಿರುವುದನ್ನು ಕಂಡಿದ್ದೇವೆ. ಹಾಗೆಯೇ ವಸಾಹತುಶಾಹಿಯಿಂದ, ಸಾಮ್ರಾಜ್ಯಶಾಹಿಯಿಂದ ವಿಮುಕ್ತಿ ಪಡೆದು ಸ್ವಾತಂತ್ರ್ಯಗಳಿಸಿದ ಜನಸಮುದಾಯಗಳು ತಮ್ಮದೇ ನೆಲದಲ್ಲಿ ಸ್ವತಂತ್ರರಾಗಿದ್ದುಕೊಂಡೇ ತಮ್ಮ ಸ್ವಾತಂತ್ರ್ಯದ ಹಕ್ಕುಗಳನ್ನು ಕಳೆದುಕೊಂಡಿರುವುದನ್ನೂ ಕಂಡಿದ್ದೇವೆ. ಬಹುಶಃ ಭಾರತದ ನೆಲದಲ್ಲಿ ಈ ಪರ್ವವನ್ನು ನಾವು ಈಗ ಎದುರಿಸುತ್ತಿದ್ದೇವೆ. ಮೂಲತಃ ಪ್ರಜಾತಂತ್ರ ವ್ಯವಸ್ಥೆ ಮತ್ತು ಸ್ವಾತಂತ್ರ್ಯದ ಪರಿಕಲ್ಪನೆ ಪರಸ್ಪರ ಪೂರಕವಾಗಿರುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಜನಪ್ರತಿನಿಧಿಗಳು ಮತ್ತು ಆಳುವ ಪಕ್ಷಗಳು ತಮ್ಮ ಪ್ರಾತಿನಿಧಿಕ ಸ್ವರೂಪವನ್ನು ಮರೆತು ವರ್ತಿಸಿದಾಗ ಮೃದು ಸರ್ವಾಧಿಕಾರ ಗೋಚರಿಸುತ್ತದೆ. ಸ್ವಾತಂತ್ರ್ಯದ ಕನಸು ಕಮರುತ್ತದೆ.
ಬಹುಶಃ 72 ವರ್ಷಗಳ ಸ್ವಾತಂತ್ರ್ಯದ ನಂತರ ನಾವು ಸ್ವಾತಂತ್ರ್ಯ ಹರಣದ ಮತ್ತೊಂದು ಪರ್ವವನ್ನು ಎದುರಿಸುತ್ತಿದ್ದೇವೆ. ನಿಜ, ಮಾತನಾಡುವ ಸ್ವಾತಂತ್ರ್ಯ ಇದೆ, ಈ ರೀತಿ ಬರೆಯುವ ಸ್ವಾತಂತ್ರ್ಯವೂ ಇದೆ, ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇದೆ. ಆದರೆ ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ ಎಂಬ ಬೀಸು ಹೇಳಿಕೆಯನ್ನೇ ಅನುಸರಿಸಿ ಅತ್ಯಾಚಾರ, ದೌರ್ಜನ್ಯ, ಹತ್ಯಾಕಾಂಡ, ಹಿಂಸಾಚಾರ ಹೀಗೆ ಎಲ್ಲವನ್ನೂ ಸಹಿಸಿಕೊಳ್ಳಲು ಪ್ರೇರೇಪಿಸುವ ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸ್ವಾತಂತ್ರ್ಯ ಒಂದು ಕಲ್ಪನೆಯಲ್ಲ. ಅದು ಜೀವನದ ಒಂದು ಭಾಗವಾಗಿ ರೂಪುಗೊಳ್ಳಬೇಕು. ಒಂದು ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಜನತೆಯ ನರನಾಡಿಗಳಲ್ಲಿ ಸ್ವಾತಂತ್ರ್ಯದ ಚಿಲುಮೆ ಉಕ್ಕಿ ಹರಿಯುವಂತೆ ಮಾಡಬೇಕೆಂದರೆ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಪರಿಪೂರ್ಣವಾಗಿರಬೇಕು. ‘‘ನಿಮಗೆ ಸ್ವಾತಂತ್ರ್ಯ ಇದೆ ಆದರೆ ಅದು ನಾವು ಹಾಕುವ ಲಕ್ಷ್ಮಣರೇಖೆಯನ್ನು ದಾಟುವಂತಿಲ್ಲ’’ ಎನ್ನುವ ಧೋರಣೆ ಇದ್ದಲ್ಲಿ ಮಾನವ ಹಕ್ಕುಗಳು ಸಾಪೇಕ್ಷತೆ ಪಡೆದುಕೊಂಡುಬಿಡುತ್ತದೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಪ್ರಾತಿನಿಧಿಕ ಗುಂಪುಗಳು ತಮ್ಮ ಇಚ್ಚೆಯಂತೆ ಈ ಲಕ್ಷ್ಮಣರೇಖೆಯನ್ನು ಬದಲಾಯಿಸುತ್ತಾ ಹೋಗುತ್ತವೆ. ಆಗ ಬಹುಜನರ ಪಾಲಿಗೆ ಸ್ವಾತಂತ್ರ್ಯ ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ. ಇನ್ನು ಕೆಲವರ ಪಾಲಿಗೆ ದೂರದ ಬೆಟ್ಟದಂತೆ ಕಾಣುತ್ತಿರುತ್ತದೆ.
ಭಾರತ ಇಂತಹ ಒಂದು ಸನ್ನಿವೇಶವನ್ನು ಎದುರಿಸುತ್ತಿದೆ. ಸ್ವತಂತ್ರ ಭಾರತದ ಶಿಲ್ಪಿಗಳು ರಚಿಸಿದ ಸಂವಿಧಾನ ಭಾರತದ ಸಾರ್ವಭೌಮ ಜನತೆಗೆ ಎಲ್ಲ ರೀತಿಯ ಹಕ್ಕುಗಳನ್ನೂ ನೀಡಿತ್ತು. ಆದರೂ ದಶಕಗಳ ಕಾಲ ಜನಸಾಮಾನ್ಯರು ಕೆಲವು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದರು. ಈ ಹಕ್ಕುಗಳನ್ನು ಸಂವಿಧಾನದ ಚೌಕಟ್ಟಿನಲ್ಲೇ ಪಡೆಯಲು ಅವಿರತ ಹೋರಾಟವೂ ಬೇಕಾಯಿತು. 60 ವರ್ಷಗಳ ನಂತರ ನಮಗೆ ಮಾಹಿತಿ ಹಕ್ಕು ದೊರೆತಿತ್ತು, ಆಹಾರ ಭದ್ರತೆಯ ಹಕ್ಕು ದೊರೆತಿತ್ತು. ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯ ಹಕ್ಕು ದೊರೆತಿತ್ತು. ಶಿಕ್ಷಣದ ಹಕ್ಕು ದೊರೆತಿತ್ತು. ಈ ಎಲ್ಲ ಕ್ರಮಗಳೂ ಔದಾರ್ಯದ ಚಿಲುಮೆಗಳೇನಲ್ಲ. ಜನಾಂದೋಲನಗಳ ಪ್ರತಿಫಲವಷ್ಟೆ. ಆದರೆ ಕೇವಲ ಒಂದು ದಶಕದಲ್ಲಿ ಈ ದೇಶದ ಪ್ರಭುತ್ವಕ್ಕೆ ಈ ಎಲ್ಲ ಹಕ್ಕುಗಳು ಅಪಾಯಕಾರಿಯಾಗಿಬಿಟ್ಟವು. ಒಂದೊಂದೇ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ‘‘ನಿಮ್ಮ ಹಕ್ಕುಗಳಿಗಾಗಿ ನೀವು ಆಗ್ರಹಿಸಿ ಆದರೆ ಕೊಡುವುದು ಬಿಡುವುದು ನಮ್ಮ ಹಕ್ಕು’’ ಎಂದು ಹೇಳುವ ಮೂಲಕ ಭಾರತದ ಪ್ರಭುತ್ವ ‘‘ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು’’ ಘೋಷಣೆಯನ್ನು ಸಾರ್ವಭೌಮ ಪ್ರಜೆಯ ಕಿಸೆಯಿಂದ ಕಸಿದುಕೊಂಡು ತನ್ನದಾಗಿಸಿಕೊಂಡಿದೆ.
 ಇದಕ್ಕೆ ಕಾರಣವೂ ಇದೆ. ಹಕ್ಕು ಮತ್ತು ಸ್ವಾತಂತ್ರ್ಯ ಎರಡೂ ಜೋಡೆತ್ತುಗಳಂತೆ ಒಂದು ನಾಗರಿಕ ಸಮಾಜವನ್ನು ಮುನ್ನಡೆಸುತ್ತವೆ ಎನ್ನುವ ದಾರ್ಶನಿಕ ದೃಷ್ಟಿಕೋನ ನಮ್ಮ ಆಡಳಿತ ವ್ಯವಸ್ಥೆಯಲ್ಲಿ, ಆಳುವವರಲ್ಲಿ ಮತ್ತು ಪ್ರಭುತ್ವದ ಶಾಸನಗಳಲ್ಲಿ ಕಾಣುವುದೇ ಇಲ್ಲ. ಹಾಗಾಗಿಯೇ ಭಾರತ ಅನುಸರಿಸುತ್ತಿರುವ ಅಭಿವೃದ್ಧಿ ಪಥದಲ್ಲಿ ಜನಸಾಮಾನ್ಯರ ಹಕ್ಕುಗಳು ಕಳೆದುಹೋಗುತ್ತಿರುವಂತೆಯೇ ಸ್ವಾತಂತ್ರ್ಯವೂ ಕ್ಷೀಣಿಸುತ್ತಿದೆ. ನಿಜ, ಭಾರತ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕುತ್ತಿದೆ. ಪ್ರಗತಿಯ ಸೂಚ್ಯಂಕದಲ್ಲಿ ಮೇಲ್‌ಚಲನೆ ನಿರಂತರವಾಗಿದೆ. ತಾತ್ಕಾಲಿಕ ಹಿನ್ನಡೆಯ ಹೊರತಾಗಿಯೂ ಮುನ್ನಡೆಯ ಆಶಯ ಇದೆ. ಆದರೆ ಈ ಅಭಿವೃದ್ಧಿ ಮತ್ತು ಪ್ರಗತಿ ದೇಶದ ಸಂಪತ್ತನ್ನು ಸೃಷ್ಟಿಸುವ ಶ್ರಮಜೀವಿಗಳ, ಜನಸಾಮಾನ್ಯರ ಹಕ್ಕು ಮತ್ತು ಸ್ವಾತಂತ್ರ್ಯದ ಸಮಾಧಿಯ ಮೇಲೆ ಚಲಿಸುವುದೇ ಆದರೆ ಇಂದಿನ ಆಡಳಿತ ವ್ಯವಸ್ಥೆಗೂ ವಸಾಹತು ವ್ಯವಸ್ಥೆಗೂ ವ್ಯತ್ಯಾಸವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಸಾಹತು ಕಾಲದಲ್ಲೂ ಉತ್ಪಾದನೆ ಇತ್ತು. ಬಂಡವಾಳ ಕ್ರೋಡೀಕರಣ ಇತ್ತು, ಸಂಪನ್ಮೂಲಗಳ ಬಳಕೆ ಚಾಲ್ತಿಯಲ್ಲಿತ್ತು. ಆದರೆ ಉತ್ಪಾದಿತ ಸಂಪತ್ತು ವಸಾಹತು ಒಡೆಯರ ಪಾಲಾಗುತ್ತಿತ್ತು. ಉತ್ಪಾದಕೀಯ ಶಕ್ತಿಗಳು, ಶ್ರಮಜೀವಿಗಳು ಕೇವಲ ಜೀತಕ್ಕಾಗಿಯೇ ಬದುಕುವ ಅಸ್ತಿಪಂಜರಗಳಾಗಿದ್ದರು. ನವ ಉದಾರವಾದಿ ಆರ್ಥಿಕ ವ್ಯವಸ್ಥೆಯ ನಾಲ್ಕನೆಯ ಔದ್ಯಮಿಕ ಕ್ರಾಂತಿಯ ಸಂದರ್ಭದಲ್ಲಿ ನಾವು ವಸಾಹತು ಕಾಲದ ಪುನರಾವರ್ತನೆ ಯನ್ನು ಕಾಣುತ್ತಿದ್ದೇವೆ ಅಲ್ಲವೇ? ಪ್ರಭುತ್ವ ನಮ್ಮದು, ದಾಸ್ಯದಿಂದ ಮುಕ್ತರಾಗಿದ್ದೇವೆ ಎಂಬ ಭಾವನೆ ಇದ್ದರೂ ಅದು ಪರಿಪೂರ್ಣವಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ ಅಲ್ಲವೇ?
ಭಾರತದಲ್ಲಿ ಬಡತನ ಇಳಿಮುಖವಾಗಿದೆ, ದಾರಿದ್ರ್ಯ ಕಡಿಮೆಯಾಗುತ್ತಿದೆ, ಮಧ್ಯಮ ವರ್ಗಗಳ ಸಂಖ್ಯೆ ಹೆಚ್ಚಾಗುತ್ತಿದೆ, ಕೋಟ್ಯಧಿಪತಿಗಳು ಜಗತ್ತನ್ನೇ ನಾಚಿಸುವಂತೆ ಮುನ್ನಡೆ ಸಾಧಿಸಿದ್ದಾರೆ. ಆದರೂ ಶೇ. 1ರಷ್ಟು ಜನರ ಬಳಿ ದೇಶದ ಶೇ. 70ರಷ್ಟು ಸಂಪತ್ತು ಕ್ರೋಡೀಕೃತವಾಗಿದೆ. ಈ ಶೇ. 1ರಷ್ಟು ಜನರಿಗೂ ವಸಾಹತು ಕಾಲದ ಬಂಡವಾಳಶಾಹಿಗಳಿಗೂ ವ್ಯತ್ಯಾಸವೇನು? ತಾತ್ವಿಕವಾಗಿ ಏನೂ ವ್ಯತ್ಯಾಸವಿಲ್ಲ. ಏಕೆಂದರೆ ವಾಸ್ತವದ ನೆಲೆಯಲ್ಲಿ ನೋಡಿದಾಗ ಇಂದಿನ ಭಾರತದ ಉದ್ಯಮಪತಿಗಳು ನಮ್ಮವರು ಎನಿಸಿಕೊಂಡಿದ್ದರೂ ಇವರ ಲಾಭಕೋರತನ ಮತ್ತು ಬಂಡವಾಳ ಕ್ರೋಡೀಕರಣದ ಯೋಜನೆಗಳು ಈ ದೇಶದ ಸಹಸ್ರಾರು ಶ್ರಮಜೀವಿಗಳ ಪಾಲಿಗೆ ಮಾರಣಾಂತಿಕವಾಗಿವೆ. ಸ್ವಾತಂತ್ರ್ಯ ಮತ್ತು ಹಕ್ಕುಗಳು ಇಲ್ಲಿ ಮುನ್ನೆಲೆಗೆ ಬರುತ್ತವೆ. ದೇಶದ 10 ಲಕ್ಷ ಆದಿವಾಸಿ ಕುಟುಂಬಗಳು ಒಂದು ಶಾಸನಕ್ಕೆ ತಲೆಬಾಗಿ ತಮ್ಮ ಮೂಲ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅರಣ್ಯವಾಸಿಗಳಿಗೆ ಬದುಕುವ ಹಕ್ಕು ನೀಡುತ್ತದೆ ಆದರೆ ಅರಣ್ಯಭೂಮಿಯನ್ನು ಕಾರ್ಪೊರೇಟ್ ಲಾಭಕೋರರಿಗೆ ಮಾರಾಟ ಮಾಡುತ್ತದೆ. ಕಳೆದ ಐದು ವರ್ಷಗಳಲ್ಲಿ ಒಂದು ಕೋಟಿ ಒಂಬತ್ತು ಲಕ್ಷ ಮರಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕಡಿದು ಹಾಕಿರುವ ಒಂದು ಸರಕಾರ, ಪ್ರಜೆಗಳಿಗೆ ಶುದ್ಧ ಗಾಳಿಯನ್ನು ಸೇವಿಸುವ ಹಕ್ಕು ಸಹ ಇದೆ ಎಂದು ಏಕೆ ಭಾವಿಸುವುದಿಲ್ಲ?
ಮಾತನಾಡುವ ಹಕ್ಕು ಸಾಂವಿಧಾನಿಕವೇನೂ ಅಲ್ಲ. ಅದು ಮಾನವನ ಸ್ವಾಭಾವಿಕ ಹಕ್ಕು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಸಾಂವಿಧಾನಿಕ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಆಡಳಿತ ವ್ಯವಸ್ಥೆಯ ಚೌಕಟ್ಟಿನಲ್ಲಿ ವ್ಯಕ್ತವಾಗುವ ಪ್ರಭುತ್ವ ವಿರೋಧಿ ಅಥವಾ ವ್ಯವಸ್ಥೆ ವಿರೋಧಿ ಅಭಿವ್ಯಕ್ತಿಗೆ ಸಂಬಂಧಿಸಿದ್ದಾಗಿರುತ್ತದೆ. ತಾತ್ವಿಕವಾಗಿ ಭಾರತದಲ್ಲಿ ಈ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾನ್ಯತೆ ಇರುವುದಾದರೂ ಸಾರ್ವಜನಿಕ ಜೀವನದಲ್ಲಿ ಇದು ಬಂಧನಕ್ಕೊಳಗಾಗಿರುವುದನ್ನು ಕಳೆದ ಐದು ವರ್ಷಗಳಲ್ಲಿ ಕಂಡಿದ್ದೇವೆ. ವಾಲ್ಮೀಕಿಯ ಶ್ರೀರಾಮನಿಂದ ಹಿಡಿದು ಪುಲ್ವಾಮ ಘಟನೆಯವರೆಗೆ ಎಲ್ಲವೂ ಪ್ರಶ್ನಾತೀತವಾಗಿಬಿಟ್ಟಿವೆ. ಭೌಗೋಳಿಕ ದೇಶದ ಪರಿಕಲ್ಪನೆ ಮತ್ತು ದೇಶಭಕ್ತಿಯ ಉನ್ಮಾದ ಈ ಪ್ರಶ್ನಾತೀತತೆಗೆ ಹಿಂಸಾತ್ಮಕ ಸ್ವರೂಪವನ್ನೂ ಕಲ್ಪಿಸಿದೆ. ಹಾಗಾಗಿಯೇ ಒಂದು ಇಡೀ ರಾಜ್ಯದ ಜನತೆಯನ್ನು ಸೇನೆಯ ಸುಪರ್ದಿಗೆ ಒಪ್ಪಿಸಿ ಆ ರಾಜ್ಯದ ಪ್ರಜೆಗಳ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಕಾಶ್ಮೀರದ ಸಂದರ್ಭದಲ್ಲಿ ಕಾಣಲು ಸಾಧ್ಯವಾಗಿದೆ. ನಾಗರಿಕ ಹಕ್ಕುಗಳು ಆಳುವ ವರ್ಗಗಳ ಉದ್ದೇಶಗಳಿಗೆ ಅನುಗುಣವಾಗಿ ಮರುವ್ಯಾಖ್ಯಾನವಾಗುತ್ತಿರುವುದನ್ನು ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾಣುತ್ತಿದ್ದೇವೆ. ಇದನ್ನು ಸ್ವಾತಂತ್ರ್ಯ ಎಂದು ಭಾವಿಸಲು ಸಾಧ್ಯವೇ? ಕಳೆದುಕೊಂಡವರನ್ನು ಕೇಳಬೇಕಿದೆ.
  ಒಮ್ಮೆ ಅತ್ತಿತ್ತ ನೋಡೋಣ. ಈ ದೇಶದಲ್ಲಿ ಆದಿವಾಸಿಗಳು ನೆಲೆ ಕಳೆದುಕೊಳ್ಳುತ್ತಿದ್ದಾರೆ. ಅರಣ್ಯವನ್ನೇ ನಂಬಿ ಬದುಕುವವರು ಅರಣ್ಯದ ಹಕ್ಕು ಕಳೆದುಕೊಳ್ಳುತ್ತಿದ್ದಾರೆ. ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಕಾರ್ಮಿಕರು ನೌಕರಿಯ ಹಕ್ಕು ಕಳೆದುಕೊಳ್ಳುತ್ತಿದ್ದಾರೆ. ಮಹಿಳೆಯರು ತಮ್ಮ ಅಸ್ಮಿತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಬಡಜನತೆ ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಶ್ರಮಜೀವಿಗಳು ತಮ್ಮ ನಾಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕನಸು ಮಾರುವವರು ಕನಸುಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಘೋಷಣೆ ಕೂಗುವ ಹಕ್ಕನ್ನೂ ಕಳೆದುಕೊಳ್ಳಲಿದ್ದೇವೆ. ‘‘ಕ್ರಾಂತಿ ಚಿರಾಯುವಾಗಲಿ’’ ಎಂದು ಘೋಷಿಸುವ ಹಕ್ಕು ಕಳೆದುಕೊಳ್ಳಲಿದ್ದೇವೆ. ‘‘ಜೈ ಶ್ರೀರಾಮ್’’ ಎಂಬ ಘೋಷಣೆಯನ್ನು ಕೂಗದೆ ಇರುವ ಹಕ್ಕನ್ನೂ ಕಳೆದುಕೊಳ್ಳಲಿದ್ದೇವೆ. ಇನ್ನು ಉಳಿದಿರುವುದೇನು? ಒಂದು ಸ್ವತಂತ್ರ ದೇಶ, ಸುಂದರ ಭೂಪಟ ಮತ್ತು ವರುಷಕ್ಕೊಮ್ಮೆ ಹೊಳೆಯುವ ತ್ರಿವರ್ಣದ ವಿವಿಧ ರೂಪಗಳು. ‘‘ದೇಶವೆಂದರೆ ಮಣ್ಣಲ್ಲವೋ ಮನುಜರು’’ ಎಂಬ ದಾರ್ಶನಿಕ ನುಡಿಗಳನ್ನೊಮ್ಮೆ ನೆನೆಸಿಕೊಂಡಾಗ, ಈ ದೇಶವನ್ನು ಭಾವನಾತ್ಮಕ ಚೌಕಟ್ಟಿನಲ್ಲಿ ಬಂಧಿಸುತ್ತಿರುವ ವಿಕೃತ ಸಂಸ್ಕೃತಿ ನಮ್ಮೆದುರು ನಿಲ್ಲುತ್ತದೆ.
ಪಟಪಟಿಸುವ ತ್ರಿವರ್ಣ ಧ್ವಜದ ಮೂರು ಬಣ್ಣಗಳ ನಡುವಿನ ಚಕ್ರ ಏನನ್ನೋ ಹೇಳಬಯಸುತ್ತದೆ. ಹೇಳಲಾಗದೆ ಸೆಲ್ಯೂಟ್ ಸ್ವೀಕರಿಸಿ ಬೀಸುವ ಗಾಳಿಗೆ ನಲುಗುತ್ತಾ ಮೌನಕ್ಕೆ ಶರಣಾಗುತ್ತದೆ. ಮತ್ತೊಂದು ಸ್ವಾತಂತ್ರ್ಯೋತ್ಸವದ ನಿರೀಕ್ಷೆಯಲ್ಲಿ ಕವಾಟಗಳನ್ನು ಸೇರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)