varthabharthi

ವಿಶೇಷ-ವರದಿಗಳು

ಸ್ವಾತಂತ್ರ್ಯ ಮತ್ತು ಕ್ರೈಸ್ತರು

ವಾರ್ತಾ ಭಾರತಿ : 15 Aug, 2019
ಸುಚಿತ್ ಕೋಟ್ಯಾನ್, ಕುರ್ಕಾಲು

ಮತ್ತೊಂದು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಈ ದೇಶ, ಜಗತ್ತಿನಲ್ಲಿಯೇ ಭಿನ್ನವಾದ ವೈವಿಧ್ಯತೆ; ಜಾತಿ, ಧರ್ಮ, ಭಾಷೆ, ಬಹು ಸಂಸ್ಕೃತಿಗಳ ನೆಲೆವೀಡಾಗಿದೆ. ಹಿಂದೂ, ಇಸ್ಲಾಂ, ಕ್ರೈಸ್ತ, ಪಾರಸಿ, ಸಿಖ್, ಯಹೂದಿ, ಜೈನ, ಬೌದ್ಧ ಧರ್ಮಗಳೆಲ್ಲವನ್ನೂ ಏಕರೂಪದಲ್ಲಿ ಕಂಡ, ಎಲ್ಲರೊಳಗೊಂದಾಗಿ ಬದುಕಿ ಬಾಳಿದ ಅ ವರ ನಾಡು ಇದಾಗಿದೆ. ಭಾರತವೆಂದರೆ ಸಾಕು, ಆ ಕ್ಷಣವೇ ಈ ಭೇದ ಭಾವಗಳೆಲ್ಲಾ ದೂರಾಗಿ ‘ಮೊದಲು ಭಾರತೀಯ’ನೆಂಬ ಮಂತ್ರವೇ ನಮ್ಮೆಲ್ಲರ ಪೊರೆವ ಶಕ್ತಿಯಾಗಿದೆ.. ನೆಮ್ಮದಿಯ ಬೆಳಕಾಗಿದೆ..
1834ರಲ್ಲಿ ಭಾರತಕ್ಕೆ ಸ್ವಿಟ್ಸರ್ಲ್ಯಾಂಡಿನ ಬಾಸೆಲ್ ಪಟ್ಟಣದಿಂದ ಬಂದಿಳಿದ ಪ್ರಾಟೆಸ್ಟೆಂಟ್ ಪಂಥದ ಮಿಷನರಿಗಳು ಸಾಹಿತ್ಯ, ಸಂಸ್ಕೃತಿ, ಕೈಗಾರಿಕೆ, ಶಿಕ್ಷಣ ಮುಂತಾದ ಕ್ಷೇತ್ರದಲ್ಲಿ ಮಾಡಿದ ಮಹತ್ತರವಾದ ಸೇವೆಯನ್ನು ನಾವೆಂದೂ ಮರೆಯುವಂತಿಲ್ಲ. ಕರಾವಳಿ ಭಾಗದಲ್ಲಿ ಅವರು ಸ್ಥಾಪಿಸಿದ ಸಭೆಗಳಲ್ಲಿ ಪ್ರಾದೇಶಿಕ ಭಾಷೆಯಾದ ತುಳು, ಕನ್ನಡ, ಮಲಯಾಳಂಗಳಲ್ಲೇ ದೇವರ ಆರಾಧನೆಯನ್ನು ನಡೆಸಿ ಈ ದೇಶದ ಭಾಷೆ, ಸಂಸ್ಕೃತಿಯನ್ನು ಪ್ರೀತಿಸಿ, ಗೌರವ ಸಲ್ಲಿಸಿದರು. ಅವರು ಸ್ಥಾಪಿಸಿದ ಕ್ರೈಸ್ತ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡುವಾಗ ದೇಶಕ್ಕಾಗಿ, ನಮ್ಮನ್ನಾಳುವ ರಾಷ್ಟ್ರನಾಯಕರಿಗಾಗಿ ಪ್ರಾರ್ಥನೆ ಮಾಡುವ ಕ್ರಮವನ್ನು ರೂಢಿಗೆ ತಂದರು ಮತ್ತು ಈಗಲೂ ಈ ಕ್ರಮ ಕ್ರೈಸ್ತ ದೇವಾಲಯಗಳಲ್ಲಿ ಮುಂದುವರಿದಿದೆ.
ಕ್ರೈಸ್ತರ ಆರಾಧನೆಗಳಲ್ಲಿ ಸಂಗೀತಕ್ಕೆ ವಿಶೇಷ ಪ್ರಾಧಾನ್ಯತೆಯಿದೆ. ಪ್ರಾಟೆಸ್ಟೆಂಟ್ ಸಭೆಗಳಲ್ಲಿ ಕರ್ನಾಟಕದ ಕರಾವಳಿ ಸೇರಿದಂತೆ ಬಹು ಭಾಗದಲ್ಲಿ ಮುಂಚೂಣಿ ಸಭೆಗಳೆಂದು ಗುರುತಿಸಲ್ಪಡುವ ಸಿ.ಎಸ್.ಐ. ಮತ್ತು ಬಾಸೆಲ್ ಮಿಷನ್ ಸಭೆಗಳಲ್ಲಿ ‘ಗೀತ ಪುಸ್ತಕ’ವೆಂದು ಕರೆಯಲ್ಪಡುವ ಸಂಗೀತ ಸಂಗ್ರಹ ಕೃತಿಯಲ್ಲಿ, ‘ರಾಷ್ಟ್ರ ಸಂಗೀತ’ ಎಂದು ಒಂದು ವಿಭಾಗವಿದೆ. 369ನೇ ಸಂಖ್ಯೆಯ ಈ ಹಾಡಿನ ಕೆಲವು ಸಾಲುಗಳು ಹೀಗಿವೆ- ‘‘ತಂದೆ ನಿನ್ನ ಆಶೀರ್ವಾದ ರಾಷ್ಟ್ರಪತಿಗಾಗಲಿ. ನ್ಯಾಯ, ನೀತಿ, ಶಾಂತಿ, ಪ್ರೀತಿ ಇವು ರಾಷ್ಟ್ರಭೂಷಣೆ. ದೇಶದೊಳ್ ಸಮೃದ್ಧಿಯನ್ನು ದಯಮಾಡು. ಜ್ಞಾನವುಳ್ಳ ಮಂತ್ರಿ ಸಭೆ, ಜಯಶಾಲಿ ಸೈನ್ಯವು, ನಂಬಿಗಸ್ತ ಪರಿಚಾರ, ಸ್ವಾಮಿನಿಷ್ಠಾ ಪ್ರಜೆ, ರಾಜ್ಯದಲ್ಲಿ ಭದ್ರತೆ, ಕ್ಷೇಮ ರಾಷ್ಟ್ರಪತಿಗೆ. ದಯಮಾಡಿ ಆಶೀರ್ವದಿಸು..’’ ಎಂಬ ಸಾಲುಗಳಿವೆ. ಸ್ವಾತಂತ್ರ್ಯೋತ್ಸವ ಹಾಗೂ ಇತರ ಆರಾಧನೆಗೆ ಸೇರಿಬರುವ ಭಕ್ತ ಸಮುದಾಯ ಈ ಸಂಗೀತವನ್ನು ಭಕ್ತಿಪೂರ್ವಕವಾಗಿ ಹಾಡುತ್ತಾರೆ. ಪೂರ್ವ ಭಾಷಾಂತರದಲ್ಲಿ ‘ಚಕ್ರವರ್ತಿಗೆ ಆಶೀರ್ವದಿಸು’ ಎಂದಿದ್ದ ಈ ಹಾಡು ಸ್ವಾತಂತ್ರ್ಯೋತ್ತರದಲ್ಲಿ ‘ರಾಷ್ಟ್ರಪತಿಗೆ’ ಎಂದು ಬದಲಾದದ್ದು ಇಲ್ಲಿ ಉಲ್ಲೇಖನೀಯ.
ಪ್ರತಿ ವಾರವೂ ನಡೆಯುತ್ತದೆ ದೇಶಕ್ಕಾಗಿ ಪ್ರಾರ್ಥನೆ:
ಸಿ.ಎಸ್.ಐ. ಸಭೆಗಳ ಆರಾಧನಾ ಕ್ರಮದಲ್ಲಿ ಪ್ರತೀವಾರವೂ ಪರಾರ್ಥ ಪ್ರಾರ್ಥನೆ ಅಥವಾ ಒಬ್ಬರಿಗೊಬ್ಬರು ಪ್ರಾರ್ಥಿಸುವ ಕ್ರಮ ಎಂದು ಒಂದು ಭಾಗವಿದೆ. ಈ ಸಮಯದಲ್ಲಿ ಎಲ್ಲಾ ಚರ್ಚುಗಳಲ್ಲಿ ದೇಶಕ್ಕಾಗಿ ಪ್ರಾರ್ಥಿಸಲಾಗುತ್ತದೆ. ಆ ಪ್ರಾರ್ಥನೆ ಹೀಗಿದೆ- ‘‘ಅತ್ಯಂತ ಕೃಪೆಯುಳ್ಳ ದೇವರೇ, ಒಡೆಯರ ಒಡೆಯನೇ, ನಮ್ಮ ಮೇಲೆ ದೊರೆತನ ನಡೆಸುವ ಅಧಿಕಾರಿಗಳನ್ನು ನಿನ್ನ ಪರಾಂಬರಿಕೆ ಕರುಣೆಗಳಿಗೆ ಒಪ್ಪಿಸಿಕೊಡುತ್ತೇವೆ. ನಮ್ಮ ರಾಷ್ಟ್ರಪತಿಯನ್ನು ಕಾಪಾಡಿ ನಡೆಸು. ಅಧಿಕಾರದಲ್ಲಿರುವವರೆಲ್ಲರಿಗೆ ಜ್ಞಾನ ವಿವೇಕಗಳನ್ನು ದಯಪಾಲಿಸಿ ಅವರು ಪಕ್ಷಪಾತವಿಲ್ಲದೆ ನೀತಿ ನ್ಯಾಯದಿಂದ ನಮ್ಮನ್ನು ಆಳುವಂತೆ ಅನುಗ್ರಹಿಸು. ನಮ್ಮ ಈ ಭರತಖಂಡವನ್ನೂ, ಇದರ ಎಲ್ಲಾ ನಿವಾಸಿಗಳನ್ನೂ ಆಶೀರ್ವದಿಸು. ಪರೋಪಕಾರ, ಪ್ರಾಮಾಣಿಕತೆಗಳೂ, ನೀತಿ ಸಮಾಧಾನಗಳೂ ನಮ್ಮಲ್ಲಿ ನೆಲೆಸುವಂತೆ ದಯೆತೋರು’’ ಎಂದು ಭಿನ್ನವಿಸುತ್ತೇವೆ. ಕರಾವಳಿ ಭಾಗದ ಕ್ರೈಸ್ತ ಸಭೆಗಳ ತುಳು ಭಾಷೆಯ ಆರಾಧನೆಯ ಕ್ರಮದಲ್ಲಿಯೂ ಈ ಪ್ರಾರ್ಥನೆಯಿದ್ದು, ಅದನ್ನೂ ಆರಾಧನೆಯಲ್ಲಿ ಬಳಸಲಾಗುತ್ತದೆ.
ಈ ದೇಶದ ಜನಗಣತಿಯ ಅಂಕಿ-ಅಂಶದಲ್ಲಿ ಕ್ರೈಸ್ತರು ಅಲ್ಪಸಂಖ್ಯಾತರಾಗಿದ್ದರೂ, ಪೂರ್ವ ಕಾಲದಿಂದಲೂ ಇವರೆಲ್ಲರೂ ರಾಷ್ಟ್ರನಿಷ್ಠೆಯನ್ನು ತೋರಿದವರೇ ಆಗಿದ್ದಾರೆ. ಕರಾವಳಿ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸತ್ಯಮಿತ್ರ ಬಂಗೇರ, ಸಿಮ್ಸನ್ ಸೋನ್ಸ್, ರಾಜೀವ ಕೋಟ್ಯಾನ್, ಎಬ್ನೇಜರ್ ಸೋನ್ಸ್, ಶದ್ರಕ್ ಸೋನ್ಸ್, ಥಿಯೋಡೋರ್ ಮೈಕಲ್ ಸೋನ್ಸ್ ಮೊದಲಾದ ಕ್ರೈಸ್ತರು ಸಕ್ರಿಯವಾಗಿ ಭಾಗಿಗಳಾಗಿದ್ದರು ಎಂಬುದು ಅಧಿಕೃತ ದಾಖಲೆಗಳಲ್ಲಿದೆ. ಈಗಲೂ ಕೂಡಾ ಕ್ರೈಸ್ತ ಸಮುದಾಯದ ಅನೇಕರು ಭಾರತೀಯ ಸೈನ್ಯದ ವಿವಿಧ ವಿಭಾಗಗಳಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)